ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಬ್ಯಾಟಿಂಗ್ ವೈಫಲ್ಯ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು: ಸಾಗರದ ಬೃಹತ್ ಅಲೆಗಳ ನಡುವೆ ಸಿಕ್ಕಿಬಿದ್ದು ಒದ್ದಾಡುವ ವ್ಯಕ್ತಿಯೊಬ್ಬನ ಅಸಹಾಯಕ ಸ್ಥಿತಿಯಿರುತ್ತದಲ್ಲಾ, ಆ ರೀತಿಯ ಪರಿಸ್ಥಿತಿ ಕರ್ನಾಟಕದ ಬ್ಯಾಟ್ಸ್‌ಮನ್‌ಗಳದ್ದು. ಹಿಂದಿನ ಪಂದ್ಯದಲ್ಲಿ ಅನುಭವಿಸಿದ್ದ ಬ್ಯಾಟಿಂಗ್ ವೈಫಲ್ಯ ದೆಹಲಿ ವಿರುದ್ಧವೂ ಮುಂದುವರಿದಿದ್ದು ಇದಕ್ಕೆ ಕಾರಣ.

ಹತ್ತು ದಿನಗಳ ಹಿಂದೆ ಒಡಿಶಾ ವಿರುದ್ಧ ಅನುಭವಿಸಿದ್ದ ಹೀನಾಯ ಸೋಲಿನ ಕಹಿ ನೆನಪು ಮಾಸುವ ಮುನ್ನವೇ ಕರ್ನಾಟಕದ ಬ್ಯಾಟ್ಸ್‌ಮನ್‌ಗಳ `ಶಕ್ತಿ' ಮತ್ತೊಮ್ಮೆ ಬಯಲಾಯಿತು. ಐದು ವಿಕೆಟ್ ಪಡೆದ ಪರ್ವಿಂದರ್ ಅವಾನ ಸುಂದರವಾಗಿ ಬಿಚ್ಚಿಕೊಳ್ಳುತ್ತಿದ್ದ ಶನಿವಾರ ಮುಂಜಾವಿಗೆ ಇನ್ನಷ್ಟು ರಂಗು ತುಂಬಿ ದೆಹಲಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ `ಬಿ' ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ವಿನಯ್ ಪಡೆ ಬ್ಯಾಟಿಂಗ್ ಆರಿಸಿಕೊಂಡಿತು. ಆತಿಥೇಯ ತಂಡದ ಬ್ಯಾಟಿಂಗ್ ಆರಂಭವಾಗಿ ಐದು ಗಂಟೆ ಕಳೆಯುವಷ್ಟರಲ್ಲಿ ದೆಹಲಿ ತಂಡ ಮೇಲುಗೈ ಸಾಧಿಸಿತು. ಆರಂಭದಿಂದಲೇ ಸಂಕಷ್ಟದಿಂದ ಬಳಲಿದ ಕರ್ನಾಟಕ 65 ಓವರ್‌ಗಳಲ್ಲಿ 192 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಸ್ಟುವರ್ಟ್ ಬಿನ್ನಿ ತಂಡಕ್ಕೆ ಆಸರೆಯಾಗದೆ ಹೋಗಿದ್ದರೆ, 100 ರನ್‌ಗಳ ಗಡಿ ದಾಟುವುದು ಕಷ್ಟವಿತ್ತು.

ಈ ಮೊತ್ತವನ್ನು ಬೆನ್ನು ಹತ್ತಿರುವ ದೆಹಲಿ ಮೊದಲ ದಿನದಾಟದ ಅಂತ್ಯಕ್ಕೆ 15 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 44 ರನ್ ಕಲೆ ಹಾಕಿದೆ. ನಾಯಕ ಶಿಖರ್ ಧವನ್ (ಬ್ಯಾಟಿಂಗ್ 38) ಹಾಗೂ ಮಿಥುನ್ ಮನ್ಹಾಸ್ (ಬ್ಯಾಟಿಂಗ್ 5) ಕ್ರೀಸ್‌ನಲ್ಲಿದ್ದಾರೆ. ಈ ತಂಡ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಲು 148 ರನ್ ಅಗತ್ಯವಿದೆ.

ದೆಹಲಿಯ ವೇಗಿಗಳಾದ ಪರ್ವಿಂದರ್ (81ಕ್ಕೆ5), ಸುಮಿತ್ ನರ್ವಾಲ್ (35ಕ್ಕೆ2) ಮತ್ತು ರಜತ್ ಭಾಟಿಯಾ (23ಕ್ಕೆ2) ಕರ್ನಾಟಕದ ಅಲ್ಪ ಮೊತ್ತದ ಕುಸಿತಕ್ಕೆ ಕಾರಣರಾದರು.

ಆಸರೆಯಾದ ಬಿನ್ನಿ:ತಂಡದ ಒಟ್ಟು ಮೊತ್ತ 51 ಆಗುವ ವೇಳೆಗೆ ಐದು ವಿಕೆಟ್‌ಗಳು ಪತನವಾಗಿದ್ದವು. ಈ ವೇಳೆ ಸ್ಟುವರ್ಟ್ ಬಿನ್ನಿ (61, 113ಎಸೆತ, 8 ಬೌಂಡರಿ) ಆಸರೆಯಾದರು. ಆರನೇ ವಿಕೆಟ್‌ನ ಜೊತೆಯಾಟದಲ್ಲಿ ಬಿನ್ನಿ ಮತ್ತು ಸಿ.ಎಂ. ಗೌತಮ್ ಜೋಡಿ ಒಂದು ಗಂಟೆಗೂ ಹೆಚ್ಚು ಕಾಲ ಕ್ರೀಸ್‌ಗೆ ಅಂಟಿಕೊಂಡು ನಿಂತು 38 ರನ್ ಕಲೆ ಹಾಕಿತು. ಈ ವೇಳೆ ಬಲಗೈ ಬ್ಯಾಟ್ಸ್‌ಮನ್ ಗೌತಮ್ (11) ಬ್ಯಾಟಿನ ಅಂಚಿಗೆ ತಗುಲಿದ ಚೆಂಡು ವಿಕೆಟ್ ಕೀಪರ್ ಪುನಿತ್ ಬಿಸ್ಟ್ ಕೈಗಸುವಿನಲ್ಲಿ ಭದ್ರವಾಗಿತ್ತು. ಗೌತಮ್ ವಿಕೆಟ್ ಪಡೆದ ಪರ್ವಿಂದರ್ ತಂಡವನ್ನು ಖುಷಿಯ ಅಲೆಯಲ್ಲಿ ತೇಲಾಡುವಂತೆ ಮಾಡಿದರು.

ಈ ಜೊತೆಯಾಟಕ್ಕೆ ತೆರೆ ಬೀಳುತ್ತಿದ್ದಂತೆ ಬೃಹತ್ ಮೊತ್ತ ಕಲೆ ಹಾಕುವ ಕನಸು ಕಂಡಿದ್ದ ಕರ್ನಾಟಕದ ಆಸೆ ಕಮರಿಹೋಯಿತು. 41ನೇ ಓವರ್‌ನಲ್ಲಿ ಗೌತಮ್‌ಗೆ ಒಂದು ಜೀವದಾನ ಲಭಿಸಿತ್ತು. ಸ್ಲಿಪ್‌ನಲ್ಲಿದ್ದ ಮಿಥುನ್ ಮನ್ಹಾಸ್ ಕ್ಯಾಚ್ ಹಿಡಿತಕ್ಕೆ ಪಡೆಯುವಲ್ಲಿ ವಿಫಲರಾಗಿದ್ದರು. ಈ ವೇಳೆ ಗೌತಮ್ 10 ರನ್ ಗಳಿಸಿದ್ದರು. ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಗೌತಮ್ ವಿಫಲರಾದರು.

ಬಿನ್ನಿ 2000 ರನ್: ಒಡಿಶಾ ವಿರುದ್ಧದ ಪಂದ್ಯದವರೆಗೆ ಒಟ್ಟು 1949 ರನ್ ಗಳಿಸಿದ್ದ ಬಿನ್ನಿ ದೆಹಲಿ ವಿರುದ್ಧದ ಪಂದ್ಯದಲ್ಲಿ 51 ರನ್ ಕಲೆ ಹಾಕುವ ಮೂಲಕ ರಣಜಿ ಕ್ರಿಕೆಟ್‌ನಲ್ಲಿ 2000 ರನ್ ಗಳಿಸಿದರು. 102 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಬಿನ್ನಿ ನಂತರದ ಎಸೆತದಲ್ಲಿ ಒಂಟಿ ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದರು.

ಮುಂದುವರಿದ ವೈಫಲ್ಯ: ಆರಂಭಿಕ ಬ್ಯಾಟ್ಸ್ ಮನ್ ರಾಬಿನ್‌ಉತ್ತಪ್ಪ (4) ಅವರ ಬ್ಯಾಟಿಂಗ್ ವೈಫಲ್ಯದ `ಯಾತ್ರೆ' ಈ ಪಂದ್ಯದಲ್ಲೂ ಮುಂದುವರಿದಿದೆ. ಕೆ.ಬಿ. ಪವನ್ ಬದಲು ಸ್ಥಾನ ಪಡೆದಿರುವ ಕೆ.ಎಲ್. ರಾಹುಲ್ (11) ಕೂಡಾ ಬೇಗನೇ ವಿಕೆಟ್ ಒಪ್ಪಿಸಿದರು. ನಂತರ ಬಂದ ಗಣೇಶ್ ಸತೀಶ್ (12), ಮನೀಷ್ ಪಾಂಡೆ (8) ಕ್ರೀಸ್‌ಗೆ ಬಂದು ಹೋಗುವ ಶಾಸ್ತ್ರ ಮುಗಿಸಿದರು.

ಒಡಿಶಾ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಕರ್ನಾಟಕ ಸೋಲು ಕಂಡಿತ್ತು. ಈ ಪಂದ್ಯದಲ್ಲೂ ಬ್ಯಾಟ್ಸ್‌ಮನ್‌ಗಳು ಸವಾಲಿನ ಮೊತ್ತ ಪೇರಿಸುವಲ್ಲಿ ವಿಫಲರಾದರು. ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕುನಾಲ್ ಕಪೂರ್ (11) ಸಹ `ಹಿರಿಯರ' ಹಾದಿ ತುಳಿದರು.

ವಿನಯ್ ವಿಶಿಷ್ಟ ಸಾಧನೆ: ಕರ್ನಾಟಕ ತಂಡದ ಹೊಣೆ ಹೊತ್ತಿರುವ ವಿನಯ್ ರಣಜಿ ಕ್ರಿಕೆಟ್‌ನಲ್ಲಿ ಒಟ್ಟು 1000 ರನ್ ಗಳಿಸಿದರು. ಈ ಬಲಗೈ ವೇಗಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 221 ವಿಕೆಟ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ 100ಕ್ಕೂ ಅಧಿಕ ವಿಕೆಟ್ ಪಡೆದು, ಬ್ಯಾಟಿಂಗ್‌ನಲ್ಲಿ 1000 ರನ್ ಗಳಿಸಿದ ಕರ್ನಾಟಕದ ಏಳನೇ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೂ `ದಾವಣಗೆರೆ ಎಕ್ಸ್‌ಪ್ರೆಸ್' ಪಾತ್ರರಾದರು. ರೋಜರ್ ಬಿನ್ನಿ, ಸುನಿಲ್ ಜೋಶಿ, ಬಿ. ವಿಜಯ್ ಕೃಷ್ಣನ್, ದೊಡ್ಡ ಗಣೇಶ್, ಅನಿಲ್ ಕುಂಬ್ಳೆ ಹಾಗೂ ಕೆ. ಜಸ್ವಂತ್ ಮೊದಲು ಈ ಸಾಧನೆ ಮಾಡಿದ ಶ್ರೇಯ ಪಡೆದುಕೊಂಡಿದ್ದಾರೆ.

ಪದೇ ಪದೇ ವಿಕೆಟ್ ಬೀಳುತ್ತಿದ್ದ ಕಾರಣ ವಿನಯ್ ಆರಂಭದಿಂದಲೇ ವೇಗದ ಆಟಕ್ಕೆ ಮುಂದಾದರು. 65 ಎಸೆತಗಳಲ್ಲಿ 2 ಬೌಂಡರಿ ಹಾಗೂ ಲಾಂಗ್‌ಆನ್‌ನಲ್ಲಿ ಸಿಡಿಸಿದ ಒಂದು ಆಕರ್ಷಕ ಸಿಕ್ಸರ್ ಸೇರಿದಂತೆ ಒಟ್ಟು 28 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಮೊದಲ ಇನಿಂಗ್ಸ್ 65 ಓವರ್‌ಗಳಲ್ಲಿ 192
ರಾಬಿನ್ ಉತ್ತಪ್ಪ ಎಲ್‌ಬಿಡಬ್ಲ್ಯು ಬಿ ಆಶಿಶ್ ನೆಹ್ರಾ  04
ಕೆ.ಎಲ್. ರಾಹುಲ್ ಬಿ ಪರ್ವಿಂದರ್ ಅವಾನ  11
ಗಣೇಶ್ ಸತೀಶ್ ಸಿ ಬಿಸ್ಟ್ ಬಿ ಸುಮಿತ್ ನರ್ವಾಲ್  12

ಮನೀಷ್ ಪಾಂಡೆ ಸಿ ಬಿಸ್ಟ್ ಬಿ ಸುಮಿತ್ ನರ್ವಾಲ್  08
ಕುನಾಲ್ ಕಪೂರ್ ಸಿ ಬಿಸ್ಟ್ ಬಿ ರಜತ್ ಭಾಟಿಯಾ  11
ಸ್ಟುವರ್ಟ್ ಬಿನ್ನಿ  ಸಿ ಬಿಸ್ಟ್ ಬಿ ಪರ್ವಿಂದರ್ ಅವಾನ  61
ಸಿ.ಎಂ. ಗೌತಮ್ ಸಿ ಬಿಸ್ಟ್ ಬಿ ಪರ್ವಿಂದರ್ ಅವಾನ  11
ಆರ್. ವಿನಯ್ ಕುಮಾರ್ ಸಿ ಧವನ್ ಬಿ ಭಾಟಿಯಾ 28
ಅಭಿಮನ್ಯು ಮಿಥುನ್ ಎಲ್‌ಬಿಡಬ್ಲ್ಯು ಬಿ ಅವಾನ  14
ಕೆ.ಪಿ. ಅಪ್ಪಣ್ಣ ಬಿ ಪರ್ವಿಂದರ್ ಅವಾನ  10
ಎಚ್.ಎಸ್. ಶರತ್ ಔಟಾಗದೆ  04
ಇತರೆ: (ಬೈ-5, ಲೆಗ್ ಬೈ-5, ನೋ ಬಾಲ್-7,      ವೈಡ್-1)  18
ವಿಕೆಟ್ ಪತನ: 1-4 (ರಾಬಿನ್ 0.4), 2-33 (ಸತೀಶ್; 9.3), 3-41 (ರಾಹುಲ್; 12.1), 4-51 (ಪಾಂಡೆ; 15.1), 5-67 (ಕಪೂರ್; 25.4), 6-105 (ಗೌತಮ್; 44.6), 7-147 (ಬಿನ್ನಿ; 50.5), 8-163 (ಮಿಥುನ್; 55.5), 9-184 (ವಿನಯ್; 63.4), 10-192 (ಅಪ್ಪಣ್ಣ; 64.6).
ಬೌಲಿಂಗ್: ಆಶಿಶ್ ನೆಹ್ರಾ 15-5-26-1, ಪರ್ವಿಂದರ್ ಅವಾನ 21-3-81-5, ಸುಮಿತ್ ನರ್ವಾಲ್ 13-3-35-2, ರಜತ್ ಭಾಟಿಯಾ 9-3-23-2, ವಿಕಾಸ್ ಮಿಶ್ರಾ 7-1-17-0.

ದೆಹಲಿ ಪ್ರಥಮ ಇನಿಂಗ್ಸ್ 15 ಓವರ್‌ಗಳಲ್ಲಿ
2 ವಿಕೆಟ್‌ಗೆ 44
ಶಿಖರ್ ಧವನ್ ಬ್ಯಾಟಿಂಗ್  38
ಉನ್ಮುಕ್ತ ಚಾಂದ್ ಎಲ್‌ಬಿಡಬ್ಲ್ಯು ಬಿ  ಶರತ್  01
ಮೋಹಿತ್ ಶರ್ಮ ಸಿ ರಾಹುಲ್ ಬಿ ಶರತ್  00
ಮಿಥುನ್ ಮನ್ಹಾಸ್ ಬ್ಯಾಟಿಂಗ್  05
ವಿಕೆಟ್ ಪತನ: 1-33 (ಚಾಂದ್; 10.3), 2-37 (ಮೋಹಿತ್; 12.1).
ಬೌಲಿಂಗ್: ಆರ್ ವಿನಯ್ ಕುಮಾರ್ 5-1-14-0, ಅಭಿಮನ್ಯು ಮಿಥುನ್ 7-1-17-0, ಎಚ್.ಎಸ್. ಶರತ್ 3-1-13-0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT