ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಾಧಿಕಾರಿ ವಿರುದ್ಧ ಜಯರಾಮು ಆಕ್ರೋಶ

Last Updated 15 ಡಿಸೆಂಬರ್ 2012, 10:44 IST
ಅಕ್ಷರ ಗಾತ್ರ

ಕನಕಪುರ: ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಪಟ್ಟಣದ ವಿವಿಧೆಡೆ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರವುಗೊಳಿಸುವಂತೆ ಪುರಸಭೆ ಈ ಹಿಂದೆ ಕೈಗೊಂಡ ನಿರ್ಣಯವನ್ನು ಜಾರಿಗೊಳಿಸುವಲ್ಲಿ ಮುಖ್ಯಾಧಿಕಾರಿ ಮುಂದಾಗುತ್ತಿಲ್ಲ ಎಂದು ಕಾಂಗ್ರೆಸ್‌ನ ಸದಸ್ಯ ಜಯರಾಮು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಈ ವಿಷಯ ಪ್ರಸ್ತಾಪಿಸಿದ ಅವರು, `ಪುರಸಭೆಯ ಗಮನಕ್ಕೆ ತಾರದೆ ಪಟ್ಟಣದಲ್ಲಿ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಇವೆಲ್ಲಾ ಪುರಸಭೆ ಜಾಗದಲ್ಲಿಯೇ ಇವೆ. ಹಿಂದಿನ ಸಭೆಯಲ್ಲಿ ಇವುಗಳನ್ನು  ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಲು ನಿರ್ಣಯ ಕೈಗೊಳ್ಳಲಾಗಿದ್ದರೂ ಮುಖ್ಯಾಧಿಕಾರಿ ಈವರೆಗೂ ಏಕೆ ಕ್ರಮ ಕೈಗೊಂಡಿಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

ಇದಕ್ಕೆ ಧ್ವನಿಗೂಡಿಸಿದ ಇನ್ನೊಬ್ಬ ಸದಸ್ಯ ಕೃಷ್ಣಮೂರ್ತಿ, `ಸದಸ್ಯರ ಸಲಹೆ ಸೂಚನೆಗಳನ್ನು ಸಭೆ ದಾಖಲಿಸಿಕೊಂಡ ಮೇಲೆ ಆ ನಿರ್ಣಯಗಳನ್ನು ಜಾರಿಗೊಳಿಸಬೇಕು. ಆದರೆ ಪುರಸಭೆಯಲ್ಲಿ ಸದಸ್ಯರ ಮಾತಿಗೆ ಬೆಲೆ ಇಲ್ಲದಂತಾಗಿದೆ. ನಮಗೆ ಗೌರವ ಇಲ್ಲವೆಂದ ಮೇಲೆ ಎಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ' ಎಂದು ಎಚ್ಚರಿಸಿದರು.

ಆಗ ಮಧ್ಯ ಪ್ರವೇಶಿಸಿದ ಅಧ್ಯಕ್ಷ ಆರ್.ಕೃಷ್ಣಮೂರ್ತಿ, `ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ  ಶಾಸಕರು ಖಾಸಗಿ ಸಹಭಾಗಿತ್ವದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಇದು ಸಾರ್ವಜನಿಕರಿಗೆ ಅನುಕೂಲಕರ ಆಗಿರುವುದರಿಂದ ಈ ವಿಷಯದಲ್ಲಿ ರಾಜಕೀಯ ಬೆರೆಸುವುದು ಬೇಡ' ಎಂದರು.

ಈ ಮಾತಿಗೆ ತೃಪ್ತರಾಗದ ಸದಸ್ಯರು, `ಬಾರ್‌ಗಳ ಮುಂದೆ, ಎಲ್ಲೆಂದರಲ್ಲಿ ಕುಡಿಯುವ ಶುದ್ಧ ನೀರಿನ ಘಟಕ ನಿರ್ಮಿಸುವುದರಿಂದ ಸಾರ್ವಜನಿಕರಿಗೆ ಅನುಕೂಲ ಆಗುವುದಿಲ್ಲ. ಈಗ ನಿರ್ಮಿಸಿರುವ ಘಟಕಗಳನ್ನು ತೆರವುಗೊಳಿಸಿ ಎಲ್ಲೆಲ್ಲಿ ಘಟಕಗಳನ್ನು ಸ್ಥಾಪಿಸಬೇಕು ಎಂಬುದನ್ನು ನಿಶ್ಚಿಯಿಸಲು ಒಂದು ಸಮಿತಿಯನ್ನು ರಚಿಸಬೇಕು. ಈ ಸಮಿತಿ ಎಲ್ಲಾ ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸುವುದು ಸೂಕ್ತ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, `ಪಟ್ಟಣದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಲಿದೆ. ಅದಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು 4 ಕೋಟಿ ರೂ.ವೆಚ್ಚದಲ್ಲಿ ಪಟ್ಟಣದ 12 ಕಡೆ ನಿರ್ಮಿಸಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು' ಎಂದು ಕೋರಿದರು.

`ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಫಲಾನುಭವಿಗಳ ಪಟ್ಟಿಯನ್ನು ಆಶ್ರಯ ಸಮಿತಿಗೆ ಸಲ್ಲಿಸುವ ವಿಚಾರವನ್ನು ಮುಖ್ಯಾಧಿಕಾರಿಯು ಸಭೆಯ ಗಮನಕ್ಕೆ ತಂದಾಗ ಸದಸ್ಯರಾದ ಜಯರಾಮು, ಕೃಷ್ಣಮೂರ್ತಿ ಆಕ್ಷೇಪ ವ್ಯಕ್ತಪಡಿಸಿದರು. ನಿವೇಶನ ಹಂಚಿಕೆಗೆ ನೀಡಿರುವ ಅರ್ಜಿಗಳು ಮತ್ತು ಪರಿಷ್ಕರಣೆ ಮಾಡಿರುವುದು ಕ್ರಮಬದ್ಧವಾಗಿದೆಯೇ ಎಂಬುದನ್ನು ಸಾಬೀತು ಪಡಿಸಬೇಕು' ಎಂದು ಪಟ್ಟು ಹಿಡಿದರು.

ಇದಕ್ಕೆ ಉತ್ತರಿಸಿದ ಮಾಯಣ್ಣಗೌಡ, `ಎಲ್ಲವನ್ನೂ ಕ್ರಮ ಬದ್ಧವಾಗಿಯೇ ಮಾಡಲಾಗಿದೆ. ಈಗ ಸಭೆಯಲ್ಲಿ ಅದನ್ನು ಸಾಬೀತುಪಡಿಸಲು ಆಗುವುದಿಲ್ಲ. ಕಚೇರಿ ವೇಳೆಯಲ್ಲಿ ಬಂದರೆ ತೋರಿಸಲಾಗುವುದು' ಎಂದರು.

ಈ ಸ್ಪಷ್ಟನೆಗೆ ಒಪ್ಪದ ಸದಸ್ಯರು, `ನೀವು ಹೇಳುವಂತೆ ಅಷ್ಟು ಪ್ರಮಾಣದ ಅರ್ಜಿಗಳು ನಿಮ್ಮ ಬಳಿ ಇಲ್ಲ. ನಿಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ನೀವು ಈ ರೀತಿ ಸುಳ್ಳು ಹೇಳುತ್ತಿದ್ದೀರಿ' ಎಂದು ಕಿಡಿಕಾರಿದರು.

ಆಗ ಮಧ್ಯ ಪ್ರವೇಶಿಸಿದ ಅಧ್ಯಕ್ಷ ಆರ್.ಕೃಷ್ಣಮೂರ್ತಿ `ಎಲ್ಲವನ್ನೂ ಕಾನೂನು ಬದ್ಧವಾಗಿಯೇ ಮಾಡಲಾಗಿದೆ. ಎಲ್ಲಾ ಸದಸ್ಯರು ಇದಕ್ಕೆ ಒಪ್ಪಿಗೆ ನೀಡಬೇಕು' ಎಂದರು. ಈ ಹಂತದಲ್ಲಿ ಸದಸ್ಯರು ಮರುಮಾತಿಲ್ಲದೆ ಮೌನವಾಗಿ ಇದಕ್ಕೆ ತಮ್ಮ ಒಪ್ಪಿಗೆ ಸೂಚಿಸಿದರು.

ಪುರಸಭೆ ಉಪಾಧ್ಯಕ್ಷೆ ನಿರ್ಮಲಾ ಗುಂಡಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಮೋಯಿನ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

ಪುರಸಭೆ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT