ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನಲ್ಲಿ ಮಹಾಮಳೆ

Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಧಾರಾಕಾರ ಮಳೆಯಿಂದಾಗಿ ಮುಂಬೈ ಮಹಾನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ದಿನವಿಡೀ ಸುರಿದ ಮಳೆಯಿಂದಾಗಿ ಮುಂಬೈ ನಗರದ ಜೀವನಾಡಿಯಾಗಿರುವ ನಗರ ರೈಲು ಸೇವೆ ಸೇರಿದಂತೆ ದೇಶದ ವಿವಿಧ ಭಾಗಕ್ಕೆ ತೆರಳುವ ರೈಲು ಸಂಚಾರದಲ್ಲೂ ವ್ಯತ್ಯು ಉಂಟಾಯಿತು.

ಹಳಿಗಳು ನೀರಿನಲ್ಲಿ ಮುಳುಗಿದ್ದರಿಂದ ಸೂರತ್-ಮುಂಬೈ ಎಕ್ಸ್‌ಪ್ರೆಸ್, ಮುಂಬೈ ಸೆಂಟ್ರಲ್- ಅಹಮದಾಬಾದ್ ಮಧ್ಯೆ ಸಂಚರಿಸುವ ಕರ್ಣಾವತಿ ಎಕ್ಸ್‌ಪ್ರೆಸ್ ಮತ್ತು ಮುಂಬೈ ಸೆಂಟ್ರಲ್- ಅಹಮದಾಬಾದ್ ಮಧ್ಯೆ ಸಂಚರಿಸುವ ಡಬ್ಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ವಿರ‌್ಕೋಲಿ, ಸಿಯಾನ್ ಮತ್ತು ಮಸೀದಿ ರಸ್ತೆಗಳಲ್ಲಿ ಹರಿಯುವ ಮಳೆ ನೀರಿನಲ್ಲಿ  ಸರಕು ಸಾಗಣೆ ವಾಹನಗಳು ಸಿಕ್ಕಿಹಾಕಿಕೊಂಡಿವೆ.

ದಾದರ್, ಪರೇಲ್, ಸಿಯಾನ್ ಮತ್ತು ಕಂದಿವಾಲಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಕಚೇರಿಯಿಂದ ಮನೆಗೆ ತೆರಳುವ ಉದ್ಯೋಗಿಗಳು ತೊಂದರೆ ಅನುಭವಿಸಬೇಕಾಯಿತು.

ಮುಂದಿನ 48 ಗಂಟೆಗಳು ಇದೇ ರೀತಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರದಲ್ಲಿ ಮಳೆ- ಐವರ ಸಾವು: ಹೈದರಾಬಾದ್ (ಐಎಎನ್‌ಎಸ್): ಸತತ ಮಳೆಯಿಂದಾಗಿ ಆಂಧ್ರ ಪ್ರದೇಶದಲ್ಲಿ ಪ್ರವಾಹ ಗಂಭೀರ ಸ್ಥಿತಿಗೆ ತಲುಪಿದ್ದು, ಐದು ಜನ ಮೃತಪಟ್ಟಿದ್ದಾರೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಆಂಧ್ರ ಹಾಗೂ ತೆಲಂಗಾಣ ಕಡಲ ತೀರದಲ್ಲಿ ಮಳೆ ಸತತವಾಗಿ ಸುರಿಯುತ್ತಿದ್ದು, ನದಿ, ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಕೆಲವು ಹಳ್ಳಿಗಳಲ್ಲಿ ವಿದ್ಯುತ್ ಮತ್ತು ಸಂವಹನ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕ್ಷಾಮಪರಿಹಾರ ಹಾಗೂ ಪುನರ್ವಸತಿ ಸಚಿವ ರಘುವೀರ ರೆಡ್ಡಿ ತಿಳಿಸಿದ್ದಾರೆ.

ಪ್ರವಾಹಕ್ಕೆ 7 ಸಾವು (ಪಟ್ನಾ ವರದಿ): ಸತತ ಮಳೆಯಿಂದ ಬಿಹಾರದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಏಳು ಮಂದಿ ಸಾವನ್ನಪ್ಪಿದ್ದಾರೆ. ಐದು ಲಕ್ಷಕ್ಕೂ ಹೆಚ್ಚು ಜನರ ಜೀವನ ಅಸ್ತವ್ಯಸ್ತವಾಗಿದೆ.

ಪ್ರವಾಹದಿಂದ ಸಾವಿರಾರು ಮನೆಗಳು ಕೊಚ್ಚಿಹೋಗಿದ್ದು, ನೂರಾರು ಹಳ್ಳಿಗಳು ಜಲಾವೃತವಾಗಿವೆ. . ನೆರೆ ರಾಜ್ಯ ನೇಪಾಳದಲ್ಲೂ ನಿರಂತರ ಮಳೆ ಸುರಿಯುತ್ತಿರುವದರಿಂದ ನದಿಗಳು ತುಂಬಿ ಹರಿಯುತ್ತಿವೆ.

ಇನ್ನೂ ಮುಗಿಯದ ಅವಶೇಷಗಳ ತೆರವು ಕಾರ್ಯ
ನವದೆಹಲಿ (ಐಎಎನ್‌ಎಸ್): ಉತ್ತರಾಖಂಡದಲ್ಲಿ ಪ್ರಳಯರೂಪಿ ಮಹಾ ಮಳೆ ಅನಾಹುತ ಸೃಷ್ಟಿಸಿ ಒಂದು ತಿಂಗಳು ಆಗುತ್ತಾ ಬಂದರೂ ಕೇದರನಾಥ ದೇವಾಲಯದ ಸುತ್ತ ಸಂಗ್ರಹವಾಗಿರುವ ಅವಶೇಷಗಳ ತೆರವು ಕಾರ್ಯ ಮುಗಿದಿಲ್ಲ.

`ಕೇದಾರನಾಥ ದೇವಾಲಯದ ಸುತ್ತ ಇರುವ ಅವಶೇಷ ತೆಗೆಯುವ ಕೆಲಸದಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ' ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ  ಉಪಾಧ್ಯಕ್ಷ ಎಂ. ಶಶಿಧರ್ ರೆಡ್ಡಿ ಹೇಳಿದ್ದಾರೆ.

ಹೆದ್ದಾರಿ ಬಂದ್: ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬದರೀನಾಥದಲ್ಲಿ 6ಗಂಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತು. ಪ್ರತಿಕೂಲ ಹವಾಮಾನದಿಂದಾಗಿ ಮುಖ್ಯಮಂತ್ರಿ ಬಹುಗುಣ ಪ್ರವಾಹ ಸಂತ್ರಸ್ತ ಸ್ಥಳಗಳಿಗೆ ನೀಡುವ ಭೇಟಿ ರದ್ದುಗೊಳಿಸಿದ್ದಾರೆ.

ಪ್ರತಿಕೂಲ ಹವಾಮಾನದ ಮಧ್ಯೆಯೂ ಸಂತ್ರಸ್ತ ಸ್ಥಳಗಳಿಗೆ ಪರಿಹಾರ ಸಾಮಗ್ರಿಗಳನ್ನು ಸಾಗಿಸುವುದನ್ನು ಮುಂದುವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT