ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಲ ನೆತ್ತಿಯ ಮೀರಿ ಹಾರು ಧ್ವಜವೇ...

Last Updated 26 ಜನವರಿ 2012, 19:45 IST
ಅಕ್ಷರ ಗಾತ್ರ

ಬೆಂಗಳೂರು:  `ಹಾರು ಧ್ವಜವೇ ಮೇಲೆ ..ಮೇಲೆ ಮೇಲೆ ಮೇಲೆ, ಮುಗಿಲ ನೆತ್ತಿಯ ಮೀರಿ ಮೇಲೆ, ಹಾರು ಧ್ವಜವೇ...~ ದೇಶಪ್ರೇಮ ಮತ್ತು ಸ್ವಾಭಿಮಾನವನ್ನು ಉಕ್ಕಿಸುವ ಗೀತೆಯೊಂದನ್ನು ಇಂದೂ ವಿಶ್ವನಾಥ ಮತ್ತು ಸಂಗಡಿಗರು ಹಾಡುತ್ತಿದ್ದರೆ, ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರೇಕ್ಷಕರಿಂದ ಜೋರಾದ ಚಪ್ಪಾಳೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಗಣರಾಜ್ಯೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿದರು ಕಲಾ ಪ್ರದರ್ಶನದ ಮೂಲಕ ಕಲಾರಸಿಕರ ಕಣ್ಮನ ತಣಿಸಿದರು.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಪತ್ನಿ ಡಾಟಿ ಮತ್ತು ಕುಟುಂಬ ವರ್ಗದವರು ಸಾಂಸ್ಕೃತಿಕ ಕಾರ್ಯ ಕ್ರಮವನ್ನು ವೀಕ್ಷಿಸಿದರು.

 ಉಸ್ತಾದ್ ಹಫೀಜ್ ಖಾನ್ ಮತ್ತು ಉಸ್ತಾದ್ ಚೋಟೆ ರಹಮತ್ ಖಾನ್ ಅವರ ಸಿತಾರ್ ವಾದನಕ್ಕೆ ಮಿಹಿರ್ ಕಲ್ಯಾಣಪುರ ಅವರ ತಬಲ ವಾದನದ ಸಾಥ್ ಸಂಗೀತ ರಸಿಕರನ್ನು ರಂಜಿಸಿತು.

`ಸೂರ್ಯ ಕಲಾವಿದರು~ ಸಂಸ್ಥೆಯ ಕಲಾವಿದರು ದೇಶಭಕ್ತಿಯನ್ನು ಉಣಬಡಿಸುವ ನೃತ್ಯ ರೂಪಕ ಮೂಲಕ ಪ್ರೇಕ್ಷಕರ ಮನಸೆಳೆದರು. ಜನಪದ ಲೋಕದಲ್ಲಿ ಮಿಳಿತಗೊಂಡಿರುವ ನಾಡಪ್ರೇಮವನ್ನು ಗೀತೆ ಮತ್ತು ನೃತ್ಯ ಪ್ರದರ್ಶಿಸುವ ಮೂಲಕ ಜಗಜ್ಜಾಹೀರುಪಡಿಸಲಾಯಿತು.

ಶಿವಮೊಗ್ಗದ ಟಾಕಪ್ಪ ಮತ್ತು ಸಂಗಡಿಗರು ಡೊಳ್ಳುಕುಣಿತ, ತುಮಕೂರಿನ ಕೆ.ಆರ್.ಹೊಸಳ್ಳಯ್ಯ ಮತ್ತು ಬಳಗದಿಂದ ವೀರಗಾಸೆ, ಉತ್ತರ ಕನ್ನಡದ ಚಂದ್ರಕಾಂತ ಅಗೇರ ಮತ್ತು ವೃಂದದಿಂದ ಸುಗ್ಗಿ ಕುಣಿತ, ಕೋಲಾರದ `ಈ ಭೂಮಿ~ ಸಂಘದಿಂದ ತಮಟೆ ವಾದನ, ಉಡುಪಿಯ ಎಸ್. ಎಸ್.ಪ್ರಸಾದ್ ಮತ್ತು ತಂಡದಿಂದ ಕಂಗೀಲು ನೃತ್ಯ, ಮಲೆ ಮಹಾದೇಶ್ವರ ಕಂಸಾಳೆ ಸಂಘದಿಂದ ಬೀಸು ಕಂಸಾಳೆ, ರಾಮನಗರದ ಕಾದರಯ್ಯ ಬಳಗ ದಿಂದ ಪಟ ಕುಣಿತ ಸೇರಿದಂತೆ ವಿವಿಧ ಜನಪದ ನೃತ್ಯವು ಸಾಂಸ್ಕೃತಿಕ ಕಾರ್ಯ ಕ್ರಮಕ್ಕೆ ಮೆರಗು ನೀಡಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, ಸಾಹಿತಿ ಬರಗೂರು ರಾಮಚಂದ್ರಪ್ಪ ಇತರರು ಉಪಸ್ಥಿತರಿದ್ದರು.

`ಲೋಕಾಯುಕ್ತ ನೇಮಕ: ಅವಸರವಿಲ್ಲ~
`ಲೋಕಾಯುಕ್ತ ನೇಮಕ ವಿಚಾರದಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸಮಗ್ರ ಚರ್ಚೆಯ ನಂತರವಷ್ಟೇ ಸೂಕ್ತ ವ್ಯಕ್ತಿಯ ಹೆಸರನ್ನು ಶಿಫಾರಸು ಮಾಡಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು. ಈಚೆಗೆ ನಿವೃತ್ತರಾದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ಲೋಕಾಯುಕ್ತ ಹುದ್ದೆಗೆ ಪರಿಗಣಿಸುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ, `ಲೋಕಾಯುಕ್ತ ಹುದ್ದೆಯು ಗೌರವಯುತವಾಗಿರುವುದರಿಂದ ತಕ್ಷಣದ ನಿರ್ಧಾರ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಚರ್ಚೆ ಅಗತ್ಯವಿದೆ~ ಎಂದು ಪ್ರತಿಕ್ರಿಯಿಸಿದರು. ಬನ್ನೂರ ಮಠ ನೇಮಕ ಕುರಿತು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT