ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚುಮರೆ ಇಲ್ಲ: ಸಿಂಗ್

ಕಲ್ಲಿದ್ದಲು ಹಗರಣದ ಕಡತ ನಾಪತ್ತೆ ಪ್ರಕರಣ
Last Updated 3 ಸೆಪ್ಟೆಂಬರ್ 2013, 20:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಕಡತಗಳ ನಾಪತ್ತೆ ಪ್ರಕರಣದಲ್ಲಿ ಎಲ್ಲ ದಿಕ್ಕಿನಿಂದಲೂ ಟೀಕೆಗೆ ಗುರಿಯಾಗಿರುವ ಪ್ರಧಾನಿ ಮನಮೋಹನ್ ಸಿಂಗ್, `ಇದರಲ್ಲಿ ಸರ್ಕಾರ ಏನನ್ನೂ ಮುಚ್ಚಿಟ್ಟಿಲ್ಲ, ಕಡತಗಳನ್ನು ಪತ್ತೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಲಾಗುತ್ತದೆ' ಎಂದು ಮಂಗಳವಾರ ಹೇಳಿದ್ದಾರೆ.

ಈ ಹಗರಣ ಕುರಿತಂತೆ ಸಂಸತ್‌ನ ಉಭಯ ಸದನಗಳು ಮಂಗಳವಾರ ಭಾರಿ ಕೋಲಾಹಲಕ್ಕೆ ಸಾಕ್ಷಿಯಾದವು. ವಿರೋಧಪಕ್ಷಗಳ ಒತ್ತಡಕ್ಕೆ ಮಣಿದು ಮೌನ ಮುರಿದ ಪ್ರಧಾನಿ,` ಕಡತಗಳನ್ನು ಒಪ್ಪಿಸುವುದಕ್ಕೆ ಸುಪ್ರೀಂಕೋರ್ಟ್ ನೀಡಿರುವ ಎರಡು ವಾರಗಳ ಗಡುವಿಗೆ ಸರ್ಕಾರ ಬದ್ಧವಾಗಿದೆ. ಏನಾದರೂ ಸಂದೇಹ ಇದ್ದಲ್ಲಿ ನಿರ್ದಾಕ್ಷಿಣ್ಯ  ಕ್ರಮ ಜರುಗಿಸುವುದಕ್ಕೂ ಹಿಂಜರಿಯುವುದಿಲ್ಲ' ಎಂದೂ ಹೇಳಿದರು.

`ಸಮಗ್ರ ಕಡತ ಹಾಗೂ ದಾಖಲೆಗಳ ಪಟ್ಟಿಯನ್ನು ಸಿಬಿಐ ಇನ್ನು ಐದು ದಿನಗಳಲ್ಲಿ ಸಲ್ಲಿಸಲಿದೆ. ಲಭ್ಯ ಕಡತಗಳನ್ನು ಎರಡು ವಾರಗಳಲ್ಲಿ ಸರ್ಕಾರ ಸಿಬಿಐಗೆ ಸಲ್ಲಿಸಬೇಕು' ಎಂದು ಆಗಸ್ಟ್ 29ರಂದು ಸುಪ್ರೀಂಕೋರ್ಟ್ ಹೇಳಿತ್ತು.

`ಕೋರ್ಟ್ ನಿರ್ದೇಶನವನ್ನು ಸರ್ಕಾರ ಚಾಚೂ ತಪ್ಪದೆ ಪಾಲಿಸುತ್ತದೆ. ಕಡತಗಳನ್ನು ಪತ್ತೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸಲಾಗುತ್ತದೆ. ಗಡುವಿನೊಳಗೆ ಅವುಗಳನ್ನು ಸಿಬಿಐಗೆ ನೀಡಲಾಗುತ್ತದೆ' ಎಂದು ಸಿಂಗ್ ನುಡಿದರು.

ಪ್ರತಿಪಕ್ಷ ಪ್ರಶ್ನೆ: `ನಾಪತ್ತೆಯಾದ ಕಡತ ಪತ್ತೆಗೆ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ? ಇದಕ್ಕೆ ಯಾರು ಹೊಣೆ' ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಪ್ರಧಾನಿಯನ್ನು ಪ್ರಶ್ನಿಸಿದರು. ಕಡತ ನಾಪತ್ತೆಗೆ ಸಂಬಂಧಿಸಿ ಕಲ್ಲಿದ್ದಲು ಸಚಿವರು ನೀಡಿದ ಹೇಳಿಕೆ ಕುರಿತು ಸದಸ್ಯರೆಲ್ಲ ಸ್ಪಷ್ಟನೆ ಕೇಳಿದರು.

`ಹಗರಣಕ್ಕೆ ಸಂಬಂಧಿಸಿ ಸಿಬಿಐ ಕೇಳಿರುವ ಕಡತಗಳು ಕಾಣೆಯಾಗಿವೆ ಎಂದು ಈಗಲೇ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಈಗಾಗಲೇ ತನಿಖಾ ಸಂಸ್ಥೆಗೆ ಒಂದು ಲಕ್ಷ ಪುಟಗಳಿಗೂ ಹೆಚ್ಚಿರುವ ಕಡತಗಳನ್ನು ಒಪ್ಪಿಸಲಾಗಿದೆ. ಕೆಲವು ಕಡತಗಳು ನಾಪತ್ತೆಯಾದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು' ಎಂದು ಸಿಂಗ್ ಉತ್ತರಿಸಿದರು.

ಇಷ್ಟಕ್ಕೆ ಸುಮ್ಮನಾಗದ ಬಿಜೆಪಿ ಹಾಗೂ ಎಡಪಕ್ಷಗಳ ಸದಸ್ಯರು `ಶೇಮ್ ಶೇಮ್'ಎಂದು ಪ್ರಧಾನಿ ವಿರುದ್ಧ ಘೋಷಣೆ ಕೂಗಿದರು. `ನಮ್ಮ ಯಾವ ಪ್ರಶ್ನೆಗೂ ಪ್ರಧಾನಿ ಉತ್ತರಿಸಿಲ್ಲ' ಎಂದು ಬಿಜೆಪಿಯ ವೆಂಕಯ್ಯ ನಾಯ್ಡು ಹೇಳಿದಾಗ ಮಧ್ಯಪ್ರವೇಶಿದ ರಾಜ್ಯಸಭೆ ಉಪಸಭಾಪತಿ ಪಿ.ಜೆ.ಕುರಿಯನ್, `ನಿಮಗೆ ಪ್ರಧಾನಿ ಪ್ರತಿಕ್ರಿಯೆ ಬೇಕಿತ್ತು. ಅವರು ಇಲ್ಲಿಗೆ ಬಂದು ಉತ್ತರ ನೀಡಿ ಹೋಗಿದ್ದಾರೆ. ನಮ್ಮಿಷ್ಟದಂತೆ ಪ್ರತಿಕ್ರಿಯಿಸಬೇಕೆಂದು ಪ್ರಧಾನಿಯವರನ್ನು ಕೇಳುವಂತಿಲ್ಲ. ಇದು ಸಮಂಜಸವೂ ಅಲ್ಲ. ದಯವಿಟ್ಟು ಸಹಕರಿಸಿ' ಎಂದರು.

ಲೋಕಸಭೆಯಲ್ಲಿ: ಲೋಕಸಭೆಯಲ್ಲಿಯೂ ಈ ವಿಷಯ ಪ್ರತಿಧ್ವನಿಸಿತು. ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರು ಈ ವಿಷಯವಾಗಿ ಮಾತನಾಡಲು ಮುಂದಾದರು. ಆದರೆ ಸ್ಪೀಕರ್ ಮೀರಾ ಕುಮಾರ್ ಅವರು ಅದಕ್ಕೆ ಅವಕಾಶ ಕೊಡಲಿಲ್ಲ.

ಬಿಜೆಪಿ ಸಹಕಾರ ಕೋರಿದ ಪ್ರಧಾನಿ
ನವದೆಹಲಿ: ಮುಂಗಾರು ಅಧಿವೇಶನ ಕೊನೆಗೊಳ್ಳಲು ಬಾಕಿ ಇರುವ ಮೂರು ದಿನಗಳಲ್ಲಿ ಅನೇಕ ಮಹತ್ವದ ಮಸೂದೆಗಳನ್ನು ಅಂಗೀಕರಿಸಬೇಕಿರುವ ಕಾರಣ ಪ್ರಧಾನಿ ಮನಮೋಹನ್ ಸಿಂಗ್ ಅವರು ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳ ಸಹಕಾರ ಕೋರಿದ್ದಾರೆ.

ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದ ಮಹತ್ವದ ಕಡತಗಳು ನಾಪತ್ತೆಯಾಗಿರುವ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಕಲಾಪಕ್ಕೆ ಅಡ್ಡಿಯುಂಟು ಮಾಡಬಹುದು ಎಂಬ ಭೀತಿ ಸರ್ಕಾರವನ್ನು ಕಾಡುತ್ತಿದೆ. ಈ ಕಾರಣ ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ, ಸುಷ್ಮಾ  ಸ್ವರಾಜ್, ಅರುಣ್ ಜೇಟ್ಲಿ ಅವರನ್ನು ಮಂಗಳವಾರ ರಾತ್ರಿ ತಮ್ಮ ನಿವಾಸಕ್ಕೆ ಆಹ್ವಾನಿಸಿದ ಸಿಂಗ್ ಅವರು ಮಸೂದೆಗಳ ಅಂಗೀಕಾರಕ್ಕೆ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರು ಪ್ರಧಾನಿ ನಡೆಯ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT