ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ಕೆಜೆಪಿ ಸಮಾವೇಶ, ಮುಗಿಯದ ಸಮಸ್ಯೆ

ಎಲ್ಲೆಂದರಲ್ಲಿ ಕಸದ ರಾಶಿಯದ್ದೆ ಕಾರುಬಾರು
Last Updated 11 ಡಿಸೆಂಬರ್ 2012, 12:30 IST
ಅಕ್ಷರ ಗಾತ್ರ

ಹಾವೇರಿ: ಬೃಹತ್ ಪೆಂಡಾಲ್, ಅಬ್ಬರದ ಪ್ರಚಾರ, ಹರಿದು ಬಂದ ಜನಸಾಗರ ಹೀಗೆ ಹತ್ತು ಹಲವುಗಳಲ್ಲಿ ದಾಖಲೆ ನಿರ್ಮಿಸಿದ ಕೆಜೆಪಿ ಸಮಾವೇಶ, ಈಗ ಅದು ಮುಗಿದ ನಂತರ ಉಳಿದ ಕಸದ ರಾಶಿಯಲ್ಲಿಯೂ ದಾಖಲೆ ಸ್ಥಾಪಿಸಿದೆ.

ನಗರದ ಜಿ.ಎಚ್.ಕಾಲೇಜು ಮೈದಾನದ ಸುತ್ತ ಮುತ್ತ ಪ್ರದೇಶದಲ್ಲಿ ಭಾನುವಾರ ಎತ್ತ ನೋಡಿದರತ್ತ ಜನ ಸಮೂಹವೇ ಕಾಣುತ್ತಿದ್ದ ಸಮಾವೇಶ ನಡೆದ ಸ್ಥಳದಲ್ಲೆಗ ಕಸದ ರಾಶಿಯೇ ಬಿದ್ದಿದೆ.

ಸಮಾವೇಶಕ್ಕೆ ಬಂದ ಜನರಿಗೆ ನೀಡಲಾದ ಉಪಾಹಾರದ ತಟ್ಟೆಗಳು, ಅಡಕೆ ಹಾಳೆಯಲ್ಲಿ ತಯಾರಿಸಿದ ಊಟದ ತಟ್ಟೆ, ಕುಡಿಯುವ ನೀರು, ಮಜ್ಜಿಗೆ ಪ್ಯಾಕೇಟ್‌ಗಳು ಎಲ್ಲೆಂದರಲ್ಲಿ ಬಿದ್ದದ್ದರಿಂದ ಕಸದ ರಾಶಿಯಲ್ಲಿ ಮೈದಾನವಿದೆಯೋ ಅಥವಾ ಮೈದಾನಕ್ಕೆ ಕಸದ ಹೊದಿಕೆ ಹಾಕಲಾಗಿದೆಯೋ ಎಂಬುದು ಗೊತ್ತಾಗುತ್ತಿಲ್ಲ.

ಒಂದು ಮೂಲದ ಪ್ರಕಾರ ಸುಮಾರು ಮೂರು ಲಕ್ಷ ಜನರು ಊಟ, ಉಪಾಹಾರ ಮಾಡಿದ್ದು, ಅವರು ಬಳಕೆ ಮಾಡಿ ಎಸೆದ ಎಲ್ಲ ತಟ್ಟೆಗಳು ಕೊಳ್ಳಿ ಪಾಲಿಟೆಕ್ನಿಕ್, ಜಿ.ಎಚ್.ಕಾಲೇಜು ಮೈದಾನದ ಹಿಂದಿನ ಲೇಔಟ್‌ನಲ್ಲಿ ಎಲ್ಲೆಂದರಲ್ಲಿ ಎಸೆಯಲಾಗಿದ್ದರೆ, ಜಿ.ಎಚ್.ಕಾಲೇಜು ಮೈದಾನದಲ್ಲಿ ನೀರು ಹಾಗೂ ಮಜ್ಜಿಗೆ ಪ್ಯಾಕೆಟ್‌ಗಳ ರಾಶಿಯೇ ಬಿದ್ದಿದೆ. ಇದರಿಂದ ಆ ಮೈದಾನಗಳು ಚಿತ್ರಣವೇ ಬದಲಾಗಿದೆ.

ಮೂರು ಟನ್ ಕಸ: ಊಟದ ತಟ್ಟೆ, ನೀರಿನ ಪಾಕೇಟ್, ಮಜ್ಜಿಗೆ ಪಾಕೆಟ್, ಅಳಿದುಳಿದ ತರಕಾರಿ ಹಾಗೂ ಬಳಕೆ ಮಾಡಿ ಬೀಸಾಡಲಾದ ತ್ಯಾಜ್ಯ ಸೇರಿ ಸುಮಾರು ಮೂರ‌್ನಾಲ್ಕು ಟನ್ ಕಸ ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ.

ದುರ್ವಾಸನೆ: ಸಮಾವೇಶಕ್ಕಾಗಿ ನಗರದ ಮೂರು ಕಡೆಗಳಲ್ಲಿ ಊಟದ ವ್ಯವಸ್ಥೆ ಕಲ್ಪಸಿಲಾಗಿತ್ತು. ಅಲ್ಲಿ ಜನರು ಬೀಸಾಡಿದ ಮುಸುರೆ, ಉಳಿದ ಅಡುಗೆ ಹಾಗೂ ಅಡುಗೆಗೆ ಬಳಸಿ ಬಿಸಾಕಿದ ತರಕಾರಿ ಇನ್ನಿತರ ತ್ಯಾಜ್ಯಗಳನ್ನು ಅಲ್ಲಿಯೇ ಬಿಟ್ಟು ಹೋಗಲಾಗಿದೆ. ಆ ಕಸ, ಮುಸುರೆಯ ರಾಶಿಯಲ್ಲಿ ಹಂದಿ, ನಾಯಿಗಳು ಆಹಾರ ಅರಸಿ ಬಂದು ಚೆಲ್ಲಾಪಿಲ್ಲ ಮಾಡಿವೆ. ಆ ಕಸ, ಮುಸುರೆ ದುರ್ವಾಸನೆ ಬೀರಲಾರಂಭಿಸಿದ್ದು, ಆ ಪ್ರದೇಶದಲ್ಲಿ ಅಡ್ಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಕೊಳ್ಳಿ ಕಾಲೇಜು ವಿದ್ಯಾರ್ಥಿ ಮೋಹನ.

ಸಮಾವೇಶದ ಮೈದಾನದ ಸುತ್ತ ಮುತ್ತ ಬಿದ್ದಿರುವ ನೀರು, ಮಜ್ಜಿಗೆ ಪ್ಯಾಕೇಟ್‌ಗಳ ರಾಶಿಯೇ ಬಿದ್ದದ್ದರಿಂದ ಪ್ಲಾಸ್ಟಿಕ್ ಆಯುವ 10 ಕ್ಕೂ ಹೆಚ್ಚು ಜನರು ಸೋಮವಾರ ಬೆಳಿಗ್ಗೆಯಿಂದಲೇ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರು.

ಮಧ್ಯಾಹ್ನದ ಹೊತ್ತಿಗೆ ಒಬ್ಬೊಬ್ಬ ವ್ಯಕ್ತಿ ಸುಮಾರು ಎರಡ್ಮೂರು ಸಿಮೆಂಟ್ ಚೀಲದಷ್ಟು ಪ್ಲಾಸ್ಟಿಕ್ ಸಂಗ್ರಹಿಸಿದ್ದರು. ಇಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ನ್ನು ಆಯಲು ಕನಿಷ್ಟು ಮೂರು ದಿನ ಬೇಕಾಗುತ್ತದೆ. ಆದರೆ, ಅಷ್ಟರೊಳಗೆ ಕಸಗೂಡಿಸಿದರೆ ಅದರ ಜತೆ ಹೋಗಿಬಿಡುತ್ತದೆ ಎಂದು ಹೇಳುತ್ತಾನೆ ಪ್ಲಾಸ್ಟಿಕ್ ಸಂಗ್ರಹಿಸುತ್ತಿದ್ದ ಗಂಗಣ್ಣ.

ಬೇಗ ಸಾಗಿಸಿ: ಕಸದ ರಾಶಿ ಹೆಚ್ಚಿನ ಗಲೀಜು ಹಾಗೂ ದುರ್ವಾಸನೆ ಸೃಷ್ಟಿಸುವ ಮುನ್ನವೇ ಸಮಾವೇಶದ ಸಂಘಟಕರು ಇಲ್ಲವೇ ನಗರಸಭೆಯವರ ಕಸದ ರಾಶಿಯನ್ನು ಬೇರೆಡೆ ಸಾಗಿಸಿ ಕಾಲೇಜಿನ ವಾತಾವರಣ ಹಾಗೂ ಸೌಂದರ್ಯವನ್ನು ಕಾಪಾಡಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.

ನೀರವ ಮೌನ...
ಭಾನುವಾರ ಜಿ.ಎಚ್.ಕಾಲೇಜು ಮೈದಾನದಲ್ಲಿ ಧ್ವನಿವರ್ಧಕಗಳ ಅರ್ಭಟ, ಲಕ್ಷಾಂತರ ಜನರ ಮಾತಿನ ಕಲರವ ನಗರದಲ್ಲಿ ಗಜಿಬಿಜಿ ಸೃಷ್ಟಿಸಿತ್ತು. ಆದರೆ, ಸೋಮವಾರ ಆ ಮೈದಾನದಲ್ಲಿ ಜನರ ಓಡಾಟ ಹಾಗೂ ಧ್ವನಿವರ್ಧಕ ಶಬ್ದವಿರಲಿಲ್ಲ.

ಸಮಾವೇಶಕ್ಕೆ ಹಾಕಲಾದ ಪೆಂಡಾಲ ಬಿಚ್ಚುವ ಕಾರ್ಯದಲ್ಲಿ ಕಾರ್ಮಿಕರ ತೊಡಗಿದ್ದನ್ನು ಹೊರತುಪಡಿಸಿದರೆ, ಇಡೀ ಮೈದಾನದಲ್ಲಿ ನೀರವ ಮೌನ ಸೃಷ್ಟಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT