ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರೆದ ಬಂಧನ ಸತ್ರ

ಗಣಿ ಅಕ್ರಮ: ಐಎಎಸ್‌ ಅಧಿಕಾರಿ ಶಿವಲಿಂಗಮೂರ್ತಿ ಜೈಲಿಗೆ
Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್‌ ಮೈನಿಂಗ್‌ ಕಂಪೆನಿ (ಎಎಂಸಿ) ಬಳ್ಳಾರಿಯಲ್ಲಿ ನಡೆಸಿದ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ಐಎಎಸ್‌ ಅಧಿಕಾರಿ ಎಂ.ಈ. ಶಿವಲಿಂಗಮೂರ್ತಿ ಅವರನ್ನು ನಗರದ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಎಎಂಸಿ ಪ್ರಕರಣದಲ್ಲಿ ಶಿವಲಿಂಗ ಮೂರ್ತಿ ಮೂರನೇ ಆರೋಪಿ. ಅವರ ವಿರುದ್ಧ 2012ರ ಮೇ 30ರಂದು ಸಿಬಿಐನ ಭ್ರಷ್ಟಾಚಾರ ನಿಗ್ರಹ ವಿಭಾಗದ ಬೆಂಗಳೂರು ಘಟಕದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ವಿಶೇಷ ಕೋರ್ಟ್ ಸಮನ್ಸ್‌ ಜಾರಿಗೊಳಿಸಿತ್ತು.

ಮಧ್ಯಂತರ ಜಾಮೀನು ಕೋರಿ ಶಿವಲಿಂಗಮೂರ್ತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಇತ್ತೀಚೆಗೆ ವಜಾ ಮಾಡಿತ್ತು. ಸಮನ್ಸ್‌ನ ಸೂಚನೆಯಂತೆ ಸಿಟಿ ಸಿವಿಲ್‌ ನ್ಯಾಯಾಲಯದ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಶನಿವಾರ ಅವರು ಹಾಜರಾಗಿ  ಜಾಮೀನು ಅರ್ಜಿ ಸಲ್ಲಿಸಿದರು.

ಆದರೆ, ಇದನ್ನು ತಿರಸ್ಕರಿಸಿದ ಪ್ರಭಾರ ಸಿವಿಲ್‌ ನ್ಯಾಯಾಧೀಶ ಸೋಮರಾವ್‌ ಅವರು, ಶಿವಲಿಂಗಮೂರ್ತಿ ಅವರನ್ನು ಅಕ್ಟೋಬರ್‌ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಸಿಬಿಐ ಅಧಿಕಾರಿಗಳು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು.

ರೂ.480 ಕೋಟಿ ನಷ್ಟ: ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ, ಅವರ ಆಪ್ತ ಕೆ.ಮೆಹಫೂಜ್‌ ಅಲಿಖಾನ್‌ ಸಂಚು ನಡೆಸಿ ಬಳ್ಳಾರಿಯ ದಾಲ್ಮಿಯಾ ಮೈನ್ಸ್‌, ಲಕ್ಷ್ಮೀನಾರಾಯಣ ಮೈನಿಂಗ್‌ ಕಂಪೆನಿ ಮತ್ತು ಟಿಫಿನ್‌ ಬ್ಯಾರೇಟಿಸ್‌ ಗಣಿಗಳಿಂದ 24 ಲಕ್ಷ ಟನ್‌ ಕಬ್ಬಿಣದ ಅದಿರನ್ನು ಕಳ್ಳತನ ಮಾಡಿದ್ದರು. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ರೂ. 480 ಕೋಟಿ ನಷ್ಟವಾಗಿತ್ತು.

ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರ ಹುದ್ದೆಯಲ್ಲಿ ಶಿವಲಿಂಗಮೂರ್ತಿ ಅವರು ರೆಡ್ಡಿ ಜೊತೆ ಸಂಪೂರ್ಣವಾಗಿ ಶಾಮೀಲಾಗಿದ್ದರು ಎಂದು ಸಿಬಿಐ ಆರೋಪಪಟ್ಟಿಯಲ್ಲಿ ದೂರಿದೆ. ಆರಂಭದಲ್ಲಿ ಕೆ.ಎಂ.ಪಾರ್ವತಮ್ಮ ಎಂಬುವರ ಕುಟುಂಬದ ಒಡೆತನದಲ್ಲಿ ಎಎಂಸಿ ಗಣಿ ಮತ್ತು ಕಂಪೆನಿ  ಇತ್ತು. ಸಂಡೂರಿನ ವೆಂಕಟಗಿರಿ ಗ್ರಾಮದಲ್ಲಿ  ಗಣಿ ಇತ್ತು.

ಈ ಗುತ್ತಿಗೆಯ ಅವಧಿ 1996ರಲ್ಲಿ ಅಂತ್ಯಗೊಂಡಿತ್ತು. ಗಣಿ ಸಚಿವರಾಗಿದ್ದ ವಿ.ಮುನಿಯಪ್ಪ ಅವರು ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ ಅಕ್ರಮವಾಗಿ ಈ ಗುತ್ತಿಗೆಯನ್ನು ನವೀಕರಿಸಿದ್ದರು ಎಂಬ ಆರೋಪವೂ ಇದೆ.

ಹಿಂದಿನ ಪಾಲುದಾರರ ಹೆಸರಿನಲ್ಲೇ ಜನಾರ್ದನ ರೆಡ್ಡಿ ಅವರಿಗೆ ಎಎಂಸಿಯಿಂದ ಅದಿರು ಸಾಗಿಸಲು ಪರವಾನಗಿಗಳನ್ನು ವಿತರಿಸಲಾಗಿತ್ತು. ಈ ಕುರಿತು ಕಾನೂನು ತೊಡಕು ಇದೆ ಎಂಬ ಸಂಶಯವನ್ನು ಅಧೀನ ಅಧಿಕಾರಿಗಳು ವ್ಯಕ್ತ ಪಡಿಸಿದ್ದರು.

ಕಾನೂನು ಅಭಿಪ್ರಾಯ ಪಡೆಯಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆದ ಶಿವಲಿಂಗ ಮೂರ್ತಿ, ಪರವಾನಗಿಗಳನ್ನು ವಿತರಿಸುವಂತೆ ನಿರ್ದೇಶನ ನೀಡಿದ್ದರು ಎಂಬ ಆರೋಪವೂ ಅವರ ವಿರುದ್ಧ ಇದೆ.

ನಾಗಪುರದಲ್ಲಿ ಕಚೇರಿ ಹೊಂದಿರುವ ಕೇಂದ್ರ ಗಣಿ ಇಲಾ ಖೆಯ ಅಧೀನದ ಮುಖ್ಯ ಗಣಿ ನಿಯಂತ್ರಕರಿಗೆ 2010ರ ಆಗಸ್ಟ್‌ 8ರಂದು ಬರೆದ ಪತ್ರದಲ್ಲೂ ಎಎಂಸಿಗೆ ಸಂಬಂಧಿಸಿದ ವಾಸ್ತವ ಸಂಗತಿಗಳನ್ನು ಉಲ್ಲೇಖಿಸದೇ ವಂಚಿಸಿದ್ದರು. ಉದ್ದೇಶಪೂರ್ವಕವಾಗಿಯೇ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಸೋಸಿಯೇಟೆಡ್‌ ಮೈನಿಂಗ್‌ ಕಂಪೆನಿಗೆ ಅನುಕೂಲ ಮಾಡಿಕೊಟ್ಟಿ ದ್ದರು ಎಂದು ಸಿಬಿಐ ಆರೋಪಿಸಿದೆ.

ವರ್ಷದ ಬಳಿಕ ಅನುಮತಿ: ಈ ಪ್ರಕ ರಣದಲ್ಲಿ ಶಿವಲಿಂಗ ಮೂರ್ತಿ ವಿರುದ್ಧ ವಿಚಾರಣೆ ಆರಂಭಿಸಲು ಅನುಮತಿ ನೀಡು ವಂತೆ ಕೋರಿ ಸಿಬಿಐ ಡಿಐಜಿ ಆರ್‌. ಹಿತೇಂದ್ರ ಅವರು 10ಕ್ಕೂ ಹೆಚ್ಚು ಸಲ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಸಂಬಂಧಿಸಿದ ಕಡತ ವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಕೊನೆಗೆ ಸಿಬಿಐ ಒತ್ತಡಕ್ಕೆ ಮಣಿದ ಸರ್ಕಾರ 2012ರ ಮಾರ್ಚ್‌ನಲ್ಲಿ ಈ ಕಡತವನ್ನು ಕೇಂದ್ರಕ್ಕೆ ಕಳುಹಿಸಿತ್ತು. ಶಿವಲಿಂಗಮೂರ್ತಿ ಅವರ ವಿರುದ್ಧ ವಿಚಾರಣೆ ಆರಂಭಿಸಲು ಅನುಮತಿ ನೀಡಿ ಕೇಂದ್ರ ಸರ್ಕಾರ ಆಗಸ್ಟ್ 26ರಂದು ಆದೇಶ ಹೊರಡಿಸಿತ್ತು.
ಈ ಆದೇಶ ತಲುಪಿದ ಬಳಿಕ ನ್ಯಾಯಾಲಯ ಆರೋಪಿ ಅಧಿಕಾರಿಗೆ ಸಮನ್ಸ್‌ ಜಾರಿಗೊಳಿಸಿತ್ತು.

11ನೇ ಅಧಿಕಾರಿ
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮೂವರು ನಿವೃತ್ತರೂ ಸೇರಿದಂತೆ 11 ಅಧಿಕಾರಿಗಳು ಜೈಲು ಸೇರಿದ್ದಾರೆ.
ಶಿವಲಿಂಗಮೂರ್ತಿ 11ನೇಯವರು. ಈ ಪೈಕಿ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಮೀಂ ಬಾನು ಅವರಿಗೆ ಮಾತ್ರ ಜಾಮೀನು ದೊರೆತಿದೆ.

ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌. ವಿಶ್ವನಾಥ್‌, ಐಎಫ್‌ಎಸ್‌ ಅಧಿಕಾರಿಗಳಾದ ಮನೋಜ್‌ ಕುಮಾರ್‌ ಶುಕ್ಲಾ, ಎಸ್‌.ಮುತ್ತಯ್ಯ, ಡಿಸಿಎಫ್‌ ನರೇಂದ್ರ ಹಿತ್ತಲಮಕ್ಕಿ, ವಲಯ ಅರಣ್ಯಾಧಿಕಾರಿಗಳಾದ ಮಹೇಶ ಹಿರೇಮಠ, ಚಂದ್ರಕಾಂತ ನಾಯಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಸ್‌.ಪಿ.ರಾಜು, ಪೊಲೀಸ್‌ ಇನ್‌ಸ್ಪೆಕ್ಟರ್‌ ವೈ. ರಮಾಕಾಂತ್‌ ಹುಲ್ಲೂರ ನ್ಯಾಯಾಂಗ ಬಂಧನದಲ್ಲಿದ್ದಾರೆ.

ನವೆಂಬರ್‌ನಲ್ಲಿ ನಿವೃತ್ತಿ
ಕೆಎಎಸ್‌ ಅಧಿಕಾರಿಯಾಗಿದ್ದ ಶಿವಲಿಂಗಮೂರ್ತಿ 2007ರಲ್ಲಿ ಐಎಎಸ್‌ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು. ಈಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ (ಜನಸ್ಪಂದನ) ಹುದ್ದೆಯಲ್ಲಿದ್ದಾರೆ. ಇದೇ ನವೆಂಬರ್‌ ಅಂತ್ಯದಲ್ಲಿ ಸೇವೆಯಿಂದ ನಿವೃತ್ತರಾಗುತ್ತಾರೆ.

ಆನಂದ್‌ ಸಿಂಗ್‌ಗೆ ಇಂದು ಬುಲಾವ್
ಬೇಲೆಕೇರಿ ಬಂದರಿನ ಮೂಲಕ ಅದಿರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಸಂಜೆ 6 ಗಂಟೆಯೊಳಗೆ ತನಿಖಾ ತಂಡದ ಎದುರು ಹಾಜರಾಗು ವಂತೆ ಬಳ್ಳಾರಿಯ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್‌ ಸಿಂಗ್‌ ಅವರಿಗೆ ಸಿಬಿಐ ಅಧಿಕಾರಿ ಗಳು ನೋಟಿಸ್‌ ಜಾರಿ ಮಾಡಿದ್ದಾರೆ.

ಇದೇ ಪ್ರಕರಣದಲ್ಲಿ ಇಬ್ಬರು ಶಾಸಕರನ್ನು ಸಿಬಿಐ ಈಗಾಗಲೆ ಬಂಧಿಸಿದೆ. ಇದರಿಂದಾಗಿ ಈಗ ಆನಂದ್‌ ಸಿಂಗ್‌ ಕೂಡ ಬಂಧನದ ಭೀತಿಯಲ್ಲಿದ್ದಾರೆ. ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಕೂಡ ಅದಿರು ಕಳ್ಳಸಾಗಣೆ ಆರೋಪದ ಬಗ್ಗೆ ತನಿಖೆ ಎದುರಿಸು ತ್ತಿದ್ದಾರೆ. ಅವರನ್ನೂ ಬಂಧಿಸುವ ಸಾಧ್ಯತೆ ಇದೆ.

ಸಿಬಿಐ ವಶಕ್ಕೆ ಸೈಲ್‌
ಬೇಲೆಕೇರಿ ಬಂದರಿನ ಮೂಲಕ ಅದಿರು ಕಳ್ಳಸಾಗಣೆಯ ಆರೋಪ ದಲ್ಲಿ ಬಂಧಿತರಾದ ಕಾರವಾರ ಶಾಸಕ ಸತೀಶ್‌ ಸೈಲ್‌ ಅವರನ್ನು ನ್ಯಾಯಾಲಯ ಆರು ದಿನ ಸಿಬಿಐ ವಶಕ್ಕೆ ಒಪ್ಪಿಸಿ ಶನಿವಾರ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT