ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ಅಧ್ಯಾಯ: ಪ್ರಭುದೇವ್

Last Updated 21 ಜನವರಿ 2012, 5:10 IST
ಅಕ್ಷರ ಗಾತ್ರ

ಬೆಂಗಳೂರು: `ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಶಾಲೆಯ ಸ್ಥಾಪನೆಯ ವಿಚಾರ ನನ್ನ ಪಾಲಿಗೆ ಮುಗಿದ ಅಧ್ಯಾಯ~ ಎಂದು ಕುಲಪತಿ ಡಾ.ಎನ್.ಪ್ರಭುದೇವ್ ಹೇಳಿದ್ದಾರೆ.

ಶುಕ್ರವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಅವರು, `ಸಿಂಡಿಕೇಟ್‌ನ ಒಂದು ಗುಂಪು ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಉದ್ದೇಶಿತ ಯೋಜನೆಯನ್ನು ಸಾಯಿಸಿದರೆ, ಮತ್ತೊಂದು ಗುಂಪು ಯೋಜನೆಗೆ ಮರು ಜೀವ ನೀಡಲು ಹೊರಟಿರುವುದು ತಮಾಷೆಯಾಗಿದೆ~ ಎಂದು ಹೇಳಿದ್ದಾರೆ.

`ಉದ್ದೇಶಿತ ಶಾಲೆಯು ಪ್ರಭುದೇವ್ ಅವರ ಪುನರ್‌ವಸತಿಗೆ ಮಾಡುತ್ತಿರುವ ಒಂದು ಕೇಂದ್ರ ಎಂದು ಟೀಕಿಸಿದ್ದ ಸಿಂಡಿಕೇಟ್‌ನ ಹಿರಿಯ ಸದಸ್ಯರೊಬ್ಬರು ಈಗ ಜಿಂದಾಲ್ ಅವರನ್ನು ಭೇಟಿಯಾಗಲು ಹೊರಟಿದ್ದಾರೆ. ಇದನ್ನು ನೋಡಿದರೆ ಇಲಿ ತಿಂದ ಬೆಕ್ಕೊಂದು ತೀರ್ಥಯಾತ್ರೆಗೆ ಹೊರಟಿತೆಂಬ ಆಂಗ್ಲ ಗಾದೆ ನನಗೆ ನೆನಪಾಗುತ್ತಿದೆ~ ಎಂದು ಅವರು ವ್ಯಂಗ್ಯವಾಡಿದ್ದಾರೆ.

`ಯೋಜನೆಗೆ ಮರು ಜೀವ ಕೊಡಲು ಹೊರಟಿರುವ ಸಿಂಡಿಕೇಟ್ ಮತ್ತು ಶೈಕ್ಷಣಿಕ ಪರಿಷತ್ತಿನ ಸದಸ್ಯರ ಪ್ರಯತ್ನಕ್ಕೆ ಶುಭವಾಗಲಿ. ಶಾಲೆಗೆ ಜಮೀನು ಕೊಡುವ ಬಗ್ಗೆ ಇವರ ನಿಲುವೇನೆಂಬುದು ನನಗೆ ತಿಳಿದಿಲ್ಲ. ಅದರ ಬಗ್ಗೆ ಜಿಂದಾಲ್ ಅವರು ಮೊದಲೇ ಸ್ಪಷ್ಟಪಡಿಸಿಕೊಳ್ಳಲಿ. ಹೊಸ ಕುಲಸಚಿವ (ಮೈಲಾರಪ್ಪ) ಸೇರಿದಂತೆ ತಮ್ಮನ್ನು ಭೇಟಿ ಮಾಡಲು ಬರುವ ಸಿಂಡಿಕೇಟ್ ಮತ್ತು ಪರಿಷತ್ತಿನ ಸದಸ್ಯರ ಪೈಕಿ ಒಬ್ಬ ಸಮರ್ಥ, ಬುದ್ಧಿವಂತ ಮತ್ತು ಆಸಕ್ತಿ ಹೊಂದಿರುವವರನ್ನು ಜಿಂದಾಲ್ ಅವರು ಗುರುತಿಸಬೇಕು. ಅಂತಹ ಸದಸ್ಯರ ಮೂಲಕ ಯೋಜನೆಗೆ ಸುಗಮವಾಗಿ ಪುನರ್ ಚಾಲನೆ ನೀಡಬೇಕು~ ಎಂದು ಅವರು ಹೇಳಿದ್ದಾರೆ.

`ಉದ್ದೇಶಿತ ಶಾಲೆ ಸ್ಥಾಪನೆಯ ನಿರ್ಧಾರವನ್ನು ನಾನು ಏಕಪಕ್ಷೀಯವಾಗಿ ತೆಗೆದುಕೊಂಡೆ ಎಂಬ ಆರೋಪಗಳು ಕೇಳಿ ಬಂದಿವೆ. ಕಳೆದ ಮೇ 3ರಂದು ನಡೆದ ಶೈಕ್ಷಣಿಕ ಪರಿಷತ್ತಿನ ಸಭೆಯಲ್ಲಿ ಅರ್ಥಶಾಸ್ತ್ರ ಶಾಲೆಯ ಪ್ರಸ್ತಾವವನ್ನು ಇಟ್ಟಿದ್ದೆ. ಆ ಸಭೆಯ ನಿರ್ಣಯದಂತೆ ಯೋಜನಾ ವರದಿ ಸಿದ್ಧಪಡಿಸಲು ಅಧ್ಯಯನ ಸಮಿತಿ ರಚಿಸಲಾಯಿತು.

ಅಧ್ಯಯನ ಸಮಿತಿ ರಚನೆಗೆ ಮೇ 16ರಂದು ನಡೆದ ಪರಿಷತ್ತು, ಜುಲೈ 7ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಗಿತ್ತು~ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT