ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ದಿನಚರಿ

Last Updated 22 ಜನವರಿ 2011, 19:30 IST
ಅಕ್ಷರ ಗಾತ್ರ

ಪ್ರದರ್ಶನವೊಂದರಲ್ಲಿ ತೂಗು ಹಾಕಿದ್ದ ಚಿತ್ರ ಕಲಾಕೃತಿಯನ್ನು ಅನೇಕರು ನೋಡುತ್ತಾರೆ. ನೋಡುಗರ  ಭಾವಕ್ಕೆ ತಕ್ಕಂತೆ ಅದು ಗೋಚರಿಸುತ್ತದೆ. ಕಲಾವಿದ ಬಳಸಿದ ಗೆರೆಗಳು, ಬಣ್ಣ, ಆಕೃತಿಯ ನಡುವೆ ಬಿಟ್ಟಿರುವ  ಖಾಲಿ ಜಾಗಕ್ಕೂ ಅರ್ಥವುಂಟು. ಈ ಅರ್ಥ ನೋಡುಗರ ಗ್ರಹಿಕೆಯನ್ನು ಅವಲಂಬಿಸಿರುತ್ತದೆ. ಕಿರಣ್‌ರಾವ್  ನಿರ್ದೇಶನದ ‘ದೋಭಿ ಘಾಟ್’ ಇಂತಹ ಅನುಭವ ನೀಡುವ ಸಿನಿಮಾ. ಕೆಲವರಿಗೆ ಕ್ಲಾಸಿಕ್ ಅನಿಸಿದರೆ ಇನ್ನುಳಿದವರಿಗೆ ಬೋರ್ ಅನಿಸಲೂಬಹುದು.

ಮನುಷ್ಯ ಸಂಬಂಧಗಳ ಜಟಿಲತೆಯನ್ನು ನಾಲ್ಕು ಪಾತ್ರಗಳ ಮೂಲಕ ಬಿಡಿಸುವ ಪ್ರಯತ್ನ ಚಿತ್ರದ ಕಥಾವಸ್ತು. ಯಾವ ಬಂಧನಕ್ಕೂ ಒಳಗಾಗದೆ ಬದುಕಲು ಬಯಸುವ ಕಲಾವಿದ ಅರುಣ್ (ಅಮೀರ್ ಖಾನ್) ವಿಚ್ಛೇದಿತ. ಅಂತರ್ಮುಖಿ ಹಾಗೂ ಮಿತಭಾಷಿ. ಮೇಲಿಂದ ಮೇಲೆ ತನ್ನ ವಾಸಸ್ಥಳ ಬದಲಿಸುತ್ತಾನೆ. ಇಂತಹ ಸನ್ನಿವೇಶದಲ್ಲಿ ಹೊಸ ಮನೆಯೊಂದಕ್ಕೆ ಬಂದಾಗ ಅಲ್ಲಿ ಅವನಿಗೆ ಕೆಲ ವಿಡಿಯೊ ಟೇಪ್‌ಗಳು ಸಿಗುತ್ತವೆ. ಅವು ಅವನ ಮೇಲೆ ಪರಿಣಾಮ ಬೀರುತ್ತವೆ.

ನೆರೆ ಮನೆಯವರನ್ನು ಮಾತನಾಡಿಸಲು ಹಿಂಜರಿಯುವ ಅರುಣ್ ವಿಡಿಯೊ ಟೇಪ್‌ನಲ್ಲಿರುವ ಮಹಿಳೆಯತ್ತ ಆಕರ್ಷಿತನಾಗುತ್ತಾನೆ. ಅವಳ ದೃಷ್ಟಿಯಿಂದ ಬದುಕನ್ನು ನೋಡಲು ಆರಂಭಿಸುತ್ತಾನೆ. ಅವಳ ಮಾತಿಗೆ ತನ್ನ ಕುಂಚದಿಂದ ಬಣ್ಣ ತುಂಬಲು ಆರಂಭಿಸುತ್ತಾನೆ. ಸಂಬಂಧಗಳ ಮೇಲೆ ಅರುಣ್‌ಗೆ ಮತ್ತೆ ವಿಶ್ವಾಸ ಹುಟ್ಟುತ್ತದೆ.   ಆದರೆ ಪೇಟಿಂಗ್ ಅರ್ಧಕ್ಕೆ ನಿಂತು ಬಿಡುತ್ತದೆ. ಪೇಟಿಂಗ್ ಅಪೂರ್ಣವಾಗಿದೆ ಎಂದು ಕೆಲವರಿಗೆ ಎನಿಸಬಹುದು.

 ಚಿತ್ರದ ಇನ್ನುಳಿದ ಪಾತ್ರಗಳಾದ ಮುನ್ನಾ (ಪ್ರತೀಕ್) ಬಿಹಾರದಿಂದ ಹೊಟ್ಟೆಹೊರೆಯಲು ಮುಂಬೈಗೆ ಬಂದು ಬಟ್ಟೆ ಒಗೆಯುವ ಕೆಲಸ ಮಾಡುತ್ತಾನೆ. ಸಿನಿಮಾ ನಟ ಆಗಬೇಕೆನ್ನುವುದು ಅವನ ಕನಸು. ಇನ್ನೊಂದೆಡೆ ಭಾರೀ ಸಂಬಳದ ಅಮೆರಿಕದ ಉದ್ಯೋಗ ತೊರೆದು ಶಾಯ್ (ಮೋನಿಕಾ) ಮುಂಬೈಗೆ ಬರುತ್ತಾಳೆ. ಪ್ರತೀಕ್ ಅವಳತ್ತ ಆಕರ್ಷಿತನಾದರೆ, ಶಾಯ್, ಅರುಣ್‌ನತ್ತ ಆಕರ್ಷಿತಳಾಗುತ್ತಾಳೆ.

ಅರುಣ್ ವಿಡಿಯೊ ಟೇಪ್‌ನಲ್ಲಿರುವ ಕಂಡ ಯುವತಿಯತ್ತ ಆಕರ್ಷಿತನಾಗುತ್ತಾನೆ. ಸಂಬಂಧಗಳ ಹುಡುಕಾಟದಲ್ಲಿರುವ ಇವರೆನ್ನೆಲ್ಲ ತನ್ನ ಒಡಲಲ್ಲಿ ಇಟ್ಟುಕೊಂಡ ಮುಂಬೈ ನಗರದ ದಿನಚರಿಯನ್ನು ಒಂದು ಪಾತ್ರದಂತೆ ಪೋಷಿಸಿದ್ದಾರೆ ನಿರ್ದೇಶಕಿ ಕಿರಣ್ ರಾವ್. ಒಂದೂವರೆ ತಾಸಿನ ಈ ಸಿನಿಮಾ ನೋಡುಗರನ್ನು ಚಿಂತನೆಗೆ ಹಚ್ಚುತ್ತದೆ.

ಹೊಸ ಮುಖಗಳಾದ ಪ್ರತೀಕ್, ಮೋನಿಕಾ ಭರವಸೆ ಮೂಡಿಸುತ್ತಾರೆ. ತುಷಾರ್ ಕಾಂತಿ ರೇ ಅವರ ಛಾಯಾಗ್ರಹಣ ಸಿನಿಮಾಕ್ಕೆ ಸಹಜತೆ ತಂದುಕೊಟ್ಟಿದೆ. ನಿಶಾಂತ್ ರಾಧಾಕೃಷ್ಣನ್ ಅವರ ಸಂಕಲನ ಸಿನಿಮಾಕ್ಕೆ ಬಿಗಿ ತಂದುಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT