ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗ್ಧತೆ ಕಸಿದುಕೊಳ್ಳುತ್ತಿರುವ ಆಧುನಿಕ ಬದುಕು

Last Updated 14 ಅಕ್ಟೋಬರ್ 2011, 8:15 IST
ಅಕ್ಷರ ಗಾತ್ರ

ದಾವಣಗೆರೆ: ಮಕ್ಕಳು ಪ್ರಕೃತಿಯ ಅದ್ಭುತ ಸೃಷ್ಟಿ. ಆದರೆ, ಆಧುನಿಕ ಜೀವನ ಶೈಲಿ ಮಕ್ಕಳಲ್ಲಿನ ಮುಗ್ಧತೆಯನ್ನು ಕಸಿದುಕೊಳ್ಳುತ್ತಿದೆ ಎಂದು ಡಾ.ರಾಜೇಶ್ವರಿ ಅಭಿಪ್ರಾಯಪಟ್ಟರು.

ನಗರದ ಬಾಪೂಜಿ ಮಕ್ಕಳ ಸಂಶೋಧನಾ ಕೇಂದ್ರದಲ್ಲಿ ಗುರುವಾರ ವಿವೇಕ್ ಪೋಷಕರ ಆರೋಗ್ಯ ಕಾರ್ಯಗಾರದಲ್ಲಿ `ಬದಲಾದ ಜೀವನ ಪರಿಸ್ಥಿತಿ ಮತ್ತು ನಮ್ಮ ಮಕ್ಕಳು~ ವಿಷಯ ಮಂಡಿಸಿ ಅವರು ಮಾತನಾಡಿದರು.

ಸುಮಾರು 30 ವರ್ಷಗಳ ಹಿಂದೆ ಇದ್ದ ಜೀವನ ಶೈಲಿ, ಇಂದು ಶರವೇಗದಲ್ಲಿ ಸಾಗುವ ಮೂಲಕ ಸಂಪೂರ್ಣ ಪಾಶ್ಚಾತ್ಯ ಶೈಲಿಗೆ ಮಾರ್ಪಡಿಸಿದಂತಾಗಿದೆ. ಬದಲಾವಣೆ ಪ್ರಕೃತಿಯ ನಿಯಮ. ಆದರೆ, ಬದಲಾವಣೆಯ ನೆಪದಲ್ಲಿ ಅನಾರೋಗ್ಯಕಾರಿ ಸಂಸ್ಕೃತಿ ಅನುಸರಿಸುವುದು ಕೂಡ ಅಷ್ಟೇ ಅಪಾಯಕಾರಿ ಎಂದರು.

ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಈಗ ಜನತೆ ನೋಡುವುದನ್ನೇ ಮರೆತಿದ್ದಾರೆ. ಬಹಳಷ್ಟು ಒತ್ತಡದ ಬದುಕಿಗೆ ಅಂಟಿಕೊಳ್ಳುತ್ತಾ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಭಾರತ ದೇಶದ ಬಹುತೇಕ ಜನರು ಮಧ್ಯರಾತ್ರಿಯಲ್ಲಿ ನಿದ್ರಿಸುತ್ತಾರೆ. ಪರಿಣಾಮವಾಗಿ ಜನರು ಕ್ರಿಯಾಶೀಲತೆ ಕಳೆದುಕೊಳ್ಳುತ್ತಿದ್ದಾರೆ. ಕ್ರಿಯಾಶೀಲತೆ ಇಲ್ಲದಿದ್ದರೆ ಸದೃಢ ಸಮಾಜ ನಿರ್ಮಾಣ ಅಸಾಧ್ಯ ಎಂದರು.

ಮಕ್ಕಳೇ ನಮ್ಮ ಪ್ರತಿಬಿಂಬವಾಗಿರುತ್ತವೆ. ದುಶ್ಚಟಗಳಿಗೆ ದಾಸರಾಗಿ  ಇರುವವರು  ಮಕ್ಕಳ ಮುಂದೆ ತಮ್ಮ ಕೆಟ್ಟ ಚಟಗಳನ್ನು  ಪ್ರದರ್ಶಿಸ  ಬಾರದು. ಎಷ್ಟೋ ತಂದೆ-ತಾಯಿಗಳು ಗುಟ್ಕಾ, ತಂಬಾಕು, ಬೀಡಿ, ಸಿಗರೇಟ್‌ಗಳನ್ನು ಖರೀದಿಸಿ ತರಲು ಮಕ್ಕಳನ್ನು ಬಳಸುತ್ತಾರೆ. ಸದಾ ಕುತೂಹಲ ಭರಿತರಾದ ಮಕ್ಕಳು ಇದರಿಂದ ದುಶ್ಚಟಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ. ದೇಶದಲ್ಲಿ ಪ್ರತಿವರ್ಷ 5,500 ಮಕ್ಕಳು ತಂಬಾಕು ಚಟಗಳಿಗೆ ದಾಸರಾಗುತ್ತಿದ್ದಾರೆ. ಬದಲಾಗುತ್ತಿರುವ ಆಹಾರ ಪದ್ಧತಿ, ಬೆಳೆಯುತ್ತಿರುವ ಹೋಟೆಲ್ ಸಂಸ್ಕೃತಿ, ಅಪೌಷ್ಟಿಕತೆ ಇತ್ಯಾದಿ ಅಂಶಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಎಂದರು.

ಮಕ್ಕಳು ನಿರ್ಮಲವಾದ ಬಿಳಿಬಣ್ಣದ ಹಸಿಗೋಡೆ ಇದ್ದಂತೆ. ಚಿಕ್ಕಂದಿನಲ್ಲಿ ಹೇಳಿಕೊಟ್ಟ ಪಾಠ, ಮಾರ್ಗದರ್ಶನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತವೆ. ಮಕ್ಕಳ ಮನಸ್ಸಿನಲ್ಲಿ ಪೋಷಕರು ಶಿಷ್ಟ ಸಂಸ್ಕೃತಿ, ಮಾನವೀಯ ಗುಣ ಮತ್ತು ಉತ್ತಮ ಮೌಲ್ಯಗಳನ್ನು ಬಿತ್ತಬೇಕು. ಹಾಗಾದಾಗ ಮಾತ್ರ ಸಮಾಜ ಆರೋಗ್ಯಪೂರ್ಣವಾಗಿರಲು ಸಾಧ್ಯ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಶಿಶುತಜ್ಞರಾದ ಡಾ.ನಿರ್ಮಲಾ ಕೇಸರಿ, ತಜ್ಞವೈದ್ಯ ಡಾ.ಬಾಣಾಪೂರ ಮಠ, ಡಾ.ಗುರು ಪ್ರಸಾದ್, ಡಾ.ಮೃತ್ಯುಂಜಯ, ಟಿ.ಆರ್. ಸ್ವಾಮಿ, ಸರಳಾ ಶಶಿಕುಮಾರ್ ಮತ್ತು ಪೋಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT