ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ರಜೆ: ಮಕ್ಕಳು ಶಾಲೆಗೆ

ತಳಿರು ತೋರಣಗಳಿಂದ ವಿದ್ಯಾದೇಗುಲಗಳ ಸಿಂಗಾರ
Last Updated 1 ಜೂನ್ 2013, 10:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದ ಎರಡು ತಿಂಗಳಿನಿಂದ ರಜಾ ಮಜಾದಲ್ಲಿದ್ದ ಪುಟ್ಟ ಮಕ್ಕಳಿಗೆಲ್ಲ ಶುಕ್ರವಾರ ಸಂಭ್ರಮದ ದಿನ. ತಳಿರು ತೋರಣಗಳಿಂದ ಅಲಂಕರಿಸಿದ್ದ ಪ್ರಾಥಮಿಕ ಶಾಲೆಯತ್ತ ಪುಟ್ಟ ಮಕ್ಕಳು ಸಮವಸ್ತ್ರ ಧರಿಸಿ ಬೆನ್ನಿಗೆ ಸ್ಕೂಲ್‌ಬ್ಯಾಗ್ ಹೇರಿಕೊಂಡು ಆಗಮಿಸಿದರು.

ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಭ್ರಮದೊಂದಿಗೆ ಶಿಕ್ಷಕರ ಸಂಭ್ರಮವೂ ಸೇರಿಕೊಂಡು ಹಬ್ಬದ ಸಂಭ್ರಮ ಮನೆ ಮಾಡಿತ್ತು.  ರಜೆಯ ಸಂಭ್ರಮದ ಮನಃಸ್ಥಿತಿಯಿಂದ ಒಮ್ಮೇಲೆ  ಶಾಲೆಯತ್ತ ಮರಳಿ ಬರಲು ಮನಸ್ಸಿಲ್ಲದೇ ಇದ್ದರೂ ಶಾಲೆಗೆ ಬಂದ ಬಳಿಕ ಉಳಿದ ಮಕ್ಕಳೊಂದಿಗೆ ಬೆರೆತು ಸಂಭ್ರಮಿಸಿದರು.

ಕೆಲವು ಶಾಲೆಗಳ ಎದುರು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.ರಂಗವಲ್ಲಿ ಹಾಕಿ ಇನ್ನಷ್ಟು ಅಂದ ಹೆಚ್ಚಿಸಲಾಗಿತ್ತು. ಇನ್ನು ಕೆಲವೆಡೆ ದೊಡ್ಡ ಬ್ಯಾನರ್ ಹಾಕಿ ಮಕ್ಕಳಿಗೆ ಸ್ವಾಗತಕೋರಲಾಯಿತು. ಶಾಲೆಯ ಸುತ್ತಮುತ್ತ ಓಣಿಗಳಲ್ಲಿ ಪ್ರಭಾತಪೇರಿ ನಡೆಸಲಾಯಿತು. ಬಳಿಕ ಸಿಹಿ ಹಂಚಿ ಮಕ್ಕಳು ನಲಿದರು.

ಬಹುತೇಕ ಎಲ್ಲ ಶಾಲೆಗಳಲ್ಲಿ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮೊದಲ ದಿನವಾದ ಕಾರಣ ಬಹುತೇಕ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇತ್ತು.

ಸರ್ಕಾರಿ ಪ್ರೌಢಶಾಲೆ ಹೊಸೂರು: ಶಾಲಾ ಪ್ರಾರಂಭೋತ್ಸವವನ್ನು ಸಾಕಷ್ಟು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಸುತ್ತಲಿನ ಓಣಿಗಳಲ್ಲಿ ಪ್ರಭಾತ ಪೇರಿ ನಡೆಸಿ ಶಿಕ್ಷಣದ ಬಗ್ಗೆ ಪಾಲಕರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಜಿ.ಸಿ.ಕೋಲಕಾರ ವಹಿಸಿದ್ದರು. ಮಕ್ಕಳನ್ನು ಶಾಲೆಗೆ ದಾಖಲಿಸಿ ನಿಯಮಿತವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕ ಆರ್.ಆರ್.ಪೂಜಾರ ಆಗಮಿಸಿದ್ದರು. ಶಾಲಾ ಆರಂಭೋತ್ಸವದ ಉದ್ದೇಶ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಇನ್ನೊಬ್ಬ ಅತಿಥಿ ಎಸ್‌ಡಿಎಂಸಿ ಅಧ್ಯಕ್ಷ ಶಶಿಧರ ಕುಂಬಾರ ವಿದ್ಯಾರ್ಥಿಗಳಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಹಾಗೆಯೇ ಹುಬ್ಬಳ್ಳಿಯ ರೌಂಡ್‌ಟೇಬಲ್‌ನವರು ದೇಣಿಗೆ ನೀಡಿದ ಊಟದ ತಟ್ಟೆಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಎ.ಬಿ.ನಾಡಗೀರ, ಎ.ಆರ್.ಇನಾಮತಿ, , ಎ.ಎಸ್.ಮಠ, ಎಸ್.ಎಂ.ದೊಡ್ಡಗಟ್ಟಿ, ವಿ.ಜಿ.ಗಲಭಿ, ವಿದ್ಯಾ ಬಿಳ್ಕೂರ, ಆರ್.ಎಂ.ಪಾಟೀಲ, ಟಿ.ಸಿ.ನಾಡಗೌಡ್ರ ಮತ್ತಿತರರು ಪಾಲ್ಗೊಂಡಿದ್ದರು.

ವಿವೇಕಾನಂದ ಶಿಕ್ಷಣ ಸಂಸ್ಥೆ,ಆಂಗ್ಲಮಾಧ್ಯಮ ಶಾಲೆ: ಅರವಿಂದ ನಗರದ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಾಲಾ ಆರಂಭೋತ್ಸವವನ್ನು ಉತ್ಸಾಹದಿಂದ ನಡೆಸಲಾಯಿತು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ರಾಜೇಶ ಕೊಳೇಕರ, ಸದಸ್ಯ ಬಸವರಾಜ ಹೂಲಿ, ಪ್ರಾಚಾರ್ಯ ವಿ.ಬಿ.ಪಾಳೇದವರ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ಹಾಜರಿದ್ದರು.

ಸ.ಹಿ.ಪ್ರಾ.ಶಾಲೆ ಅರಳೀಕಟ್ಟೆ: ಅರಳೀಕಟ್ಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಮುಖ್ಯ ಶಿಕ್ಷಕಿ ಎಸ್.ಸಿ.ಕರಡಿ ಉದ್ಘಾಟಿಸಿದರು. ಮಕ್ಕಳಿಗೆ ಸಿಹಿ ಹಂಚಲಾಯಿತು.  ಸಿಆರ್‌ಪಿ ಅನ್ನಪೂರ್ನ ಮುದಗಲ್, ಎಸ್‌ಡಿಎಂಸಿ ಉಪಾಧ್ಯಕ್ಷೆ ಅನ್ನಪೂರ್ಣ ಹುಂಬಿ, ಶಿಕ್ಷಕಿಯರಾದ ಚಂಪಾ ಶೆಟ್ಟಿ,ಪಿ.ಡಿ.ದೊಡ್ಡಮನಿ, ಎಂಡಿ ಮುಗುದ, ಎಂವಿ. ನಿಂಗಪ್ಪನವರ, ಕಿರಣಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಕ್ರೀಡಾ ವಸತಿ ಪ್ರೌಢಶಾಲೆ: ಹುಬ್ಬಳ್ಳಿಯ ಪಿಜೆಎಸ್ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಕ್ರೀಡಾ ವಸತಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು.

ಪ್ರಿಯದರ್ಶಿನಿ ಜನಸೇವಾಸಾಗರದ ಅಧ್ಯಕ್ಷ ಡಿ.ಡಿ.ಮೇಚನ್ನವರ ಅಧ್ಯಕ್ಷತೆ ವಹಿಸಿದ್ದರು. ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಆರ್.ನಾಯಕ್, ಪ್ರಾಂಶುಪಾಲ ಸರ್ ದೇಶಪಾಂಡೆ, ಮುಖ್ಯೋಪಾಧ್ಯಾಯ ಎಸ್.ಬಿ.ನಾಯಕ, ಬಿಎಸ್.ಬಿರಾದಾರ ಪಾಲ್ಗೊಂಡಿದ್ದರು. ಎನ್‌ಡಿ ನಾಯಕ ಕಾರ್ಯಕ್ರಮ ನಿರೂಪಿಸಿದರು, ಎಸ್.ವೈ.ಮಾದರ ವಂದಿಸಿದರು.

ಭೈರಿದೇವರಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ಶಾಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸುಧಾರಣಾ ಸಮಿತಿ ಸದಸ್ಯರು   ಸೇರಿ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿ ಮಾತನಾಡಿದರು. 
ಶಾಲಾಭಿವದ್ಧಿ ಸಮಿತಿಯ ಸದಸ್ಯ ಉಳವಪ್ಪ ಗುದ್ಲಿ, ಶಂಕರಪ್ಪ ಯಳವತ್ತಿ ಮತ್ತು ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲಾ ಪ್ರಧಾನ ಶಿಕ್ಷಕ ಓ.ಪಿ. ಬೆಣಗಿ ಅಧ್ಯಕ್ಷತೆ ವಹಿಸಿದ್ದರು.

ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಇಸ್ಕಾನ್ ನಿಂದ ಕಳುಹಿಸಲಾಗಿದ್ದ ವಿಶೇಷ ಖಾದ್ಯವನ್ನು ಮಕ್ಕಳಿಗೆ ಉಣಬಡಿಸಲಾಯಿತು. ಶಿಕ್ಷಕ ಸಾಹಿತಿ ಲಿಂಗರಾಜ ರಾಮಾಪೂರ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಎಮ್.ಮಡಿವಾಳರ ಸ್ವಾಗತಿಸಿದರು. ಐ.ವೈ..ಕಾಂಬ್ಳೆ ವಂದಿಸಿದರು.

ಧಾರವಾಡ ವರದಿ
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರಾರಂಭೋತ್ಸವ ಶುಕ್ರವಾರ ವಿವಿಧೆಡೆ ಸಂಭ್ರಮದಿಂದ ನಡೆಯಿತು. ಬೆಳಿಗ್ಗೆಯಿಂದಲೇ ಮಕ್ಕಳು ಉತ್ಸಾಹದಿಂದ ಹೊಸ ಬಟ್ಟೆ, ಪಾಟಿ, ಪೆನ್ಸಿಲ್ ಹಿಡಿದುಕೊಂಡು ಶಾಲೆಯತ್ತ ಮುಖ ಮಾಡಿದರು.

ಶಾಲಾ ಶಿಕ್ಷಕರು ಸಹ ಬೇಗನೇ ಬಸ್ಸುಗಳನ್ನು ಹಿಡಿದು ತಾವು ಕಾರ್ಯನಿರ್ವಹಿಸುವ ಗ್ರಾಮಗಳಿಗೆ ತೆರಳಿ ಪ್ರಾರಂಭೋತ್ಸವದ ಉಸ್ತುವಾರಿಯನ್ನು ನೋಡಿಕೊಂಡರು.

ವನಿತಾ ಪ್ರಾಥಮಿಕ ಶಾಲೆ: ಧಾರವಾಡದ ವನಿತಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹಾಜರಾದ ಮಕ್ಕಳಿಗೆ ಆಡಳಿತ ಮಂಡಳಿಯ ನಿರ್ದೇಶಕ ರವಿ ಯಲಿಗಾರ ಪಠ್ಯ ಪರಿಕರಗಳನ್ನು ವಿತರಿಸಿ ಮಾತನಾಡಿದರು. ಆಡಳಿತ ಮಂಡಳಿಯ ನಿರ್ದೇಶಕ ಅಶೋಕ ನಾಯ್ಕ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಣ್ಣಪ್ಪನವರ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೈ.ಬಿ.ಗುಂಡಗೋವಿ ಹಾಗೂ ಶಾಲೆಯ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT