ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ತ್ರಿವಳಿ ಸ್ಫೋಟ: ಇಬ್ಬರು ಉಗ್ರರ ಬಂಧನ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಕಳೆದ ಜುಲೈ 13ರಂದು ನಗರವನ್ನು ನಡುಗಿಸಿದ್ದ ತ್ರಿವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನ ನಿಗ್ರಹ ದಳವು (ಎಟಿಎಸ್) ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರನ್ನು ಬಂಧಿಸುವುದರೊಂದಿಗೆ ಪ್ರಕರಣಕ್ಕೆ ಮಹತ್ತರ ತಿರುವು ನೀಡಿದೆ.

ಸ್ಫೋಟ ನಡೆದ ಆರು ತಿಂಗಳ ಬಳಿಕ, ಬಿಹಾರದ ದರ್ಭಾಂಗ್ ಜಿಲ್ಲೆಯವರಾದ ನಖ್ವಿ ಅಹಮದ್ ವಾಸಿ ಅಹಮದ್ ಶೇಖ್ (22) ಮತ್ತು ನದೀಮ್ ಅಖ್ತರ್ ಅಶ್ಫಾಕ್ ಶೇಖ್ (23) ಎಂಬುವವರನ್ನು ಬಂಧಿಸಲು ಎಟಿಎಸ್ ಯಶಸ್ವಿಯಾದರೂ, ಸ್ಫೋಟದ ಪ್ರಮುಖ ಸೂತ್ರಧಾರ ಯಾಸಿನ್ ಭಟ್ಕಳ್ ಮತ್ತು ಬಾಂಬ್ ಇರಿಸಿದವರನ್ನು ಬಂಧಿಸಬೇಕಿದೆ. 

ನಕಲಿ ದಾಖಲೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರಿಬ್ಬರೂ ಈಗಾಗಲೇ ಪೊಲೀಸರ ವಶದಲ್ಲಿದ್ದರು ಎಂದು ಎಟಿಎಸ್ ಮುಖ್ಯಸ್ಥ ರಾಕೇಶ್ ಮರಿಯಾ ವರದಿಗಾರರಿಗೆ ತಿಳಿಸಿದರು. ಇಬ್ಬರನ್ನೂ ಮುಂಬೈ ನ್ಯಾಯಾಲಯ ವಿಚಾರಣೆಗಾಗಿ ಫೆ. 2ರವರೆಗೆ ಎಟಿಎಸ್ ವಶಕ್ಕೆ ಒಪ್ಪಿಸಿದೆ.

ಮದನಪುರ ಮತ್ತು ಅನ್‌ಟಾಪ್ ಹಿಲ್ ಪ್ರದೇಶದಲ್ಲಿ ವಾಸಿಸುತ್ತಿದ್ದ ನಖ್ವಿ ಹಾಗೂ ನದೀಮ್‌ನನ್ನು ನಕಲಿ ದಾಖಲೆ ನೀಡಿ ಸಿಮ್‌ಕಾರ್ಡ್‌ಗಳನ್ನು ಖರೀದಿಸುತ್ತಿದ್ದ ಆರೋಪದ ಮೇರೆಗೆ ಬಂಧಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಇನ್ನೊಬ್ಬ ಆರೋಪಿ ಹಾರೂನ್ ರಶೀದ್ ನಾಯಕ್‌ನನ್ನು ಸ್ಫೋಟ ಆರೋಪಕ್ಕೆ ಸಂಬಂಧಿಸಿದಂತೆ ಇನ್ನಷ್ಟೇ ವಶಕ್ಕೆ ಪಡೆಯಬೇಕಾಗಿದೆ ಎಂದು ಮರಿಯಾ ಹೇಳಿದ್ದಾರೆ.

ಮೊದಲಿನಿಂದ ಸಂಪರ್ಕ: ನಖ್ವಿ 2010ರ ಸೆಪ್ಟೆಂಬರ್‌ನಲ್ಲಿ ಮುಂಬೈಗೆ ಬಂದಿದ್ದರೂ 2008ರಿಂದಲೇ ಆತ ಯಾಸಿನ್ ಜತೆ ಸಂಪರ್ಕ ಇರಿಸಿಕೊಂಡಿದ್ದ ಎನ್ನಲಾಗಿದೆ.

ಸ್ಫೋಟದ ತಂತ್ರ ಹೆಣೆದಿದ್ದ ಯಾಸಿನ್, ನದೀಮ್‌ನನ್ನು ದೆಹಲಿಗೆ ಕರೆಸಿಕೊಂಡು ಸ್ಫೋಟಕ ತುಂಬಿದ ಬಟ್ಟೆಯ ಪೊಟ್ಟಣವೊಂದನ್ನು ನೀಡಿದ್ದ. ಈ ಪೊಟ್ಟಣವನ್ನು ನದೀಮ್,  ನಖ್ವಿಗೆ ಹಸ್ತಾಂತರಿಸಿದ. ಹವಾಲಾ ಸಂಪರ್ಕದ ಮೂಲಕ ದೊರೆತ ಹತ್ತು ಲಕ್ಷ ರೂಪಾಯಿಯಲ್ಲಿ ಯಾಸಿನ್ ಒಂದೂವರೆ ಲಕ್ಷ ರೂಪಾಯಿಯನ್ನು ನಖ್ವಿಗೆ ಕಮಿಷನ್ ರೂಪದಲ್ಲಿ ನೀಡಿದ್ದ. ಸ್ಫೋಟಕಗಳನ್ನು ಇರಿಸುವ ಸಲುವಾಗಿ ನದೀಮ್ ಮತ್ತು ನಖ್ವಿ ಎರಡು ಸ್ಕೂಟರ್‌ಗಳು, ಎರಡು ಮೋಟಾರ್ ಬೈಕ್‌ಗಳನ್ನು ಅಪಹರಿಸಿದ್ದು, ಅವುಗಳನ್ನು ಬಿಹಾರದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನಖ್ವಿಗೆ ಪೊಲೀಸರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿದ ಮರಿಯಾ, ಆತನಿಗೆ ಯಾಸಿನ್‌ನ ಸಂಪೂರ್ಣ ಚಟುವಟಿಕೆಗಳ ಅರಿವಿತ್ತು. ಮಾತ್ರವಲ್ಲ, ಬೈಕುಲ್ಲಾದಲ್ಲಿನ ಹಬೀಬ್ ಕಟ್ಟಡದಲ್ಲಿನ ಮೂರನೇ ಅಂತಸ್ತಿನ ಮನೆಯನ್ನು ಬಾಡಿಗೆಗೆ ಪಡೆಯುವಲ್ಲಿ ಯಾಸಿನ್‌ಗೆ ನೆರವಾಗಿದ್ದ. ಇದಕ್ಕೆ ನಮ್ಮಲ್ಲಿ ಸಾಕ್ಷ್ಯಾಧಾರ ಇದೆ ಎಂದರು.

ಸ್ಫೋಟಕಗಳನ್ನು ದೆಹಲಿಯಿಂದ ರೈಲು ಮಾರ್ಗವಾಗಿ ಮುಂಬೈಗೆ ತರಲಾಗಿತ್ತು. ಆದರೆ ಅವು ಎಲ್ಲಿಂದ ಹೇಗೆ ರಾಜಧಾನಿಗೆ ಬಂದವು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಎಂದು ತಿಳಿಸಿದರು.

ಸ್ಫೋಟದ ನಂತರವೂ ಯಾಸಿನ್ ಹಲವು ತಿಂಗಳುಗಳ ಕಾಲ ನಗರದಲ್ಲೇ ನೆಲೆಸ್ದ್ದಿದ್ದನಲ್ಲದೆ, ಬೈಕುಲ್ಲಾದಲ್ಲಿನ ಮನೆಯ ಮಾಲೀಕಳನ್ನು ಭೇಟಿ ಮಾಡಲು ಆಲೋಚಿಸಿದ್ದ. ಆಗ ಮುಂಬೈ ಪೊಲೀಸರ ದಾಳಿಯ ಸುಳಿವು ದೊರೆತ ಹಿನ್ನೆಲೆಯಲ್ಲಿ ತಪ್ಪಿಸಿಕೊಂಡಿದ್ದ ಎಂಬ ಮಾಧ್ಯಮಗಳ ವರದಿಯನ್ನು ಮರಿಯಾ ಇದೇ ವೇಳೆ ಅಲ್ಲಗಳೆದರು. `ಕಳೆದ ಜೂನ್ ತಿಂಗಳಲ್ಲಿ ಆತ  ನಗರದಲ್ಲಿದ್ದರೂ ಜುಲೈ 13ರಂದು ಅಲ್ಲಿಂದ ತೆರಳಿದ್ದ~ ಎಂದು ಸ್ಪಷ್ಟಪಡಿಸಿದರು.

ಸ್ಫೋಟಕ್ಕೆ ಬಳಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನಗಳನ್ನು ಬೈಕುಲ್ಲಾದಲ್ಲಿನ ಮನೆಯಲ್ಲಿಯೇ ಜೋಡಿಸಲಾಗಿತ್ತು ಎಂಬ ಊಹೆಯ ಮೇರೆಗೆ ಅದರ ವಿಧಿ ವಿಜ್ಞಾನ ತಪಾಸಣೆಗಾಗಿ ಕೋಣೆಯನ್ನು ಭದ್ರಪಡಿಸಲಾಗಿದೆ.

ಪ್ರಕರಣದ ವಿಚಾರಣೆಗಾಗಿ ಎಟಿಎಸ್‌ನ ಸುಮಾರು 40 ಅಧಿಕಾರಿಗಳು ಮತ್ತು 100ಕ್ಕೂ ಹೆಚ್ಚು ಸಿಬ್ಬಂದಿ 18 ರಾಜ್ಯಗಳಿಗೆ ಭೇಟಿ ನೀಡಿ, 12,373 ಸಾಕ್ಷಿಗಳ ವಿಚಾರಣೆ ನಡೆಸಿದ್ದಾರೆ. ಪತ್ತೆಗೆ ಅನುಕೂಲವಾಗಲೆಂದು ಯಾಸಿನ್ ಭಟ್ಕಳ್ ಭಾವಚಿತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಸಂವಹನದ ಕೊರತೆ ಇಲ್ಲ: ತನಿಖೆಗೆ ಸಂಬಂಧಿಸಿದಂತೆ ಎಟಿಎಸ್ ಮತ್ತು ಮುಂಬೈ ಪೊಲೀಸರ ನಡುವೆ ಸಂವಹನದ ಕೊರತೆ ಇದೆ ಎಂಬ ಆರೋಪವನ್ನೂ ಮರಿಯಾ ಇದೇ ಸಂದರ್ಭದಲ್ಲಿ ಅಲ್ಲಗಳೆದರು. `ಪ್ರಕರಣವನ್ನು ಭೇದಿಸಲು ಯಾರಿಗೆ ತಾನೇ ಇಷ್ಟವಿಲ್ಲ? ನಮ್ಮಲ್ಲೂ ಸ್ಪರ್ಧೆ ಇದೆ, ಆದರೆ ಶತ್ರುತ್ವ ಇಲ್ಲ~ ಎಂದರು.

ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಪತ್ರಿಕಾಗೋಷ್ಠಿ ಕರೆಯಲು ತಾವು ಬಯಸಿದ್ದರೂ, ಪ್ರಕರಣದ ಬಗ್ಗೆ ಈಗಾಗಲೇ ಎದ್ದಿರುವ ಊಹಾಪೋಹಗಳಿಂದಾಗಿ ಇದೀಗ ದಿಢೀರ್ ಪತ್ರಿಕಾಗೋಷ್ಠಿ ಕರೆಯಬೇಕಾಯಿತು ಎಂದು ಸ್ಪಷ್ಟಪಡಿಸಿದರು.

ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ತ್ರಿವಳಿ ಸ್ಫೋಟ ನಡೆಸಲಾಗಿತ್ತು. ಮೊದಲ ಸ್ಫೋಟ ಸಂಜೆ 6.50 ವೇಳೆಗೆ ಜವೇರಿ ಬಜಾರ್‌ನಲ್ಲಿ, ಎರಡನೆಯದು ಪ್ರಮುಖ ವ್ಯಾಪಾರ ಕೇಂದ್ರವಾದ ಒಪೇರಾ ಹೌಸ್‌ನಲ್ಲಿ  ಮತ್ತು ಮೂರನೇ ಸ್ಫೋಟ ಕೇಂದ್ರ ಮುಂಬೈನ ಜನದಟ್ಟಣೆಯ ದಾದರ್‌ನಲ್ಲಿ ಸಂಜೆ 7.04ಕ್ಕೆ ಸಂಭವಿಸಿ ಒಟ್ಟು 27 ಮಂದಿ ಸಾವಿಗೀಡಾಗಿದ್ದರು. ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಳ್ಳದಿದ್ದರೂ, ಇಂಡಿಯನ್ ಮುಜಾಹಿದ್ದೀನ್ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT