ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಲಿಗೆ ರಂಗು ತುಂಬಿದ ಗಾಳಿಪಟಗಳು

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಅಂಬಾರಿ ಹೊತ್ತ ಬಲರಾಮ ಮತ್ತು ಘರ್ಜಿಸುವ ಹೆಬ್ಬುಲಿಯೊಂದು ಶನಿವಾರ ಸಂಜೆ ಆಕಾಶದತ್ತ ಹಾರಿದ್ದೇ ತಡ ಮಳೆ ಸುರಿಸಲು ಸಿದ್ಧವಾಗಿದ್ದ ಕಪ್ಪುಮೋಡಗಳು ಮೌನವಾಗಿಬಿಟ್ಟವು!

ಲಲಿತ್ ಮಹಲ್ ಹೆಲಿಪ್ಯಾಡ್‌ನಿಂದ ಹಾರಿದ ಗಾಳಿಪಟಗಳು ಕಪ್ಪುಮೋಡ ತುಂಬಿಕೊಂಡಿದ್ದ ಬಾನಂಗಳಕ್ಕೆ ರಂಗು ತುಂಬಿದವು. ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಬಲರಾಮ, ಬಂಡಿಪುರದ ಹುಲಿರಾಯ, ರಣಹದ್ದು, ಡ್ರ್ಯಾಗನ್‌ಗಳ ಜೊತೆಗೆ, ಮಹಿಷಾಸುರನ ಗಾಳಿಪಟಗಳು ಮುಗಿಲು ಚುಂಬಿಸಿದವು.

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಲಲಿತ್ ಮಹಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾದ ಗಾಳಿಪಟ ಸ್ಪರ್ಧೆಯ ಉದ್ಘಾಟನೆ ಸಮಾರಂಭದಲ್ಲಿ ಹಾರಾಡಿದ ಪತಂಗಗಳು ಇಡೀ ಊರಿನ ಗಮನ ಸೆಳೆದವು. ಒಂದಕ್ಕಿಂತ ಒಂದು ಚೆಂದವಾಗಿದ್ದ ಪಟಗಳು ಮುಗಿಲು ಮುಚ್ಚಿದವು.

ಚಾಮುಂಡಿ ಬೆಟ್ಟದ ಎತ್ತರವನ್ನೂ ದಾಟಿ ಹಾರಿದ್ದ ವಿವಿಧ ನಮೂನೆಯ ಸುಮಾರು 150ಕ್ಕೂ ಹೆಚ್ಚು ಗಾಳಿಪಟಗಳನ್ನು ಹಾರಿಸಿದ ನೂರಾರು ಜನರು ಸಂಭ್ರಮಿಸಿದರು. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರೆಲ್ಲರೂ ಗಾಳಿಪಟ ಹಾರಿಸುವ ಮಜಾ ಅನುಭವಿಸಿದರು. ಭಾನುವಾರ ಬೆಳಿಗ್ಗೆ ಆರಂಭವಾಗುವ ಸ್ಪರ್ಧೆಯಲ್ಲಿ ಭಾಗವಹಿಸಲು ಈಗಾಗಲೇ 750 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಗುಜರಾತಿನಿಂದ ಬಂದಿರುವ ಗಾಳಿಪಟ ಪರಿಣಿತ ಅಶೋಕ ಷಾ ಅವರು, ಡ್ರ್ಯಾಗನ್, ಬೋಟ್, ಪಟ್ಟೆ ಹುಲಿ, ಹದ್ದು ಸೇರಿದಂತೆ ಒಟ್ಟು ಮೂವತ್ತು ನಮೂನೆಯ ಪಟಗಳನ್ನು ತಂದಿದ್ದಾರೆ. ಮಹಾರಾಷ್ಟ್ರದಿಂದ ಬಂರಿರುವ ದಿಗಂತ್ ಜೋಶಿಯವರೂ ತಮ್ಮ ಕಾರಿನ ತುಂಬ ವಿವಿಧ ಮಾದರಿಯ ಗಾಳಿಪಟಗಳನ್ನು ತುಂಬಿ ತಂದಿದ್ದಾರೆ.
ಮೈಸೂರಿನ ಗಾಳಿಪಟಪ್ರಿಯರೂ ಸುಮ್ಮನೆ ಕುಳಿತಿಲ್ಲ. ಗಾಯತ್ರಿಪುರಂನ ಗೋಪಾಲ್‌ರಾವ್ ಒಂದನೂರು ಗಾಳಿಪಟಗಳನ್ನು ಸಾಲಾಗಿ ಜೋಡಿಸಿದ ಎರಡು ಸರಣಿಗಳನ್ನು ಹಾರಿಬಿಟ್ಟು ತಮ್ಮ ಬಲಪ್ರದರ್ಶನ ಮಾಡಿದರು. ಬೆಂಗಳೂರಿನಿಂದ ಮೈಸೂರಿಗೆ ದಸರಾ ರಜೆಗೆ ಬಂದಿರುವ 12 ವರ್ಷದ ಅಭಿನಂದನ್ ಕೂಡ ಬಾಕ್ಸ್ ಗಾಳಿಪಟ ತಯಾರಿಸಿಕೊಂಡು ಸಿದ್ಧವಾಗಿದ್ದಾನೆ. ದುರ್ಗಾದೇವಿಯ ಚಿತ್ತಾರದ ಬೃಹತ್ ಗಾಳಿಪಟವೂ  ಆಗಸಕ್ಕೆ ಲಗ್ಗೆ ಇಡಲಿದೆ.

ಚಾಮುಂಡಿಬೆಟ್ಟದ ವೆಂಕಟಾಚಲ ಅವರೂ ಆರು ತುಂಡು ಬಿದಿರಿನಿಂದ ತಯಾರಿಸಿರುವ ವೃತ್ತಾಕಾರದ ಪಟವೂ ಬಾನಂಗಳದಲ್ಲಿ ತೇಲುತ್ತಿತ್ತು. ಭ್ರಷ್ಟಾಚಾರ ವಿರೋಧಿ ಹೋರಾಟದ ಸಂದೇಶ ಹೊತ್ತ ಅಣ್ಣಾಹಜಾರೆಯವರ ಬೃಹತ್ ಗಾಳಿಪಟ ತಯಾರಿಸಿರುವ  ಚಾಮುಂಡಿಪುರದ ನಾಗೇಶ್ ಸಹ ಸಿದ್ಧವಾಗಿದ್ದಾರೆ. 

ಜೆಟ್ ವಿಮಾನದಂತೆ ಸದ್ದು ಮಾಡುತ್ತ ಗಿರಕಿ ಹೊಡೆಯುತ್ತಿದ್ದ ಜೆಟ್ ಗಾಳಿಪಟ ಮತ್ತು ತ್ರಿವರ್ಣಧ್ವಜದ ಮಾದರಿಯ ಗಾಳಿಪಟಗಳೂ ಪ್ರದರ್ಶನದ ಮೆರಗು ಹೆಚ್ಚಿಸಿದವು. ಈ ಎಲ್ಲ ಗಾಳಿಪಟಗಳೊಂದಿಗೆ ಭಾನುವಾರ ಬೆಳಿಗ್ಗೆ ಮತ್ತಷ್ಟು ಆಕರ್ಷಕ ಪತಂಗಗಳು ಮುಗಿಲಿಗೆ ಲಗ್ಗೆ ಹಾಕಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT