ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ದಸರಾ ಕಾಮಗಾರಿ: ತಪ್ಪದ ಸಮಸ್ಯೆ

Last Updated 16 ಅಕ್ಟೋಬರ್ 2012, 5:20 IST
ಅಕ್ಷರ ಗಾತ್ರ

ಮೈಸೂರು: ಅರಮನೆಯ ಸುತ್ತಲಿನ ಚರಂಡಿಯಲ್ಲಿ ತುಂಬಿಕೊಂಡ ಮಣ್ಣು. ಕೆಸರು ಗದ್ದೆಯಾದ ಪಾದಚಾರಿ ಮಾರ್ಗ. ಜಯಮಾರ್ತಾಂಡ ದ್ವಾರದ ಎದುರೇ ದುರಸ್ತಿಯಾಗದ ರಸ್ತೆ. ಎರಡು ವರ್ಷ ಕಳೆದರೂ ಮುಗಿಯದ ರಾಜಪಥ!

ಇದು ದಸರೆಗೆ ಸಿದ್ಧವಾಗಿ ನಿಂತಿರುವ ಮೈಸೂರು ಅಂಬಾವಿಲಾಸ ಅರಮನೆಯ ಸುತ್ತಲಿನ ಅವ್ಯವಸ್ಥೆ. ಜೆ ನರ್ಮ್ ಹಾಗೂ ಮುಖ್ಯಮಂತ್ರಿಗಳ ರೂ.100 ಕೋಟಿ ಅನುದಾನದಲ್ಲಿ ನಡೆದ ಕಾಮಗಾರಿಗಳನ್ನು ಸಂಸದ ಎಚ್.ವಿಶ್ವನಾಥ್ ಸೋಮವಾರ ಪರಿಶೀಲನೆ ನಡೆಸಿದರು.

ಮಹಾನಗರ ಪಾಲಿಕೆ ಮುಂಭಾಗದಲ್ಲೇ ಇರುವ ಅರಮನೆಯ ಪಶ್ಚಿಮ ದ್ವಾರದ ಬಳಿ ಸ್ಥಗಿತ ಗೊಂಡಿರುವ ಕಾಮಗಾರಿಯನ್ನು ಸಂಸದರು ವೀಕ್ಷಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಚರಂಡಿ, ಟೆಲಿಫೋನ್, ವಿದ್ಯುತ್ ಕೇಬಲ್, ಮಳೆ ನೀರು ಹಾಗೂ ಆರ್ಕಿಟೆಕ್ಟ್ ಬ್ಯಾರಿಕೇಡ್‌ಗಳನ್ನು ಹಾಕುವ ಉದ್ದೇಶದಿಂದ ಆರಂಭವಾದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹೀಗಾಗಿ ಚರಂಡಿಗೆ ಮಣ್ಣು ತುಂಬಿ ಪಾದಚಾರಿ ಮಾರ್ಗವನ್ನಾಗಿ ಮಾಡಲಾಗಿದೆ. ಆದರೆ ಅಲ್ಲಲ್ಲಿ ನೀರು ನಿಂತು ಅದು ಕೆಸರು ಗದ್ದೆಯಂತೆ ಕಾಣುತ್ತಿದೆ. ಪಕ್ಕದಲ್ಲೇ ಇರುವ ಕಬ್ಬಿಣದ ಗ್ರಿಲ್‌ಗಳು ಅಪಾಯಕ್ಕೆ ಆಹ್ವಾನ  ನೀಡುತ್ತಿವೆ.

ಒನ್ ಮ್ಯಾನ್ ಷೋ!
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ ನಾಡಿದ ವಿಶ್ವನಾಥ್, ಮಂಗಳವಾರ ದಸರಾ ಆರಂಭವಾಗುತ್ತಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೇರಿದಂತೆ ಅನೇಕ ಸಚಿವರು ಆಗಮಿಸಲಿದ್ದಾರೆ. ಆದರೆ ಅರಮನೆ ಸುತ್ತಲಿನ ಕಾಮಗಾರಿಯೇ ಮುಕ್ತಾಯ ವಾಗಿಲ್ಲ. ದಸರಾ ವಿಶೇಷ ಅನುದಾನ, ಜೆ ನರ್ಮ್ ಹಣ ಹಾಗೂ ಮುಖ್ಯಮಂತ್ರಿಗಳ ರೂ.100 ಅನುದಾನ ವ್ಯಯವಾಗಿದೆಯೇ ಹೊರತು ಅಭಿವೃದ್ಧಿ ಕಂಡಿಲ್ಲ ಎಂದು ದೂರಿದರು.

ಅರಮನೆಯ ಸುತ್ತಲಿನ 1.6 ಕಿ.ಮೀ ಕಾಮಗಾರಿ ಗಾಗಿ ಜೆ ನರ್ಮ್ ಯೋಜನೆ ಅಡಿ ರೂ.16 ಕೋಟಿ ವೆಚ್ಚ ಮಾಡಲಾಗಿದೆ. ಎರಡು ವರ್ಷಗಳಿಂದ ನಡೆಯುತ್ತಿರುವ ರಾಜಪಥದ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ.

ಹಾರ್ಡಿಂಜ್ ವೃತ್ತದಿಂದ ಆಯುರ್ವೇದ ಕಾಲೇಜು ವೃತ್ತದ ವರೆಗಿನ ಕಾಮಗಾರಿಗಾಗಿ ಮುಖ್ಯಮಂತ್ರಿಗಳ ಅನುದಾನದಲ್ಲಿ ರೂ. 18.5 ಕೋಟಿ ಬಿಡುಗಡೆಯಾಗಿದೆ. ಆದರೆ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ ಎಂದರು.

ಮಕ್ಕಳ ದಸರಾ, ಮಹಿಳಾ ದಸರಾ, ರೈತ ದಸರಾ ಅಂತ ಸಚಿವರು ಹಲವು ದಸರಾಗಳ ಭಜನೆ ಮಾಡುತ್ತಿದ್ದಾರೆ. ಇದರಿಂದ ಜಂಬೂಸವಾರಿ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳು ಸೊರಗುತ್ತಿವೆ. ಶೋಭಾ ಕರಂದ್ಲಾಜೆ ಅವರು ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದರು. ಎಸ್.ಎ.ರಾಮದಾಸ್ ಅವರು ಅಂತಹ ಪ್ರಯತ್ನ ಮಾಡುತ್ತಿಲ್ಲ. ಇದು ಒನ್ ಮ್ಯಾನ್ ಷೋ ಎಂದು ಹರಿಹಾಯ್ದರು.

ಕುಡಿಯಲು ನೀರು ಕೊಡಿ

ವಿಜಯನಗರದಲ್ಲಿರುವ ಜಲಸಂಗ್ರಹಾಗಾರದ ಕುರಿತು ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು, ಖಾಸಗಿ ಬಡಾವಣೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವುದನ್ನು ವಿರೋಧಿಸಿದರು. ಕುವೆಂಪುನಗರ, ಸರಸ್ವತಿಪುರಂ, ಚಾಮರಾಜಪುರಂ ಸೇರಿದಂತೆ ಹಳೆ ಮೈಸೂರಿನ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಬದಲು ನೂತನ ಖಾಸಗಿ ಬಡಾವಣೆಗೆ ನೀರು ಪೂರೈಸಲು ಸಿದ್ಧತೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ವಾಣಿ ವಿಲಾಸ ನೀರು ಸರಬರಾಜು ವಿಭಾಗದ ಮುಖ್ಯ ಎಂಜಿನಿಯರ್ ಸುಬ್ರಹ್ಮಣ್ಯ ಮಾತನಾಡಿ, 30 ವರ್ಷದ ಮುಂದಾಲೋಚನೆ ಇಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ. ಎರಡು ಸಂಗ್ರಹಾಗಾರದಲ್ಲಿ 13 ಎಂಎಲ್‌ಡಿ ನೀರು ಸಂಗ್ರಹಿಸಬಹುದಾಗಿದ್ದು, ನಾಲ್ಕು ಲಕ್ಷ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿದೆ. ದಟ್ಟಗಳ್ಳಿ, ಜೆ.ಪಿ.ನಗರ, ವಿವೇಕಾನಂದ ನಗರ, ಶ್ರೀರಾಂಪುರ, ಕುವೆಂಪು ನಗರ ಸೇರಿದಂತೆ ಅನೇಕ ಭಾಗಗಳಿಗೆ ನೀರು ಪೂರೈಸುವ ಸಿದ್ಧತೆಗಳು ಪೂರ್ಣಗೊಂಡಿವೆ ಎಂದರು.

ಶಾಸಕರಾದ ಎಂ.ಸತ್ಯನಾರಾಯಣ, ತನ್ವೀರ್ ಸೇಟ್, ಮೇಯರ್ ಎಂ.ಸಿ.ರಾಜೇಶ್ವರಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ನಗರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಎ.ವೆಂಕಟೇಶ್, ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT