ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 200 ಸ್ಥಾನ

Last Updated 1 ಫೆಬ್ರುವರಿ 2011, 16:00 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): 2ಜಿ ತರಂಗಾಂತರ, ಕಾಮನ್‌ವೆಲ್ತ್ ಕ್ರೀಡಾಕೂಟ, ಆದರ್ಶ ವಸತಿ  ಮತ್ತು ಬೋಫೋರ್ಸ್‌ನಂತಹ ಹಗರಣಗಳು ಆಡಳಿತ ಯುಪಿಎ ಮೈತ್ರಿಕೂಟವನ್ನು ಮುಳುಗಿಸಲಿದ್ದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನಗಳನ್ನು ಗಳಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.

ಬಿಜೆಪಿಯ ಸಾಗರೋತ್ತರ ಮಿತ್ರರೊಂದಿಗೆ ಟೆಲಿಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಅವರು, ವಿದೇಶಿ ಬ್ಯಾಂಕ್‌ಗಳಲ್ಲಿರುವ ಅಕ್ರಮ ಹಣ ಮತ್ತು ಹಗರಣಗಳು ಆಡಳಿತ ಮೈತ್ರಿಕೂಟವನ್ನು ವಿನಾಶಗೊಳಿಸಲಿದೆ ಅಲ್ಲದೆ ಮುಂದಿನ  ಚುನಾವಣೆಯಲ್ಲಿ ಎನ್‌ಡಿಎ  ಅಧಿಕಾರಕ್ಕೆ ಮರಳಲು ದಾರಿ ಮಾಡಿಕೊಡಲಿದೆ ಎಂದು ತಿಳಿಸಿದ್ದಾರೆ.

ಭಾರತೀಯರು ವಿದೇಶಿ ಬ್ಯಾಂಕ್‌ಗಳಲ್ಲಿ ರೂ 22 ಲಕ್ಷ ಕೋಟಿ ಹಣವನ್ನು ಅಡಗಿಸಿಟ್ಟಿದ್ದಾರೆ. ಭಾರತದ ಹೊರಗೆ ಸುರಕ್ಷಿತ ಸ್ಥಳಗಳಲ್ಲಿರುವ ಭಾರಿ ಮೊತ್ತದ ಅಕ್ರಮ ಹಣ ಸ್ವದೇಶಕ್ಕೆ ಮರಳಲೇಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಭ್ರಷ್ಟಾಚಾರ ನಿಗ್ರಹವನ್ನೂ ಯುಪಿಎ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದ್ದಾರೆ.

ಇದೇ ಮೊದಲ ಬಾರಿಗೆ ನಡೆದ ಟೆಲಿಕಾನ್ಫರೆನ್ಸ್‌ನಲ್ಲಿ ಅಮೆರಿಕ, ಕೆನಡಾ,  ಜರ್ಮನಿ, ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತಿತರ ರಾಷ್ಟ್ರಗಳ  ಸುಮಾರು 500 ಮಂದಿ ಭಾಗವಹಿಸಿದ್ದರು.

ಅನೇಕ ಹಗರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಸಾಂಸ್ಥಿಕಗೊಂಡಿರುವ ಭ್ರಷ್ಟಾಚಾರವನ್ನು ನಿಗ್ರಹಿಸುವಲ್ಲಿ ಯುಪಿಎ ಆಸಕ್ತಿ ಹೊಂದಿಲ್ಲ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ ಎಂದು ಆರೋಪಿಸಿದ್ದಾರೆ.

‘ದುರದೃಷ್ಟವಶಾತ್ 2010ನೇ ಇಸವಿಯು ಯುಪಿಎ ಸರ್ಕಾರದಡಿ ಹಗರಣಗಳ ವರ್ಷವಾಗಿ ಪರಿಣಮಿಸಿತು’ ಎಂದಿದ್ದಾರೆ.

ವಿದೇಶಿ ಬ್ಯಾಂಕ್‌ಗಳಲ್ಲಿ ಹಣ ಅಡಗಿಸಿಟ್ಟಿರುವವರ ಹೆಸರನ್ನು ಬಹಿರಂಗಪಡಿಸಲು ಯುಪಿಎ ಸರ್ಕಾರ ಸಿದ್ಧವಾಗಿಲ್ಲ. ಈ ಹಣ ಭಾರತೀಯರಿಗೆ ಸೇರಿದ್ದು ಇದನ್ನು ವಾಪಸ್ ತರಬೇಕು ಎಂದು ಒತ್ತಾಯಿಸಿದ್ದಾರೆ.

ಕಾಶ್ಮೀರಿ ಪಂಡಿತರ ಭವಿಷ್ಯ ಕುರಿತ ಪ್ರಶ್ನೆಗೆ, ಅವರ ದುಃಸ್ಥಿತಿಗೆ ವಿಷಾದ ವ್ಯಕ್ತಪಡಿಸಿ ಈ ವಿಷಯದ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಲು ಬಿಜೆಪಿ ಆಲೋಚಿಸುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT