ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮಳೆಗೆ ಅಪಾರ ಹಾನಿ

Last Updated 3 ಆಗಸ್ಟ್ 2013, 10:48 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಮಳೆ ಮುಂದುವರೆದಿದ್ದು, ನಾಪೋಕ್ಲು, ಭಾಗಮಂಡಲ, ವಿರಾಜಪೇಟೆ, ಹುದಿಕೇರಿ, ಶ್ರಿಮಂಗಲ,  ಸೋಮವಾರಪೇಟೆ, ಶನಿವಾರಸಂತೆ, ಶಾಂತಳ್ಳಿ, ಕೊಡ್ಲಿಪೇಟೆ ಭಾಗಗಳಲ್ಲಿ 24 ಗಂಟೆಯ ಅವಧಿಯಲ್ಲಿ 100 ಮಿಲಿ ಮೀಟರ್‌ಗೂ ಅಧಿಕ ಮಳೆ ಸುರಿದಿದೆ.

ಮಡಿಕೇರಿ, ಸಂಪಾಜೆ, ಪೊನ್ನಂಪೇಟೆ, ಅಮ್ಮತ್ತಿ, ಕುಶಾಲನಗರ, ಸುಂಟಿಕೊಪ್ಪ ಸೇರಿದಂತೆ ಇತರೆಡೆ ಸಾಧಾರಣ ಮಳೆ ಸುರಿದಿದೆ.
ಜಿಲ್ಲೆಯಾದ್ಯಂತ ಮಳೆಯ ನಡುವೆ ಗಾಳಿಯ ಅಬ್ಬರ ಕೂಡ ಹೆಚ್ಚಾಗಿದ್ದು, ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬೃಹತ್ ಮರಗಳು ಧರೆಗುರುಳಿವೆ. ಕೆಲವು ಭಾಗಗಳಲ್ಲಿ ರಸ್ತೆ ಕುಸಿದಿದೆ. ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಸಮಸ್ಯೆಯಿಂದಾಗಿ ಜನರು ತತ್ತರಿಸಿದ್ದಾರೆ.

ವಾಡಿಕೆಗೂ ಮೀರಿದಂತೆ ಅಧಿಕ ಮಳೆಯಿಂದಾಗಿ ನದಿ ತೀರ ಪ್ರದೇಶಗಳಲ್ಲಿ ನೀರಿನ ರಭಸ ಹೆಚ್ಚಾಗಿದ್ದು, ಜನರ ರಕ್ಷಣೆಗಾಗಿ ಜಿಲ್ಲಾಡಳಿತ ವತಿಯಿಂದ ಕರಡಿಗೋಡು ಗ್ರಾಮ ಸೇರಿದಂತೆ ಹಲವು ಭಾಗಗಳಲ್ಲಿ ಗಂಜಿ ಕೇಂದ್ರಗಳ ಸ್ಥಾಪನೆಗೆ ಮುಂದಾಗಿದೆ.
ಮಳೆ ಗಾಳಿಯ ಅಬ್ಬರ ಜೋರಾಗಿರುವ ಹಿನ್ನೆಲೆಯಲ್ಲಿ ಶನಿವಾರ ಕೂಡ ಅಂಗನವಾಡಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಡಿಕೇರಿಗೆ ಆಗಮಿಸುವ ಹೆದ್ದಾರಿಗಳು ಕುಸಿದಿರುವ ಪರಿಣಾಮ ಸಾರ್ವಜನಿಕರು ನಿತ್ಯದ ಕಾರ್ಯಗಳಿಗೆ ನಗರಕ್ಕೆ ಆಗಮಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಡಿಕೇರಿಯಲ್ಲೂ ಕೂಡ ಸಾಧಾರಣ ಮಳೆ ಮುಂದುವರಿದಿದೆ. ನಗರದಲ್ಲಿ ಗಾಳಿ ಅಬ್ಬರ ಜೋರಾಗಿರುವ ಪರಿಣಾಮ ಹಲವು ಮನೆಗಳ ಮೇಲ್ಛಾವಣಿ ಹಾರಿಹೋಗಿವೆ. ವಿದ್ಯುತ್ ಅಡಚಣೆಯಿಂದಾಗಿ ಜನರು ತತ್ತರಿಸಿದ್ದಾರೆ.

ಮಳೆ ಹಾನಿ: ಜಿಲ್ಲೆಯಾದ್ಯಂತ ಸುಮಾರು 20ಕ್ಕೂ ಅಧಿಕ ಮನೆಗಳು ಜಖಂಗೊಂಡಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿರುವ ವರದಿಯಾಗಿದೆ.

ಮಳೆ ವಿವರ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆ ಅವಧಿ ಅಂತ್ಯಗೊಂಡಂತೆ 115.04 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 3.62 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 2469.16 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 960.16 ಮಿ.ಮೀ. ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 121.8 ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 112.43 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 110.9 ಮಿ.ಮೀ.  ಮಳೆಯಾಗಿದೆ.

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 53.2 ಮಿ.ಮೀ., ನಾಪೋಕ್ಲು 134.8 ಮಿ.ಮೀ., ಸಂಪಾಜೆ 48.2 ಮಿ.ಮೀ., ಭಾಗಮಂಡಲ 251 ಮಿ.ಮೀ., ವಿರಾಜಪೇಟೆ ಕಸಬಾ 100.2 ಮಿ.ಮೀ., ಹುದಿಕೇರಿ 111.2 ಮಿ.ಮೀ., ಶ್ರಿಮಂಗಲ 198.2 ಮಿ.ಮೀ., ಪೊನ್ನಂಪೇಟೆ 92 ಮಿ.ಮೀ., ಅಮ್ಮತ್ತಿ 80 ಮಿ.ಮೀ., ಬಾಳೆಲೆ 93 ಮಿ.ಮೀ., ಸೋಮವಾರಪೇಟೆ ಕಸಬಾ 163 ಮಿ.ಮೀ., ಶನಿವಾರಸಂತೆ 111 ಮಿ.ಮೀ., ಶಾಂತಳ್ಳಿ 234.8 ಮಿ.ಮೀ., ಕೊಡ್ಲಿಪೇಟೆ 105 ಮಿ.ಮೀ., ಕುಶಾಲನಗರ 17.6 ಮಿ.ಮೀ., ಸುಂಟಿಕೊಪ್ಪ 34ಮಿ.ಮೀ. ಮಳೆಯಾಗಿದೆ.

ಸೋಮವಾರಪೇಟೆ ವರದಿ: ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಸೋಮವಾರಪೇಟೆ- ತೋಳೂರುಶೆಟ್ಟಳ್ಳಿ-ಸಕಲೇಶಪುರ ರಸ್ತೆ ಜಲಾವೃತ್ತ ವಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಹಳ್ಳಕೊಳ್ಳಗಳು ತುಂಬಿಹರಿಯುತ್ತಿದ್ದು ಅಪಾರ ಹಾನಿ ಸಂಭವಿಸಿದೆ. ಹೊಸಬೀಡು ಗ್ರಾಮದ ಬೆಟ್ಟವೊಂದರಲ್ಲಿ ಜಲ ಉಕ್ಕಿ ಭೂಮಿ ಕುಸಿದ  ಪರಿಣಾಮ, ನೂರಾರು ಎಕರೆ ಗದ್ದೆ ಮಣ್ಣಿನಿಂದ ಆವೃತ್ತವಾಗಿದೆ.

ತೋಟ ಹಾಗೂ ಗದ್ದೆಗೆ ಒತ್ತಿಕೊಂಡಿರುವ ಬೆಟ್ಟ ಆಗಾಗ ಕುಸಿಯುತ್ತಿದ್ದು ಮರಗಳೊಂದಿಗೆ ಮಣ್ಣು ಗದ್ದೆಗೆ ಬೀಳುತ್ತಿದೆ. ಇದರಿಂದ ನಾಟಿ ಸಸಿ ಸಂಪೂರ್ಣ ನಾಶವಾಗಿದೆ.

ಭೂಕುಸಿತದಿಂದಾಗಿ ಹೊಸಬೀಡು- ದೊಡ್ಡ ತೋಳೂರು ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಈ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರು ವುದರಿಂದ ಬೆಟ್ಟದಲ್ಲಿ ಜಲ ಉಕ್ಕುತ್ತಿದೆ. ಇಡೀ ಬೆಟ್ಟವೇ ಕುಸಿಯುವ ಭೀತಿ ಎದುರಾಗಿದೆ. ತಗ್ಗು ಪ್ರದೇಶದ ಮನೆ, ತೋಟ ಹಾಗೂ ಗದ್ದೆಗಳಿಗೆ ನೀರು ನುಗ್ಗುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಈ ಭಾಗದ ಯಡೂರು, ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಹೊಸಬೀಡು ಗ್ರಾಮದ ನೂರಾರು ಎಕರೆ ಗದ್ದೆ  ಜಲಾವೃತವಾಗಿದೆ.

ಶುಕ್ರವಾರ ಬೆಳಿಗ್ಗೆ ಸೋಮವಾರಪೇಟೆ- ತೋಳೂರುಶೆಟ್ಟಳ್ಳಿ ಮುಖ್ಯರಸ್ತೆಯ ಹೊಸಬೀಡು ಬಳಿ ರಸ್ತೆಯಲ್ಲಿ 3 ಅಡಿಗೂ ಹೆಚ್ಚು ನೀರು ನಿಂತಿದ್ದ ಪರಿಣಾಮ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.

ಹೊಸಬೀಡು ಗ್ರಾಮದ ಹೊಸಗದ್ದೆ ಕೆರೆ ತುಂಬಿ ಹರಿದ ಪರಿಣಾಮ ಯಡೂರು ಗ್ರಾಮದಲ್ಲಿ  200 ಎಕರೆ ಗದ್ದೆ ಸಂಪೂರ್ಣ ಜಲಾವೃತವಾಗಿದೆ. ಸತತ ಸುರಿಯುತ್ತಿರುವ ಮಳೆಯಿಂದ ನೀರಿನ ಪ್ರಮಾಣ ಹೆಚ್ಚುತ್ತಿದೆ. ಹೊಸಬೀಡು ವ್ಯಾಪ್ತಿಯ ಬೆಟ್ಟಗಳಿಂದ ಇಳಿಯುವ ನೀರು ತೋಳೂರುಶೆಟ್ಟಳ್ಳಿಯೆಡೆಗೆ ಹರಿಯುತ್ತಿದ್ದು, ನೂರಾರು ಎಕರೆ ಗದ್ದೆ ಜಲಾವೃತವಾಗಿವೆ.

ತಹಶೀಲ್ದಾರ್ ವೆಂಕಟಾಚಲಪ್ಪ, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ 24 ಗಂಟೆಗಳಲ್ಲಿ ಈ ವ್ಯಾಪ್ತಿಯಲ್ಲಿ 7.30 ಇಂಚು ಮಳೆಯಾಗಿದ್ದರೆ, ಹೊಸಬೀಡು ಗ್ರಾಮದಲ್ಲಿ 12, ಕೂತಿ ವ್ಯಾಪ್ತಿಯಲ್ಲಿ 3 ಹಾಗೂ ಶಾಂತಳ್ಳಿ ಹೋಬಳಿಯಲ್ಲಿ 10 ಇಂಚು ಮಳೆ ಸುರಿದಿದೆ.

3 ಮನೆಗಳಿಗೆ ಹಾನಿ: ತಾಲ್ಲೂಕಿನ ಗಣಗೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ಮೂರು ಮನೆಗಳು ಹಾನಿಗೊಳಗಾಗಿವೆ. ಸರೋಜಾ, ಕೃಷ್ಣಪ್ಪ ಹಾಗೂ ಕಾಳಿ ಅವರು ಮನೆಗಳಿಗೆ ಹಾನಿಯಾಗಿದೆ.

ಗಣಗೂರಿನಲ್ಲಿ ಸುಮಾರು 20 ಎಕರೆ ಗದ್ದೆ ಮುಳುಗಡೆಯಾಗಿದೆ. ಹಾನಿ ಪ್ರದೇಶಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರಿ ವಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

`ಗ್ರಾಮದ ಊರುಬಾಗಿಲು ಕೆರೆ ತುಂಬಿ ಹರಿಯುತ್ತಿದ್ದು ಅಪಾಯದ ಮಟ್ಟದಲ್ಲಿದೆ' ಎಂದು ಗ್ರಾಮಸ್ಥ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.

ವಿದ್ಯುತ್ ಸ್ಥಗಿತ: ತಾಲೂಕಿನಲ್ಲಿ ಮೂರು ದಿನಗಳಿಂದ ವಿದ್ಯುತ್ ಸ್ಥಗಿತಗೊಂಡ ಪರಿಣಾಮ ನಗರ ಮತ್ತು ಗ್ರಾಮಾಂತರ ಪ್ರದೇಶಗಳು ಕತ್ತಲೆಯಲ್ಲಿ ಮುಳುಗಿವೆ.

ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.  ವಿದ್ಯುತ್ ಅವಲಂಭಿಸಿರುವ ಉದ್ದಿಮೆದಾರರಿಗೆ ತೊಂದರೆ ಎದುರಾಗಿದೆ. ಕುಡಿಯುವ ನೀರಿಗೂ ಅಭಾವ ಉಂಟಾಗಿದೆ. 

ಸೂಕ್ತ ಪರಿಹಾರಕ್ಕೆ ಆಗ್ರಹ
ಸೋಮವಾರಪೇಟೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಭಾರಿ ನಷ್ಟು ಉಂಟಾಗಿದೆ. ಎರಡು ತಿಂಗಳಿನಿಂದ ಸುರಿಯುತ್ತಿರುವ ಮಳೆಗೆ ಕಾಫಿ, ಏಲಕ್ಕಿ, ತೆಂಗು, ಅಡಿಕೆ ತೋಟಗಳು ಜಲಾವೃತವಾಗಿವೆ.

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಗ್ರಾಮದಲ್ಲಿ 50 ಎಕರೆಯಷ್ಟು ಗದ್ದೆ  ಜಲಾವೃತ ಗೊಂಡಿದೆ. ಎಚ್.ಎಂ. ಕೊಮಾರಪ್ಪ ಎಂಬುವವರ ಮನೆ ಮೇಲೆ 5 ಸಿಲ್ವರ್ ಮರಗಳು ಉರುಳಿ ಬಿದ್ದಿವೆ.

ಶುಂಠಿ, ಕೋಟೆಯೂರು, ಬಸವನಕೊಪ್ಪ, ಸುಳಿಮಳ್ತೆ, ದೊಡ್ಡಮಳ್ತೆ, ದೊಡ್ಡಹಣಕೋಡು, ಗೆಜ್ಜೆಹಣಕೋಡು, ಚಿಕ್ಕತೋಳೂರು ಗ್ರಾಮಗಳಲ್ಲಿ ನೂರಾರು ಎಕರೆ ಗದ್ದೆ ಜಲಾವೃತಗೊಂಡಿದೆ.

ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಗೋಡು ಗ್ರಾಮದ ಕೆರೆ ಒಡೆದ ಪರಿಣಾಮ, ಕೆಳಭಾಗದಲ್ಲಿರುವ ಗದ್ದೆಗಳು ಜಲಾವೃತಗೊಂಡಿದೆ. ಗಣಗೂರು ಗ್ರಾಮ ಪಂಚಾಯಿತಿಯ ಬಾಣಾವಾರ ಗ್ರಾಮದಲ್ಲಿ 180 ಎಕರೆ ಭೂಮಿ ಮುಳುಗಡೆಗೊಂಡಿದೆ.
`ಈ ಬಾರಿ ಮಳೆಹಾನಿ ಪರಿಹಾರವನ್ನು 500 ಅಥವಾ ಸಾವಿರ ರೂಪಾಯಿ ನೀಡಲು ಸರ್ಕಾರ ಮುಂದಾದರೆ, ಪರಿಹಾರದ ಚೆಕ್‌ಗಳನ್ನು ಸಾಮೂಹಿಕವಾಗಿ ಸುಟ್ಟು ಪ್ರತಿಭಟಿಸಲಾಗುವುದು' ಎಂದು ಕೃಷಿಕ ಎಚ್.ಡಿ. ಸುಬ್ರಮಣಿ ಎಚ್ಚರಿಕೆ ನೀಡಿದರು.

ಕೆರೆ ಒಡೆದು ಹಾನಿ: ಸೋಮವಾರಪೇಟೆ ಸಮೀಪದ ಐಗೂರಿನ ಸಂಪಿಗೆಕೊಲ್ಲಿ ಎಂಬಲ್ಲಿ ಕೆರೆ ಒಡೆದು ಸುಮಾರು ರೂ 5 ಲಕ್ಷ ನಷ್ಟ ಸಂಭವಿಸಿದೆ.

ಐಗೂರಿನ ಕೆ.ಎಂ. ಪ್ರಸನ್ನ ಎಂಬುವರಿಗೆ ಸೇರಿದ ಅರ್ಧ ಎಕರೆ ಪ್ರದೇಶದಲ್ಲಿರುವ  ಕೆರೆಯೊಂದು ಒಡೆದಿದೆ. ತೋಟಗಳಿಗೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ.

ಬಾಣವಾರ ಗ್ರಾಮದ ಕೆರೆ ಒಡೆದು 180 ಎಕರೆ ಗದ್ದೆ ಜಲಾವೃತಗೊಂಡಿದೆ. ದೊಡ್ಡಮಳ್ತೆ ಗ್ರಾಮದಲ್ಲಿರುವ ಹೊನ್ನಮ್ಮನ ಕೆರೆ ನೀರು ತುಂಬಿ ಅಪಾಯದ ಮಟ್ಟದಲ್ಲಿದೆ.

ಚೌಡ್ಲು ಗ್ರಾಮದ ರುಕ್ಮಿಣಿ ಎಂಬುವರ ಮನೆಯ ಶೀಟ್ ಹಾರಿಹೋಗಿದೆ. ಐಗೂರು ಗ್ರಾಮದ ಅಣ್ಣಪ್ಪ ಎಂಬುವರ ಮನೆ ಗೋಡೆ ಕುಸಿದಿದೆ.

24 ಗಂಟೆಗಳಲ್ಲಿ ತಾಲ್ಲೂಕಿನ ಶಾಂತಳ್ಳಿ ಹೋಬಳಿ ಯಲ್ಲಿ 234.6, ಸೋಮವಾರಪೇಟೆ ಕಸಬಾ 163, ಕೊಡ್ಲಿಪೇಟೆ 105 ಮಿ.ಮೀ ಮಳೆ ಆಗಿದೆ.

ಜಿಲ್ಲಾಧಿಕಾರಿ ಭೇಟಿ; ಪರಿಶೀಲನೆ
ಗೋಣಿಕೊಪ್ಪಲು: ತೀವ್ರ ಮಳೆ- ಗಾಳಿಯಿಂದ ಹಾನಿಗೊಳಗಾದ ದಕ್ಷಿಣ ಕೊಡಗಿನ ಕೆಲವು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್, ಉಪ ವಿಭಾಗಾಧಿಕಾರಿ ಪ್ರಭು, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಕುಶಾಲಪ್ಪ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಹರಿಹರ, ಬಲ್ಯಮಂಡೂರು ನಡುವೆ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಸೇತುವೆ ಹಾಗೂ ಗದ್ದೆಗಳು ಮುಳುಗಿವೆ. ಗದ್ದೆ ಹಾಗೂ ಕಾಫಿ ತೋಟಗಳು ಜಲಾವೃತಗೊಂಡಿವೆ.

ಪ್ರವಾಹದಿಂದ ಸೇತುವೆ ಮುಳುಗಿ, ರಸ್ತೆ ಕುಸಿದಿರುವುದರಿಂದ ಈ ಭಾಗದ ಜನರು ಮತ್ತು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.
`ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ. ಭತ್ತ, ಕಾಫಿ, ಮೆಣಸು, ಅಡಿಕೆ, ತೆಂಗು ಮೊದಲಾದ ಬೆಳೆಗಳಿಗೆ ಹಾನಿಯಾಗಿದೆ. ಹಲವು ಮನೆಗಳು ಕುಸಿದಿವೆ. ಕಂದಾಯ ಅಧಿಕಾರಿಗಳು ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಎಲ್ಲವನ್ನೂ ದಾಖಲಿಸಿಕೊಳ್ಳಲಿದ್ದಾರೆ. ಬಳಿಕ ಹಾನಿ ಬಗ್ಗೆ ಪರಿಶೀಲಿಸಿ ಶೀಘ್ರ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು' ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಕೋತೂರು, ಕುಟ್ಟ, ಶ್ರೀಮಂಗಲ, ಹುದಿಕೇರಿ ಭಾಗಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.

`ಲಕ್ಷ್ಮಣ ತೀರ್ಥ ನದಿಗೆ ಹುಣಸೂರು ಬಳಿ ಬ್ಯಾರೇಜ್ ನಿರ್ಮಿಸಿದ್ದರಿಂದ ನದಿ ಪ್ರವಾಹ ಹೆಚ್ಚಿದೆ. ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕಾನೂರು, ಬಾಳೆಲೆ, ಮಲ್ಲೂರು ಭಾಗದ ಜನತೆ ಇದರಿಂದ ತೊಂದರೆಗೀಡಾಗಿದ್ದಾರೆ. ಸರ್ಕಾರ ಶೀಘ್ರ ನಷ್ಟದ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಪರಿಹಾರ ನೀಡಬೇಕು' ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಕುಶಾಲಪ್ಪ ಆಗ್ರಹಿಸಿದರು.
ತಹಶೀಲ್ದಾರ್ ಆರೋಗ್ಯಮೇರಿ, ಕಂದಾಯ ಅಧಿಕಾರಿಗಳಾದ ಶಿವಶಂಕರ್, ಚಂದ್ರನ್ ಇತರರು ಹಾಜರಿದ್ದರು.

ಇಳಿಯದ ಪ್ರವಾಹ
ದಕ್ಷಿಣ ಕೊಡಗಿನಾದ್ಯಂತ ಬುಧವಾರ ಮತ್ತು ಗುರುವಾರ ಧಾರಾಕಾರವಾಗಿ ಸುರಿದ ಮಳೆ  ಶುಕ್ರವಾರ ಕಡಿಮೆಯಾಗಿತ್ತು. ಗೋಣಿಕೊಪ್ಪಲು, ತಿತಿಮತಿ ಭಾಗದಲ್ಲಿ ಬೆಳಿಗ್ಗಿನಿಂದಲೇ ಬಿಸಿಲು ಕಾಣಿಸಿಕೊಂಡರೆ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ಕುಟ್ಟ ಭಾಗದಲ್ಲಿ ಆಗಾಗ ರಭಸದ ಮಳೆ ಬೀಳುತ್ತಿತ್ತು.

2 ತಿಂಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಎಲ್ಲ ಕಡೆಯೂ ಜಲ ಉತ್ಪತ್ತಿಯಾಗಿದೆ. ಮಳೆ ನಿಂತರೂ ಗದ್ದೆ, ಕಾಫಿ ತೋಟಗಳಲ್ಲಿ ನೀರು ಹರಿಯುತ್ತಿದೆ. ಇದರಿಂದ ಪ್ರವಾಹ ಇಳಿಮುಖವಾಗಿಲ್ಲ.

ನಾಲ್ಕೇರಿ, ನಿಟ್ಟೂರು ನಡುವಿನ ಲಕ್ಷ್ಮಣ ತೀರ್ಥ ನದಿ ಸೇತುವೆ ಮೇಲೆ ಕೂಡ ನೀರಿನ ಮಟ್ಟ ಗುರುವಾರಕ್ಕಿಂತ, ಶುಕ್ರವಾರ ಹೆಚ್ಚಾಗಿತ್ತು.

ಪ್ರವಾಹ ಭೀತಿ
ಸಿದ್ದಾಪುರ: ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ತೀವ್ರ ಹಾನಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೆಲ ಗ್ರಾಮಗಳು ಸಂಪರ್ಕವನ್ನೇ ಕಳೆದುಕೊಂಡಿದೆ.

ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಇಕ್ಕೆಲದಲ್ಲಿನ ಮನೆಗಳು ಜಲಾವೃತಗೊಂಡಿದೆ. ಈ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಹೆಚ್ಚುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.

ನೆಲ್ಯಹುದಿಕೇರಿಯಿಂದ ಬೆಟ್ಟದಕಾಡು ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. 5 ಮನೆಗಳು ಕುಸಿದಿವೆ. ಕರಡಿಗೋಡು ಗ್ರಾಮವೂ ಪ್ರವಾಹ ಭೀತಿಯಲ್ಲಿದೆ. ಚಿಕ್ಕನಹಳ್ಳಿ ಮತ್ತು ಕರಡಿಗೋಡುವಿನ ಎರಡು ಕಿರು ಸೇತುವೆ ಸಂಪೂರ್ಣ ಜಲಾವೃತಗೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಕರಡಿಗೋಡು ಗ್ರಾಮದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.

ಶುಕ್ರವಾರ ವಿರಾಜಪೇಟೆ ತಾಲ್ಲೂಕು ಉಪ ತಹಸಿಲ್ದಾರ್ ಎಚ್.ಕೆ. ಪೊನ್ನು, ಕಂದಾಯ ಅಧಿಕಾರಿ ಶ್ರೀನಿವಾಸ್, ಗ್ರಾಮಲೆಕ್ಕಿಗ ನಿಶಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶನಿವಾರಸಂತೆ ವರದಿ: ಸಮೀಪದ ಕೊಡ್ಲಿಪೇಟೆ ಹೋಬಳಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಪಟ್ಟಣದಲ್ಲೂ 2 ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಶುಕ್ರವಾರ ಆಗಾಗ್ಗೆ ಬಿಸಿಲಿನ ವಾತಾವರಣ ಮೂಡಿದರೂ ತಕ್ಷಣ ಜೋರಾಗಿ ಮಳೆ ಬೀಳುತ್ತಿತ್ತು. ಮಳೆಗೆ ಅನೇಕ ಮನೆಗಳು, ಕಟ್ಟಡಗಳಿಗೆ ಹಾನಿ ಉಂಟಾಗಿದೆ.

ಕೊಡ್ಲಿಪೇಟೆಯ ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದಲ್ಲಿರುವ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಅವರ ಹಳೆಯ ಸರ್ಕಾರಿ ವಸತಿಗೃಹದ ಮೇಲೆ ಭಾರಿ ಗಾತ್ರದ ಕೊಡ್ಲಿಪೇಟೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಚ್.ಸಿ. ಯತೀಶ್‌ಕುಮಾರ್ ಅವರ ಕಲ್ಲಳ್ಳಿ ಗ್ರಾಮದ ವಾಸದ ಮನೆಯ ಒಂದು ಭಾಗದ ಗೋಡೆ ಕುಸಿದಿದೆ. ಮತ್ತೊಂದು ಭಾಗದ ಗೋಡೆ ಬಿರುಕು ಬಿಟ್ಟಿದೆ. ಕಂದಾಯ ಪರಿವೀಕ್ಷಕ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT