ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಯಾಗಿ ಬಂದ ಹುಬ್ಬಳ್ಳಿಯಾಂವ

Last Updated 16 ಜುಲೈ 2012, 9:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬರೊಬ್ಬರಿ 24 ವರ್ಷಗಳ ನಂತರ ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ಮತ್ತೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಿ ಬಂದ ಖುಷಿ ಭಾನುವಾರ ನಗರದಲ್ಲಿ ಮನೆಮಾಡಿತ್ತು. 1988ರಲ್ಲಿ ಎಸ್.ಆರ್. ಬೊಮ್ಮಾಯಿ ಈ ಉನ್ನತ ಹುದ್ದೆ ಅಲಂಕರಿಸಿ ತವರೂರಿಗೆ ಆಗಮಿಸಿದಾಗಲೂ ಇಲ್ಲಿಯ ಜನ ಸಂಭ್ರಮದಿಂದಲೇ ಬರಮಾಡಿಕೊಂಡಿದ್ದರು. ಮತ್ತೆ ಅಂತಹ ಸಂಭ್ರಮಕ್ಕೆ ಹುಬ್ಬಳ್ಳಿ ಮಂದಿ ಎರಡೂವರೆ ದಶಕ ಕಾಯಬೇಕಾಯಿತು.

ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ರಾಜ್ಯ ಸಂಪುಟದ ಸಚಿವರಾಗಿ ಇಂದಿನ ಮುಖ್ಯಮಂತ್ರಿ ಸ್ವಾಗತದ ಮುಂಚೂಣಿಯಲ್ಲಿದ್ದುದು ವಿಶೇಷವಾಗಿತ್ತು. ತೆರೆದ ವಾಹನ ಏರಿ ಅವರೂ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಇಷ್ಟೊಂದು ಸುಧೀರ್ಘ ಬಿಡುವಿನ ಬಳಿಕ `ಹುಬ್ಬಳ್ಳಿಯಾಂವ~ ಮುಖ್ಯಮಂತ್ರಿಯಾಗಿ ಆಗಮಿಸಿದರೂ ಜನ ಅಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಲಿಲ್ಲ ಎನ್ನುವ ಕೊರಗು ಕೆಲವರನ್ನು ಕಾಡಿತು. `ಟಿವಿಯಲ್ಲಿ ನೋಡಿದೆವು. ಸಚಿವ ಆನಂದ್ ಸಿಂಗ್ ಅವರನ್ನು ಸ್ವಾಗತಿಸಲು ಹೊಸಪೇಟೆಯಲ್ಲಿ ಇದಕ್ಕಿಂತ ಹೆಚ್ಚಿನ ಜನ ಸೇರಿದ್ದರು~ ಎನ್ನುವ ಮಾತುಗಳೂ ಕೇಳಿಬಂದವು.

ಬರದ ಹಿನ್ನೆಲೆಯಲ್ಲಿ ನಾವೇ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿಲ್ಲ ಎನ್ನುವ ಉತ್ತರ ಬಿಜೆಪಿ ಮುಖಂಡರಲ್ಲಿ ಸಿದ್ಧವೇ ಇತ್ತು. ಮಾರ್ಗದುದ್ದಕ್ಕೂ ನೆರೆದಿದ್ದ ವಿವಿಧ ಬಡಾವಣೆಗಳ ಜನ ಶೆಟ್ಟರ್‌ಗೆ ಶುಭಾಶಯ ಕೋರಿದರು. ಅಲ್ಲಲ್ಲಿ ಪಟಾಕಿ ಸರಗಳು ದೊಡ್ಡದಾಗಿ ಅಬ್ಬರಿಸಿ `ದೊರೆ~ ಆಗಮನವನ್ನು ಸಾರಿದವು. ಅಭಿಮಾನಿಗಳು ಪರಸ್ಪರ ಪೇಢೆ ಹಂಚಿಕೊಂಡು ಸಂಭ್ರಮಪಟ್ಟರು. ಹೊಸೂರು, ಚನ್ನಮ್ಮ ಮತ್ತು ಕೇಶ್ವಾಪುರ ವೃತ್ತಗಳಲ್ಲಿ ಆ ಸಂಭ್ರಮ ಇಮ್ಮಡಿಗೊಂಡಿತ್ತು.

ವಿಮಾನ ನಿಲ್ದಾಣದಲ್ಲಿ ಸಚಿವರು, ಸಂಸದರು, ಶಾಸಕರು, ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರ ದೊಡ್ಡ ಪಡೆಯೇ ನೆರೆದಿತ್ತು. ಪೊಲೀಸರು ಮುಖ್ಯಮಂತ್ರಿ ಆಗಮನದ ಹಾದಿಯಲ್ಲಿ ದೊಡ್ಡ ಕೋಟೆಯನ್ನೇ ಕಟ್ಟಿದ್ದರು. ಅದರೊಳಗೆ ಬಿಜೆಪಿ ಕಾರ್ಯಕರ್ತರು ನುಸುಳುವ ಯತ್ನ ನಡೆದೇ ಇತ್ತು.

ಭಾನುವಾರ ರಜಾ ದಿನವಾಗಿದ್ದರಿಂದ ರಸ್ತೆಗಳೆಲ್ಲ ನಿರಾಳವಾಗಿದ್ದವು. ಸಂಚಾರಕ್ಕೂ ಮೆರವಣಿಗೆಯಿಂದ ಅಷ್ಟೊಂದು ಅಡೆತಡೆಯಾಗಲಿಲ್ಲ. ಶೆಟ್ಟರ್ ಮನೆ ಹತ್ತಿರ ರಸ್ತೆಗಳ ಎರಡೂ ಬದಿಯಲ್ಲಿ ಸ್ವಾಗತಕ್ಕೆ ಸೊಂಡಿಲು ಎತ್ತಿದ ಆನೆಗಳ ಕಟೌಟ್‌ಗಳು ನಿಂತಿದ್ದವು. ಮಧುರಾ ಎಸ್ಟೇಟ್‌ನ ಇಕ್ಕಟ್ಟಾದ ರಸ್ತೆಗಳಲ್ಲಿ ನುಸುಳಲು ಮೆರವಣಿಗೆ ಹರಸಾಹಸ ಮಾಡಬೇಕಾಯಿತು. ಮುಖ್ಯಮಂತ್ರಿಗಳ ಮನೆ ಮುಂದಿನ ರಸ್ತೆಗೂ ಚಪ್ಪರ ಹಾಕಲಾಗಿತ್ತು. ಅಲ್ಲಿಯೇ ಸನ್ಮಾನಕ್ಕೂ ವ್ಯವಸ್ಥೆ ಮಾಡಲಾಗಿತ್ತು.

ಶೆಟ್ಟರ್ ಅವರ ಮನೆ ಪಕ್ಕದ ನಿವೇಶನದಲ್ಲಿ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಿರಾ, ಫಲಾವ್ ಹಾಗೂ ಮೊಸರನ್ನವನ್ನು ವಿತರಿಸಲಾಯಿತು. ಸಾವಿರಾರು ಮಂದಿ ಊಟಕ್ಕೆ ಧಾವಿಸಿದ್ದರಿಂದ ಹಲವು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಅಧಿಕಾರಿಗಳು, ಮುಖಂಡರು ಹಾಗೂ ಎಸ್ಕಾರ್ಟ್ ವಾಹನಗಳ ಕಿಕ್ಕಿರಿದು ತುಂಬಿದ್ದರಿಂದ ಮಧುರಾ ಎಸ್ಟೇಟ್‌ನ ಇಕ್ಕಟ್ಟಾದ ರಸ್ತೆಯಲ್ಲಿ ಓಡಾಡಲು ಸ್ಥಳಾವಕಾಶವೇ ಇಲ್ಲವಾಗಿತ್ತು. ಅಲ್ಲಲ್ಲಿ ಬ್ಯಾರಿಕೇಡ್‌ಹಾಕಿ ವಾಹನಗಳು ಬರದಂತೆ ತಡೆಗಟ್ಟಲಾಗಿತ್ತು.

ಓಡಾಡಲು ಆಗದ ಕಿರಿಕಿರಿ ನಡುವೆಯೂ ಬಡಾವಣೆ ನಿವಾಸಿಗಳು ತಮ್ಮ ನೆರೆ-ಹೊರೆಯ ಗೆಳೆಯ ಮುಖ್ಯಮಂತ್ರಿ ಆಗಿರುವ ಖುಷಿಯಲ್ಲಿದ್ದರು. ಚನ್ನಮ್ಮ ವೃತ್ತದಿಂದ ಶೆಟ್ಟರ್ ಮನೆವರೆಗೆ ರಸ್ತೆಯುದ್ದಕ್ಕೂ ಫ್ಲೆಕ್ಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದವು. `ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಜಯವಾಗಲಿ~ ಎಂಬ ಘೋಷಣೆಗಳು ಜೋರಾಗಿ ಮೊಳಗಿದವು.

ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ವೀರಭದ್ರಪ್ಪ ಹಾಲಹರವಿ, ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಮೇಯರ್ ಡಾ. ಪಾಂಡುರಂಗ ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಉಪ ಮೇಯರ್ ಭಾರತಿ ಪಾಟೀಲ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಅಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಶಾಸಕ ಅಶೋಕ ಕಾಟವೆ, ವೀರಣ್ಣ ಸವಡಿ, ದತ್ತಾ ಡೋರ್ಲೆ,  ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ದರ್ಪಣ ಜೈನ್, ಪೊಲೀಸ್ ಆಯುಕ್ತ ಡಾ.ಕೆ.ರಾಮಚಂದ್ರರಾವ್ ಮತ್ತಿತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT