ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಹುರುಳಿ ಕಟಾವು

Last Updated 20 ಜನವರಿ 2012, 4:40 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಈ ಬಾರಿ ಹುರುಳಿ  ಹುಲುಸಾಗಿ ಬಂದಿದ್ದು, ಕೊಯಿಲು ಮಾಡಲಾಗುತ್ತಿದೆ. ಕೆಲವರು ಈಗಾಗಲೆ ಕೊಯಿಲು ಮಾಡಿರುವ ಕಾಯಿಯನ್ನು ಒಕ್ಕಣೆ ಮಾಡುತ್ತಿದ್ದಾರೆ.

ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಹುರುಳಿಯನ್ನು ಹೆಚ್ಚಿನ ವಿಸ್ತೀರ್ಣದಲ್ಲಿ ಬೆಳೆಯಲಾಗಿದೆ. ಬಿತ್ತನೆ ಸಮಯದಲ್ಲಿ ಸಕಾಲದಲ್ಲಿ ಮಳೆಯಾಗದ ಪರಿಣಾಮ ಹೆಚ್ಚಿನ ವಿಸ್ತೀರ್ಣದಲ್ಲಿ ರಾಗಿ ಬಿತ್ತನೆ ಸಾಧ್ಯವಾಗಲಿಲ್ಲ. ಆ ಜಮೀನಿಗೆ ತಡವಾಗಿ ಸುರಿದ ಮಳೆಯ ತೇವಾಂಶ ಬಳಸಿಕೊಂಡು ಹುರುಳಿ ಬಿತ್ತಲಾಗಿತ್ತು. ಆಗೊಮ್ಮೆ ಈಗೊಮ್ಮೆ ಸುರಿದ ಅಲ್ಪ ಮಳೆ ಮತ್ತು ದಟ್ಟವಾಗಿ ಸುರಿದ ಮಂಜಿನ ಪರಿಣಾಮ ಹುರುಳಿ ಬೆಳೆ ಕಾಯಿ ಕಟ್ಟಿತು.

ಈ ಬಾರಿ ಹುರುಳಿ ಕಾಯಿ ಗಟ್ಟಿಯಾಗಿದೆ. ಜೊಳ್ಳು ಕಡಿಮೆ. ಈಗ ಸುಗ್ಗಿ ಪ್ರಗತಿಯಲ್ಲಿರುವುದರಿಂದ ಮಾರುಕಟ್ಟೆಯಲ್ಲಿ ಹುರುಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಒಂದು ಕ್ವಿಂಟಲ್ ಹುರುಳಿ ರೂ. 1200 ರಂತೆ ಮಾರಾಟವಾಗುತ್ತಿದೆ. ಈ ಬೆಲೆಯಲ್ಲಿ ಬೆಳೆಗಾರರಿಗೆ ಏನೂ ಗಿಟ್ಟುವುದಿಲ್ಲ ಎಂದು ಕೊಳ್ಳೂರು ಗ್ರಾಮದ ರೈತ ಲಕ್ಷ್ಮಣರೆಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.

ಹುರುಳಿ ದ್ವಿದಳ ಧಾನ್ಯವಾಗಿದ್ದು, ಫಲವತ್ತತೆ ಇಲ್ಲದ ಜಮೀನಿನಲ್ಲಿ ಬಿತ್ತುವುದು ವಾಡಿಕೆ. ಹುರುಳಿ ಬಿತ್ತಿದ ಮರುವರ್ಷ ಆ ಜಮೀನಿನಲ್ಲಿ ರಾಗಿ ಬಿತ್ತಲಾಗುತ್ತದೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವಿಶಾಲವಾದ ಮಾವಿನ ತೋಟಗಳಲ್ಲಿ ಹುರುಳಿ ಬಿತ್ತನೆ ಮಾಡಿದರೂ ಅದು ದಟ್ಟವಾಗಿ ಬೆಳೆದ ಸಂದರ್ಭದಲ್ಲಿ ಕಟರ್ ನೆರವಿನಿಂದ ಬೆಳೆಯನ್ನು ಕತ್ತರಿಸಿ ಮಣ್ಣಿಗೆ ಸೇರಿಸಲಾಗುತ್ತಿದೆ. ಇದರಿಂದ ಭೂಮಿಯ ಸತ್ವ ಹೆಚ್ಚುತ್ತದೆ.

ಮಳೆ ಆಶ್ರಿತ ಹೊಲಗಳಲ್ಲಿ ಬೆಳೆದ ಹುರುಳಿಯನ್ನು ಮಾತ್ರ ತಿನ್ನಲು, ಜಾನುವಾರುಗಳಿಗೆ ಬಳಸುತ್ತಾರೆ. ಮನೆಗೆ ಆಗಿ ಉಳಿದ ಹುರುಳಿಯನ್ನು ಮಾತ್ರ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಲಾಗುತ್ತದೆ. ಬೆಲೆ ಇದ್ದರೆ ಪರವಾಗಿಲ್ಲ. ಬೆಲೆ ಇಲ್ಲದಿದ್ದರೆ ನಷ್ಟ ತಪ್ಪಿದ್ದಲ್ಲ. ಇಷ್ಟಾದರೂ ಇದೊಂದು ನಷ್ಟದ ಬೆಳೆ ಎಂದು ರೈತರು ಪರಿಗಣಿಸುವುದಿಲ್ಲ. ಏಕೆಂದರೆ ಹುರುಳಿ ಬಿತ್ತನೆಯಿಂದ ನೆಲದ ಸತ್ವ ಹೆಚ್ಚುತ್ತದೆ. ದನಗಳಿಗೆ ಅದರಲ್ಲೂ ಕುರಿಗಳಿಗೆ ಒಳ್ಳೆ ಮೇವು ಸಿಗುತ್ತದೆ. ಹುರುಳಿ ಹೊಟ್ಟನ್ನು ಒಂದೆಡೆ ಸಂಗ್ರಹ ಮಾಡಿ ಜಾನುವಾರುಗಳಿಗೆ ನೀಡಲಾಗುತ್ತದೆ.

ಸುಗ್ಗಿ ಬಂದಿತೆಂದರೆ ರಸ್ತೆಗಳು ಕಾಳು ಒಕ್ಕುವ ಕಣಗಳಾಗುತ್ತವೆ. ಇಷ್ಟು ದಿನ ಗ್ರಾಮೀಣ ಪ್ರದೇಶದ ರಸ್ತೆಗಳ ಮೇಲೆ ರಾಗಿಯನ್ನು ಒಕ್ಕಲಾಗುತ್ತಿತ್ತು. ಈಗ ಹುರುಳಿಯನ್ನು ಒಕ್ಕಲಾಗುತ್ತಿದೆ. ಈ ಚಟುವಟಿಕೆ ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ. ಮುಖ್ಯವಾಗಿ ವಾಹನ ಅಪಘಾತಗಳಿಗೆ ಕಾರಣವಾಗಿದೆ. ಆದರೂ ರಸ್ತೆ ಒಕ್ಕಣೆ ಮಾತ್ರ ನಿಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT