ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಛಂದ: ಹೋಟ್ಯಾಗಿನ ಮಾತು

Last Updated 12 ಮೇ 2012, 19:30 IST
ಅಕ್ಷರ ಗಾತ್ರ

ವೃತ್ತಿಯಿಂದ ನಾನೊಬ್ಬ ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞ. ಒಂದು ಅರ್ಥದಲ್ಲಿ ಬದುಕಿನ ಮೂಲವನ್ನೇ ನೋಡಿ ಆನಂದಿಸುವ ಭಾಗ್ಯ ನನ್ನದು. ಹಳ್ಳಿಯವರು, ಶಹರದವರು, ಇಪ್ಪತ್ತು-ಇಪ್ಪತ್ತೆರಡರ ಯುವತಿಯರು, ಅರವತ್ತು-ಎಪ್ಪತ್ತರ ಅಜ್ಜಿಯರು, ಸಾಫ್ಟ್‌ವೇರ್ ಕ್ಷೇತ್ರದ ದಂಪತಿಗಳು, `ಬಿಲ್ ಸ್ವಲ್ಪ ಕಡಿಮೆ ಮಾಡ್ರಿ ಡಾಕ್ಟ್ರೇ~ ಎಂದು ಚಿಂತಿಸುತ್ತಿರುವ ಅಪ್ಪ- ಹೀಗೆ ಸಮಾಜದ ಭಿನ್ನ ಸ್ಥರಗಳ ಜನರೊಂದಿಗೆ ಒಡನಾಡುವ ಭಾಗ್ಯ ನನ್ನದು. ಒಬ್ಬರಿಗೆ ಬಸಿರಿನ ವಾಂತಿ, ಇನ್ನೊಬ್ಬರಿಗೆ ಅತಿಮುಟ್ಟು, ಒಬ್ಬರಿಗೆ ಬಂಜೆತನ, ಇನ್ನೊಬ್ಬರಿಗೆ ಗರ್ಭಪಾತ- ಎಲ್ಲರಿಗೂ ಅವರವರದೇ ಸಮಸ್ಯೆಗಳು.
 
ದಿನನಿತ್ಯವೂ ನನ್ನೆದುರು ತೆರೆದುಕೊಳ್ಳುವ ಈ ಬದುಕಿನ ನಾಟಕದಲ್ಲಿ ನಾನೂ ಒಬ್ಬ ಪಾತ್ರಧಾರಿಯೇ. ನನ್ನ ಪಾತ್ರ ನಿರ್ವಹಣೆ ಸರಿಯಾಗಿರಬೇಕು ಎಂಬ ಎಚ್ಚರದ ನಡುವೆಯೇ ನನಗೆ ಸದಾ ಇನ್ನೊಬ್ಬರ ಮಾತುಗಳ ಬಗ್ಗೆಯೂ ಎಚ್ಚರವಿರುತ್ತದೆ. ಬೇರೆ ಬೇರೆ ಜನರು ಆಡುವ ಭಾಷೆ, ಅವರು ಬಳಸುವ ನುಡಿಗಟ್ಟುಗಳು, ಗಾದೆಗಳು, ಮಾತಿನ ಲಯ ಇವೆಲ್ಲ ಒಂದು ಲೆಕ್ಕಕ್ಕೆ ತೀರ ಸಾದಾ ಅನಿಸಿದರೂ ದಿನಾಲೂ ಈ ಭಾಷಾಲೋಕದಲ್ಲಿ ಹೊಸತು ವಿಶೇಷವಾದದ್ದು ಏನಾದರೂ ಇದ್ದೇ ಇರುತ್ತದೆ.

ಒಂದು ದಿನ ಒಬ್ಬ ಹಳ್ಳಿಯ ಮಹಿಳೆ ತನ್ನ ತಾಯಿಯ ಜತೆ ಬಂದಳು. ಆಕೆ ಗರ್ಭಿಣಿ ಎಂಬುದನ್ನು ಅವಳ ಹೊಟ್ಟೆ ಹೇಳುತ್ತಿತ್ತು. ನಾನು ಅವಳ ಹೆಸರು, ವಯಸ್ಸು, ಊರು ಕೇಳಿಯಾದ ಬಳಿಕ `ಯಾಕೆ ಬಂದಿದ್ದು~ ಎಂದೆ. `ಹೊಟ್ಟೀಲೆ ಅದೀನ್ರಿ~ ಅಂದಳಾಕೆ. ಈಗ ಎಷ್ಟು ತಿಂಗಳು? ನನ್ನ ಪ್ರಶ್ನೆ. `ಗೊತ್ತಿಲ್ರಿ~ ಅವಳ ಉತ್ತರ. `ಅಲ್ಲಮ್ಮಾ ಹೊಟ್ಟೀಲೆ ಅದೀನಿ ಅಂತಿ, ಮತ್ತ ಎಷ್ಟು ತಿಂಗಳು ಅನ್ನೋದ ಗೊತ್ತಿಲ್ಲ ಅಂತಿಯಲ್ಲ?~ ನನ್ನ ಮರುಪ್ರಶ್ನೆ.

ಸಾಮಾನ್ಯವಾಗಿ ಅನೇಕ ಬಸಿರಿಯರು ತಮ್ಮ ಕೊನೆಯ ಮುಟ್ಟಿನ ದಿನಾಂಕವನ್ನು ನಿಖರವಾಗಿ ಹೇಳುವುದಿಲ್ಲ. ಆದರೆ ಎಷ್ಟು ತಿಂಗಳು ಬಸಿರು ಎಂಬುದನ್ನಾದರೂ ಹೇಳುತ್ತಾರೆ.
 
ಕೊನೆಯ ಮುಟ್ಟಿನ ದಿನಾಂಕ ಗೊತ್ತಿರುವುದು ಬಹಳ ಮುಖ್ಯ. ಇದರ ಆಧಾರದ ಮೇಲೆಯೇ ನಾವು ನಿರೀಕ್ಷಿತ ಹೆರಿಗೆ ದಿನಾಂಕ, ಏನು ಔಷಧಿ ಕೊಡಬೇಕು ಎಲ್ಲ ನಿರ್ಧರಿಸಲು ಶಕ್ಯವಾಗುತ್ತದೆ. ಆದರೆ ಈ ಮಹಿಳೆ ಕೊನೆಯ ಮುಟ್ಟಿನ ದಿನಾಂಕ ಹೇಳುವುದು ಒತ್ತಟ್ಟಿಗಿರಲಿ ಎಷ್ಟು ತಿಂಗಳು ಬಸಿರು ಎಂಬುದನ್ನು ಹೇಳುತ್ತಿಲ್ಲ!
 
ನಾನು ಸ್ವಲ್ಪ ಅಸಹನೆಯಿಂದಲೇ, `ಅಲ್ಲಮ್ಮಾ, ಹೊಟ್ಟೀಲೆ ಅದೀನಿ ಅಂತಿ, ಎಷ್ಟು ತಿಂಗಳು ಗೊತ್ತಿಲ್ಲ ಅಂತೀಯಲ್ಲ ಏನಿದು~ ಎಂದೆ. ಕೂಡಲೇ ಅವಳ ಜೊತೆ ಬಂದಿದ್ದ ಅಜ್ಜಿ ಉತ್ತರಿಸಿದಳು, `ಹಂಗ ಸಿಟ್ಟ ಮಾಡಕೋ ಬ್ಯಾಡೊ ನನ್ನ ತಂದೆ. ಅಕೀಗೆ ಖರೇವಂದ್ರೂ ಎಷ್ಟ ತಿಂಗಳು ಅಂತ ಗೊತ್ತಿಲ್ಲ. ಅದೇನಂದರ ಅಕೀದು `ಮಾಡಬಸಿರು~ ಆಗೇತಿ, ಅದಕ್ಕ~.

`ಮಾಡಬಸಿರು~- ಶಬ್ದ ಕೇಳಿಸುತ್ತಿದ್ದಂತೆಯೇ ಎರಡು ಕಿವಿಗಳ ನಡುವಿನ ನನ್ನ ಮೆದುಳು ಎಚ್ಚತ್ತು ಬೆನ್ನು ಸೆಟೆಸಿ ಕುಳಿತಿತು. ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ಯಾವತ್ತೂ ಈ ಶಬ್ದ ಕೇಳಿರಲಿಲ್ಲ. ತಕ್ಷಣ ಈ ಶಬ್ದದ ಸಂಪೂರ್ಣ ಅರ್ಥ ನನಗೆ ಆಗಲಿಲ್ಲ. `ಏನಂದಿ ಅಜ್ಜಿ, ಇನ್ನೊಮ್ಮೆ ಹೇಳು~ ಅಂದೆ.
 
`ನನ್ ತಂದಿ ಕೇಳಿಲ್ಲಿ, ಈಕೀದು ಚೊಚ್ಚಿಲ ಬಾಣಂತನ ಇದ ದವಾಖಾನೀಯೊಳಗ ಆಗಿತ್ತು. ಆಗ ಬಿಪಿ ಭಾಳ ಹೆಚ್ಚಾಗಿ ಮೈಮಾರಿ ಎಲ್ಲಾ ಬಾತು ಭಾಳ ತೊಂದರಿ ಆಗಿತ್ತು. ನೀನ ದೇವರಂಗ ಕಾಪಾಡಿ ಸರಳ ಬಾಣಂತನ ಮಾಡಿಸಿ, ಕೂಸು ಬಾಣಂತಿ ಇಬ್ಬರ‌್ನೂ ಚಂದಂಗ ಮನೀಗ್ ಕಳಿಸಿದ್ದಿ.
 
ಮುಂದ ಅಕೀ ಗಂಡನ ಮನೀಯವರು ಅವಸರ ಮಾಡಿ ಮೂರರಾಗ ಕರಕೊಂಡ ಹೋದ್ರು. ಈಗ ನೋಡು ಮತ್ತ ನಿನ್ ಕಡೆ ಬರೂವಂಗ ಆತು.~

ಕೆಲವೊಂದು ಅಜ್ಜಿಯರು ಹೀಗಿರುತ್ತಾರೆ- ನೀವು ಅವರಿಗೆ ಮಾತಿನ ಒಂದು ಸಣ್ಣ ಎಳೆ ಕೊಟ್ಟರೆ ಅವರು ತಕ್ಷಣ ಚಂದವಾದ ಮತ್ತು ದೊಡ್ಡದಾದ ಕವುದಿಯನ್ನೇ ನೇಯಲು ಶುರುಮಾಡಿ ಬಿಡುತ್ತಾರೆ. ಅನಿವಾರ್ಯವಾಗಿ ಅಜ್ಜಿಯ ಕವುದಿ ನೇಯ್ಗೆಯನ್ನು ನಿಲ್ಲಿಸಿದೆ. ಮನಸ್ಸಿನ ಹಿಂದಿನ ಮೂಲೆಯಲ್ಲಿ ಇನ್ನೂ ಬಾಕಿ ಉಳಿದಿರುವ ಕೆಲಸದ ಒತ್ತಡದ ಕಿರಿಕಿರಿ.

ಆದರೆ ಮನಸ್ಸಿನ ಮುಂಭಾಗದ ರಂಗದ ಮೆಲೆ ಬೆಳಕು ನಿಧಾನವಾಗಿ ಹೆಚ್ಚುತ್ತ ಹೋಗಿ ಒಮ್ಮೆಲೆ ನನ್ನಷ್ಟಕ್ಕೆ ನನಗೇ `ಮಾಡಬಸಿರು~ ಶಬ್ದದ ಅರ್ಥ ನಿಚ್ಚಳವಾಗಿಬಿಟ್ಟಿತು. ಆ ಒಂದು ಗಳಿಗೆ ಎಂತಹ ಸಂತೋಷ, ಏನು ರೋಮಾಂಚನ! ಆಹಾ ನನ್ನ ಕನ್ನಡವೇ!

ಏನಿದು ಮಾಡಬಸಿರು?
ನಿಸರ್ಗದ ವಿನ್ಯಾಸ ಹೇಗಿದೆಯೆಂದರೆ-
ಮುಟ್ಟಾಗುವದು ಅಂದರೆ, ಗರ್ಭಧಾರಣೆಯಾಗದೆ ಹೋದರೆ ಭ್ರೂಣವನ್ನು ಸ್ವೀಕರಿಸಲು ತಯಾರಾದ ಗರ್ಭಾಶಯದ ಒಳಪದರು ಕರಗಿ ರಕ್ತಸ್ರಾವದ ರೂಪದಲ್ಲಿ ಹೊರಗೆ ಬರುವದು. ಅಂಡಾಶಯದಿಂದ ಅಂಡಾಣು ಬಿಡುಗಡೆ- ಗರ್ಭಧಾರಣೆಯಾಗದೆ ಹೋದರೆ ಮುಂದೆ ಹದಿನೈದು ದಿನಗಳ ನಂತರ ಮುಟ್ಟು- ಇದು ಮಹಿಳೆಯ ಶರೀರದಲ್ಲಿ ಪ್ರತಿತಿಂಗಳೂ ನಡೆಯುವ ಮುಟ್ಟಿನ ಚಕ್ರ.

ಪ್ರತಿ ತಿಂಗಳ ಈ ಮುಟ್ಟಿನ ಚಕ್ರಕ್ಕೆ ನಿಸರ್ಗ ಇನ್ನೊಂದು ಚಂದವಾದ ಬಾಲಂಗೋಚಿ ಜೋಡಿಸಿದೆ. ಅದೇನೆಂದರೆ ಮಹಿಳೆ ಗರ್ಭಿಣಿಯಾಗುತ್ತಾಳೆ. ಬಳಿಕ ಒಂಬತ್ತು ತಿಂಗಳು ಶರೀರದಲ್ಲಿ ಪ್ರೊಜೆಸ್ಟೆರಾನ್ ಹಾರ್ಮೋನ್ -ರಸದೂತ-(ಇಂಗ್ಲಿಷಿನ್ಲ್ಲಲಿ ಹಾರ್ಮೋನ್ ಕನ್ನಡದಲ್ಲಿ ರಸದೂತ- ಆಯ್ಕೆ ನಿಮ್ಮದು) ಪ್ರಮಾಣ ಹೆಚ್ಚಾಗಿರುವದರಿಂದ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವದಿಲ್ಲ- ಮಹಿಳೆ ಮುಟ್ಟಾಗುವದಿಲ್ಲ - ನಂತರ ಹೆರಿಗೆಯಾಗುತ್ತದೆ.
 
ಹೆರಿಗೆಯ ನಂತರ ಅಂಡಾಶಯದಿಂದ ಅಂಡಾಣು ಬಿಡುಗಡೆ - ಗರ್ಭಾಶಯದಿಂದ ಮುಟ್ಟು - ಈ ಚಕ್ರ ಕೂಡಲೇ ಪುನರಾರಂಭಗೊಳ್ಳುವುದಿಲ್ಲ. ಇಲ್ಲಿ ನಿಸರ್ಗ ಒಂದೇ ಕಲ್ಲಿನಿಂದ ಎರಡು ಕಲ್ಲು ಉದುರಿಸಿದಂತೆ ಒಂದೇ ರಸದೂತದಿಂದ ಕೂಸು ತಾಯಿ ಇಬ್ಬರಿಗೂ ಲಾಭ ನೀಡುತ್ತದೆ. ಗರ್ಭಿಣಿಯಿರುವಾಗ ಗರ್ಭದ ಪೋಷಣೆಯ ಮುಖ್ಯ ಜವಾಬ್ದಾರಿಯನ್ನು ಪ್ರೊಜೆಸ್ಟೆರಾನ್ ರಸದೂತ ವಹಿಸುತ್ತದೆ ಎಂದು ಹೇಳಿದೆನಷ್ಟೇ.
 
ಈ ರಸದೂತ ಉತ್ಪಾದನೆಯಾಗುವುದು ತಾಯಿಯ ಶರೀರದೊಳಗೂ ಅಲ್ಲ, ಕೂಸಿನ ಶರೀರದೊಳಗೂ ಅಲ್ಲ! ಅದು ಉತ್ಪಾದನೆಯಾಗುವದು ತಾಯಿ ಮತ್ತು ಕೂಸಿನ ನಡುವೆ ಇರುವ ಮಾಸು- ಅಥವಾ `ಕಸ~ ಎಂದು ಕರೆಯಲ್ಪಡುವ ಒಂದು ಅಲ್ಪಾಯುಷಿ ನತದೃಷ್ಟ ಅಂಗದಿಂದ. ಹೆರಿಗೆಯ ಸಮಯದಲ್ಲಿ ಈ ಮಾಸುವೂ ಹೊರಗೆ ಬಂದು ಬಿಡುತ್ತದೆ. ಮತ್ತು ರಕ್ತದಲ್ಲಿ ಪ್ರೊಜೆಸ್ಟೆರೊನ್ ಪ್ರಮಾಣ ಬಹಳಷ್ಟು ಕಡಿಮೆಯಾಗುತ್ತದೆ. ಆದರೆ ಈಗ ಚಿತ್ರದಲ್ಲಿ ಬರುವುದು ಇನ್ನೊಂದು ರಸದೂತ. ಅದರ ಹೆಸರು ಪ್ರೊಲ್ಯಾಕ್ಟಿನ್. ಈ ಪ್ರೊಲ್ಯಾಕ್ಟಿನ್ ರಸದೂತವು ಮೆದುಳಿನಿಂದ ಸ್ರವಿಸಲ್ಪಡುತ್ತದೆ.

ಪೊಲ್ಯಾಕ್ಟಿನ್ ಎರಡು ಮಹತ್ವದ ಕೆಲಸಗಳನ್ನು ಮಾಡುತ್ತದೆ. ಒಂದು, ಮೊಲೆಗಳಲ್ಲಿರುವ ಹಾಲಿನ ಗ್ರಂಥಿಗಳ ಮೇಲೆ ಪ್ರಭಾವ ಬೀರಿ ಈ ಗ್ರಂಥಿಗಳು ಹಾಲು ತಯಾರಿಸುವ ಹಾಗೆ ಮಾಡುತ್ತದೆ. ಪ್ರೊಲ್ಯಾಕ್ಟಿನ್‌ನಿಂದಾಗಿ ಮಗುವಿಗೆ ತಾಯಿಯ ಹಾಲು ಸಿಗಲು ಪ್ರಾರಂಭವಾಗುತ್ತದೆ. ಮುಂದೆ ಮಗು ತಾಯಿಯ ಮೊಲೆ ಕಚ್ಚಿ ಚೀಪಿ ಹಾಲು ಕುಡಿದಾಗಲೆಲ್ಲ ಪ್ರೊಲ್ಯಾಕ್ಟಿನ್ ಸ್ರವಿಸಲ್ಪಡುತ್ತದೆ. ಈ ಪ್ರೊಲ್ಯಾಕ್ಟಿನ್ ನೈಸರ್ಗಿಕ ಗರ್ಭನಿರೋಧ.

ರಕ್ತದಲ್ಲಿ ಪ್ರೊಲ್ಯಾಕ್ಟಿನ್ ಪ್ರಮಾಣ ಹೆಚ್ಚಾಗಿರುವವರೆಗೂ ಅದು ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವದನ್ನು ತಡೆಹಿಡಿಯುತ್ತದೆ. ಆಗ ದಂಪತಿಗಳು ಸಂಭೋಗದಲ್ಲಿ ತೊಡಗಿದರೂ ಗರ್ಭಧಾರಣೆಯಾಗುವದಿಲ್ಲ. ಹೀಗೆ ಪ್ರೊಲ್ಯಾಕ್ಟಿನ್ ಇತ್ತ ಹಾಲಿನ ಉತ್ಪಾದನೆಗೆ ಪ್ರಚೋದನೆ ನೀಡಿ ಮಗುವಿನ ಪೋಷಣೆಗೆ ಕಾರಣವಾಗುತ್ತದೆ. ಹಾಗೂ ಅತ್ತ ಅಂಡಾಣುವಿನ ಬಿಡುಗಡೆ ತಡೆಹಿಡಿದು ಗರ್ಭ ನಿಲ್ಲದ ಹಾಗೆ ಮಾಡಿ ತಾಯಿಗೆ ಗರ್ಭನಿರೋಧದ ರಕ್ಷಣೆ ನೀಡುತ್ತದೆ.

ಆದರೆ ಈ ಎಲ್ಲ ವಿವರಣೆಯಲ್ಲಿ `ಮಾಡಬಸರು~ ಎಲ್ಲಿಯೋ ಕಳೆದುಹೋಯಿತಲ್ಲ ಅಂದಿರಾ, ಇಲ್ಲ ಅದು ಚಿತ್ರದೊಳಗೆ ಬರುವದೇ ಈಗ. ಅದು ಹೀಗೆ-

ಲೇಖನದ ಪ್ರಾರಂಭದಲ್ಲಿ ನನ್ನನ್ನು ಭೇಟಿಯಾಗಿದ್ದ ಮಹಿಳೆಯನ್ನು ರುಬಿನಾ ಎಂದು ಕರೆಯೋಣ. ರುಬಿನಾ - ಸಂತೋಷ್ ಮದುವೆಯಾಗಿ ಒಂದು ವರ್ಷದ ಬಳಿಕ ಅವರಿಗೊಂದು ಮಗುವಾಗುತ್ತದೆ. ಅವಳು ಹೆರಿಗೆಯಾಗಿ ಮೂರು ತಿಂಗಳ ಬಳಿಕ ಗಂಡನ ಮನೆಗೆ ಹೋಗುತ್ತಾಳೆ.
 
ರುಬಿನಾ ಮತ್ತು ಸಂತೋಷ್ ಯಾವುದೇ ಬಾಹ್ಯ ಗರ್ಭನಿರೋಧ ಪಾಲಿಸದೆ ತಮ್ಮ ಲೈಂಗಿಕ ಜೀವನ ಪುನರಾರಂಭಿಸುತ್ತಾರೆ. ಈ ಅವಧಿಯಲ್ಲಿ ರುಬಿನಾ ಕೂಸಿಗೆ ಮೊಲೆಹಾಲು ಕುಡಿಸುತ್ತಿರುವುದರಿಂದ ಆಕೆಗೆ ನೈಸರ್ಗಿಕ ಗರ್ಭನಿರೋಧಕ ರಕ್ಷಣೆ ಸಿಗುತ್ತದೆ.
 
ಕೂಸು ಮೇಲಿನ ಆಹಾರ ಸೇವಿಸಲು ಪ್ರಾರಂಭಿಸಿದ ಬಳಿಕ ಅಥವಾ ತಾಯಿ ಹೊಲದ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ ಬಳಿಕ ಮೊಲೆಯುಡಿಸುವ ಪ್ರಮಾಣ ಕಡಿಮೆಯಾಗುತ್ತದೆ. ಆಗ ಪ್ರೊಲ್ಯಾಕ್ಟಿನ್ ಪ್ರಮಾಣವೂ ಕಡಿಮೆಯಾಗಿ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವ ಪ್ರಕ್ರಿಯೆ ಪುನರಾರಂಭಗೊಳ್ಳುತ್ತದೆ.

ಹೆರಿಗೆಯಾದ ಬಳಿಕ ತಾಯಂದಿರಿಗೆ ಈ ಕಾರಣಕ್ಕಾಗಿಯೇ ಆರೆಂಟು ತಿಂಗಳಲ್ಲ ಕೆಲವೊಮ್ಮೆ ವರ್ಷ, ಎರಡು ವರ್ಷಗಳ ನಂತರ ಮುಟ್ಟು ಮತ್ತೆ ಶುರುವಾಗುತ್ತದೆ. ಬಹಳ ಜನ ನಂಬಿರುವುದೇನೆಂದರೆ, ಮತ್ತೆ ಮುಟ್ಟಿನ ಚಕ್ರ ಶುರುವಾದ ಬಳಿಕವೇ ಗರ್ಭ ನಿಲ್ಲುತ್ತದೆ ಎಂದು. ಇದು ಸರಿಯಲ್ಲ. ಹೆರಿಗೆಯಾದ ಬಳಿಕ ಆರು ಎಂಟು ತಿಂಗಳ ನಂತರ ಯಾವ ತಿಂಗಳಲ್ಲಿ ಅಂಡಾಣು ಮೊದಲ ಸಲ ಬಿಡುಗಡೆಯಾಗುತ್ತದೆಯೋ ಅದೇ ತಿಂಗಳಲ್ಲಿ ಗರ್ಭಧಾರಣೆಯಾಗಿಬಿಟ್ಟರೆ ಮಹಿಳೆ ಮುಟ್ಟಾಗದೆ ಗರ್ಭಿಣಿಯಾಗಿಬಿಡುತ್ತಾಳೆ.

ರುಬೀನಾಗೆ ಆಗಿದ್ದೂ ಹೀಗೆಯೇ. ಅಜ್ಜಿ ಇದನ್ನೇ `ಮಾಡಬಸರು~ ಎಂದು ಕರೆದದ್ದು. `ಮಾಡಬಸರು~ ಅಂದರೆ ಮೋಡಬಸಿರು!

ಆಕಾಶ ಶುಭ್ರವಾಗಿರುವಾಗ ಸೂರ್ಯೋದಯ ಯಾವಾಗ ಆಯಿತು ಎಂಬುದು ಸುಲಭವಾಗಿ ಗೊತ್ತಾಗುತ್ತದೆ. ಅದೇ ರೀತಿ ಮಹಿಳೆ ತಿಂಗಳು ತಿಂಗಳು ಸರಿಯಾಗಿ ಮುಟ್ಟಾಗುತ್ತಿದ್ದರೆ, ಗರ್ಭಧಾರಣೆ ಯಾವ ತಿಂಗಳಲ್ಲಿ ಆಯಿತು ಎಂಬುದನ್ನು ಹೇಳುವುದು ಸುಲಭ.
 
ಆಕಾಶ ಮೋಡಗಳಿಂದ ತುಂಬಿದ್ದರೆ ಸೂರ್ಯೋದಯ ಗೋಚರವಾಗುವದಿಲ್ಲ. ಇದೇ ರೀತಿ ಮಹಿಳೆ ಕೂಸಿಗೆ ಮೊಲೆಹಾಲು ಕೊಡುತ್ತಿರುವಾಗ ಅದರಿಂದಾಗಿ ಉಂಟಾಗಿರುವ ಆ ಮುಟ್ಟಿನ ಅವಧಿಯಲ್ಲಿ ಮಹಿಳೆ ಬಸಿರಾದರೆ ಗರ್ಭಧಾರಣೆ ಆಗಿ ಎಷ್ಟು ತಿಂಗಳು ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ.

ಬೆಳಕು ಹರಿದು ಎಷ್ಟೋ ಸಮಯದ ನಂತರ ಆಕಾಶದಲ್ಲಿ ಸೂರ್ಯ ಕಂಡಾಗ, `ಅರೆ, ಸೂರ್ಯ ನೋಡಲ್ಲಿ! ಎಷ್ಟು ಮ್ಯಾಲೆ ಬಂದಾನ, ಇಷ್ಟ ಹೊತ್ತ ಆಗಿದ್ದೇ ಗೊತ್ತಾಗಲಿಲ್ಲ~ ಎನ್ನುತ್ತೇವೆ. ಹಾಗೆಯೇ ಇಲ್ಲಿಯೂ ಕೂಡ ಅನೇಕ ಸಲ ಗರ್ಭಧಾರಣೆಯಾಗಿ ನಾಲ್ಕೈದು ತಿಂಗಳ ನಂತರ, ಹೊಟ್ಟೆ ಕಾಣಲಾರಂಭಿಸಿದಾಗಲೇ- `ಅರೆ, ಹೌದಲ್ಲ ರುಬೀನಾ ಮತ್ತೆ ಹೊಟ್ಟೀಲೆ ಇದ್ದಳ~ ಎನ್ನುವಂತಾಗುತ್ತದೆ.

ನನಗೆ ಸಂತೋಷ ಕೊಡುವ ಸಂಗತಿಯೆಂದರೆ ಹಳ್ಳಿಯ ಅದರಲ್ಲೂ ಶಾಲೆ ಕಲಿಯದ ಜನರ ನಾಲಿಗೆಯ ಮೇಲೆ ನಲಿದಾಡುವ ಈ ಕಾವ್ಯಮಯ ಕನ್ನಡ. ಹಳ್ಳಿಗರಿಗೆ ಇದು ದಿನನಿತ್ಯದ ಸಹಜ ಮಾತು.
 
ಅವರದನ್ನು ಪ್ರಯತ್ನಪೂರ್ವಕವಾಗಿ ಕಾವ್ಯಮಯ ಮಾಡುವದಿಲ್ಲ. ಆದರೆ ನಾವು ಶಹರಗಳಲ್ಲಿ ವಾಸಿಸುತ್ತಿರುವವರು, ಶಾಲಾ ಶಿಕ್ಷಣ ಪಡೆದವರು, ಇಂಗ್ಲಿಷಿನ ಪ್ರಭಾವದಲ್ಲಿ ಬಂದವರು, ನಮ್ಮ ಕನ್ನಡ ತೀರ ಒಣ ಆಗಿರುವುದರಿಂದ ನಮಗೆ `ಮಾಡಬಸಿರು~ ಕಾವ್ಯಮಯವಾಗಿ ಕಾಣುತ್ತದೆ.

ಇವತ್ತು ಬೆಂಗಳೂರು ಬಿಡಿ, ಧಾರವಾಡ, ಗುಲ್ಬರ್ಗಾ, ಬೆಳಗಾವಿ, ಬಿಜಾಪೂರ, ಮಂಡ್ಯ, ಚಿತ್ರದುರ್ಗ ಇಂತಹ ನಗರಗಳಷ್ಟೇ ಅಲ್ಲ, ಸಣ್ಣ ಊರುಗಳಲ್ಲಿರುವ ಜನರೇ ಆಗಿರಲಿ, ಏಳನೆಯ ಇಯತ್ತೆ ಅಥವಾ ಹತ್ತನೆಯ ಇಯತ್ತೆಯವರೆಗೆ ಓದಿದ್ದರೆ ಸಾಕು ಅವರ ಬಾಯೊಳಗಿನ ಕನ್ನಡ ಮಾಯವಾಗಿ ಇಂಗ್ಲಿಷ್ ಶಬ್ದಗಳು ಕುಣಿದಾಡಲಾರಂಭಿಸುತ್ತವೆ.
`ನಮಸ್ಕಾರ‌್ರಿ, ಪಾಟೀಲರ, ಭಾಳ ದಿವಸಾತು. ಆ ನನ್ನ ಕೆಲಸಾನೂ ಅರ್ಧನ ಉಳೀತು.

ಕಂಡೇ ಇಲ್ಲ~ ಅಂತ ನೀವು ಕೇಳಿದರ- `ಸಾರೀರಿ, ಅದೇನಾತಂದರ ವಿಜಾಪುರದಾಗ ನಮ್ಮ ಸಿಸ್ಟರ್ ಪ್ರೆಗ್ನಂಟ್ ಅದಾಳ; ಅವರ ಮನ್ಯಾಗ ಫಂಕ್ಶನ್ ಇಟಗೊಂಡಿದ್ದರು. ನಮ್ಮ ಮದರ್ ಜೋಡಿ ನನಗ ಹೋಗಬೇಕಾತು, ಅಲ್ಲಿ ಇದ್ದಾಗನ ರಾಮದುರ್ಗದೊಳಗ ನಮ್ಮ ಅಂಕಲ್ ಎಕ್ಸ್‌ಪೈರ್ ಆದ್ರು ಅಂತ ಸುದ್ದಿ ಬಂತು, ಅಲ್ಲಿ ಹೋಗಬೇಕಾತು..~ ಇಂತಹ ಉತ್ತರ ಸಿಗುತ್ತದೆ.

ಇದು ಕಾಲ್ಪನಿಕ ನಾಟಕದ ಡೈಲಾಗಲ್ಲ. ಈ ಲೇಖನವನ್ನು ಓದುತ್ತಿರುವ ನೀವು ಮುಂದಿನ ಮೂರು ತಾಸು ನಿಮ್ಮ ಕಿವಿಗಳನ್ನು ಚುರುಕಾಗಿಸಿಕೊಂಡು ನೋಡಿರಿ. ಎಷ್ಟು ಮದರ್, ಫಾದರ್ ಅಂಕಲ್ ನಿಮ್ಮ ಕಿವಿಗೆ ಬೀಳುತ್ತವೆ ಎಂಬುದನ್ನು ಗಮನಿಸಬಹುದು. ಅಥವಾ ನೀವೂ ಇದೇ ಮದರ್ - ಫಾದರ್ ಜಾತಿಯವರೋ?

ಇಂದು ನಮಗೆ ನಮ್ಮ ಸಹಜ ಕನ್ನಡ ಯಾಕೆ ಬೇಡವಾಗುತ್ತಿದೆ? ಯಾವುದೋ ಒಂದು ವಸ್ತು ಅಥವಾ ಸಂಗತಿಗೆ ಕನ್ನಡದಲ್ಲಿ ಶಬ್ದಗಳಿಲ್ಲದೆ ಹೋದ ಪಕ್ಷದಲ್ಲಿ ನಾವು ಮುಕ್ತವಾಗಿ ಪರಭಾಷಾ ಶಬ್ದಗಳನ್ನು ಸ್ವೀಕರಿಸೋಣ, ನಮ್ಮದಾಗಿಸಿಕೊಳ್ಳೋಣ. ಭಾಷೆಯ ಬಗ್ಗೆ ನನಗೆ ಹುಚ್ಚು ಮಡಿವಂತಿಕೆ ಇಲ್ಲ. ಭಾಷೆ ಜನರ ಸೊತ್ತು, ಸಂಪೂರ್ಣ ಪ್ರಜಾಸತ್ತಾತ್ಮಕವಾದುದು.

ಮಡಿವಂತ ಪಂಡಿತರು ಮಾಧ್ಯಮಗಳಲ್ಲಿ ಬಳಕೆಯಾಗುವ ಗ್ರಾಂಥಿಕವಾಗಿ ಬಳಕೆಯಾಗುವ ಭಾಷೆಯನ್ನು ಶುಚಿಗೊಳಿಸಿ ಶಿಷ್ಟವಾಗಿಸಲು ಪ್ರಯತ್ನಿಸುತ್ತಾರೆ. ಆದರೆ ಆಡುಭಾಷೆಗೆ ಇಂತಹ ಹೊರಗಿನ ನಿರ್ಬಂಧಗಳು ಅನ್ವಯಿಸುವದಿಲ್ಲ.

ಅವ್ವ, ಅಪ್ಪ, ಅಕ್ಕ, ಅಣ್ಣ, ತಾಯಿ, ತಂದೆ, ಚಿಕ್ಕಪ್ಪ, ದೊಡ್ಡಪ್ಪ ಇವು ನಮಗೆಲ್ಲ ಗೊತ್ತಿರುವ ನಮಗೆಲ್ಲರಿಗೂ ಅರ್ಥವಾಗುವ ಶಬ್ದಗಳು. ಒಂದಿಷ್ಟು ಶಾಲಾಶಿಕ್ಷಣ ಪಡೆದ ಕೂಡಲೇ ಯಾಕೆ ಇವು ನಮಗೆ ಬೇಡವಾಗುತ್ತವೆ?

ಕ್ಷಮಿಸಿ. ಕರ್ನಾಟಕದ ಯಾವುದೋ ಹಳ್ಳಿಯಲ್ಲಿ, ಒಂದು ಸಣ್ಣ ಮನೆಯಲ್ಲಿ ಯಾವತ್ತೋ ಒಂದು ರಾತ್ರಿ ರುಬೀನಾ ಮತ್ತು ಸಂತೋಷ ನಡೆಸಿದ ಒಂದು ಅತ್ಯಂತ ಆಪ್ತ, ಅತ್ಯಂತ ಖಾಸಗಿ ಚಟುವಟಿಕೆಯ ಪರಿಣಾಮವಾಗಿ ರೂಪು ತಳೆದ ಈ ಲೇಖನ ಗರ್ಭಾಶಯ, ಅಂಡಾಶಯ, ಪ್ರೊಲ್ಯಾಕ್ಟಿನ್- ಹೀಗೆ ಮೋಡಬಸಿರಿನ ಗರ್ಭದೊಳಕ್ಕೆ ಹೊಕ್ಕು ಹೊರಗೆ ಬಂದು ಮದರ್, ಫಾದರ್, ಅಂಕಲ್‌ಗಳನ್ನು ಬೆನ್ನು ಹತ್ತುವಂತಾಯಿತು.
 
ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಕೊಡದೆ ಮುಗಿದುಹೋಯಿತಲ್ಲ ಎಂಬ ಖೇದ ನಿಮಗಿದೆಯೇ? ಈ ಖೇದ ನನಗೂ ಇದೆ. ಯಾಕೆಂದರೆ ಇದು ನಮ್ಮ ಕನ್ನಡಾಂಬೆಯ `ಹೊಟ್ಯಾಗಿನ ಮಾತು~. ನಾವು ನೀವೆಲ್ಲ ಕೂಡಿಯೇ ಉತ್ತರಗಳನ್ನು ಹುಡುಕಬೇಕಾದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT