ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತಿನ ಬೇಸಾಯ

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಳ್ಳಿಯ ಬದುಕು, ಸಂಸ್ಕೃತಿ ಬಿಂಬಿಸುವ ಶಿಲ್ಪಕಲಾಕೃತಿಗಳ ತಾಣವಾಗಿ ಜಗತ್ರ್ಪಸಿದ್ಧಗೊಂಡಿರುವ ಹಾವೇರಿಯ ‘ರಾಕ್‌ ಗಾರ್ಡನ್’ ನಲ್ಲೀಗ ಮುತ್ತುಗಳ ಲೋಕ ತೆರೆದಿದೆ. ಅತ್ತ, ಇತ್ತ ಎತ್ತ ನೋಡಿದರೂ ಮುತ್ತುಗಳದ್ದೇ ಕಾರುಬಾರು. ಇದರ ಹೆಸರು ‘ನವ್ಯ ಶಿಲ್ಪಕಲಾಕೃತಿಗಳ ವಸ್ತು ಸಂಗ್ರಹಾಲಯ ’.

‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’ ‘ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎಂಬ ರೈತನ ಮಹತ್ವ ಸಾರುವ ಸಂದೇಶಗಳನ್ನು ಆಧುನಿಕ ಜಗತ್ತಿಗೆ ತಿಳಿಸುವ ಉದ್ದೇಶದಿಂದ ನಮ್ಮ ಸಾಂಪ್ರದಾಯಿಕ ಬೇಸಾಯದ ವಿವಿಧ ಆಯಾಮಗಳನ್ನು ನವ್ಯ ಶಿಲ್ಪಕಲಾಕೃತಿಗಳ ಮೂಲಕ ಈ ವಸ್ತು ಸಂಗ್ರಹಾಲಯದಲ್ಲಿ  ಹಿಡಿದಿಡಲಾಗಿದೆ.

ಕೃಷಿ ಕೇವಲ ಗ್ರಾಮೀಣರ ಬದುಕಿಗೆ ಅಷ್ಟೇ ಅಲ್ಲ, ಜಗತ್ತಿನ ಜೀವರಾಶಿಗಳನ್ನು ಬದುಕಿಸುವ ಅಕ್ಷಯ ಪಾತ್ರೆ. ಈ ಅಕ್ಷಯ ಪಾತ್ರೆಯ ಒಡೆಯ ರೈತ. ಅದಕ್ಕಾಗಿ ಆತನಿಗೆ ಅನ್ನದಾತ ಎಂಬ ಹೆಗ್ಗಳಿಕೆಯಿದೆ. ಒಂದು ಕಾಲದಲ್ಲಿ ಗ್ರಾಮೀಣರ ಬದುಕಿನ ಭಾಗವಾಗಿದ್ದ ಸಾಂಪ್ರದಾಯಿಕ ಕೃಷಿ, ಕಾಲ ಬದಲಾದಂತೆ ಯಂತ್ರಗಳ ಬಳಕೆ, ಆಮದು, ರಫ್ತುಗಳ ಬವಣೆಗೆ ಸಿಕ್ಕು ಇಂದು ಅವರ ಬದುಕಿನಿಂದ ದೂರಾಗುತ್ತಿದೆ.

ಕೃಷಿ, ಕೃಷಿಕ, ಕೃಷಿ ಪರಿಕರಗಳು, ಜಾನುವಾರುಗಳು ಆಧುನಿಕ ಜಗತ್ತಿನಿಂದ ಬಹುದೂರ ಉಳಿದಿವೆ. ಈಗ ಸಾಂಪ್ರದಾಯಿಕ ಕೃಷಿ, ತನ್ನತನವನ್ನು ಕಳೆದುಕೊಂಡಿದೆ. ಕೃಷಿಯೇ ಜೀವನ ಎಂದುಕೊಂಡ ಕೃಷಿಕನಿಗೆ ಹಾಗೂ ಆತನ ಕೃಷಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಾಗಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ನಶಿಸುವ ಹಂತದಲ್ಲಿರುವ ಸಾಂಪ್ರದಾಯಿಕ ಕೃಷಿಯ ಒಟ್ಟಾರೆ ಚಿತ್ರಣವನ್ನು ಒಂದೆಡೆ ಕಟ್ಟಿಕೊಡುವುದರ ಜತೆಗೆ, ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ಇಲ್ಲಿನ ಸಂಗ್ರಹಾಲಯದಲ್ಲಿರುವ ಶಿಲ್ಪ ಕಲಾಕೃತಿಗಳು ಪರಿಚಯಿಸಲಿವೆ.

ರಾಕ್‌ ಗಾರ್ಡನ್‌ನ ರೂವಾರಿ ಹಾಗೂ ಹಿರಿಯ ಕಲಾವಿದ ಟಿ.ಬಿ.ಸೊಲಬಕ್ಕನವರ, ರಾಕ್‌ ಗಾರ್ಡನ್‌ನ ಒಂದು ಭಾಗದಲ್ಲಿ ಈ ಮುತ್ತಿನ ಶಿಲ್ಪಕಲಾಕೃತಿಗಳ ವಸ್ತು ಸಂಗ್ರಹಾಲಯ  ಸ್ಥಾಪಿಸಿದ್ದಾರೆ. ಇಲ್ಲಿ ಬಣ್ಣ ಬಣ್ಣದ ಲಕ್ಷಾಂತರ ಮುತ್ತುಗಳನ್ನು ಬಳಕೆ ಮಾಡಿ ತಯಾರಿಸಿದ ಹತ್ತಕ್ಕೂ ಹೆಚ್ಚು ನವ್ಯ ಶಿಲ್ಪಕಲಾಕೃತಿಗಳಿವೆ. ಒಂದೊಂದು ಕಲಾಕೃತಿಯೂ ಒಂದೊಂದು ಕೃಷಿ ಚಟುವಟಿಕೆಯ ಒಳ, ಹೊರವುಗಳ ಮೇಲೆ ಬೆಳಕು ಚೆಲ್ಲುತ್ತವೆ.

ವಸ್ತು ಸಂಗ್ರಹಾಲಯದಲ್ಲಿರುವ ಪ್ರತಿಯೊಂದು ಕಲಾಕೃತಿಗಳನ್ನು ಗಾಜಿನ ಪೆಟ್ಟಿಗೆಯಲ್ಲಿ ಇಡಲಾಗಿದೆ. ಕಲಾಕೃತಿಗಳ ಹೊಳಪು ಕಡಿಮೆಯಾಗಬಾರದು ಎನ್ನುವ ಉದ್ದೇಶ ಒಂದಾದರೆ, ನಶಿಸುತ್ತಿರುವ ಕೃಷಿ, ಅದರಿಂದ ದೂರ ಸರಿಯುತ್ತಿರುವ ಕೃಷಿಕನನ್ನು ಆಹಾರ ಅಭದ್ರತೆಯ ಇಂದಿನ ದಿನಗಳಲ್ಲಿ ರಕ್ಷಿಸಬೇಕಾಗಿದೆ ಎಂಬ ಮಹಾನ್‌ ಸಂದೇಶ ಇದರಲ್ಲಡಗಿದೆ. ಗಾರ್ಡನ್‌ನಲ್ಲಿ ಪ್ರತಿಯೊಂದು ಕಲಾಕೃತಿಗಳನ್ನು ಕಟ್ಟೆಯ ಮೇಲೆ ಇಡಲಾಗಿದೆ. ವಸ್ತು ಸಂಗ್ರಹಾಲಯದಲ್ಲಿರುವ ಕೃಷಿ ಸಂಬಂಧಿತ ಕಲಾಕೃತಿಗಳನ್ನು ಮಾತ್ರ ಮಾನವ ನಿರ್ಮಿತ ಕಟ್ಟೆಯ ಮೇಲೆ ಇಡದೇ, ನೆಲಮೂಲ ಸಂಸ್ಕೃತಿಯ ಉಳಿಸುವುದರ ಸಂಕೇತವಾಗಿ ಭೂಮಿಯ ಮೇಲೆ ಇಟ್ಟಿರುವುದು ವಿಶೇಷ.

ಮುತ್ತುಗಳ ಬಳಕೆ ಏಕೆ
ಈಗಾಗಲೇ ಸಾಂಪ್ರದಾಯಿಕ ಕೃಷಿಯನ್ನು ಕ್ಯಾನವಾಸ್‌, ಕೊಲಾಜ್‌, ಕಲ್ಲಿನ ಕಲಾಕೃತಿಗಳಲ್ಲಿ ಹಿಡಿದಿಡಲಾಗಿದೆ. ಮುತ್ತುಗಳನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ಇಂತಹ ಶಿಲ್ಪಕಲಾಕೃತಿಗಳನ್ನು ತಯಾರಿಸಿರುವುದು ಬಹಳ ಅಪರೂಪ. ಹಾಗೆಂದು ಮುತ್ತುಗಳನ್ನು ಬಳಸಿ ಕಲಾಕೃತಿಗಳನ್ನು ತಯಾರಿಸುವುದು ಹೊಸದೇನಲ್ಲ.

ಇದೇ ಮುತ್ತುಗಳಿಂದ ಪ್ರಾಣಿಗಳ, ಹಣ್ಣು ಹಂಪಲಗಳ, ದೇವರ, ಬಾಗಿಲು ತೋರಣದ ಕಲಾಕೃತಿಗಳನ್ನು ಹಾಗೂ ಜಾನಪದ ಕಲೆಗಳಾದ ದೊಡ್ಡಾಟ, ವೇಷಭೂಷಣಗಳನ್ನು ತಯಾರಿಸಿರುವುದು ಈಗಲೂ ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುತ್ತವೆ. ಆದರೆ, ಸಮಕಾಲೀನ ಕಲೆಗೆ ಹೊಸ ಆಯಾಮವನ್ನು ನೀಡುವ ಹಾಗೂ ನವ್ಯ ಕಲೆಯನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ಇಲ್ಲಿನ ಶಿಲ್ಪಕಲಾಕೃತಿ­ಗಳಿಗೆ ಮುತ್ತುಗಳನ್ನು ಬಳಕೆ ಮಾಡಲಾಗಿದೆ ಎಂದು ಹೇಳುತ್ತಾರೆ ವಸ್ತು ಸಂಗ್ರಹಾಲಯದ ರೂವಾರಿ ಕಲಾವಿದ ಟಿ.ಬಿ.ಸೊಲಬಕ್ಕನವರ.

‘ಮುತ್ತು’ ಶುದ್ಧತೆಯ ಸಂಕೇತ. ದವಸ ಧಾನ್ಯಗಳನ್ನು ಸಹ ಮುತ್ತಿನ ಕಾಳು, ಮುತ್ತಿನ ರಾಶಿ, ವ್ಯಕ್ತಿಗೆ ಮುತ್ತಿನಂತ ಮನುಷ್ಯ ಎಂದೆಲ್ಲ ಕರೆಯುತ್ತೇವೆ. ರೈತ ಕೂಡಾ ನಿಷ್ಕಲ್ಮಷ ಮನಸ್ಸಿನಿಂದ ಉತ್ತಿ, ಬಿತ್ತಿ ಜಗತ್ತಿಗೆ ಅನ್ನ ನೀಡುವುದನ್ನು ಪ್ರತಿಪಾದಿಸಲು ಮುತ್ತುಗಳಿಂದ ಕಲಾಕೃತಿಗಳನ್ನು ತಯಾರಿಸಲಾಗಿದೆ. ಅದಕ್ಕಾಗಿ ಬೆಳ್ಳಿ, ಬಂಗಾರ ವರ್ಣ, ಹಸಿರು, ಹಳದಿ, ಕೆಂಪು, ಕಂದು, ಬಿಳಿ ಸೇರಿದಂತೆ ಹಲವು ಬಣ್ಣಗಳ ಮುತ್ತುಗಳನ್ನು ಬಳಸಲಾಗಿದೆ ಎನ್ನುತ್ತಾರೆ ಅವರು.

ಐದಾರು ತಿಂಗಳ ಕಾಲ 20ಕ್ಕೂ ಹೆಚ್ಚು ಕಲಾವಿದರು ಈ ಶಿಲ್ಪ ಕಲಾಕೃತಿಗಳನ್ನು ತಯಾರಿಸಿದ್ದಾರೆ. ವಸ್ತು ಸಂಗ್ರಹಾಲಯ  ಕೂಡ ಸುಸಜ್ಜಿತ ರೀತಿಯಲ್ಲಿ ಸಿದ್ಧಗೊಂಡಿದೆ. ಇದೇ  ಅಕ್ಟೋಬರ್‌ 1ರಂದು ಈ ವಸ್ತು ಸಂಗ್ರಹಾಲಯ  ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು ಗಾರ್ಡನ್‌ನ ನಿರ್ದೇಶಕಿ ವೇದಾರಾಣಿ ದಾಸಪ್ಪನವರ.

ಕೃಷಿಮಯ
ರೈತರು ಹೊಲ ಹದ ಮಾಡಲು ರಂಟಿ, ಕುಂಟಿಗಳನ್ನು ಹೊತ್ತು ಸಾಗುವುದು, ಎತ್ತುಗಳ ಮೂಲಕ ಹೊಲವನ್ನು ಉಳುಮೆ ಮಾಡುವುದು, ಬಿತ್ತನೆ ಮಾಡುವುದು, ಏತದ ಮೂಲಕ ನೀರೆತ್ತುವುದು, ಕಣ ನಿರ್ಮಿಸುವುದು, ಹಂತಿ ಹೊಡೆಯುವುದು ಹಾಗೂ ರೈತ, ರೈತ ಮಹಿಳೆಯರು ಸೇರಿ ರಾಶಿ ಮಾಡುವುದು ಸೇರಿದಂತೆ ಹಲವು ಕೃಷಿ ಚಟುವಟಿಕೆಯ ವಿಶಿಷ್ಟ ಶಿಲ್ಪಕಲಾಕೃತಿಗಳು ನಮ್ಮ ಸಾಂಪ್ರದಾಯಿಕ ಕೃಷಿ ಅನಾವರಣಗೊಳ್ಳುವಂತೆ ಮಾಡಿವೆ.

ಎತ್ತಿನ ಕೊಂಬು, ಕಾಲು, ಮೂಗುದಾರ, ರಂಟೆ, ಕುಂಟೆ ಹಾಗೂ ರೈತನ ಕಲಾಕೃತಿಗಳಿಗೆ ಬೇರೆ ಬೇರೆ ಬಣ್ಣದ ಮುತ್ತುಗಳನ್ನು ಬಳಸಿದ್ದರಿಂದ ಪ್ರತಿಯೊಂದು ಕಲಾಕೃತಿ ಅತ್ಯಾಕರ್ಷವಾಗಿವೆಯಲ್ಲದೇ, ಸಿಂಗರಿಸಿದ ಎತ್ತನ್ನು ಮನೆ ಮನೆಗೆ ಕರೆದೊಯ್ದು ರೈತರಿಂದ ದವಸ ಧಾನ್ಯಗಳನ್ನು ಸಂಗ್ರಹಿಸುವ ಕೋಲೆ ಬಸವ, ಅದನ್ನು ಹಿಡಿದುಕೊಂಡು ಕಹಳೆ ಊದುತ್ತಾ ಸಾಗುವ ಅದರ ಮಾಲೀಕನ ಕಲಾಕೃತಿ ಗಮನ ಸೆಳೆಯುತ್ತವೆ.
-ವಿಜಯ್‌ ಹೂಗಾರ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT