ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಂಡರ `ಮತ ಮುಳುಗು'

Last Updated 25 ಏಪ್ರಿಲ್ 2013, 9:12 IST
ಅಕ್ಷರ ಗಾತ್ರ

ತುಮಕೂರು: ಕುಶಲಕರ್ಮಿಯೊಬ್ಬ ಮಣಿಗಳನ್ನು ಪೋಣಿಸಿದಷ್ಟೇ ಮುತುವರ್ಜಿಯಿಂದ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಮತಗಳನ್ನು ಕೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ತಾಂಡಾಕ್ಕೆ ತಕ್ಕ ಮಾತು ತಾಂಡಾದಲ್ಲಿ, ಅಗ್ರಹಾರಕ್ಕೆ ಹೊಂದುವ ವಿನಯ ಅಗ್ರಹಾರದಲ್ಲಿ, ಕೇರಿಯ ಭಾಷೆ ಕೇರಿಯಲ್ಲಿ...

ಕಳೆದ ಸಲ ಸೋತವರು `ಅನುಕಂಪದ ಅಲೆ' ಎಬ್ಬಿಸಲು ಯತ್ನಿಸುತ್ತಿದ್ದಾರೆ. ಮೊದಲ ಸಲ ಕಣಕ್ಕೆ ಇಳಿದವರು `ಒಂದು ಅವಕಾಶ' ಎಂದು ಭಕ್ತಿಯಿಂದ ಬೇಡುತ್ತಿದ್ದಾರೆ. ಚೂರುಪಾರು ಕೆಲಸ ಮಾಡಿದವರು `ಅಭಿವೃದ್ಧಿ ಕಾರ್ಯ'ಗಳ ವಿವರ ಒಪ್ಪಿಸುತ್ತಿದ್ದಾರೆ. ಈ ಸಲ ಕೈತಪ್ಪಿದರೆ ಮತ್ತೆ ಅವಕಾಶ ಸಿಗದು ಎಂದು ಭಾವಿಸಿದವರು `ಕೊನೆ ಚುನಾವಣೆ' ಎಂದು ರಾಗ ತೆಗೆದಿದ್ದಾರೆ.

ಜಾತಿ ಬಲ ಉಳ್ಳವರ ಬಾಯಿ ಜೋರಾಗಿದೆ. ಅಂತಹ ಜಾತಿಗಳ ಬಲ ಇಲ್ಲದವರ ದೃಷ್ಟಿ `ಪುಡಿ' ಜಾತಿಗಳ ಕಡೆಗೆ ಹೊರಳಿದೆ. ಮಠಗಳ ಸಂದೇಶ, ಮುಖಂಡರ ಪ್ರಭಾವ ನೆಚ್ಚಿಕೂತವರು ಎದೆಸೆಟೆಸಿ ನಡೆಯುತ್ತಿದ್ದಾರೆ. ತುಮಕೂರು ಜಿಲ್ಲೆಯ ಚುನಾವಣಾ ನೋಟ ಹೀಗೆ ಕುತೂಹಲಭರಿತ. ಸಮುದ್ರದ ಆಳಕ್ಕೆ ಮುಳುಗಿ ಮುತ್ತುಗಳನ್ನು ಹೆಕ್ಕಿ ತರುವ ಪರ್ಲ್‌ಡೈವರ್‌ನಂತೆ ಮುಖಂಡರು `ಮತ ಮುಳುಗು' ಹಾಕಿದ್ದಾರೆ.

ತಿಪಟೂರು
ತಿಪಟೂರು ಕ್ಷೇತ್ರ ಬೇರೆ ಬೇರೆ ಕಾರಣಗಳಿಗಾಗಿ ತೀವ್ರ ಕುತೂಹಲ ಕೆರಳಿಸಿದೆ. ಈ ಕ್ಷೇತ್ರವನ್ನು ಬಿಜೆಪಿಯ ಬಿ.ಸಿ.ನಾಗೇಶ್ ಪ್ರತಿನಿಧಿಸಿದ್ದಾರೆ. `ಲಿಂಗಾಯತರ ಪಕ್ಷ' ಅಂತ ಕರೆಸಿಕೊಳ್ಳುವ ಮಟ್ಟಿಗೆ ಆ ಸಮುದಾಯದ ಬೆಂಬಲ ಪಡೆದಿದ್ದ ಬಿಜೆಪಿ, ಅದೇ ಸಮುದಾಯದ ಪ್ರಾಬಲ್ಯ ಇರುವ ಇಲ್ಲಿ, ಸಣ್ಣ-ಪುಟ್ಟ ಜಾತಿಗಳ ಸಂಘಟನೆಗೆ ಕೈಹಾಕಿದೆ. ಆಯಾ ಜಾತಿಯ ಮುಖಂಡರ ಮೂಲಕವೇ ಆ ಸಮುದಾಯದ ಜನರನ್ನು ಒಲಿಸಿಕೊಳ್ಳುವ ಕೆಲಸವನ್ನು ವ್ಯವಸ್ಥಿತ ರೀತಿಯಲ್ಲಿ, ಹೆಚ್ಚು ಗದ್ದಲ ಇಲ್ಲದೆ ಮಾಡುತ್ತಿದೆ. ಹಾಗಂತ ಪ್ರಜ್ಞಾವಂತ ಮತದಾರರು ಪಿಸುಗುಡುತ್ತಾರೆ.

ಹಿಂದೂ - ಮೋದಿ ಜಪ
ತಳ ಜಾತಿಗಳ ಬಗೆಗಿನ ಬಿಜೆಪಿ ಕಕ್ಕುಲಾತಿಗೆ ಕಾರಣವಾಗಿರುವುದು ಕೆಜೆಪಿ. ಬೆಂಗಳೂರಿನಲ್ಲಿ ಉಪ್ಪಾರಪೇಟೆ ಅಂತಹ ಆಯಕಟ್ಟಿನ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯಾಗಿದ್ದ ಲೋಕೇಶ್ವರ್ ಇಲ್ಲಿ ಕೆಜೆಪಿ ಹುರಿಯಾಳು. ಅವರು ಪೊಲೀಸ್ ಆಗಿದ್ದರು ಎನ್ನುವ ಕಾರಣಕ್ಕೋ ಅಥವಾ ಪ್ರಬಲ ಸಮುದಾಯ ಬೆನ್ನಿಗೆ ಇದೆ ಎಂಬ ಧೈರ್ಯವೋ ಅವರ ಬೆಂಬಲಿಗರು `ಗೆಲುವು ನಮ್ಮದೇ' ಎಂದು ಬೀಗುತ್ತಿದ್ದಾರೆ. ಅವರು ಅಬ್ಬರಿಸುತ್ತಿದ್ದರೆ, ಆಡಳಿತಾರೂಢ ಬಿಜೆಪಿ `ಮೌನ ಮತದಾರ'ನ ಕಡೆಗೆ ಆಸೆಗಣ್ಣಿನಿಂದ ನೋಡುತ್ತಿದೆ. ಇದರ ಮಧ್ಯೆ ಇಲ್ಲಿ ಹಿಂದೂ, ಮೋದಿ ಜಪ ಮುಂದುವರಿದಿದೆ.  

`ಕೆಲಸ ನೋಡಿ ಮತ ನೀಡಿ' ಎನ್ನುವ ಕೂಗು ಎದ್ದಿರುವ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ತಿಪಟೂರು ಒಂದು. ನಾಗೇಶ್‌ರ ಕೆಲಸ ಕಾರ್ಯಗಳ ಕುರಿತು ಜನರಿಗೆ ಮೆಚ್ಚುಗೆ ಇದೆ. `ಪುನರಾಯ್ಕೆ ಆಗುವರೇ' ಎಂದು ಕೇಳಿದರೆ, ಹೆಚ್ಚಿನ ಜನರ ಬಾಯಿಂದ ಮಾತು ಹೊರಡುವುದಿಲ್ಲ. ಪಲ್ಲಟಗಳ ಪರಿಣಾಮ ಆಗಿರಬಹುದು. ಬಿಜೆಪಿ ಶಾಸಕರ `ಸಾಧನೆ'ಗಳನ್ನು ಕೆಜೆಪಿ ಕಾರ್ಯಕರ್ತರು ಬಿ.ಎಸ್.ಯಡಿಯೂರಪ್ಪ ಕೊರಳಿಗೆ ಹಾರವಾಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ತಾಲ್ಲೂಕಿನ 21 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದ ಹೊನ್ನವಳ್ಳಿ ಏತನೀರಾವರಿ ಯೋಜನೆ ಇವರ ಅವಧಿಯಲ್ಲಿ ಪ್ರಾಯೋಗಿಕವಾಗಿ ಚಾಲನೆ ಪಡೆದಿದೆ. ರಸ್ತೆಗಳು ಆಗಿವೆ. ತಿಪಟೂರಿನಲ್ಲಿ ಹಾಸ್ಯನಟ ದಿವಂಗತ ನರಸಿಂಹರಾಜು ಹೆಸರಿನಲ್ಲಿ ರಂಗಮಂದಿರ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ. ಜನರ ಜತೆ ನೇರ ಒಡನಾಟ ಇದೆ ಎಂದು ನಾಗೇಶ್ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತಲೇ ಜನರ ಒಲವು-ನಿಲುವುಗಳ ಬಗ್ಗೆ ಗೊಂದಲದ ಮಾತುಗಳನ್ನು ಆಡುತ್ತಾರೆ.

ಶಿರಾ ಕ್ಷೇತ್ರದ ಪ್ರತಿನಿಧಿ, ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಅವರೂ ತಾವು ಮಾಡಿರುವ ಕೆಲಸಗಳನ್ನು ಮುಂದಿಟ್ಟು ಮತ ಯಾಚಿಸುತ್ತಿದ್ದಾರೆ.  ಐದು ವರ್ಷಗಳಲ್ಲಿ ತಾಲ್ಲೂಕಿಗೆ ್ಙ 850 ಕೋಟಿ  ಅನುದಾನ ತಂದಿದ್ದೇನೆ' ಎಂದು ಅಭಿವೃದ್ಧಿ ಕಾರ್ಯಗಳ ಪೂರ್ಣಪಾಠವನ್ನು ಸಭೆಗಳಲ್ಲಿ ಜನರಿಗೆ ಒಪ್ಪಿಸುತ್ತಿದ್ದಾರೆ. ಜೆಡಿಎಸ್ ಉಮೇದುವಾರ ಬಿ.ಸತ್ಯನಾರಾಯಣ, `ಇದು ನನ್ನ ಕೊನೆಯ ಚುನಾವಣೆ' ಎಂದು ಘೋಷಿಸಿ ಅನುಕಂಪ ಗಿಟ್ಟಿಸುವ ಯತ್ನ ನಡೆಸಿದ್ದಾರೆ. ಇಲ್ಲಿ ಅನುಕಂಪ ಮತ್ತು ಅಭಿವೃದ್ಧಿ ಕೆಲಸದ ನಡುವೆ ಹೊಯ್ದಾಟ.

ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಹೆಬ್ಬೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ `ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ' ಎಂದು  ಶಾಸಕ, ಬಿಜೆಪಿಯ ಬಿ.ಸುರೇಶ ಗೌಡ ಘೋಷಿಸಿದ್ದಾರೆ. 184 ಕಿ.ಮೀ ರಸ್ತೆ ಅಭಿವೃದ್ಧಿ, ಗ್ರಾಮಗಳಿಗೆ ನಿರಂತರ ವಿದ್ಯುತ್, ಕೆರೆಗಳಿಗೆ ಹೇಮಾವತಿ ನೀರು ಹರಿಸಿರುವುದನ್ನು ವಿವರಿಸಿ ಪುನರಾಯ್ಕೆಗೆ ಸಹಕರಿಸುವಂತೆ ಕೋರುತ್ತಿದ್ದಾರೆ. ಆದರೆ, `ಯಡಿಯೂರಪ್ಪ ಜತೆ ಬರಲಿಲ್ಲ ಎಂಬ ಕಾರಣಕ್ಕೆ ಕೆಜೆಪಿ ಜಿದ್ದು ಸಾಧಿಸುವ ಸಾಧ್ಯತೆ ಇದೆ' ಎನ್ನುತ್ತಾರೆ ಸ್ಥಳೀಯ ಮುಖಂಡರು. ಹಗೆಯ ಹೊಗೆ, ಕೆಲಸ-ಕಾರ್ಯಗಳನ್ನು ಮಸುಕುಗೊಳಿಸುವುದೇ ಎಂಬ ಕುತೂಹಲ ಮತದಾರರಲ್ಲಿ ಇದೆ.

ಮಾಡಿರುವ ಕೆಲಸಗಳನ್ನು ಮುಂದಿಟ್ಟು ಮತ ಕೇಳುತ್ತಿರುವ ಕ್ಷೇತ್ರಗಳು: ತಿಪಟೂರು, ಶಿರಾ ಹಾಗೂ ತುಮಕೂರು ಗ್ರಾಮಾಂತರ. ಅಭಿವೃದ್ಧಿ ಕೆಲಸಗಳು ಚುನಾವಣೆಯಲ್ಲಿ ಗೆಲುವಿಗೆ ಮೆಟ್ಟಿಲು ಆಗುವುದೋ ಇಲ್ಲವೋ ಎಂಬುದನ್ನು ಅರಿಯಲು ಈ ಕ್ಷೇತ್ರಗಳ ಫಲಿತಾಂಶ ಅಧ್ಯಯನಯೋಗ್ಯ.

ತುಮಕೂರು ನಗರ ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ಸಚಿವ ಎಸ್.ಶಿವಣ್ಣ ಅವರದು `ಶಾಂತಿ ಮಂತ್ರ'. ಕರ್ಫ್ಯೂ , ಗೋಲಿಬಾರ್‌ಗಳಿಂದ ಅಶಾಂತಿಯ ಕುಲುಮೆಯಂತಾಗಿದ್ದ ತುಮಕೂರಿನಲ್ಲಿ ಈಗ ನೆಮ್ಮದಿ ಇದೆ. ಅದೇ ದೊಡ್ಡ ಸಾಧನೆ ಎನ್ನುತ್ತಾರೆ ಅವರು. ಎದುರಾಳಿ ಅಭ್ಯರ್ಥಿ ರಫೀಕ್ ಅಹ್ಮದ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಈ ಕಾರಣಕ್ಕೆ ಬಿಜೆಪಿಯ ಭಾಷೆ ಇಲ್ಲಿ ಬೇರೆಯಾಗಿದೆ.

ಕಾರ್ಯಕರ್ತರ ಪರಿಣತಿ: ಪ್ರಚಾರ ತಂತ್ರಗಾರಿಕೆಯಲ್ಲಿ ಸಾಮಾನ್ಯ ಕಾರ್ಯಕರ್ತರೂ ಪಳಗಿಬಿಟ್ಟಿದ್ದಾರೆ. ಕೊರಟಗೆರೆ ಕ್ಷೇತ್ರದ ಕೆಲವು ಹಳ್ಳಿಗಳಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ, ಮತ್ತೆ ಕೆಲವು ಗ್ರಾಮಗಳಲ್ಲಿ ಒಕ್ಕಲಿಗರ ಪ್ರಾಬಲ್ಯ ಇದೆ. ಲಿಂಗಾಯತರ ಪ್ರಾಬಲ್ಯ ಇರುವ ಗ್ರಾಮಗಳಲ್ಲಿ ಜೆಡಿಎಸ್ ಕಾರ್ಯಕರ್ತರ ಪ್ರಚಾರದ ಕೇಂದ್ರ ಬಿಂದು ಅಭ್ಯರ್ಥಿ ಸುಧಾಕರ ಲಾಲ್. ಒಕ್ಕಲಿಗರು ಹೆಚ್ಚಿಗೆ ಇರುವ ನಡೆ ಪಕ್ಷದ ಉದ್ದೇಶ, ದೇವೇಗೌಡ, ಕುಮಾರಸ್ವಾಮಿಯ ಸಾಧನೆಗಳೆಲ್ಲ ಹೊರಗೆ ಬರುತ್ತವೆ.  ಪ್ರಚಾರ ವೈಖರಿ, ಬಳಸುವ ಭಾಷೆ ಹೋಬಳಿಯಿಂದ ಹೋಬಳಿಗೆ ಭಿನ್ನ. ಚುನಾವಣೆ ಎಂಜಿನಿಯರಿಂಗ್‌ನಲ್ಲಿ ಕಾರ್ಯಕರ್ತರು ಗ್ರಾಮ ಮಟ್ಟದಲ್ಲೂ ಆ ಮಟ್ಟಿಗೆ ಪರಿಣತಿ ಸಾಧಿಸಿದ್ದಾರೆ.

ಜಾತ್ರೆ, ಸಂತೆಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ತುಮಕೂರಿನ ಬಟವಾಡಿಯ ಎ.ಪಿ.ಎಂ.ಸಿ ಆವರಣದಲ್ಲಿ ಸುಡು ಬಿಸಿಲನ್ನೂ ಲೆಕ್ಕಿಸದೆ ಕೆಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಮತ ಕೇಳುತ್ತಿದ್ದರು. ಮತದಾರರಿಗೆ ತಮ್ಮ ಪರಿಚಯದ ಒಂದು ಸಣ್ಣ ಕಾರ್ಡ್ ನೀಡುತ್ತಿದ್ದರು. ಅದರ ಹಿಂದೆ ದಿನಚರಿ. ಹೆಚ್ಚಿಗೆ ಮಾತಿಲ್ಲ. ಮುಗುಳ್ನಗೆಯೊಂದಿಗೆ ಕೈಮುಗಿದು ಮುಂದೆ ಸಾಗುತ್ತಿದ್ದರು. ಅವರ ಹಿಂದೆ ಸುಮಾರು 50 ಮಂದಿ ಕಾರ್ಯಕರ್ತರ ಗುಂಪು. ಅದರಲ್ಲಿ ಹತ್ತು ಮಂದಿ ಮಹಿಳೆಯರು. ಎಲ್ಲರ ಕೈಯಲ್ಲೂ ಕರಪತ್ರ. ಅದನ್ನು ಹಂಚುತ್ತಾ ಸರಸರನೆ ಮುಂದೆ ಸಾಗಿತು ತಂಡ.

ಮಾರುಕಟ್ಟೆ ದಿನ. ಬೇರೆ ಬೇರೆ ಭಾಗದ ಜನರು ಸೇರಿದ್ದರು. ಎಲ್ಲರನ್ನೂ ಒಂದೇ ಕಡೆ ಭೇಟಿಯಾಗುವ ಅವಕಾಶ  ಬಳಸಿಕೊಂಡರು. ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜ್ ಅವರ ಪುತ್ರ ಜ್ಯೋತಿ ಗಣೇಶ್ ಇನ್ನೂ ಯುವಕ. ತುಮಕೂರು ನಗರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT