ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಛಂದ: ಕೆಡಹುವ ಮುನ್ನ...

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗಾಂಧೀಜಿಯವರನ್ನು ಕಾಣಲು ಬಂದವರು ತಮ್ಮ ಹೆಸರು, ಊರು, ಭೇಟಿಯ ಉದ್ದೇಶವನ್ನು ಒಂದು ಕಾಗದದಲ್ಲಿ ಬರೆದು ಕೊಡಬೇಕಾಗಿತ್ತು. ಇಂತಹ ಕಾಗದವನ್ನು ಗಾಂಧೀಜಿಯವರ ಸಹಾಯಕರೇ ಒದಗಿಸುತ್ತಿದ್ದರು. ಆ ಕಾಗದ ಆಗಲೇ ಬೇರೆ ಉದ್ದೇಶಕ್ಕಾಗಿ ಬರೆದು ಉಪಯೋಗಿಸಿ ಉಳಿದ ಖಾಲಿ ಜಾಗವನ್ನು ಕತ್ತರಿಸಿ ಇಟ್ಟುಕೊಂಡಿದ್ದಾಗಿರುತಿತ್ತು. `ಇದಕ್ಕೆ ಒಳ್ಳೆಯ ಹಾಳೆಗಳನ್ನು ಇಟ್ಟುಕೊಳ್ಳಬೇಡವೇ~ ಎಂದು ಕೇಳಿದರೆ ಗಾಂಧೀಜಿಯವರು `ಭಾರತ ಬಡದೇಶ ಗೊತ್ತಿಲ್ಲವೇನಪ್ಪಾ? ಯಾಕೆ ಇದ್ರಲ್ಲಿ ಕೆಲಸ ನಡೆಯುವುದಿಲ್ಲವಾ?~ ಎಂದು ಪ್ರಶ್ನಿಸುತ್ತಿದ್ದರು. ಇತ್ತೀಚೆಗೆ ಸಂಘಟನೆಯೊಂದರ ಜೊತೆಗೆ ಹಳ್ಳಿಗಳ ಅಧ್ಯಯನ ಮಾಡುವ ಕಾರಣದಿಂದ ಸೊರಬ ತಾಲ್ಲೂಕಿನ ಒಂದು ಹಳ್ಳಿಗೆ ಹೋದಾಗ ಈ ಪ್ರಸಂಗ ನೆನಪಾಯಿತು.

ಆ ಹಳ್ಳಿಯಲ್ಲಿ ಇದ್ದುದು ಮೂರು ಮನೆಗಳು. ಆ ಮನೆಗಳು ಒಂದರ ಪಕ್ಕ ಒಂದು ಇರದೆ ಸುಮಾರು ಅರ್ಧ ಫರ್ಲಾಂಗ್ ದೂರದ ಅಂತರದಲ್ಲಿದ್ದವು. ಒಮ್ಮೆ ಆ ಹಳ್ಳಿಗೆ ಬಂದ ಜಿಲ್ಲಾ ಪಂಚಾಯ್ತಿ ಸದಸ್ಯರು ನಿಮ್ಮ ಹಳ್ಳಿಗೆ ಎಂಟು ಲಕ್ಷ ರೂಪಾಯಿಗಳ ಕಿರು ನೀರಾವರಿ ಯೋಜನೆ ಮಂಜೂರಾಗಿದೆ ಎಂದರು. ಆದರೆ, ಮೂರು ಮನೆಗಳೂ ಸಾಕಷ್ಟು ಸ್ಥಿತಿವಂತವಾಗಿದ್ದು ಎಲ್ಲರ ಮನೆಗಳಲ್ಲೂ ಬೋರ್‌ವೆಲ್‌ಗಳಿದ್ದವು. `ನಮಗೆ ನೀರಿನ ಅಗತ್ಯವೇನೂ ಇಲ್ಲ. ಇದೇ ಹಣದಲ್ಲಿ ಮುಖ್ಯ ರಸ್ತೆಯಿಂದ ನಮ್ಮ ಹಳ್ಳಿಗೆ ಬರುವ ರಸ್ತೆಯನ್ನು ದುರಸ್ತಿಗೊಳಿಸಿಕೊಡಿ~ ಎಂದವರು ಜಿಲ್ಲಾ ಪಂಚಾಯತ್ ಸದಸ್ಯರನ್ನು ಕೇಳಿಕೊಂಡರು. ಅದಕ್ಕವರು `ಸರ್ಕಾರದಿಂದ ಮಂಜೂರಾಗಿ ಬಂದಿರುವ ಯೋಜನೆಯನ್ನು ಬದಲಾಯಿಸಲು ಸಾಧ್ಯವೇ ಇಲ್ಲ~ ಎಂದು ಕಡ್ಡಿಮುರಿದಂತೆ ಹೇಳಿದರು. ಅಷ್ಟೇ ಅಲ್ಲ, ತಮ್ಮ ಆಪ್ತ ಗುತ್ತಿಗೆದಾರರೊಬ್ಬರಿಗೆ ಗುತ್ತಿಗೆ ನೀಡಿ ಹದಿನೈದು ದಿನದೊಳಗಾಗಿ ಆ ಯೋಜನೆಯನ್ನು ಜಾರಿಗೊಳಿಸಿದರು.
 
ಕೆಮ್ಮಣ್ಣಿನ ಕೊರಕಲು ತುಂಬಿದ ರಸ್ತೆಯಲ್ಲಿ ನಿಂತು ಆ ಹಳ್ಳಿಯ ರೈತರೊಬ್ಬರು ಪುರಾತನ ಸ್ಮಾರಕದಂತೆ ನಿಂತ ಆ ನೀರಿನ ಟ್ಯಾಂಕನ್ನು ತೋರಿಸುತ್ತ ಅದರ ಹಿನ್ನೆಲೆಯನ್ನು ವಿಷಾದದಿಂದ ವಿವರಿಸಿದರು. ಅದಕ್ಕೆ ಮಂಜೂರಾದ ಎಂಟು ಲಕ್ಷ ರೂಪಾಯಿಗಳು ಖರ್ಚಾಗಿದೆಯೇ? ಆ ಕಿರು ನೀರಾವರಿ ಯೋಜನೆಯ ಗುಣಮಟ್ಟ ಹೇಗಿದೆ? ಇದನ್ನು ಯಾರೂ ಪ್ರಶ್ನಿಸುವುದಿಲ್ಲ. ಏಕೆಂದರೆ ಆ ಯೋಜನೆಯ ಅಗತ್ಯವೇ ಯಾರಿಗೂ ಇಲ್ಲ.

ಇಲ್ಲಿಗೆ  ಈ ಯೋಜನೆ  ಮಂಜೂರು ಮಾಡಿದವರೂ ನಿರ್ಮಿಸಿದ ಗುತ್ತಿಗೆದಾರರೂ, ಕಾಮಗಾರಿಯನ್ನು `ಪರಿಶೀಲಿಸಿ~ ತನ್ನ ಒಪ್ಪಿಗೆ ನೀಡಿದ ಎಂಜಿನಿಯರೂ- ಎಲ್ಲರೂ ಯೋಜನೆಯ ಮುಕ್ಕಾಲು ಪಾಲು ಹಣ ನುಂಗಿಯೂ ಸುರಕ್ಷಿತ. ಪ್ರಶ್ನಿಸುವವರೇ ಇಲ್ಲದಿದ್ದಾಗ ಸಿಕ್ಕಿ ಬೀಳುವ ಪ್ರಶ್ನೆಯೇ ಇಲ್ಲ.

ಒಂದು ಊರಿನಲ್ಲಿ ಇದ್ದಕ್ಕಿದ್ದಂತೆ ರಸ್ತೆಯ ದುರಸ್ತಿ, ಡಾಂಬರೀಕರಣ ಮತ್ತು ಕಲ್ಲುಚಪ್ಪಡಿಗಳನ್ನು ಬಳಸಿದ ಚರಂಡಿ ನಿರ್ಮಾಣವನ್ನು ಆರಂಭಿಸಲಾಯಿತು. ಆ ಊರಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಅದನ್ನು ಪ್ರಶ್ನಿಸಿದರು. ಏಕೆಂದರೆ ಮುಂದಿನ 2-3 ತಿಂಗಳುಗಳಲ್ಲೇ ಆ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಗಲೀಕರಣ ಮಾಡುವ ಯೋಜನೆಗೆ ಮಂಜೂರಾತಿ ದೊರಕಿತ್ತು.

ಅಗಲೀಕರಣದ ಸಂದರ್ಭದಲ್ಲಿ ಆ ಚರಂಡಿಯನ್ನು ಮುಚ್ಚಬೇಕಾಗುತ್ತಿತ್ತು. ರಸ್ತೆಯನ್ನು ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿ ಈಗ ಹಾಕಲಾಗುತ್ತಿರುವ ಡಾಂಬರನ್ನು ಕೀಳಬೇಕಾಗುತ್ತಿತ್ತು. ಸುಮಾರು ಐದು ಲಕ್ಷ ರೂಪಾಯಿಗಳ ದುರಸ್ತಿ, ಡಾಂಬರೀಕರಣ, ಚರಂಡಿ ನಿರ್ಮಾಣದ ಈ ತರಾತುರಿಯ ಹಿಂದೆ ಸಾರ್ವಜನಿಕ ಕಾಳಜಿ ಕಿಂಚಿತ್ತೂ ಇರಲಿಲ್ಲ.
ಈ ಕಾಮಗಾರಿಯನ್ನು ಎಷ್ಟು ಕಳಪೆಯಾಗಿ  ಮಾಡಿದರೂ ಅದರ ಗುಣಮಟ್ಟದ ಬಗ್ಗೆ ಯಾರೂ ತಕರಾರು ಎತ್ತುವಂತಿರಲಿಲ್ಲ. ಏಕೆಂದರೆ ಕೆಲವು ತಿಂಗಳುಗಳಲ್ಲೇ ಆ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಗಲೀಕರಣ ಮಾಡುವ ಯೋಜನೆಯಡಿಯಲ್ಲಿ ಅದು ಮುಚ್ಚಿ ಹೋಗುತ್ತಿತ್ತು.

ಪ್ರಭಾವಿ ರಾಜಕಾರಣಿಗಳಿರುವ ಊರುಗಳಲ್ಲಿ ಇನ್ನೂ 40-50 ವರ್ಷ ಬಾಳಿಕೆ ಬರಬಹುದಾದ ಸಾರ್ವಜನಿಕ ಕಟ್ಟಡ ಇತ್ಯಾದಿಗಳನ್ನು ಧ್ವಂಸಗೊಳಿಸಿ ಕೋಟ್ಯಂತರ ರೂಪಾಯಿಗಳ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ನಿಜಕ್ಕೂ ಈ  ಯೋಜನೆಗಳಲ್ಲಿ ಅಗತ್ಯವಿದ್ದವೆಷ್ಟು? ಯೋಜನೆಗಳು ಅಗತ್ಯವಿವೆ ಎನಿಸಿದರೂ ಅಷ್ಟು ಪ್ರಮಾಣದ ಹಣ ಅಗತ್ಯವಿತ್ತೆ? ಈ ಯೋಜನೆಗಳಿಗೆ ಬರುವ ಹಣದಲ್ಲಿ ನಿಜಕ್ಕೂ ಯೋಜನೆಗೆ ತಗಲುವ ವೆಚ್ಚವೆಷ್ಟು?

ಈಗಲೂ ನಮ್ಮ ರಾಜ್ಯದ ಸಾವಿರಾರು ಹಳ್ಳಿಗಳಿಗೆ ಸಂಚರಿಸಲು ಯೋಗ್ಯವಾದ ರಸ್ತೆಗಳಿಲ್ಲ. ವಿಶ್ರಾಂತಿಗಾಗಿ ಬಸ್ ನಿಲ್ದಾಣಗಳಿಲ್ಲ. ಕನಿಷ್ಠ ಮಟ್ಟದ ಆಸ್ಪತ್ರೆಗಳಿಲ್ಲ. ಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ನರಳುತ್ತಿವೆ. ನೆರೆಸಂತ್ರಸ್ತರಿಗೆ ಮೂರು ವರ್ಷಗಳ ನಂತರವೂ ಒಂದು ಸಾಮಾನ್ಯ ಮನೆಯನ್ನು ಕಟ್ಟಿಸಿಕೊಡಲು ನಮ್ಮ ಸರ್ಕಾರಗಳಿಗೆ ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲ ಸರ್ಕಾರ ಹಣಕಾಸಿನ ಕೊರತೆಯನ್ನು ಮುಂದುಮಾಡುತ್ತದೆ.

ಜನರು ಬಯಸದಿದ್ದರೂ ನೂರಾರು ಕೋಟಿ ಯೋಜನೆಗಳು ಒಂದು ಊರಿಗೆ ಬಂದು ಬೀಳುವುದರ ಮರ್ಮ ರಹಸ್ಯವಾಗೇನೂ ಇಲ್ಲ. ಮುಖ್ಯಮಂತ್ರಿಗಳ ಜಿಲ್ಲೆ, ಮಂತ್ರಿಗಳ ಊರು ಇತ್ಯಾದಿ ಊರಪ್ರೇಮದ ಮುಖವಾಡ ಹೊತ್ತು ಬರುವ ಬಹುಪಾಲು ಇಂತಹ ಈ ಯೋಜನೆಗಳು ಸೃಷ್ಟಿಯಾಗುವುದೇ ರಾಜಕಾರಣಿಗಳು ಹಾಗು ಅವರ ಹಿಂಬಾಲಕರ ಜೇಬು ತುಂಬಿಸಲು. ಉದ್ಯಾನವನದಲ್ಲಿ ಮುಖ್ಯವಾಗಿ ಇರಬೇಕಾಗಿರುವುದು ಮರಗಳು. ನಡೆದಾಡಲು ಸಾಮಾನ್ಯ ದಾರಿ ಸಾಕು. ಈ ದಾರಿಗೆ ಬೆಲೆಬಾಳುವ ಹೊಳೆಹೊಳೆಯುವ ಟೈಲ್ಸ್‌ಗಳೇಕೆ ಬೇಕು?

ತಮ್ಮ ಊರಿಗೆ ಸಾವಿರಾರು ಕೋಟಿ ರೂಪಾಯಿ ಯೋಜನೆಗಳು ಬರುತ್ತಿರುವುದನ್ನು ಕಂಡು ಮುಗ್ಧವಾಗಿ ಸಂಭ್ರಮಿಸುವ ಜನರಿದ್ದಾರೆ. ಆದರೆ, ಈ ಯೋಜನೆಗಳು ನಿಜಕ್ಕೂ ಜನರ ಹಿತಕ್ಕಾಗಿ ಬಂದವುಗಳೇ? ಈ ಯೋಜನೆಗಳಿಗೆ ಬಿಡುಗಡೆಯಾಗುವ ಮೊತ್ತದಲ್ಲಿ ನಿಜವಾಗಿ ವ್ಯಯ ಮಾಡುವುದೆಷ್ಟು? ಎಂಬ ಪ್ರಶ್ನೆಗಳನ್ನು ಕೇಳುವ ವಿವೇಕ ಕಾಣೆಯಾಗಿದೆ. ಇದಕ್ಕೆ ಇನ್ನೊಂದು ಮುಖವೂ ಇದೆ. ಈ ಯೋಜನೆಗಳನ್ನು ಪ್ರಶ್ನಿಸುವ ಮಾಧ್ಯಮ ಅಥವಾ ಜನರನ್ನು `ಇವರು ಊರಿನ ಅಭಿವೃದ್ಧಿಯ ವಿರೋಧಿಗಳು~ ಎಂಬ ಹಣೆಪಟ್ಟಿ ಹಚ್ಚಿ ಅವರನ್ನು ಹಿಮ್ಮೆಟ್ಟಿಸುವ ಪ್ರಯತ್ನವನ್ನು ಯೋಜನೆ ತರುವ ಹಿತಾಸಕ್ತಿಗಳು ಮಾಡುತ್ತಾರೆ.

ಹಳ್ಳಿಯ ಕಾಮಗಾರಿಗಳಿಗಾಗಿ ಕೋಟ್ಯಂತರ ಹಣವೇನೋ ಹರಿದು ಬರುತ್ತವೆ. ಆದರೆ ನಿಜಕ್ಕೂ ಅದು ಬಳಕೆಯಾಗುವುದೆಷ್ಟು? ಕೆಲವು ಹಳ್ಳಿಗಳಲ್ಲಾದರೂ ಇದನ್ನು ಪ್ರಶ್ನಿಸುವ ಪ್ರಜ್ಞಾವಂತರೂ ಈಗಲೂ ಇದ್ದಾರೆ. ಹಾಗಾಗಿ ಕಳಪೆ ಕಾಮಗಾರಿಗಳ ವಿರುದ್ಧ ಹಳ್ಳಿಗಳಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಿರುತ್ತವೆ.  ಜಿಲ್ಲಾ ಮತ್ತು ದೊಡ್ಡ ನಗರಗಳ ಪರಿಸ್ಥಿತಿ ಮಾತ್ರ ತೀರಾ ಶೋಚನೀಯವಾಗಿದೆ. ಇಲ್ಲಿ ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರು ಸರ್ವಸ್ವತಂತ್ರರು! ಎಷ್ಟೋ ಯೋಜನೆಗಳು ಬರೀ ಕಡತಗಳಲ್ಲಿ ಮಾತ್ರ ಜೀವಂತವಾಗಿರುತ್ತವೆ.

ಕೆಲವು ತಿಂಗಳ ಹಿಂದೆ ಶಿವಮೊಗ್ಗ ನಗರಸಭೆಯಲ್ಲಿ ತಮಾಷೆಯೊಂದು ನಡೆಯಿತು. ನಗರಸಭಾಧ್ಯಕ್ಷರು ತಮ್ಮ ಅಧಿಕಾರದ ಅವಧಿ ಮುಗಿದ ನಂತರ ಒಪ್ಪಂದದಂತೆ ತಮ್ಮ ಅಧಿಕಾರವನ್ನು ತಮ್ಮ ಪಕ್ಷದ ಇನ್ನೊಬ್ಬರಿಗೆ ಬಿಟ್ಟುಕೊಡಬೇಕಿತ್ತು. ಆದರೆ ಅವರು ಅಧಿಕಾರ ಬಿಟ್ಟು ಕೊಡಲು ನಿರಾಕರಿಸಿದರು. ಅದಕ್ಕೆ ಕಾರಣವನ್ನು ಅವರು ಪ್ರಾಮಾಣಿಕವಾಗಿ ನೀಡಿದರು. `ನಗರಸಭೆಗೆ ರಾಜ್ಯ ಸರ್ಕಾರದಿಂದ 25 ಕೋಟಿ ಅನುದಾನ ಬಂದಿದ್ದು ಇದರ ಕಾಮಗಾರಿ ಮುಗಿದು ಹಣ ಖರ್ಚಾಗುವವರೆಗೆ ನಾನು ಅಧಿಕಾರ ಬಿಟ್ಟುಕೊಡುವುದಿಲ್ಲ~.

ನಾವು ತಿಳಿಯಲಾದಂತೆ ಜನಪ್ರತಿನಿಧಿಗಳು ಯೋಜನೆಗಳನ್ನು ಕೇವಲ ರೂಪಿಸುತ್ತಿಲ್ಲ. ಅಧಿಕಾರಿಗಳ ಜವಾಬ್ದಾರಿಯಾದ (ಕಾರ್ಯಾಂಗದ) ಯೋಜನೆಗಳನ್ನು ಕಾರ್ಯಗತಗೊಳಿಸುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ. ಕಾರ್ಯಾಂಗದ ಕೆಲಸವನ್ನೂ ಬೇನಾಮಿ ಗುತ್ತಿಗೆದಾರರ ಹೆಸರಿನಲ್ಲಿ ಮಾಡಿಬಿಡುವ ಜನಪ್ರತಿನಿಧಿಗಳ ಅತ್ಯುತ್ಸಾಹಕ್ಕೆ ಕಾರಣ ಎಲ್ಲರಿಗೂ ತಿಳಿದಿರುವುದೇ ಆಗಿದೆ.

ನಮ್ಮ ಕಾನೂನು ಇದನ್ನು ಕಾನೂನುಬಾಹಿರ ಎನ್ನುತ್ತದೆ. ಕಾನೂನು ಉಲ್ಲಂಘನೆಯನ್ನು ಈಗ ಜನಪ್ರತಿನಿಧಿಗಳು `ಕಾನೂನು ಪ್ರಕಾರವೇ~ ಮಾಡುತ್ತಿದ್ದಾರೆ. ಈ ಕಾರಣದಿಂದಲೇ ಜಿಲ್ಲಾ ಪಂಚಾಯತ್, ನಗರಸಭೆಗಳಂತಹ ಸ್ಥಳೀಯ ಆಡಳಿತ ವ್ಯವಸ್ಥೆಗಳಲ್ಲಿ 11-12-18 ತಿಂಗಳುಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಅಧಿಕಾರವನ್ನು ಜನಪ್ರತಿನಿಧಿಗಳು ಹಂಚಿಕೊಳ್ಳುವ ಸಮಯ ಸಾರ್ವಜನಿಕ ಹಣವನ್ನು ಕೊಳ್ಳೆ ಹೊಡೆಯಲು ಅವರು ಪರಸ್ಪರ ಮಾಡಿಕೊಂಡಿರುವ ಒಪ್ಪಂದವೇನೋ ಎಂದು ಜನ ಅನುಮಾನಿಸುವಂತಾಗಿದೆ.

ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿನ ವ್ಯವಹಾರಗಳ ಮೇಲೆ ಕಣ್ಗಾವಲಿಡಲು ಕೇಂದ್ರ ಸರ್ಕಾರವೇ ನೇಮಿಸಿದ ಒಂಬುಡ್ಸ್‌ಮನ್‌ಗಳು ಪ್ರತಿಯೊಂದು ಜಿಲ್ಲಾ ಪಂಚಾಯತ್ ಕಚೇರಿಗಳಲ್ಲೂ ಇರುತ್ತಾರೆ. ಆದರೆ ಈ ಒಂಬುಡ್ಸ್‌ಮನ್‌ಗಳು ಕೇವಲ ನಾಮಕಾವಸ್ಥೆಗೆ ಅಷ್ಟೆ. ಇವರು ಪಂಚಾಯತ್‌ಗಳಲ್ಲಿನ ಅವ್ಯವಹಾರಗಳನ್ನು ಬಯಲಿಗೆಳೆದ ಕನಿಷ್ಠ ಉದಾಹರಣೆಗಳು ಸಿಗುವುದಿಲ್ಲ.  

ನೇರವಾಗಿ ಶಾಸಕರಿಗೆ, ಸಂಸದರಿಗೆ ಇಂತಿಷ್ಟು ಲಕ್ಷವೆಂದು ಸರ್ಕಾರ ನಿಧಿ ಕೊಡಲು ಆರಂಭಿಸಿದಾಗ ಅದನ್ನು ಕೆ.ವಿ.ಸುಬ್ಬಣ್ಣ ಬಲವಾಗಿ ವಿರೋಧಿಸಿದ್ದರು. ಈಗ ಈ ನಿಧಿ ಶಾಸಕರಿಗೆ ಒಂದು ಕೋಟಿಯಿದ್ದರೆ ಸಂಸತ್ ಸದಸ್ಯರಿಗೆ ಐದು ಕೋಟಿ ರೂಪಾಯಿಗಳಾಗಿವೆ.
 
ಶಾಸನವನ್ನು ರೂಪಿಸಿ ಜಾರಿಗೆ ತರುವುದಷ್ಟೇ ಜನಪ್ರತಿನಿಧಿಗಳ ಕೆಲಸ. ಕಾರ್ಯಾಂಗದ ಕೆಲಸವನ್ನೂ ಶಾಸಕರು, ಸಂಸದರಿಗೆ ನೀಡಿದರೆ ಆಗುವ ಅಪಾಯದ ಬಗ್ಗೆ ಸುಬ್ಬಣ್ಣ ಎಚ್ಚರಿಸಿದ್ದರು. ಒಬ್ಬ ಸಂಸದ ಅಥವಾ ಶಾಸಕ ತನ್ನ ನಿಧಿಯಲ್ಲಿ ನಿರ್ಮಿಸಿದ ಕಾಮಗಾರಿಯನ್ನು ಯಾವ ಅಧಿಕಾರಿ ತಾನೆ ಪ್ರಶ್ನಿಸಲು ಸಾಧ್ಯ ಎಂದವರು ಕೇಳಿದ್ದರು.

ಸುಬ್ಬಣ್ಣನವರ ಅನುಮಾನ ನಿಜವಾಗಿದೆ. ಉದಾಹರಣೆಗಾಗಿ ಸಂಸದರ ನಿಧಿಯಲ್ಲಿ ಕಟ್ಟಿಸುವ ಒಂದು ಮಿನಿ ಬಸ್ ನಿಲ್ದಾಣಕ್ಕೆ ಒಂದೂವರೆ ಲಕ್ಷ ಖರ್ಚಾದರೆ ಯೋಜನೆಯ ವೆಚ್ಚ ಆರೂವರೆ ಲಕ್ಷವಾಗಿರುತ್ತದೆ. ಶಾಸಕರು ಮತ್ತು ಸಂಸದರು ತಮ್ಮ ನಿಧಿಗೆ ಬಂದ ಹಣದಿಂದ ನಿರ್ಮಿಸಿದ ಕಾಮಗಾರಿಗಳನ್ನು ಪರಿಶೀಲಿಸುವ, ಖರ್ಚಾದ ಹಣಕ್ಕಿಂತಲೂ ಹೆಚ್ಚು ವ್ಯಯಿಸಿದ್ದರೆ ಪ್ರಶ್ನಿಸುವ, ಕಳಪೆಯಾಗಿದ್ದರೆ ಅದನ್ನು ವರದಿ ಮಾಡುವ ಅಧಿಕಾರಿಗಳು ಎಷ್ಟು ಜನರಿದ್ದಾರೆ? 

ಸಂಸತ್ ಸದಸ್ಯರು, ಶಾಸಕರು, ಜಿಲ್ಲಾ ಪಂಚಾಯತ್ ಸದಸ್ಯರು ಹೀಗೆ ಯಾವ ಹಂತದ ಜನಪ್ರತಿನಿಧಿಗಾದರೂ ನೇರವಾಗಿ ಅನುದಾನ ನೀಡುವ ಪದ್ಧತಿಯನ್ನು ಪುನರ್ ವಿಮರ್ಶೆ ಮಾಡಬೇಕು. ಯಾವುದೇ ಬಗೆಯ ಅನುದಾನವಾದರೂ ಇರಲಿ, ಅವೆಲ್ಲವೂ ಜನರ ತೆರಿಗೆ ಹಣವೇ.  ಈ  ಹಣದ  ಬಳಕೆಗೆ ಉತ್ತರದಾಯಿತ್ವವಿರಬೇಕು.
 
ವಿವಿಧ ಅನುದಾನಗಳಿಂದ ಊರಿಗೆ ಮಂಜೂರಾಗುವ ಸಾರ್ವಜನಿಕ ಕಾಮಗಾರಿಗಳನ್ನು ಅದೇ ಊರಿನ ಗುತ್ತಿಗೆದಾರರಿಗೆ ವಹಿಸುವತ್ತ ಚಿಂತಿಸಬೇಕು. ತಮ್ಮ ಊರಿನ ಕಾಮಗಾರಿ ಚೆನ್ನಾಗಿರಬೇಕು ಅನ್ನುವ ಕಾಳಜಿ, ಅದೂ ಇಲ್ಲದಿದ್ದರೆ ಕಾಮಗಾರಿ ಕಳಪೆಯಾದರೆ ಊರ ಜನ ತನ್ನನ್ನು ಪ್ರಶ್ನಿಸುತ್ತಾರೆ ಎಂಬ ಭಯವಾದರೂ ಆತನನ್ನು ಕಾಡಬಹುದು.

ಒಂದು ಊರಿಗೆ ಮಂಜೂರಾಗುವ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ ಹಣ ಬಿಡುಗಡೆಗೆ ಒಪ್ಪಿಗೆ ಕೊಡುವ ಊರಿನ ವಿವಿಧ ಸಮುದಾಯಗಳನ್ನೊಳಗೊಂಡ ಸಮಿತಿ ರಚಿಸಬಹುದು. ಹಳ್ಳಿಯ ಸರ್ಕಾರಿ ಶಾಲೆಯ ಅಭಿವೃದ್ಧಿಯ ಉಸ್ತುವಾರಿ ನೋಡಿಕೊಳ್ಳುವ ಶಾಲಾಭಿವೃದ್ಧಿ ಸಮಿತಿಯಿದ್ದಂತೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ನಾಗರಿಕರ ಸಮಿತಿಗಳಂತೆ ಈ ಸಮಿತಿಗಳ ರಚನೆ ಮಾಡಬಹುದು. ಬಹುಮುಖ್ಯವಾಗಿ ಪ್ರತಿಯೊಂದನ್ನು ಕೆಡವುವ ಮುನ್ನ `ಯಾಕೆ ಇದ್ರಲ್ಲಿ ಕೆಲಸ ನಡೆಯುವುದಿಲ್ಲವಾ?~ ಎಂಬ ಗಾಂಧಿಯ ಪ್ರಶ್ನೆ ನಮ್ಮನ್ನು ಕಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT