ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಂಡರ ಪಕ್ಷಾಂತರ; ಅಭ್ಯರ್ಥಿಗಳ ತಳಮಳ

Last Updated 19 ಏಪ್ರಿಲ್ 2013, 9:04 IST
ಅಕ್ಷರ ಗಾತ್ರ

ಹಾವೇರಿ: ಕೆಜೆಪಿ ಹುಟ್ಟಿನಿಂದ ಬಹುತೇಕ ಮುಖಂಡರನ್ನು ಕಳೆದುಕೊಂಡು ಬಲಹೀನವಾದ ಜಿಲ್ಲಾ ಬಿಜೆಪಿ ಘಟಕ, ಅದರಿಂದ ಚೇತರಿಸಿಕೊಳ್ಳುವ ಮುನ್ನವೇ ಎದುರಾದ ರಾಜ್ಯ ವಿಧಾನಸಭೆ ಚುನಾವಣೆ ಜಿಲ್ಲೆಯ ಮತ್ತಷ್ಟು ಮುಖಂಡರನ್ನು ಪಕ್ಷ ತೊರೆಯುತ್ತಿರುವುದು ಪಕ್ಷದ ಅಭ್ಯರ್ಥಿಗಳಲ್ಲಿ ತಳಮಳವನ್ನುಂಟು ಮಾಡಿದೆ.

ಪ್ರಸಕ್ತ ವಿಧಾನಸಭೆ ಚುನಾವಣೆ ಘೋಷಣೆಗೆ ಮುನ್ನ ಪಕ್ಷದ ಸಂಘಟನೆ ಜವಾಬ್ದಾರಿ ಹೊತ್ತ ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಸೇರಿ ಇತರ ಜಿಲ್ಲೆಯ ಮುಖಂಡರು ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವುದರ ಜತೆಗೆ ಸಾವಿರಾರು ಜನರನ್ನು ಸೇರಿಸಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ವಿಜಯ ಸಂಕಲ್ಪಯಾತ್ರೆ ಯಶಸ್ವಿಗೊಳಿಸಿದ್ದರು. ಈ ಮೂಲಕ ಜಿಲ್ಲೆಯ ಜಿಲ್ಲೆಯಲ್ಲಿ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ತೋರಿಸುವಲ್ಲಿ ಯಶಸ್ವಿಯಾಗಿದ್ದರು.

ನಾಯಕತ್ವ ಕೊರತೆ: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರತಿ ಕ್ಷೇತ್ರದಲ್ಲಿಯೂ ಎರಡ್ಮೂರು ಜನ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಪಕ್ಷದ ಮುಖಂಡರು ಸಹ ಯಾವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಯಾರಿಗೆ ಟಿಕೆಟ್ ನೀಡಿದರೆ, ಗೆಲುವು ಸಾಧಿಸಬಹುದು.

ಅಸಮಾಧಾನಗೊಳ್ಳುವ ಆಕಾಂಕ್ಷಿಗಳನ್ನು ಹೇಗೆ ಸಮಾಧಾನ ಪಡಿಸಬಹುದು ಎಂಬುದರ ಬಗ್ಗೆ ಚಿಂತನೆ ಮಾಡದೇ, ಪ್ರತಿಯೊಬ್ಬ ಆಕಾಂಕ್ಷಿಗೂ ನಿಮಗೆ ಟಿಕೆಟ್ ಎನ್ನುವ ಭರವಸೆ ನೀಡುತ್ತಾ ಬಂದಿರ‌್ದುವುದು ಬಿಜೆಪಿಯ ನಾಯಕತ್ವದ ಕೊರತೆಗೆ ಹಿಡಿದ ಕನ್ನಡಿಯಾಗಿದೆ.

ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಘೋಷಣೆಯಾಗುವ ಮುನ್ನವೇ ತಮಗೆ ಟಿಕೆಟ್ ಸಿಕ್ಕವರಂತೆ ತಮ್ಮ ಚಿತ್ರ ಇರುವ ಪೋಸ್ಟರ್, ಬ್ಯಾನರ್ ಮಾಡಿಸಿ ಕ್ಷೇತ್ರದಾದ್ಯಂತ ಅಂಟಿಸಿದ್ದರಲ್ಲದೇ, ಸಭೆ, ಸಮಾರಂಭಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು.

ಭುಗಿಲೆದ್ದ ಅಸಮಾಧಾನ: ಬಿಜೆಪಿ ವರಿಷ್ಠರು ಜಿಲ್ಲೆಯ ಒಂದೊಂದೆ ಕ್ಷೇತ್ರದ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಟಿಕೆಟ್ ಸಿಗದಿರುವ ಆಕಾಂಕ್ಷಿಗಳು ಪಕ್ಷ ಹಾಗೂ ಮುಖಂಡರ ವಿರುದ್ಧ ಬಂಡಾಯ ಧ್ವನಿ ಎತ್ತಿದರು. ಆಗಲೂ ಕೂಡಾ ಜಿಲ್ಲೆಯ ಮುಖಂಡರು ಅಸಮಾಧಾನಗೊಂಡ ಆಕಾಂಕ್ಷಿಗಳನ್ನು ಸಮಾಧಾನ ಮಾಡುವ ಗೋಜಿಗೆ ಹೋಗದಿರುವುದು ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.

ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಜಿ.ಪಂ.ಮಾಜಿ ಅಧ್ಯಕ್ಷ ಡಾ.ಮಲ್ಲೇಶಪ್ಪ ಹರಿಜನ ಅವರಿಗೆ ಘೋಷಣೆಯಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳಾದ ಬಸವರಾಜ ಪೇಲನವರ ಹಾಗೂ ಟಿಕೆಟ್‌ಗಾಗಿ ಕೇವಲ ಹದಿನೈದು ದಿನಗಳ ಹಿಂದೆ ಬಿಜೆಪಿ ಸೇರಿದ್ದ ಡಾ. ಸಂಜಯ ಡಾಂಗೆ ತಮಗೆ ಮಾನ್ಯತೆ ಸಿಗದ ಪಕ್ಷವನ್ನು ತೊರೆದು ಬೇರೆ ಪಕ್ಷಗಳತ್ತ ಗುಳೆ ಹೊರಟರಲ್ಲದೇ, ತಮಗಿಷ್ಟವಾದ ಪಕ್ಷದಲ್ಲಿ ಆಶ್ರಯ ಪಡೆದಿದ್ದಾರೆ.

ಪೇಲನವರ ಬಿಜೆಪಿ ತೊರೆದು ಕೆಜೆಪಿ ಅಭ್ಯರ್ಥಿ ನೆಹರೂ ಓಲೇಕಾರ ಅವರಲ್ಲಿ ಆಶ್ರಯ ಪಡೆದರೆ, ಡಾ. ಡಾಂಗೆ ಯಾವುದೇ ಪಕ್ಷದ ಹಂಗು ಬೇಡವೆಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಡಾ. ಡಾಂಗೆ ಜತೆಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದ ಮಾಜಿ ಶಾಸಕ ಡಾ.ಚಿತ್ತರಂಜನ್ ಕಲಕೋಟಿ ಅವರು ಡಾಂಗೆ ಅವರಿಗೆ ಬೆಂಬಲಿಸಿ ಪಕ್ಷ ತೊರೆದಿದ್ದಾರೆ.

ಇನ್ನೂ ರಾಣೆಬೆನ್ನೂರ ಕ್ಷೇತ್ರದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಮಂಜುನಾಥ ಗೌಡಶಿವಣ್ಣನವರ ಹಾಗೂ ಅರುಣಕುಮಾರ ಪೂಜಾರ ಅವರು ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳಾಗಿದ್ದರು. ಪಕ್ಷವು ಅರುಣಕುಮಾರಗೆ ಟಿಕೆಟ್ ನೀಡುತ್ತಿದ್ದಂತೆ ಗೌಡಶಿವಣ್ಣನವರ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುವ ಮೂಲಕ ಆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸಹಜವಾಗಿ ಬಿಜೆಪಿ ಅಭ್ಯರ್ಥಿಗೆ ಪೆಟ್ಟು ಬೀಳಲಿದೆ.

ಬಿಜೆಪಿಯ ಹಿರಿಯ ಮುಖಂಡ ಜಗದೀಶ ಬಸೇಗಣ್ಣಿ, ಜಿ.ಪಂ.ಮಾಜಿ ಸದಸ್ಯ ನಿಂಗಪ್ಪ ಹಾವೇರಿ, ಬಿಜೆಪಿ ನಾಯಕಿ ಹಾಗೂ ನಗರಸಭೆ ಮಾಜಿ ಸದಸ್ಯೆ ಶೋಭಾತಾಯಿ ಮಾಗಾವಿ ಅವರು ಕಾಂಗ್ರೆಸ್ ಸೇರ್ಪಡೆಯಾದರೆ, ಬಿಜೆಪಿ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಮಾಣಿಕಚಂದ ಲಾಡರ್ ಕಜೆಪಿ ಸೇರಿದ್ದಾರೆ.

ಬ್ಯಾಡಗಿಯಲ್ಲಿ ಅಭ್ಯರ್ಥಿಗಳು ಇಲ್ಲದ್ದರಿಂದ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಟಿಕೆಟ್ ಸಲೀಸಾಗಿ ದೊರೆತಿದ್ದರೆ, ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಪುನರಾಯ್ಕೆ ಬಯಸಿದ್ದರಿಂದ ಅಲ್ಲಿ ಯಾವುದೇ ಪೈಪೋಟಿ ಇರಲಿಲ್ಲ. ಹಿರೇಕೆರೂರಲ್ಲಿ ಬಸಮ್ಮ ಅಬಲೂರು ಹೆಸರು ಕೇಳಿಬಂದರೂ, ಪಾಲಾಕ್ಷಗೌಡ ಪಾಟೀಲರಿಗೆ ಟಿಕೆಟ್ ಪಡೆಯಲು ಯಾವುದೇ ತೊಂದರೆಯಾಗಿಲ್ಲ.

ಯಾರ ಹೆಗಲಿಗೆ ನಾಯಕತ್ವ?: ಪಕ್ಷದ ಅಧಿಕೃತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೂ ಅವರ ಜತೆ ಪ್ರಚಾರ ಮಾಡಲು ಯಾವುದೇ ನಾಯಕರು ಇಲ್ಲದಾಗಿದೆ. ಎಲ್ಲ ಅಭ್ಯರ್ಥಿಗಳು ಸ್ಥಳೀಯ ಮುಖಂಡರೊಂದಿಗೆ ಮತದಾರರ ಬಳಿ ತೆರಳುವುದನ್ನು ಬಿಟ್ಟರೆ, ಜಿಲ್ಲೆಯಲ್ಲಿ ನಾಯಕರೆನಿಸಿಕೊಂಡ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹಾಗೂ ಸ್ವತಃ ಅಭ್ಯರ್ಥಿಯಾಗಿರುವ ಬಸವರಾಜ ಬೊಮ್ಮಾಯಿ ಮಾತ್ರ ಬೇರೆ       ಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಚುನಾವಣೆಯಲ್ಲಿ ಯಾರು ಜಿಲ್ಲೆಯ ನಾಯಕತ್ವದ ನೊಗ ಹೊರಲಿದ್ದಾರೆ ಎನ್ನುವುದು ಪಕ್ಷದ ಅಭ್ಯರ್ಥಿಗಳಿಗೂ ಸಹ ಉತ್ತರ ಸಿಗಲಾರದ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT