ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಜಾಫರ್‌ನಗರ ಕೋಮುಗಲಭೆ

ಸುದ್ದಿ ಹಿನ್ನೆಲೆ
Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಗ್ರಾಮೀಣ ಪ್ರದೇಶದ ಕನಿಷ್ಠ 20 ಹಳ್ಳಿಗಳಲ್ಲಿ ನಡೆದ ಕೋಮು­ಗಲಭೆಯಲ್ಲಿ ಮೃತಪಟ್ಟ­ವರ ಸಂಖ್ಯೆ  40 ಎಂದು ಪೊಲೀಸ್ ಮೂಲಗಳು ಹೇಳಿದ್ದರೂ, ಅನಧಿಕೃತವಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಿಗೆ ಇದೆ ಎಂದು ಶಂಕಿಸಲಾಗಿದೆ.

ಜಾಟ್ ಮತ್ತು ಮುಸ್ಲಿಂ ಸಮುದಾ­ಯದ ಮಧ್ಯೆ ನಡೆದ ಗಲಭೆ ನಿಯಂತ್ರಿ­ಸಲು ಸೇನೆಯನ್ನೆ ಕರೆಸಬೇಕಾಯಿತು. ಮುಜಾಫರ್ನಗರದ ಕೆಲ ಭಾಗದಲ್ಲಿ ಕರ್ಫ್ಯೂ ಕೂಡ ಹೇರಲಾಯಿತು.

ಜಾಟ್ ಜನಾಂಗದ ಪ್ರಾಬಲ್ಯ ಹೆಚ್ಚಿಗೆ  ಇರುವ ನಿರ್ದಿಷ್ಟ ಗ್ರಾಮ ಮತ್ತು ಪ್ರದೇಶದಿಂದ ಸುರಕ್ಷತೆ­ಗಾಗಿ ಅಲ್ಪ­ಸಂಖ್ಯಾತ­ರನ್ನು ಬೇರೆಡೆ ಸ್ಥಳಾಂತರ­ಗೊಳಿಸ­ಬೇಕಾ­ಯಿತು. ಎರಡು ಗುಂಪಿನ ನಡುವಣ ಗುಂಡಿನ ದಾಳಿಯಲ್ಲಿ ಟೆಲಿವಿಷನ್ ಪತ್ರಕರ್ತ ಮತ್ತು ಒಬ್ಬ ಛಾಯಾಗ್ರಾಹಕ  ಕೂಡ ಬಲಿಯಾದ.

ಮೆರೆದ ಮಾನವೀಯತೆ
ಇದುವರೆಗೆ ಕೋಮುಗಲಭೆಗಳು ಹೆಚ್ಚಾಗಿ ನಗರ ಪ್ರದೇಶಗಳಿಗೆ ಸೀಮಿತ­ವಾಗಿರುತ್ತಿದ್ದವು. ಮುಜಾಫರ್‌ನಗರ ಜಿಲ್ಲೆಯಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ ಉತ್ತರ ಪ್ರದೇಶದ ಗ್ರಾಮ ಗ್ರಾಮಗಳಿಗೂ  ಕೋಮುದಳ್ಳುರಿ ಹಬ್ಬುತ್ತಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ.  ಅನೇಕ ಗ್ರಾಮಗಳ ಜಾಟ್‌ ಪಂಚಾಯ್ತಿ ಮುಖ್ಯಸ್ಥರು ಅಲ್ಪಸಂಖ್ಯಾತ ಮುಸ್ಲಿಮರ ಮಾರಣ ಹೋಮ ನಡೆಯದಂತೆ ತಡೆದಿದ್ದರೆ, ಅನೇಕ ಮುಸ್ಲಿಮರೂ ಇದೇ ರೀತಿ ತಾವು ಬಹುಸಂಖ್ಯಾತರಾಗಿರುವ ಕಡೆ ಹಿಂದೂ­ಗಳನ್ನು ರಕ್ಷಿಸಿ  ಮಾನವೀಯತೆ ಮೆರೆದಿದ್ದಾರೆ.

ಮೂವರು ಯುವಕರ ಮಧ್ಯೆ ಕ್ಲುಲ್ಲಕ ಕಾರಣಕ್ಕೆ ನಡೆದ ಕಲಹ ಕೋಮು ಗಲಭೆಯ ಸ್ವರೂಪಕ್ಕೆ ತಿರುಗಿತ್ತು. ಇಬ್ಬರು ಮುಸ್ಲಿಂ ಯುವಕರನ್ನು ಕೊಂದು ಹಾಕಿರುವ ತಿರುಚಿದ ವಿಡಿಯೊ ಗಲಭೆಗೆ ಇನ್ನಷ್ಟು ಕುಮ್ಮಕ್ಕು ನೀಡಿತು.

ಗಲಭೆಯ ಮೂಲ ಕಾರಣ
ಕವ್ವಾಲ್ ಗ್ರಾಮದಲ್ಲಿ  ಆಗಸ್ಟ್ 27ರಂದು ಜಾಟ್ ಜನಾಂಗದ ಇಬ್ಬರು ಯುವಕರು ಯುವತಿಯನ್ನು ಚುಡಾಯಿ­ಸಿದ್ದರಂತೆ. ಅವರಿಬ್ಬರೂ ಗುಂಪಿನ ಹಲ್ಲೆಗೆ ತೀವ್ರವಾಗಿ ಗಾಯಗೊಂಡು ಮೃತಪ­ಟ್ಟಿದ್ದರು. ಘಟನೆಯಲ್ಲಿ ಒಬ್ಬ ಮುಸ್ಲಿಂ ಯುವಕನೂ ಜೀವತೆತ್ತಿದ್ದ. ಎರಡು ಮೋಟಾರ್‌್ ಬೈಕ್‌ಗಳ ಮಧ್ಯೆ ನಡೆದ ಅಪಘಾತ, ಹಿಂದೂ, ಮುಸ್ಲಿಂ ಯುವಕರಿಬ್ಬರು ಒಬ್ಬಳೇ ಯುವತಿ­ಯನ್ನು ಪ್ರೀತಿಸುತ್ತಿದ್ದು ಕೂಡ ಚಕಮಕಿಗೆ ಕಾರಣವಾಗಿತ್ತು ಎಂದೂ ಹೇಳಲಾ­ಗುತ್ತಿದೆ. ಗಲಭೆಗೆ  ನಿಜವಾದ ಕಾರಣ ಯಾವುದು ಎನ್ನುವುದು ಇದುವರೆಗೂ ಖಚಿತಪಟ್ಟಿಲ್ಲ. ತೀವ್ರವಾಗಿ ಬದಲಾಗುತ್ತಿ­ರುವ ಸಾಂಪ್ರದಾಯಿಕ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಘಟನೆಗಳ ಸತ್ಯಾಸತ್ಯತೆ­ಯನ್ನು ಯಾರೊಬ್ಬರೂ ಖಚಿತಪಡಿ­ಸುತ್ತಿಲ್ಲ.

ಮಗಳು, ಸೊಸೆಯ ಗೌರವ ರಕ್ಷಣೆ
ಈ  ಹಲ್ಲೆ ಮತ್ತು ಸಾವು  ಪ್ರತಿಭಟಿಸಿ ಜಾಟ್ ಸಮುದಾಯದವರು ಆಗಸ್ಟ್ 31ರಂದು ಜಾನ್ಸತ್ ಗ್ರಾಮದಲ್ಲಿ ‘ಪಂಚಾಯತ್ ಸಭೆ’ ಕರೆದಿದ್ದರು. ಈ ಖಾಪ್ ಸಭೆಯು (ಜಾತಿ ಪಂಚಾಯತ್‌), ಮಹಿಳೆಯರ ಗೌರವ ರಕ್ಷಿಸುವ ಉದ್ದೇಶದ ಸಭೆಯನ್ನು ಸೆ. 7ರಂದು ನಗ್ಲಾಮಂಡೌರ್ ಗ್ರಾಮ­ದಲ್ಲಿ ಮಗಳು, ಸೊಸೆಯ ಗೌರವ ರಕ್ಷಿಸುವ ಪಂಚಾಯತ್‌ ಹೆಸರಿನಲ್ಲಿ (‘ಬಹು, ಬೇಟಿ ಸಮ್ಮಾನ್ ಬಚಾವೊ ಮಹಾಪಂಚಾ­ಯತ್’) ಇನ್ನೊಂದು ದೊಡ್ಡ ಸಭೆ ಕರೆದಿತ್ತು. ಮುಜಾಫರ್ ನಗರದಿಂದ 20 ಕಿ. ಮೀ ದೂರದ ಗ್ರಾಮದಲ್ಲಿ ಒಂದೂವರೆ ಲಕ್ಷದಷ್ಟು ಜನರು ಸೇರಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಜನರು ತೀವ್ರ ಪ್ರಚೋದನಕಾರಿ ಘೋಷಣೆ­ಗಳನ್ನು ಕೂಗಿದ್ದರು. ಉತ್ತರ ಪ್ರದೇಶ ಅಲ್ಲದೇ, ಹರಿಯಾಣ ಮತ್ತು ದೆಹಲಿಯಿಂದಲೂ ಬರುವ ಜನರನ್ನು ಸಭೆಗೆ ಆಗಮಿಸದಂತೆ ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದರು.

ಬಿಜೆಪಿಯು ಸೆಪ್ಟಂಬರ್ 5ರಂದು ಮುಜಾಫರ್ ನಗರ್ ಬಂದ್‌ಗೆ ಕೂಡ ಕರೆ ನೀಡಿತ್ತು. ಪಕ್ಷದ ಕೆಲ ಶಾಸಕರು ಮಾಡಿದ ಪ್ರಚೋದನಕಾರಿ ಭಾಷಣವೂ  ಕೋಮು ದಳ್ಳುರಿಗೆ ಇನ್ನಷ್ಟು ಕಿಚ್ಚು ಹಚ್ಚುವಲ್ಲಿ ಸಫಲವಾಗಿತ್ತು.

ತಿರುಚಿದ ಹಳೆ ವಿಡಿಯೊ
ಅಂತರ್ಜಾಲದಲ್ಲಿ ಹರಿದಾಡಿದ ತಿರುಚಿದ ವಿಡಿಯೊ ಗಲಭೆಗೆ ಇನ್ನಷ್ಟು ಕುಮ್ಮಕ್ಕು ನೀಡಿತು. ಯೂಟೂಬ್ ಮತ್ತಿತರ ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಹರಿಬಿಟ್ಟ ವಿಡಿಯೊ, ಎರಡು ವರ್ಷಗಳಷ್ಟು ಹಳೆಯದಾಗಿತ್ತು. ಅದನ್ನು ಕವಲ್ ಗ್ರಾಮದಲ್ಲಿ ಆಗಸ್ಟ್ 27ರಂದು ನಡೆದ ಘಟನೆ ಎಂಬಂತೆ ಬಿಂಬಿಸಲಾಗಿತ್ತು.

ಲವ್‌ ಜಿಹಾದ್‌?
ಆಕರ್ಷಕ ವ್ಯಕ್ತಿತ್ವದ ಯುವಕರನ್ನು ಮದರಸಾಗಳಲ್ಲಿ ತರಬೇತಿ ನೀಡಿ ಹಿಂದು ಯುವತಿಯರನ್ನು ಮರಳು ಮಾಡುವ, ಪ್ರೀತಿಯ ಖೆಡ್ಡಾದಲ್ಲಿ ಬೀಳುವಂತೆ ಮಾಡಲಾಗುವ ಸಂಚುಗಳೂ ನಡೆ­ಯುತ್ತಿವೆ ಎಂದು ಹಿಂದೂಗಳು ದೂರಿದ್ದಾರೆ.

ಅಜಂ ಖಾನ್‌ ಮೂಲೆಗುಂಪು?
ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರ್ಕಾರವು ಗಲಭೆ ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂದು ಪಕ್ಷದ ಮುಖಂಡ ಅಜಂ ಖಾನ್‌ ಬಹಿರಂಗವಾಗಿ ಟೀಕಿಸಿರು­ವುದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್‌ ಯಾದವ್‌ ಅವರಿಗೆ ಅರಗಿಸಿಕೊಳ್ಳಲು ಸಾಧ್ಯ­ವಾಗಿಲ್ಲ.

ಹೀಗಾಗಿ ಅವರು – ‘ಪಕ್ಷದ ಶಿಸ್ತಿಗೆ ಒಳಪಡಿ ಇಲ್ಲಾ ಮೂಲೆ­ಗುಂಪಾಗಿ’  ಎನ್ನುವ ಪರೋಕ್ಷ ಸಂದೇಶವನ್ನು ಖಾನ್‌ಗೆ ರವಾನಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಗೈರುಹಾಜರಾಗುವ ಮೂಲಕ ಖಾನ್‌ ತಮ್ಮ ಅಸಮಾಧಾನ ದಾಖಲಿ­ಸಿದ್ದರು. ಮುಸ್ಲಿಮರ ಮತಬ್ಯಾಂಕ್‌ ಕಳೆದುಕೊಳ್ಳುವ ಭೀತಿ ಇದ್ದರೂ ಮುಲಾಯಂ ಸಿಂಗ್‌, ಅಜಂ ಖಾನ್‌ ಅವರ ಸಖ್ಯ ತೊರೆಯುವ ಸೂಚನೆ­ಯಂತೂ ನೀಡಿದ್ದಾರೆ. ಇದು ಲೋಕಸಭೆ ಚುನಾವಣೆ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT