ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ದಾಳಿ ಸಂಚುಕೋರರ ಮೇಲೆ ಹೊಣೆಗಾರಿಕೆ ನಿಗದಿ

ಪಾಕಿಸ್ತಾನಕ್ಕೆ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ಆಗ್ರಹ
Last Updated 26 ಸೆಪ್ಟೆಂಬರ್ 2013, 19:37 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರ ಮಧ್ಯೆ ಮಾತುಕತೆಗೆ ವೇದಿಕೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಮುಂಬೈ ದಾಳಿ ಸಂಚುಕೋರರ ವಿರುದ್ಧ ಪಾಕ್‌ ಹೊಣೆಗಾರಿಕೆ ನಿಗದಿ ಮಾಡಬೇಕೆಂದು ಭಾರತ ಆಗ್ರಹಿಸಿದೆ.

‘ಉಭಯ ದೇಶಗಳ ಪ್ರಧಾನಿ ಅವರ ಮಧ್ಯೆ ಮಾತುಕತೆ ಕಾರ್ಯಸೂಚಿ ಸಿದ್ಧ­ಪಡಿಸ­ಲಾಗಿದ್ದು, ಇದರಲ್ಲಿ 26/11ರ ಮುಂಬೈ ಮೇಲಿನ ದಾಳಿಗೆ ಪಾಕ್‌ ನೆಲದಲ್ಲಿ ಸಂಚು ನಡೆಸಿ ಅದನ್ನು ಕಾರ್ಯಗತ ಮಾಡಿದವರ ವಿರುದ್ಧ ಹೊಣೆ­ಗಾರಿಕೆ ನಿಗದಿ ಮಾಡುವಂತೆ ಕೋರಲಾಗಿದೆ’ ಎಂದು ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಮಾತುಕತೆಯಲ್ಲಿ ಇಬ್ಬರು ಮುಖಂ­ಡರು ಎಲ್ಲಾ ವಿಷಯ ಅಥವಾ ವಿವಾದ­ಗಳ ಕುರಿತು ಚರ್ಚೆ ನಡೆಸುವು­ದಿಲ್ಲ. ಈ ಚರ್ಚೆ ಸೀಮಿತ ವಿಷಯಗಳ ಬಗ್ಗೆ ನಡೆ­ಯುತ್ತದೆ’ ಎಂದು ಅವರು ಹೇಳಿದರು.

‘ಮುಂಬೈ ದಾಳಿ ಕುರಿತಂತೆ ಪಾಕ್‌ನ ನ್ಯಾಯಾಂಗ ಆಯೋಗವು ಭಾರತಕ್ಕೆ ಬಂದು ಸಾಕ್ಷಿಗಳ ವಿಚಾರಣೆ ನಡೆಸಿದೆ. ಈ ಮೂಲಕ ಭಾರತ ಸಂಗ್ರಹಿಸಿರುವ ಸಾಕ್ಷ್ಯಗಳನ್ನು ಪಾಕ್‌ ಕೋರ್ಟ್‌ ಮಾನ್ಯ ಮಾಡುವ ಸಾಧ್ಯತೆ ಇದೆ. ಇದೊಂದು ಉತ್ತಮ ಬೆಳವಣಿಗೆ’ ಎಂದು ಅವರು ನುಡಿದರು.

‘26/11ರ ದಾಳಿಯ ಸಂಚುಕೋರ­ರನ್ನು ನ್ಯಾಯಾ ಲಯದ ಮುಂದೆ ತಂದು ನಿಲ್ಲಿಸುವಂತಹ ಪ್ರಯತ್ನ ಪಾಕ್‌ನಲ್ಲಿ ಈಗಷ್ಟೆ ಆರಂಭವಾಗಿದೆ. ಇದು ಪೂರ್ಣ­ಗೊಳ್ಳಲು ಇನ್ನೂ ಅನೇಕ ಹಂತಗಳಲ್ಲಿ ಪ್ರಯತ್ನಗಳು ಸಾಗಬೇಕಿದೆ. ಪ್ರಧಾನಿ ಸಿಂಗ್‌ ಸಹ ಪಾಕ್‌ನಿಂದ ಪಸರಿಸುತ್ತಿರುವ ಭಯೋತ್ಪಾದನಾ ಚಟುವಟಿಕೆ ಬಗ್ಗೆ ಕಳ­ವಳಗೊಂಡಿದ್ದು, ಇದನ್ನು ಮಾತುಕತೆ ಸಂದರ್ಭದಲ್ಲಿ ಪಾಕ್‌ ಪ್ರಧಾನಿಯವರಿಗೂ ಮನವರಿಕೆ ಮಾಡಿ ಕೊಡಲಿದ್ದಾರೆ’ ಎಂದು ಖುರ್ಷಿದ್‌ ಹೇಳಿದರು.

‘ಭಯೋತ್ಪಾದನೆ ಹತ್ತಿಕ್ಕಲು ಪಾಕ್‌ಗೆ ತೊಂದರೆ ಏನಾದರೂ ಇದ್ದರೆ ಈ ಬಗೆ್ಗ ಆ ದೇಶವು ಪಾರ ದರ್ಶಕವಾಗಿ ಮತ್ತು ಮುಕ್ತವಾಗಿ ನಮ್ಮೊಂದಿಗೆ ಮಾತನಾಡ ­ಬೇಕು. ಆಗಬೇಕಿದ್ದರೆ ಭಯೋತ್ಪಾದನೆ ನಿಗ್ರಹಿ ಸಲು ಜಂಟಿ ಕಾರ್ಯಾಚರಣೆ ನಡೆಸುವ ಕುರಿತು ಚರ್ಚಿಸ ಬಹುದು. ಏಕೆಂದರೆ ಭಾರತವನ್ನು ಗುರಿಯಾಗಿಟ್ಟು ಕೊಂಡು ಪಾಕ್‌ ನೆಲದಿಂದ ನಡೆಯುತ್ತಿ­ರುವ ಭಯೋತ್ಪಾ ದನಾ ಚಟುವಟಿಕೆ­ಗಳು ನಮ್ಮನ್ನು ಆತಂಕಕ್ಕೀಡು ಮಾಡಿವೆ’ ಎಂದು ಅವರು ನುಡಿದರು.

ವಿಶ್ವಸಂಸ್ಥೆ ಮಹಾಸಭೆಯಲ್ಲಿ ಭಾಗ­ವ­ಹಿಸಲು ಅಮೆರಿಕಗೆ ತೆರಳುವ ಮುನ್ನ ನವ­ದೆಹಲಿಯಲ್ಲಿ ಮಾತನಾ­ಡಿದ ಪ್ರಧಾನಿ ಸಿಂಗ್, ಪಾಕ್‌ ಪ್ರಧಾನಿ ಅವ­ರನ್ನು ಭೇಟಿ ಮಾಡಲು ಉತ್ಸುಕ ವಾಗಿರು­ವುದಾಗಿ ಹೇಳಿದ್ದಾರೆ. ಇಂಥದ್ದೇ ಮಾತನ್ನು ಪಾಕ್‌ ಪ್ರಧಾನಿ ಷರೀಫ್‌ ಕೂಡ ಆಡಿದ್ದಾರೆ.

ಈ ಮಧ್ಯೆ, ಭಾರತ– ಪಾಕ್‌ ಪ್ರಧಾನಿ­ಗಳು ಉಭಯ ದೇಶಗಳ ನಡುವಿನ ಎಲ್ಲಾ ವಿವಾದಗಳ ಕುರಿತು ಭಾನು­ವಾರ ಚರ್ಚಿಸಲಿದ್ದಾರೆ ಎಂದು ಪಾಕ್‌ನ ಉನ್ನತ ಅಧಿಕಾರಿಗಳು ಹೇಳಿದ್ದಾರೆ. ‘ಎರಡು ದೇಶಗಳ ನಡುವಿನ ಎಲ್ಲಾ ವಿವಾದಗಳು ಮಹತ್ವದ್ದೇ ಆಗಿವೆ. ಆದ್ದ­ರಿಂದ ಈ ಕುರಿತು ಚರ್ಚೆ ನಡೆಸುವ ಅವಶ್ಯ­ಕತೆ ಇದೆ. ಭಯೋತ್ಪಾದನೆಯು ಎರಡೂ ದೇಶಗಳ ಆತಂಕಕ್ಕೆ ಕಾರಣ ವಾಗಿದೆ. ಇದನ್ನು ನಿಗ್ರಹಿಸಲು ಉಭಯ ದೇಶಗಳು ಒಟ್ಟಾಗಿ ಶ್ರಮಿಸುವ ಅಗತ್ಯ­ವಿದೆ’ ಎಂದು ಪಾಕ್‌ ವಿದೇಶಾಂಗ ಸಚಿವಾ­ಲಯದ ವಕ್ತಾರ ಇಜಾಜ್‌ ಅಹ್ಮದ್‌ ಚೌಧರಿ ತಿಳಿಸಿದ್ದಾರೆ.

ಎಚ್‌ 1ಬಿ ವೀಸಾ ಮಸೂದೆ ಸುಧಾರಣೆ: ಅಮೆರಿಕಕ್ಕೆ ಮನವಿ
ಆರ್ಥಿಕ ಸುಧಾರಣಾ ಕ್ರಮವಾಗಿ ವಿದೇಶಿ ಉದ್ಯೋಗಿಗಳಿಗೆ  ವೀಸಾ ಶುಲ್ಕ ಹೆಚ್ಚಿಸಲು ಅಮೆರಿಕ ಜಾರಿಗೆ ತರಲು ಉದ್ದೇಶಿಸಿರುವ ಎಚ್‌1ಬಿ ವೀಸಾ ಮಸೂದೆ ಬಗ್ಗೆ  ಭಾರತ ಕಳವಳ ವ್ಯಕ್ತ­ಪಡಿಸಿ, ಇದನ್ನು ಸುಧಾರಣೆ ಮಾಡು­ವಂತೆ ಕೋರಿದೆ.

ಈ ಮಸೂದೆಯಲ್ಲಿ ಪ್ರಸ್ತಾವಿಸಿರು­ವಂತೆ ಶೇ 50 ಇಲ್ಲವೇ ಅದಕ್ಕೂ ಹೆಚ್ಚು ವಿದೇಶಿ ಉದ್ಯೋಗಿಗಳನ್ನು ನೇಮಿಸಿ­ಕೊಂ­ಡಿ­ರುವ ಕಂಪೆನಿಗಳು ಪ್ರತಿಯೊಬ್ಬ ವಿದೇಶಿ ಉದ್ಯೋಗಿಗೆ 10,000 ಡಾಲರ್‌ (ಅಂದಾಜು ` 6.20 ಲಕ್ಷ) ವೀಸಾ ಶುಲ್ಕವನ್ನು ತೆರಬೇಕಾಗುತ್ತದೆ. ಇದ­ರಿಂದ ಭಾರತದ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ದಿಮೆಗಳು ಆತಂಕಗೊಂಡಿವೆ.

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಶುಕ್ರವಾರ  ಭೇಟಿಯಾಗ­ಲಿರುವ ಹಿನ್ನೆಲೆಯಲ್ಲಿ ಎಚ್‌1ಬಿ ವೀಸಾ ಕುರಿತು ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌  ಅಮೆರಿಕದ ವಿದೇಶಾಂಗ ಇಲಾಖೆ ಕಾರ್ಯ­ದರ್ಶಿ ಜಾನ್‌ ಕೆರಿ ಅವರನ್ನು ಗುರುವಾರ ಭೇಟಿ ಮಾಡಿದರು.

ನಾಗರಿಕ ಉದ್ದೇಶದ ಪರಮಾಣು ಒಪ್ಪಂದ ಸೇರಿದಂತೆ ಉಭಯ ದೇಶಗಳ ಹಿತಾಸಕ್ತಿಯ ಇನ್ನಿತರ ವಿಷಯಗಳ ಬಗ್ಗೆಯೂ ಅವರು ಚರ್ಚೆ ನಡೆಸಿದರು.

ಆರ್ಥಿಕ ಸಂಬಂಧವನ್ನು ಸುಧಾರಿ­ಸಲು ಎರಡೂ ರಾಷ್ಟ್ರಗಳು ಶ್ರಮಿಸ­ಬೇಕಿದೆ ಎಂದು ಅವರು ಹೇಳಿದರು. ಅಮೆರಿಕ ಮತ್ತು ಭಾರತದ ಉದ್ಯಮಿ­ಗಳು ಆರ್ಥಿಕತೆ ಬಗ್ಗೆ ಕಳವಳ ವ್ಯಕ್ತಪಡಿ­ಸಿದ ಹಿನ್ನೆಲೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.

ಪ್ಯಾಲಿಸ್ಟೈನ್‌, ಈಜಿಪ್ಟ್‌, ಲಿಬಿಯಾ ಮುಖಂಡರೊಂ­ದಿಗೂ ಖುರ್ಷಿದ್‌ ಮಾತು­­­ಕತೆ ನಡೆಸಿದರು. ಜೊತೆಗೆ, ‘ಸಾರ್ಕ್‌’ ರಾಷ್ಟ್ರಗಳ ವಿದೇಶಾಂಗ ಸಚಿ­ವರ ಸಭೆಯಲ್ಲೂ ಭಾಗವಹಿಸಿದ್ದರು.

‘ದೃಢತೆಯತ್ತ ಭಾರತ–ಚೀನಾ ಬಾಂಧವ್ಯ’

ವಿಶ್ವಸಂಸ್ಥೆ (ಐಎಎನ್‌ಎಸ್‌): ಚೀನಾ ಜೊತೆಗಿನ ದ್ವಿಪಕ್ಷೀಯ ಸಂಬಂಧ ಗಟ್ಟಿ ಗೊಳ್ಳುತ್ತಿದೆ. ಇದನ್ನು ಮತ್ತಷ್ಟು ಸುಧಾರಿ ಸಲು ಭಾರತವು ಎಲ್ಲ ರೀತಿಯಲ್ಲೂ ಶ್ರಮಿಸುತ್ತಿದೆ ಎಂದು ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ಹೇಳಿದರು.

ವಿಶ್ವಸಂಸ್ಥೆ ಮಹಾಸಭೆಯ ಸಂದರ್ಭ ದಲ್ಲಿ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರನ್ನು ಗುರು­ವಾರ ಭೇಟಿ ಮಾಡಿದರು. ‘ಭಾರತ– ಚೀನಾ ಸಂಬಂಧ ಜಾಗತಿ­ಕವಾಗಿ ಮಹತ್ವಪೂರ್ಣವಾದುದು. ಈ ನಿಟ್ಟಿ­ನಲ್ಲಿ ಚೀನಾ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದಾಗ ವಿಸ್ತೃತ ಚರ್ಚೆ ನಡೆ­ದಿದೆ. ದ್ವಿಪಕ್ಷೀಯ ಸಹಕಾರ ವೃದ್ಧಿ­ಸಲು ನಾವು ಉತ್ಸುಕರಾಗಿದ್ದೇವೆ’ ಎಂದರು.

‘ಉಭಯ ದೇಶಗಳ ಮಧ್ಯೆಯ ಭಾಂದವ್ಯ ಗಟ್ಟಿಗೊಳ್ಳುತ್ತಿದೆ. ಈ ವರ್ಷದಲ್ಲಿ ನಾವು ನಾಲ್ಕನೇ ಸಾರಿ ಪರಸ್ಪರ ಭೇಟಿಯಾಗು­ತ್ತಿದ್ದೇವೆ’ ಎಂದು ವಾಂಗ್‌ ಹೇಳಿದರು.

‘ಚೀನಾ, ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್‌ಗಳನ್ನು ಆರ್ಥಿಕವಾಗಿ ಪರ­ಸ್ಪರ ಸಂಪರ್ಕಿಸುವಂತಹ ಒಂದು ನೀತಿ (ಎಕಾನಾ ಮಿಕ್‌ ಕಾರಿಡಾರ್‌) ರೂಪಿಸಲು ಮಾತುಕತೆ ಚುರುಕುಗೊಂಡಿದೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT