ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿದ ಬ್ಯಾಂಕ್; ರೈತರಿಗೆ ಸಿಗದ ನೆರವು

14 ವರ್ಷಗಳ ಹಿಂದೆಯೇ ದಿವಾಳಿಯಾದ ಸಹಕಾರಿ ಬ್ಯಾಂಕ್
Last Updated 3 ಆಗಸ್ಟ್ 2013, 12:26 IST
ಅಕ್ಷರ ಗಾತ್ರ

ಚಿಂತಾಮಣಿ: ರೈತರ ಕಲ್ಯಾಣ, ಕೃಷಿ ಅಭಿವೃದ್ಧಿ ದೃಷ್ಟಿಯಲ್ಲಿರಿಸಿಕೊಂಡು ರಾಜ್ಯ ಸರ್ಕಾರ ಹಲ ಯೋಜನೆ ಜಾರಿಗೊಳಿಸುತ್ತಿದೆ. ವಿವಿಧ ಜಿಲ್ಲೆ, ತಾಲ್ಲೂಕುಗಳಲ್ಲಿ ರೈತರು ಯೋಜನೆ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ ತಾಲ್ಲೂಕಿನ ಸ್ಥಿತಿಯೇ ಬೇರೆಯಾಗಿದೆ.

ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಮುಚ್ಚಿರುವ ಕಾರಣ ತಾಲ್ಲೂಕಿನ ರೈತರಿಗೆ ಯಾವುದೇ ಸೌಲಭ್ಯ ದೊರೆಕುತ್ತಿಲ್ಲ.
ಕೃಷಿ ಚಟುವಟಿಕೆಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯ ಸರ್ಕಾರ ರೈತರಿಗೆ 2 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ, 10 ಲಕ್ಷ ರೂಪಾಯಿವರೆಗೆ ಶೇ 3ರ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಅಲ್ಪಾವಧಿ, ಮಧ್ಯಮಾವಧಿ ಸಾಲಗಳು, ಶೇ 3ರ ಬಡ್ಡಿ ದರದಲ್ಲಿ ದ್ವಿಚಕ್ರ ವಾಹನ ಸಾಲ ನೀಡಲಾಗುತ್ತಿದೆ. ಆದರೆ ಈ ಎಲ್ಲ ಯೋಜನೆಗಳಿಂದ ತಾಲ್ಲೂಕಿನ ರೈತರು ವಂಚಿತರಾಗಿದ್ದಾರೆ.

ತಾಲ್ಲೂಕಿನಲ್ಲಿ ಯಾವುದೇ ನದಿ, ನಾಲೆಗಳಿಲ್ಲದ ಕಾರಣ ಬಹುತೇಕ ಎಲ್ಲ ರೈತರು ಮಳೆಯನ್ನೇ ಅವಲಂಬಿಸಿದ್ದಾರೆ. ಈಗ ಮಳೆಯೂ ಇಲ್ಲದೆ ಮತ್ತು ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲೂ ಆಗದೇ ರೈತರು ತೊಂದರೆಗೆ ಒಳಗಾಗಿದ್ದಾರೆ. `ಇತರೆ ಎಲ್ಲ ತಾಲ್ಲೂಕುಗಳ ರೈತರಿಗೆ ಸರ್ಕಾರದ ಸೌಲಭ್ಯ ದೊರೆಯುತ್ತಿವೆ. ಆದರೆ ನಮಗೆ ಮಾತ್ರ ಏನೂ ಸಿಗುತ್ತಿಲ್ಲ' ಎಂದು ರೈತರು ಸಮಸ್ಯೆ ತೋಡಿಕೊಳ್ಳುತ್ತಿದ್ದಾರೆ.

ರೈತರ ಅನುಕೂಲಕ್ಕಾಗಿ ತಾಲ್ಲೂಕಿನ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ 1940ರಲ್ಲಿ ಆರಂಭವಾಯಿತು. ಹಲ ವರ್ಷ ಬ್ಯಾಂಕ್ ಚೆನ್ನಾಗಿ ನಡೆಯಿತಾದರೂ ಸರ್ಕಾರದ ಸಾಲ ವಸೂಲಾತಿ ನೀತಿ ಮತ್ತು ಚುನಾಯಿತ ಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಬ್ಯಾಂಕ್ ದಿವಾಳಿಯಾಗಿ 1999ರಲ್ಲಿ ಸಂಪೂರ್ಣವಾಗಿ ಕಣ್ಣುಮುಚ್ಚಿತು ಎಂದು ಬ್ಯಾಂಕ್‌ನ ಸಿಬ್ಬಂದಿ ಹೇಳುತ್ತಾರೆ.

`ಸರ್ಕಾರಗಳ ಸಾಲ ವಸೂಲಾತಿ ನೀತಿಯಿಂದ ಬಹುತೇಕ ಸಾಲ ಪಡೆದವರು ಮರುಪಾವತಿ ಮಾಡಲಿಲ್ಲ. ಆಡಳಿತ ಮಂಡಳಿಯ ದುರಾಡಳಿತದಿಂದ ಬ್ಯಾಂಕ್ ಪ್ರತಿ ವರ್ಷ ನಷ್ಟ ಅನುಭವಿಸತೊಡಗಿತು. ಕ್ರಮೇಣ ಮುಚ್ಚಲ್ಪಟ್ಟಿತು. ಸುಮಾರು 541 ಲಕ್ಷ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಎಂದು ಬ್ಯಾಂಕ್‌ನ ಸಮಾಪನಾಧಿಕಾರಿ ಜಿ.ವೆಂಕಟರಮಣಪ್ಪ ತಿಳಿಸಿದ್ದಾರೆ.

ಬ್ಯಾಂಕ್ ದಾಖಲೆಗಳ ಪ್ರಕಾರ, ಬ್ಯಾಂಕ್‌ಗೆ ಹಾಲಿ 4470 ಸದಸ್ಯರಿದ್ದು 13.61 ಲಕ್ಷ ಷೇರು ಹಣವಿದೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರು ಮೃತಪಟ್ಟಿದ್ದಾರೆ. ರೈತರಿಂದ ಬ್ಯಾಂಕಿಗೆ ವಸೂಲಾಗಬೇಕಿರುವ ಸಾಲದ ಅಸಲು 101.58 ಲಕ್ಷ ರೂಪಾಯಿ. ರಾಜ್ಯ ಬ್ಯಾಂಕ್‌ಗೆ 398.47 ಲಕ್ಷ ಬಾಕಿ ನೀಡಬೇಕಿದೆ. ಅದರ ಪ್ರಕಾರ 296.89 ಲಕ್ಷ ರೂಪಾಯಿ ಅಂತರವಿದೆ.

ಬ್ಯಾಂಕ್ ಮುಚ್ಚಿ 14 ವರ್ಷಗಳಾದರೂ ಅದರ ಪುನಃಶ್ಚೇತನಕ್ಕಾಗಿ ಯಾರೂ ಸಹ ಕ್ರಮ ಕೈಗೊಳ್ಳದಿರುವುದು ಶೋಚನೀಯವಾಗಿದೆ. ತಾಲ್ಲೂಕಿನ ರೈತರ ಹಿತದೃಷ್ಟಿಯಿಂದ ತುರ್ತಾಗಿ ಬ್ಯಾಂಕ್‌ನ ಪುನಃಶ್ಚೇತನ ಅಗತ್ಯವಿದೆ. ಪುನಃಶ್ಚೇತನಕ್ಕಾಗಿ ಈಚೆಗೆ ಸದಸ್ಯರ ಮತ್ತು ಸಾರ್ವಜನಿಕ ಮುಖಂಡರ ಸಭೆ ನಡೆಸಲಾಗಿದೆ. ಆದರೆ ಬ್ಯಾಂಕ್ ಪುನರಾರಂಭಗೊಳ್ಳುವ ಕುರಿತು ಇದುವರೆಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ರೈತರು ಹೇಳುತ್ತಾರೆ.

ಬ್ಯಾಂಕ್‌ನ ಪುನಃಶ್ಚೇನಕ್ಕಾಗಿ ಎರಡು ಮಾರ್ಗಗಳಿವೆ. ಮೊದಲ ಮಾರ್ಗ ಹಳೆಯ ಬ್ಯಾಂಕ್‌ನ್ನು ಪುನಃಶ್ಚೇತನಗೊಳಿಸುವುದು. ಎರಡನೇ ಮಾರ್ಗ ಹೊಸ ಬ್ಯಾಂಕ್ ಸ್ಥಾಪಿಸುವುದು. ಎರಡಕ್ಕೂ ಒಮ್ಮತ ಮೂಡಿ ಬಂದಿಲ್ಲ. ಒಂದು ಗುಂಪು ಹಳೆ ಬ್ಯಾಂಕನ್ನೇ ಪುನಃಶ್ಚೇತನಗೊಳಿಸಬೇಕು ಎಂದು ಪ್ರತಿಪಾದಿಸಿದರೆ, ಮತ್ತೊಂದು ಗುಂಪು ಹೊಸ ಬ್ಯಾಂಕ್ ಸ್ಥಾಪಿಸಬೇಕು ಎಂದು ಒತ್ತಾಯಿಸುತ್ತಾರೆ. ಎರಡು ದಾರಿಗಳ ಸಾಧಕ, ಬಾಧಕ ಪರಿಶೀಲಿಸಿ ಶೀಘ್ರವಾಗಿ ತೀರ್ಮಾನ ಕೈಗೊಂಡು ಬ್ಯಾಂಕ್ ಪುನರಾರಂಭಿಸಬೇಕು. ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗೆ ನೆರವಾಗಬೇಕು ಎನ್ನುತ್ತಾರೆ ರೈತರು.

`ಹಳೆ ಬ್ಯಾಂಕ್‌ನ್ನು ಪುನಃಶ್ಚೇತನಗೊಳಿಸಿದರೆ ಸಾಲ ಮರುಪಾವತಿ ಮಾಡದೆ ಮತ್ತೆ ಸಾಲ ದೊರೆಯುವುದಿಲ್ಲ. ಸದ್ಯಕ್ಕೆ ಸಾಲ ಮರು ಪಾವತಿಯಾಗುವುದಿಲ್ಲ. ಸರ್ಕಾರದ ಮೇಲೆ ಒತ್ತಡ ತಂದು 4 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಮಂಜೂರು ಮಾಡಿಸಿದರೆ ಬ್ಯಾಂಕ್‌ನ ವಹಿವಾಟು ಮುಂದುವರೆಸಬಹುದು. ಅನೇಕ ಬ್ಯಾಂಕ್‌ಗಳು ಈ ರೀತಿ ಪುನರುಜ್ಜೀವನಗೊಂಡಿವೆ' ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಾರೆ.

`ರೈತರಿಂದ ಷೇರುಗಳನ್ನು ಸಂಗ್ರಹಿಸಿ ಹೊಸದಾಗಿ ಬ್ಯಾಂಕ್‌ನ್ನು ಸ್ಥಾಪಿಸಿದರೆ ಸುಲಭವಾಗಿ ಸರ್ಕಾರದ ಎಲ್ಲ ಸೌಲಭ್ಯ ಪಡೆಯಬಹುದು. ಆದರೆ ಹಳೆಯ ಷೇರುದಾರರು ತಮ್ಮ ಸದಸ್ಯತ್ವ ಕಳೆದುಕೊಂಡು ಹೊಸದಾಗಿ ಷೇರು ಪಡೆದು ಸದಸ್ಯರಾಗಬೇಕಾಗುತ್ತದೆ. ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ಆಡಳಿತ ಮಂಡಳಿ ಹೊಸ ಬ್ಯಾಂಕ್ ಸ್ಥಾಪನೆಗೆ ತಮ್ಮ ಅಭ್ಯಂತರವಿಲ್ಲ ಎಂದು 2012ರಲ್ಲೇ ಸ್ಪಷ್ಟಪಡಿಸಿದೆ' ಎಂದು ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶಗೌಡ `ಪ್ರಜಾವಾಣಿ'ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT