ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚಖಂಡಿ ವೀರಭದ್ರೇಶ್ವರ ರಥೋತ್ಸವ ಸಂಭ್ರಮ

Last Updated 18 ಡಿಸೆಂಬರ್ 2013, 5:24 IST
ಅಕ್ಷರ ಗಾತ್ರ

ಬಾಗಲಕೋಟೆ: ನವನಗರ ಸಮೀಪದ ಮುಚಖಂಡಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಭಕ್ತಿ, ಭಾವ, ಸಂಭ್ರಮದಿಂದ ರಥೋತ್ಸವ ಜರುಗಿತು.

ಕಾರ್ತಿಕೋತ್ಸವದ ಅಂಗವಾಗಿ ನಡೆದ ಜಾತ್ರಾ ಮಹೋತ್ಸವದಲ್ಲಿ ವೀರಭದ್ವೇಶ್ವರನಿಗೆ ಬೆಳಿಗ್ಗೆ ವಿವಿಧ ಪೂಜಾ ಕೈಂಕರ್ಯ ಹಾಗೂ ರುದ್ರಾಭಿಷೇಕ ನಡೆಯಿತು.

ಸಂಜೆ ವೇಳೆಗೆ ವಿವಿಧ ವಾದ್ಯವೈಭವದೊಂದಿಗೆ ಮತ್ತು ಮಹಿಳೆಯರ ಆರತಿಯೊಂದಿಗೆ ಆರಂಭಗೊಂಡ ರಥೋತ್ಸವ ಗ್ರಾಮದ ಅಗಸಿ ಬಾಗಿಲನವರೆಗೆ ತೆರಳಿ ಬಳಿಕ ಪಾದಗಟ್ಟೆಗೆ ಪೂಜೆ ಸಲ್ಲಿಸಿ ಮರಳಿ ದೇವಸ್ಥಾನ ತಲುಪಿತು.

ರಥ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು ಉತ್ತತ್ತಿ, ಚುರುಮುರಿ, ಬಾಳೆಕಾಯಿ, ಹೂವುಗಳನ್ನು ಭಕ್ತಿಯಿಂದ ಎರಚುವ ಮೂಲಕ ಹರಕೆ ಸಮರ್ಪಿಸಿದರು. ಜಿಲ್ಲೆ, ಹೊರಜಿಲ್ಲೆಯ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಚಿಕ್ಕ ರಥೋತ್ಸವಕ್ಕೆ ಮುಚಖಂಡಿ ಗ್ರಾಮದ ಹಗ್ಗ ಮತ್ತು ಮಹಾ ರಥೋತ್ಸವಕ್ಕೆ ವೀರಾಪುರ ಗ್ರಾಮದ ಹಗ್ಗ ಹಾಗೂ ಬೆಣ್ಣೂರಿನ ಕಳಸವನ್ನು ಬಳಸುವ ಮೂಲಕ ವೈಶಿಷ್ಟ್ಯ ಮೆರೆಯಲಾಯಿತು.

ಭಕ್ತರು ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಲು ಪುರವಂತರಿಂದ ದೇಹಕ್ಕೆ ಶಸ್ತ್ರಗಳನ್ನು ಹಾಕಿಕೊಳ್ಳುವ ಮೂಲಕ ಭಕ್ತಿ ಪರಾಕಾಷ್ಠತೆ ಮೆರೆದರು.

ರಥೋತ್ಸವದ ಬಳಿಕ ದೇವಸ್ಥಾನದ ಆವರಣದಲ್ಲಿ ಭಕ್ತರು ಸಹಸ್ರಾರು ಹಣತೆಗಳನ್ನು ಬೆಳಗಿಸುವ ಮೂಲಕ ಕಾರ್ತಿಕೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT