ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯ ಆರೋಗ್ಯಾಧಿಕಾರಿ ಅಪಹರಣ ಪ್ರಕರಣ:ಉತ್ತರಪ್ರದೇಶ ಸಚಿವ ವಜಾ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಖನೌ: ಗೊಂಡಾದ ಮುಖ್ಯ ಆರೋಗ್ಯಾಧಿಕಾರಿ (ಸಿಎಂಒ) ಮತ್ತು ಇಬ್ಬರು ಕ್ಲರ್ಕ್‌ಗಳನ್ನು ಅಪಹರಣ ಮಾಡಿದ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕಂದಾಯ ಮತ್ತು ಪುನರ್ವಸತಿ ಖಾತೆ ರಾಜ್ಯ ಸಚಿವ ವಿನೋದ್ ಕುಮಾರ್ ಸಿಂಗ್ ಅಲಿಯಾಸ್   ಅವರನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶುಕ್ರವಾರ ಸಂಪುಟದಿಂದ ವಜಾ ಮಾಡಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಅಸಮಾಧಾನ, ವಿರೋಧಕ್ಕೆ ಮಣಿದಿರುವ ಅಖಿಲೇಶ್ ಯಾದವ್, ಅಪಹರಣ ಪ್ರಕರಣ ನಡೆದ ನಾಲ್ಕು ದಿನಗಳ ಬಳಿಕ ಈ ಕ್ರಮ ಕೈಗೊಂಡಿದ್ದಾರೆ.
ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ವಿನೋದ್ ಕುಮಾರ್ ಸಿಂಗ್ ಹೇಳಿದ್ದರೂ, ಬಲವಂತವಾಗಿ ಅವರಿಂದ ರಾಜೀನಾಮೆ ಪಡೆಯಲಾಯಿತು ಎಂದು ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ.

`ಘಟನೆಗೆ ಸಂಬಂಧಿಸಿದಂತೆ ತಮ್ಮದೇ ಆದ ವಿವರಣೆಯನ್ನು ನೀಡಲು ವಿನೋದ್ ಸಿಂಗ್ ಬಯಸಿದ್ದರು. ಆದರೆ ಅದಕ್ಕೆ ಅವಕಾಶ ನೀಡದ ಪಕ್ಷತಕ್ಷಣವೇ ರಾಜೀನಾಮೆ ನೀಡುವಂತೆ ಸೂಚಿಸಿತು~ ಎಂದು ಎಸ್‌ಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಪಕ್ಷದ ಈ ನಿರ್ಧಾರದಿಂದಾಗಿ ಸಿಂಗ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ತಾವು ಮುಗ್ಧ, ರಾಜಕೀಯ ವೈರಿಗಳು ಇದರಲ್ಲಿ ತಮ್ಮನ್ನು ಸಿಕ್ಕಿಸಿದ್ದಾರೆ ಎಂದು ಅವರು ಹೇಳಿದ್ದರು. ಪ್ರಕರಣದ ತನಿಖೆ ನಡೆಸಲು ಸರ್ಕಾರ ನೇಮಿಸಿರುವ ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿ ತನ್ನ ವರದಿ ನೀಡಿದ ಬಳಿಕ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ ಅಡಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯು ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ ಮಾಡುವಾಗ ಮುಖ್ಯ ಆರೋಗ್ಯಾಧಿಕಾರಿಯಾಗಿರುವ (ಸಿಎಂಒ) ಡಾ. ಎಸ್.ಪಿ ಸಿಂಗ್ ಅವರು ತಾವು ಶಿಫಾರಸು ಮಾಡಿರುವ ಅಭ್ಯರ್ಥಿಗಳನ್ನು ಪರಿಗಣಿಸಲು ನಿರಾಕರಿಸಿರುವುದಕ್ಕೆ ವಿನೋದ್ ಕುಮಾರ್ ಸಿಂಗ್ ಅಸಮಾಧಾನಗೊಂಡಿದ್ದರು.

ಕೋಪಗೊಂಡಿದ್ದ ಸಿಂಗ್ ಸೋಮವಾರ ಮಧ್ಯರಾತ್ರಿ ಗೊಂಡಾ ಪಟ್ಟಣದಲ್ಲಿದ್ದ ಮುಖ್ಯ ಆರೋಗ್ಯಾಧಿಕಾರಿ ಎಸ್. ಪಿ. ಸಿಂಗ್ ಇತರ ಇಬ್ಬರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಅಪಹರಿಸಿ, ಆರೋಗ್ಯ ಇಲಾಖೆ ಕಚೇರಿಗೆ ಕರೆದೊಯ್ದು ತಾವು ಶಿಫಾರಸು ಮಾಡಿರುವ ಅಭ್ಯರ್ಥಿಗಳನ್ನು ನೇಮಕ ಮಾಡಲು ಯತ್ನಿಸಿದ್ದರು.

ಘಟನೆಯಿಂದ ಭಯಭೀತರಾದ ಎಸ್.ಪಿ.ಸಿಂಗ್ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಅಧಿಕಾರಿಗಳಿಗೆ ಅಪಹರಣದ ಬಗ್ಗೆ ಮಾಹಿತಿ ನೀಡಲು ಯಶಸ್ವಿಯಾಗಿದ್ದರು. ತಕ್ಷಣ ಮಧ್ಯ ಪ್ರವೇಶಿಸಿದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಹಿರಿಯ ಅಧಿಕಾರಿಗಳು ಎಸ್.ಪಿ. ಸಿಂಗ್ ಅವರನ್ನು ಸುರಕ್ಷಿತವಾಗಿ ರಾಜಧಾನಿಗೆ ಕರೆದೊಯ್ದಿದ್ದರು.

ಸಿಂಗ್ ಬೆಂಬಲಿಗರಿಂದ ಪ್ರತಿಭಟನೆ: ಸಚಿವ ಸ್ಥಾನದಿಂದ ವಜಾ ಗೊಂಡಿರುವ ವಿನೋದ್ ಕುಮಾರ್ ಸಿಂಗ್ ಬೆಂಬಲಿಗರು ಇಲ್ಲಿನ ಮುಖ್ಯ ಆರೋಗ್ಯಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮುಖ್ಯ ಆರೋಗ್ಯಾಧಿಕಾರಿಗಳ ಕಚೇರಿಯ ಮುಂದೆ ಸೇರಿದ್ದ 100ರಿಂದ 125 ಬೆಂಬಲಿಗರು ಘೋಷಣೆಗಳನ್ನು ಕೂಗಿದ್ದಲ್ಲದೇ ರಂಪಾಟದಲ್ಲೂ ತೊಡಗಿದರು. ಪ್ರತಿಭಟನೆಯಲ್ಲಿ ನಿರತರಾಗಿದ್ದ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT