ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಗೆ ವಿವಿಧ ಸಂಘಟನೆಗಳ ಮನವಿ

Last Updated 21 ಸೆಪ್ಟೆಂಬರ್ 2013, 9:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸುವುದಲ್ಲದೇ ಕೆಲ ನಿಮಿಷಗಳ ಕಾಲ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಯಸಿದ್ದ ಕೆಲ ಸಂಘಸಂಸ್ಥೆಗಳ ಪ್ರತಿನಿಧಿಗಳಿಗೆ ಕೊಂಚ ನಿರಾಸೆಯಾಯಿತು. ಸಿಎಂ ತಡವಾಗಿ ಬಂದಿದ್ದಲ್ಲದೇ ಗಡಿಬಿಡಿಯಲ್ಲಿ ನಮ್ಮ ಮನವಿಪತ್ರಗಳನ್ನು ತೆಗೆದು­ಕೊಂಡು ಹಾಗೆಯೇ ಹೊರಟುಬಿಟ್ಟರು ಎಂದು ಕೆಲ ಪ್ರತಿನಿಧಿಗಳ ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಅವರನ್ನು ಭೇಟಿ­ಯಾಗಿ ಮನವಿ ಪತ್ರ ಸಲ್ಲಿಸಲು ಅವಕಾಶ  ಕಲ್ಪಿಸುವಂತೆ ಹಲವು ಸಂಘಸಂಸ್ಥೆಗಳ ಪ್ರತಿನಿಧಿಗಳು ಕೋರಿದ್ದ ಕಾರಣ ಜಿಲ್ಲಾಡಳಿತ ಮತ್ತು ಪೊಲೀಸರು, ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲೇ ವ್ಯವಸ್ಥೆ ಮಾಡಿದ್ದರು. ಅಲ್ಲಿಯೇ ಶಾಮಿಯಾನ ಹಾಕಿಸಿ, ಮನವಿ ಪತ್ರಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ಮನವಿ ಪತ್ರ ಸಲ್ಲಿಕೆ ಕಾರ್ಯಕ್ರಮವು ಕೆಲವೇ ನಿಮಿಷಗಳಲ್ಲಿ ಮುಗಿಯಿತು.

ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಮನವಿಪತ್ರ ಸಲ್ಲಿಸಿದರೆ, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸು­ವಂತೆ ರೈತ ಮುಖಂಡರು ಕೋರಿದರು. ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸೊಸೈಟಿ ಗುತ್ತಿಗೆ ನೌಕರರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಮಾನವಾದ ಹುದ್ದೆಗಳಲ್ಲಿ ವಿಲೀನಗೊಳಿಸುವಂತೆ ಗುತ್ತಿಗೆ ನೌಕರರು ಮನವಿ ಸಲ್ಲಿಸಿದರು.

ಜೀತ ಪದ್ಧತಿಯಿಂದ ಮುಕ್ತರಾದವರಿಗೆ ಪುನರ್ವಸತಿ ಮತ್ತು ಆರ್ಥಿಕ ನೆರವು ಕಲ್ಪಿಸುವಂತೆ ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯ ಸದಸ್ಯರು ಕೋರಿ­ಕೊಂಡರು. ಅಂಗವಿಕ­ಲರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ಅಂಗವಿಕಲರ ಸಂಘಟನೆಯ ಸದಸ್ಯರು ಮನವಿಪತ್ರ ನೀಡಿದರು.

ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಸಂಘಟನೆ ಹಾಗೂ ಎಬಿವಿಪಿ ಸದಸ್ಯರು ಚಿಕ್ಕಬಳ್ಳಾಪುರ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಿ­ಸುವಂತೆ ಮನವಿ ಮಾಡಿ­ಕೊಂಡರು. ಶಿಡ್ಲಘಟ್ಟ ತಾಲ್ಲೂಕಿನ ವ್ಯಾಪ್ತಿಯ ಸಾದಲಿಯನ್ನು ಪ್ರತ್ಯೇಕ ತಾಲ್ಲೂಕಾ­ಗಿಸಬೇಕು ಎಂದು ಸಾದಲಿ ತಾಲ್ಲೂಕು ಅನುಷ್ಠಾನ ಹೋರಾಟ ಸಮಿತಿ ಸದಸ್ಯರು ಮನವಿಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT