ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯಿತು ಮುಬಾರಕ್ ಯುಗ

Last Updated 11 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕೈರೊ (ಐಎಎನ್‌ಎಸ್, ಡಿಪಿಎ, ಪಿಟಿಐ): ಆರು ಬಾರಿ ತಮ್ಮ ಹತ್ಯಾ ಯತ್ನದಿಂದ ಪಾರಾಗಿದ್ದ ಈಜಿಪ್ಟ್‌ನ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರು ಶುಕ್ರವಾರ ಪದತ್ಯಾಗ ಮಾಡುವ ಮೂಲಕ 30 ವರ್ಷಗಳ ಅವರ ಸುದೀರ್ಘ ಆಡಳಿತ ಕೊನೆಗೊಂಡಿದೆ. ಈ ಮೂಲಕ ದೇಶದ ಮಟ್ಟಿಗೆ ಮುಬಾರಕ್ ಯುಗವೂ ಕೊನೆಗೊಂಡಂತಾಗಿದೆ.
ಅನ್ವರ್ ಅಲ್-ಸಾದತ್ ಹತ್ಯೆಯ ನಂತರ 1981ರ ಅಕ್ಟೋಬರ್ 14ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ  ಮುಬಾರಕ್ ಅವರು ಮುಂದೆ ನಿರಂಕುಶ ಅಧಿಕಾರ ಚಲಾಯಿಸಿದರು.

ಈ ಮೊದಲು ಎದ್ದಿದ್ದ ಅಸಮಾಧಾನಗಳನ್ನೆಲ್ಲ ಜಾಣತನದಿಂದ ನಿಭಾಯಿಸಿದ್ದ ಅವರಿಗೆ ಕಳೆದ ಜನವರಿ 25ರಿಂದ ಆರಂಭವಾದ ಲಕ್ಷಾಂತರ ಜನರ ಪ್ರತಿಭಟನೆಯ ಕಾವನ್ನು ದಮನಿಸುವುದು ಸಾಧ್ಯವಾಗಲಿಲ್ಲ.

ಸುಮಾರು 4 ಸಾವಿರ ವರ್ಷಗಳಷ್ಟು ಇತಿಹಾಸ ಇರುವ ದೇಶದಲ್ಲಿ ಪಿರಾಮಿಡ್‌ಗಳೇ ಸಾಕ್ಷಿಗಳು. ಮೂರು ದಶಕಗಳ ಕಾಲ ಅಧಿಕಾರ ನಡೆಸಿದ ಅಧ್ಯಕ್ಷರು ಪದತ್ಯಾಗ ಮಾಡಲೇಬೇಕು ಎಂಬ ಜನರ ಪ್ರತಿಭಟನೆಯ ಮುಂದೆ ಶಕ್ತಿಶಾಲಿ ಸೇನೆ ಸಹ ಮೂಕವಾಗಿತ್ತು. ಆದರೂ ಹಿಂಸಾಚಾರದಲ್ಲಿ 150ಕ್ಕೂಅಧಿಕ ಮಂದಿ ಸತ್ತಿದ್ದರು. ಸೆಪ್ಟೆಂಬರ್ ತನಕ ಅಧಿಕಾರ ತ್ಯಾಗ ಇಲ್ಲ ಎಂದು ಹೇಳುತ್ತಲೇ ಬಂದ ಮುಬಾರಕ್ ಅವರಿಗೆ ಜನರು ಕೈಗೊಂಡ ‘ಮಾಡು ಇಲ್ಲವೇ ಮಡಿ’ ಹೋರಾಟವನ್ನು ಎದುರಿಸುವ ಸಾಮರ್ಥ್ಯ ಇರಲಿಲ್ಲ. 82 ವರ್ಷದ ಶಿಸ್ತಿನ ಮನುಷ್ಯ ಕೊನೆಗೂ ಜನರ ಪ್ರತಿಭಟನೆಗೆ ತಲೆ ಬಾಗಿದ್ದಾರೆ.

ಮುಬಾರಕ್ ಮಾತ್ರವಷ್ಟೇ ದೀರ್ಘ ಅವಧಿಗೆ ಅಧಿಕಾರ ನಡೆಸಿದವರಲ್ಲ. ಜಗತ್ತಿನಲ್ಲಿ ಅದೆಷ್ಟೋ ಕಡೆಗಳಲ್ಲಿ ಇಂತಹ ಸನ್ನಿವೇಶ ನಿರ್ಮಾಣವಾಗಿತ್ತು. ರೊಮಾನಿಯಾದ ನಿಕೊಲಾಯ್ ಸಿಯಾಸೆಸು ಅವರು 1965ರಲ್ಲಿ ಅಧಿಕಾರಕ್ಕೆ ಏರಿದವರು 1989ರ ತನಕವೂ ಕೆಳಗೆ ಇಳಿದಿರಲೇ ಇಲ್ಲ.

ಟ್ಯುನೇಶಿಯಾದಲ್ಲಿ 23 ವರ್ಷಗ ಕಾಲ ಅಧಿಕಾರ ನಡೆಸಿದ್ದ ಅಧ್ಯಕ್ಷ ಝಿನೆ ಎಲ್-ಅಬಿಸೈನ್ ಬೆನ್ ಅಲಿ ಕಳೆದ ಜನವರಿ 14ರಂದು ಜನರ ಪ್ರತಿಭಟನೆಗೆ ತಲೆಬಾಗಿ ಅಧಿಕಾರ ತೊರೆದಿದ್ದರು. ಇದರ ಪ್ರತಿಧ್ವನಿ ಎಂಬಂತೆ ಈಜಿಪ್ಟ್‌ನಲ್ಲಿ ಕೇವಲ ಹತ್ತೇ ದಿನಗಳಲ್ಲಿ ಜನರ ಪ್ರತಿಭಟನೆ ಆರಂಭವಾಗಿತ್ತು.

ಶಿಸ್ತಿನ ಸಿಪಾಯಿ: ಮುಬಾರಕ್ ಮೂಲತಃ ಸೈನಿಕ. ಶಿಸ್ತು ಅವರ ಜೀವನದ ಉಸಿರಾಗಿತ್ತು. ಕೈರೊದ ಮಿಲಿಟರಿ ಅಕಾಡೆಮಿಯಲ್ಲಿ ಪದವಿ ಗಳಿಸಿದ ಅವರು  ಬಿಲ್‌ಬೇಸ್ ಏರ್ ಅಕಾಡೆಮಿಯಲ್ಲಿ ಯುದ್ಧ ವಿಮಾನ ಹಾರಾಟದ ತರಬೇತಿ ಪಡೆದಿದ್ದರು. ಸೋವಿಯತ್ ಗಣರಾಜ್ಯದಲ್ಲಿ ಉನ್ನತ ಯುದ್ಧವಿಮಾನ ತರಬೇತಿ ಪಡೆದಿದ್ದರು. 1972ರಲ್ಲಿ ಅಂದಿನ ಅಧ್ಯಕ್ಷ ಅನ್ವರ್ ಅಲ್-ಸಾದತ್ ಅವರು ಮುಬಾರಕ್ ಅವರನ್ನು ತಮ್ಮ ಮುಖ್ಯ ಕಮಾಂಡರ್ ಆಗಿ ನೇಮಿಸಿಕೊಂಡರು. ಬಳಿಕ ಅವರಿಗೆ ಏರ್ ಮಾರ್ಷಲ್ ಆಗಿ ಬಡ್ತಿ ನೀಡಲಾಯಿತು. 1975ರಲ್ಲಿ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಇತರ ಅರಬ್ ರಾಷ್ಟ್ರಗಳ ಜತೆಗೆ ಸಂಬಂಧ ಸುಧಾರಣೆಯಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು.

1990-91ರಲ್ಲಿ ಕುವೈತ್ ಮೇಲೆ ಇರಾಕ್ ಆಕ್ರಮಣ ಮಾಡಿದಾಗ ಮುಬಾರಕ್ ಅವರು ಅಮೆರಿಕಕ್ಕೆ ಬೆಂಬಲ ನೀಡಿದ್ದರು. 1999ರಲ್ಲಿ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದ ಅವರು, 2005ರಲ್ಲಿ ಬಹು ಮಂದಿ ಅಭ್ಯರ್ಥಿಗಳು ಇದ್ದಾಗ್ಯೂ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು.

ಮಹೋನ್ನತ ದಿನ-ಎಲ್‌ಬರದಾಯಿ: ‘ಇದು ನನ್ನ ಜೀವನದ ಮಹೋನ್ನತ ದಿನ. ದಶಕಗಳ ಕಾಲದ ತುಳಿತದಿಂದ ದೇಶ ಪಾರಾಗಿದೆ. ಯುವಕರು ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಅವರ ಕೆಚ್ಚೆದೆಯನ್ನು ಕಂಡು ನನಗೆ ಮಾತೇ ಬಾರದಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಮಹಮ್ಮದ್ ಎಲ್‌ಬರದಾಯಿ ಸಂಭ್ರಮದಿಂದ ಎಪಿ ವಾರ್ತಾಸಂಸ್ಥೆಗೆ ತಿಳಿಸಿದರು.

ದೇಶದ ವಿರೋಧ ಪಕ್ಷಗಳ ನಾಯಕರಲ್ಲೊಬ್ಬರಾದ ಮೊಹಮ್ಮದ್ ಎಲ್‌ಬರದಾಯಿ ಅವರು ಈಜಿಪ್ಟ್‌ನಲ್ಲಿ ಪರಿಸ್ಥಿತಿ ತೀವ್ರವಾಗಿ ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದರು ಮತ್ತು ಸೇನೆಯು ಜನರತ್ತ ಒಲವು ತೋರಿಸಿ ಅವರ ಜೀವ, ಆಸ್ತಿಪಾಸ್ತಿ ರಕ್ಷಿಸಬೇಕು ಎಂದು ಒತ್ತಾಯಿಸಿದ್ದರು.

ಮುಬಾರಕ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಬದಲು ತಮ್ಮ ಅಧಿಕಾರವನ್ನು ಉಪಾಧ್ಯಕ್ಷ ಒಮರ್ ಸುಲೇಮಾನ್ ಅವರಿಗೆ ಹಸ್ತಾಂತರಿಸಿದ್ದಾರೆ.
ಈ ಇಬ್ಬರನ್ನೂ ದೇಶದ ಜನತೆ ಒಪ್ಪಿಕೊಳ್ಳಲು ಸಿದ್ಧರಿಲ್ಲ.  ಅಧ್ಯಕ್ಷರ ಈ ಮೊಂಡುತನದಿಂದ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇದೆ ಎಂದು ಅವರು ‘ಸಿಎನ್‌ಎನ್’ಗೆ ತಿಳಿಸಿದ್ದರು.

ಭಾರಿ ಭ್ರಷ್ಟಾಚಾರ: ಈಜಿಪ್ಟ್‌ನಲ್ಲಿ ಭಾರಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಪ್ರತಿ ವರ್ಷ ಇದರಿಂದ ದೇಶಕ್ಕೆ 6 ಶತಕೋಟಿ ಡಾಲರ್‌ಗಳಷ್ಟು ನಷ್ಟ ಉಂಟಾಗುತ್ತಿದೆ ಎಂಬ ವಿಚಾರ ಜಾಗತಿಕ ಹಣಕಾಸು ಸಮಗ್ರತೆ (ಜಿಎಫ್‌ಐ) ವರದಿಯಿಂದ ಗೊತ್ತಾಗಿದೆ. 2000-2008ರ ಅವಧಿಯಲ್ಲಿ ಭ್ರಷ್ಟಾಚಾರದಿಂದ ದೇಶಕ್ಕೆ 57.2 ಶತಕೋಟಿ ಡಾಲರ್‌ಗಳ ನಷ್ಟವಾಗಿದೆ ಎಂದು ಅದು ಹೇಳಿದೆ.

ಸದ್ದಾಂ ಪದಚ್ಯುತಿಗೊಳಿಸದಂತೆ ಎಚ್ಚರಿಸಿದ್ದ ಮುಬಾರಕ್ !

ಲಂಡನ್ (ಐಎಎನ್‌ಎಸ್): ಇರಾಕ್ ಅಧ್ಯಕ್ಷರಾಗಿದ್ದ ಸದ್ದಾಂ ಹುಸೇನ್ ಅವರನ್ನು ಪದಚ್ಯುತಗೊಳಿಸದಂತೆ ಹೋಸ್ನಿ ಮುಬಾರಕ್ ಅವರು ಅಮೆರಿಕದ ಉಪಾಧ್ಯಕ್ಷರಾಗಿದ್ದ ಡಿಕ್ ಚೆನೆ ಅವರಿಗೆ ಹಲವು ಬಾರಿ ಸಲಹೆ ನೀಡಿದ್ದರು, ಈ ಸಲಹೆಯನ್ನು ಕಡೆಗಣಿಸಿ ಇರಾಕ್ ಮೇಲೆ ಆಕ್ರಮಣ ಮಾಡಿದರೆ ಇರಾನ್‌ನಿಂದ ಬೆದರಿಕೆ ಎದುರಿಸುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದ್ದರು ಎಂಬ ಮಾಹಿತಿಯನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.

2008ರ ಡಿಸೆಂಬರ್‌ನಲ್ಲಿ ಕೈರೊದಲ್ಲಿ ನಡೆದ ಉಪಾಹಾರ ಕಾಲದ ಮಾತುಕತೆಯಲ್ಲಿ ಮುಬಾರಕ್ ಅವರು ಅಮೆರಿಕದ ಕಾಂಗ್ರೆಸ್ ಸದಸ್ಯ ಸೆನ್ ಬೈರನ್ ಡಾರ್ಗನ್ ಅವರೊಂದಿಗೆ ಮಾತನಾಡುವಾಗ ಈ ವಿಷಯ ತಿಳಿಸಿದ್ದರು ಎಂದು ಗೋಪ್ಯ ರಾಜತಾಂತ್ರಿಕ ಸಂದೇಶಗಳನ್ನು ಆಧರಿಸಿ ವಿಕಿಲೀಕ್ಸ್ ಹೇಳಿದೆ.

‘ಜಾರ್ಜ್ ಬುಷ್ ಸೀನಿಯರ್ ನನ್ನ ಮಾತನ್ನು ಆಲಿಸುತ್ತಿದ್ದರು, ಆದರೆ ಜಾರ್ಜ್ ಬುಷ್ ಜ್ಯೂನಿಯರ್ ನನ್ನ ಮಾತನ್ನು ಕಡೆಗಣಿಸಿದ್ದರು’ ಎಂದು ಮುಬಾರಕ್ ಹೇಳಿದ್ದರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT