ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಸಾಲಿನ ಕುರ್ಚಿಗಳೆಲ್ಲಾ ಖಾಲಿ!

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಮುಂದಿನ ಸಾಲಿನ ಕುರ್ಚಿಗಳೆಲ್ಲ ಖಾಲಿ ಖಾಲಿ... ಅಗತ್ಯ ಬಿದ್ದರೆ ಹೊಸಬರನ್ನು ನೇಮಕ ಮಾಡಿಕೊಳ್ಳಿ...'
ಹೀಗೆ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ನಾಯಕರನ್ನು ಕಿಚಾಯಿಸಿದ್ದು ಪ್ರತಿಪಕ್ಷ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು.
ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರನ್ನು ಕರೆತರುವ ವೇಳೆಗೆ ಆಡಳಿತ ಪಕ್ಷದ ಕಡೆಯ ಮುಂದಿನ ಸಾಲಿನಲ್ಲಿ ಬೆರಳೆಣಿಕೆಯಷ್ಟು ಆಸನಗಳು ಬಿಟ್ಟರೆ ಉಳಿದೆಲ್ಲವೂ ಖಾಲಿ ಇದ್ದವು.

ಇದನ್ನು ಗಮನಿಸಿದ ಜೆಡಿಎಸ್‌ನ ಎಂ.ಸಿ.ನಾಣಯ್ಯ ಮತ್ತು ಬಿಜೆಪಿಯ ಆರ್.ಅಶೋಕ್ ಅವರು `ಫ್ರೆಂಟ್‌ನಲ್ಲಿರುವ ಕುರ್ಚಿಗಳು ಖಾಲಿ ಇವೆ. ಸದಸ್ಯರ ಕೊರತೆ ಬಿದ್ದರೆ ನೇಮಕ ಮಾಡಿಕೊಳ್ಳಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರೇಗಿಸಿದರು.

ರಾಜ್ಯಪಾಲರ ಜತೆ ಹೆಜ್ಜೆ ಹಾಕುತ್ತಿದ್ದ ಕಾರಣ ತಕ್ಷಣಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ, ಹಿಂದಿನ ಸಾಲುಗಳಲ್ಲಿ ಕುಳಿತಿದ್ದ ಸಚಿವರನ್ನು ಮುಂದಿನ ಸಾಲಿಗೆ ಬರುವಂತೆ ಸನ್ನೆ ಮಾಡಿದರು. ಆಗ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಇತರ ಸಚಿವರು ದಡದಡ ಬಂದು ಮುಂದಿನ ಸಾಲಿನ ಕುರ್ಚಿಗಳಲ್ಲಿ ಆಸೀನರಾದರು.

ಭಣಭಣ: ಜಂಟಿ ಅಧಿವೇಶನಕ್ಕೆ ರಾಜ್ಯಪಾಲರು ಬಂದಾಗ ಆಡಳಿತ ಪಕ್ಷದ ಕಡೆಯ ಸಾಲಿನಲ್ಲಿ ಶಾಸಕರ ಸಂಖ್ಯೆ ತೀರಾ ಕಡಿಮೆ ಇತ್ತು. ರಾಜ್ಯಪಾಲರು ಭಾಷಣ ಆರಂಭಿಸುತ್ತಿದ್ದಂತೆ ಒಬ್ಬೊಬ್ಬರೇ ಸದನಕ್ಕೆ ಬಂದರು. ಅವರ ಭಾಷಣ ಮುಗಿಯವ ವೇಳೆಗೆ ಬಹುತೇಕ ಕುರ್ಚಿಗಳು ಭರ್ತಿಯಾದವು.

ರಾಜ್ಯಪಾಲರ ಪತ್ನಿ ಪ್ರೇಕ್ಷಕರ ಗ್ಯಾಲರಿಯಲ್ಲಿ
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮಾಡಿದ ಭಾಷಣವನ್ನು ಅವರ ಪತ್ನಿ ಪ್ರಫುಲ್ಲತಾ ಅವರು ವಿಧಾನಸಭೆಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು, ಆಲಿಸಿದರು.

ರಾಜ್ಯಪಾಲರು ಬರುವುದಕ್ಕಿಂತ ಐದು ನಿಮಿಷ ಮುಂಚಿತವಾಗಿ ಬಂದು ಆಸೀನರಾದ ಅವರು ಭಾಷಣ ಮುಗಿಯುವವರೆಗೂ ಇದ್ದರು. ನಂತರ ರಾಜ್ಯಪಾಲರ ಜತೆ ವಾಪಸಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT