ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಬಾರಿ ಕೊಡಚಾದ್ರಿ ವೈಭವ ಮತ್ತಷ್ಟು ವಿಸ್ತಾರ

Last Updated 12 ಜನವರಿ 2012, 8:25 IST
ಅಕ್ಷರ ಗಾತ್ರ

ಶಿವಮೊಗ್ಗ: ಮುಂದಿನ ವರ್ಷದಿಂದ `ಕೊಡಚಾದ್ರಿ ವೈಭವ~ ಇನ್ನಷ್ಟು ವಿಸ್ತಾರ, ವೈವಿಧ್ಯತೆಗಳನ್ನು ಹೊಂದಿರುವಂತೆ ನೋಡಿಕೊಳ್ಳಲಾಗುವುದು ಎಂದು ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ತಿಳಿಸಿದರು.

 ಕೊಡಚಾದ್ರಿ ವೈಭವಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾಲ್ಕು ದಿನಗಳಿಂದ ಜನರು ಅದ್ಭುತ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಹಾಗಾಗಿ, ಇದು ಜನರ ಉತ್ಸವವಾಗಿ ಮಾರ್ಪಾಡಾಗಿದೆ. ವಿವಿಧ ಕ್ಷೇತ್ರದ ಗಣ್ಯರು, ಧಾರ್ಮಿಕ ಮುಖಂಡರು ವೈಭವಕ್ಕೆ ಭೇಟಿ ನೀಡುತ್ತಿದ್ದಾರೆ. ನಾಲ್ಕು ದಿವಸದಲ್ಲಿ ರೂ.10ಕೋಟಿ  ವಹಿವಾಟು ನಡೆದಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಂದಿನ ವರ್ಷದಿಂದ ವೈಭವದಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ 50 ಮಳಿಗೆಗಳನ್ನು ತೆರೆಯಲಾಗುವುದು. ಇಲ್ಲಿ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳು, ಕೃಷಿ ಮಾಹಿತಿ ಕೇಂದ್ರ, ಹೈನುಗಾರಿಕೆ ಮಾಹಿತಿ ಸೇರಿದಂತೆ ರೈತರಿಗೆ ಉಪಯುಕ್ತವಾಗುವ ಎಲ್ಲಾ ಸವಲತ್ತುಗಳನ್ನು ಪ್ರದರ್ಶಿಸಲಾಗುವುದು. ಕೃಷಿ ವೈಭವಕ್ಕೂ ಮೊದಲು ಮಲೆನಾಡು ಭಾಗದ ರೈತರಿಗೆ ತರಬೇತಿ ನೀಡಲಾಗುವುದು ಎಂದರು.

ಹಾಗೆಯೇ, ಕೊಡಚಾದ್ರಿ ವೈಭವವನ್ನು ಶಿವಮೊಗ್ಗ ನಗರದಂತೆ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಭದ್ರಾವತಿಯಲ್ಲಿ ಆಯೋಜಿಸುವಂತೆ ಬೇಡಿಕೆ ಬಂದಿದ್ದು, ಈ ಬಗ್ಗೆ ಟ್ರಸ್ಟ್ ಗಂಭೀರ ಚಿಂತನೆ ನಡೆಸಿದೆ. ಆದರೆ, ಟ್ರಸ್ಟ್ ಬೆಂಗಳೂರಿನಲ್ಲಿ ಕೊಡಚಾದ್ರಿ ವೈಭವ ಆಯೋಜಿಸಲು ಹೆಚ್ಚು ಉತ್ಸುಕತೆ ಹೊಂದಿದ್ದು, ಅಲ್ಲಿ ಎರಡು ಸ್ಥಳಗಳಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಿದೆ ಎಂದು ವಿವರಿಸಿದರು.

ಸ್ವಸಹಾಯ ಗುಂಪುಗಳು ಉತ್ಪಾದಿಸುವ ವಸ್ತುಗಳಿಗೆ ಶಾಶ್ವತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಟ್ರಸ್ಟ್ ಈಗಾಗಲೇ ನಗರ ಸಮೀಪದ ಗಾಡಿಕೊಪ್ಪದಲ್ಲಿ 5 ಎಕರೆ ಜಮೀನು ಖರೀದಿಸಿದ್ದು, ಅಲ್ಲಿ ಕೊಡಚಾದ್ರಿ ಗ್ರಾಮ ನಿರ್ಮಿಸಲಾಗುವುದು. ಹಾಗೆಯೇ, ಅಲ್ಲಿ ಕರಕುಶಲ ವಸ್ತುಗಳ ಉತ್ಪಾದನೆ ಸೇರಿದಂತೆ, ತರಬೇತಿ, ಮಾರಾಟ ಕೇಂದ್ರಗಳನ್ನೂ ಆರಂಭಿಸಲಾಗುವುದು. ಅಲ್ಲದೇ, ಕೊಡಚಾದ್ರಿ ವೈಭವ ಕಾರ್ಯಕ್ರಮವನ್ನೂ ಅಲ್ಲಿಯೇ ಆಯೋಜಿಸಲು ಚಿಂತನೆ ನಡೆಸಲಾಗುವುದು ಎಂದರು.

`ಕೊಡಚಾದ್ರಿ ರತ್ನಶ್ರೀ~: ವಿವಿಧ ಕ್ಷೇತ್ರದ ಸಾಧಕರಿಬ್ಬರಿಗೆ ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಈ ಬಾರಿ `ಕೊಡಚಾದ್ರಿ ರತ್ನಶ್ರೀ~ ಪ್ರಶಸ್ತಿ ನೀಡಲಿದ್ದು, ಹೆಸರು ಇನ್ನೂ ಅಂತಿಮಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕೊಡಚಾದ್ರಿ ವೈಭವದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಯುವಕರಿಗೆ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದೇಹದಾರ್ಢ್ಯ ಸ್ಪರ್ಧೆಯ ವಿಜೇತರು ಜ. 12ರಂದು ಸಂಜೆ 6ಕ್ಕೆ ವೇದಿಕೆಯ ಮೇಲೆ ಪ್ರದರ್ಶನ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಷಡಾಕ್ಷರಿ, `ಶಿಮೂಲ್~ ಅಧ್ಯಕ್ಷ ಕೆ.ಎಲ್. ಜಗದೀಶ್ವರ್, ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳಾದ ಸುಧೀರ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT