ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತು, ಸ್ವತ್ತು, ಮತ್ತು...

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೊಸತಲೆಮಾರಿನ ಲೇಖಕ ಎನ್. ಸುರೇಶ್ ನಾಗಲಮಡಿಕೆ ತಮ್ಮ ಪಿಎಚ್.ಡಿ ನಿಬಂಧ `ಕನಕದಾಸರು: ಸಾಂಸ್ಕೃತಿಕ ಅಧ್ಯಯನ~ವನ್ನು ಈಗ `ಮುತ್ತು ಬಂದಿದೆ ಕೇರಿಗೆ~ ಹೆಸರಿನಲ್ಲಿ ಪ್ರಕಟಿಸಿದ್ದಾರೆ.

ಕೊಳಲ ದನಿಗೆ ಸರ್ಪ ತಲೆದೂಗಿದಡೇನು,
ಒಳಗಣ ವಿಷದ ಬಯಕೆ ಬಿಡದನ್ನಕ್ಕ?
ಹಾಡಿದಡೇನು, ಕೇಳಿದಡೇನು,
ತನ್ನಲುಳ್ಳ ಅವಗುಣ ಬಿಡದನ್ನಕ್ಕ?
ಒಳಗನರಿದು ಹೊರಗೆ ಮರೆದವರ
ನೀ ಎನಗೆ ತೋರಯ್ಯ ಚೆನ್ನಮಲ್ಲಿಕಾರ್ಜುನಾ
(ಅಕ್ಕಮಹಾದೇವಿ)

ಮನುಷ್ಯ ಸಂಬಂಧಗಳನ್ನು ಮತ್ತಷ್ಟು ಬಿಗುಗೊಳಿಸುವಲ್ಲಿ ಸಂಶೋಧನೆಗಳ ಪಾತ್ರವೂ ಇರುವುದನ್ನು `ಮುತ್ತು ಬಂದಿದೆ ಕೇರಿಗೆ~ ಕೃತಿಯು ಹೇಳುತ್ತಿರುವಂತಿದೆ. ಈ ಸಾಂಸ್ಕೃತಿಕ ಅಧ್ಯಯನವು ಮೇಲಿನ ವಚನವನ್ನು ನೆನಪಿಸುತ್ತದೆ. ಹಾಗೆ ನೋಡಿದರೆ, ವಚನಕಾರರು ಕುಲವನ್ನು ಗುಣವೆಂದು ಹೇಳಲಿಲ್ಲ.

ಅವರಿಗೆ ಕಟ್ಟಳೆಯನ್ನು ಮೀರುವ ಕಡೆಗೆ ಒಲವು. ಆ ಒಲವಿನ ತುಣುಕುಗಳನ್ನು ನುಡಿಯಲ್ಲಿ ನಿಚ್ಚಳವಾಗಿಯೇ ತೋರಿರುವರು. ಕುಲದ ಅನುಚರರನ್ನು ಕನಕದಾಸರು ವಿಷಜಂತುಗಳೆಂದು ಕರೆಯುವರು. ಕುಲದ ಅನೇಕ ಸಂಕಟಗಳಿಗೆ ಕನಕದಾಸರು ಸಿಲುಕಿದರೂ ಅದರ ಕೇಡನ್ನು ಹೀಗೆ ಪ್ರಶ್ನಿಸುತ್ತಾರೆ-
ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ವೇಂದ್ರಿಯಗಳ ಕುಲ ಪೇಳಿರಯ್ಯ...

ನುಡಿಗಿಂತ ನುಡಿವವರನ್ನು ಆಶ್ರಯಿಸುವ ಜನಸಮುದಾಯ ಹೆಚ್ಚಿದಂತೆಲ್ಲ ಅಭೇದ ನೆಲೆಯಲ್ಲಿ ಜೀವಿಸಿದ ಆಕ್ಟಿವಿಸ್ಟರನ್ನು ಸಾಂಸ್ಕೃತಿಕ ನಾಯಕರನ್ನಾಗಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಹೊರಗಿನ ರೂಪಕ್ಕೆ ಮಾರುಹೋದಂತೆಲ್ಲ ಸಾಂಸ್ಕೃತಿಕ ನಾಯಕರ ಒಳಗಿನ ತುಡಿತ ನಿಧನಿಧಾನವಾಗಿ ಕ್ಷೀಣಿಸತೊಡಗಿದೆ. ಈ ತುಡಿತವನ್ನು ಬದಿಗಿರಿಸಿ ನಡೆಯುತ್ತಿರುವ ಸಂಶೋಧನೆಗಳು ಕೇವಲ ಅಂಗಗಳನ್ನು ಕುರಿತು ಮಾತನಾಡುವ ಕಾರ್ಯದಲ್ಲಿ ತೊಡಗಿಕೊಂಡಿವೆ; ವಿವರಗಳ ಪಿಂಡಿಯನ್ನು ತೂಗಿ ನೋಡುವುದರಲ್ಲಿಯೇ ಹೆಚ್ಚು ಆಸಕ್ತವಾಗಿವೆ.

ಬಸವಣ್ಣ, ಕನಕದಾಸ, ಕುವೆಂಪು ಈ ಮೊದಲಾದ ಸಾಂಸ್ಕೃತಿಕ ನಾಯಕರ ಕುರಿತು ನಡೆದಿರುವ ಸಂಶೋಧನೆಗಳು ಎರಡು ಬಗೆಯಲ್ಲಿ ಕಾಣಿಸಿಕೊಂಡಿವೆ. ಒಂದು, ಮಾಹಿತಿಗಳನ್ನು ಕಲೆಹಾಕಿ ನೆನ್ನೆಗಳನ್ನು ಕಂಡುಕೊಳ್ಳುವ ಮಾದರಿ. ಎರಡು, ಇವತ್ತಿನ ಆದ್ಯತೆಗೆ ಅನುಗುಣವಾಗಿ ನಾಯಕತ್ವವನ್ನು ಕಟ್ಟಿಕೊಳ್ಳುವ ಮಾದರಿ.
 
ಕಳೆದ ಎರಡು ದಶಕಗಳಿಂದ ಎರಡನೇ ಮಾದರಿಯೇ ಮುಖ್ಯವಾಗಿ ಮುಂಚೂಣಿಗೆ ಬರುತ್ತಿದೆ. ನಮ್ಮ ಸಂಶೋಧಕರು ಹೇಳುತ್ತಿರುವ ಆದ್ಯತೆ ಯಾವುದಾಗಿದೆ? ಯಾವುದಾಗಿರಬೇಕು? ಎಂಬ ಪ್ರಶ್ನೆ ಇಲ್ಲಿಯೇ ಹುಟ್ಟಿಕೊಳ್ಳುತ್ತದೆ. ಏಕೆಂದರೆ ಸಾಂಸ್ಕೃತಿಕ ಅಧ್ಯಯನವು ಕುಲದ ಹಿರಿಮೆಯನ್ನು ಉದ್ದೀಪಿಸುವ ಮದ್ದಾಗಿದ್ದು, ಮುದ ನೀಡುವ ವಿಷಯವಾಗಿಯೇ ತಲೆಯೆತ್ತುತ್ತಿದೆ. 

ಚರಿತ್ರೆಯಲ್ಲಿ `ಏಟಿಗೆ-ಏಟು~, `ಮುಯ್ಯಿಗೆ-ಮುಯ್ಯಿ~, `ಕಣ್ಣಿಗೆ-ಕಣ್ಣು~ ಎಂದು ಪಾಲಿಸಿದ ವಿರುದ್ಧ ನೀತಿಯನ್ನೇ ವಿಶ್ವವಿದ್ಯಾನಿಲಯಗಳಿಂದ ಹೊರಬರುತ್ತಿರುವ ಸಾಂಸ್ಕೃತಿಕ ಅಧ್ಯಯನಗಳು ಮುಂದುವರೆಸುತ್ತಿವೆ. ಇಂತಹ ಅಧ್ಯಯನಗಳು ಬಿಲ್ಲು ಮಾತ್ರವಾಗಿ, ಕೃತಿಯ ವಿಶ್ಲೇಷಣೆಯಿಂದ ಹುಟ್ಟಿಬರುವ ಸಂಕೇತಗಳು ಬಾಣಗಳಾಗುತ್ತಿವೆ.
 
ಈ ಬಗೆಯ ಅಧ್ಯಯನಗಳು ಸಾಂಸ್ಕೃತಿಕ ನಾಯಕರನ್ನು ತಮ್ಮ ಇಡುಗಂಟು ಎಂದೇ ಮನಪೂರ್ವಕ ಭಾವಿಸುತ್ತವೆ. ಹಾಗೆ ಭಾವಿಸಿ ರಾಜಕಾರಣದ ರಂಗಸಜ್ಜಿಕೆಗೆ ಕರೆತಂದು ಆಕ್ಟಿವೇಟ್ ಮಾಡುತ್ತಿವೆ. ನಾಯಕರನ್ನು ತಮ್ಮ ಮನೆಯನ್ನಷ್ಟೇ ಕಾಯುವ ನಿಷ್ಠಾವಂತ ನಾಯಿಯ ಹಾಗೆ ಉಳಿಸಲು ಅಧ್ಯಯನಗಳು ಹಟಹಿಡಿಯುತ್ತಿವೆ.

ಹೀಗಾಗಿ ನಾಯಕರ ತತ್ತ್ವ, ಸವೆಸಿದ ಕಲ್ಲುಮುಳ್ಳಿನ ಹಾದಿ ತಾನೇ ತಾನಾಗಿ ಹಿನ್ನೆಲೆಗೆ ಸರಿದುಬಿಡುತ್ತಿವೆ. ಇದಕ್ಕೆ ಎರಡು ಕಾರಣಗಳನ್ನು ಗುರುತಿಸಬಹುದು. ಒಂದು, ತ್ವರಿತ ನಿಖರತೆಯ ಅಪೇಕ್ಷೆ. ಇನ್ನೊಂದು, ಸ್ವಾಧೀನ ಬಳಕೆಯ ಅಪೇಕ್ಷೆ. ಇವು ಓದಿನ ಬಗೆಯನ್ನು ನಿರ್ದೇಶಿಸುತ್ತಿವೆಯೇ? ಸಾಂಸ್ಕೃತಿಕ ನಾಯಕರ ನಡೆ-ನುಡಿಯನ್ನು ಸಂಕುಚಿತಗೊಳಿಸುತ್ತಿವೆಯೆ? ಎಂಬ ಸಂದೇಹಗಳು ಸುರೇಶರ ಕೃತಿಯನ್ನು ಓದಿದಾಗ ಮೂಡುತ್ತದೆ.

ಅಸಮಾನತೆಯ ನೆಲೆಯಮೇಲೆ ನಿಂತುಕೊಂಡು ಕನಕದಾಸರ ಬಾಳಾಟದ ಪೂರ್ವಾಪರಗಳನ್ನು, ಅವರ ಹೋರಾಟವನ್ನು ಕೃತಿಗಳ ಮೂಲಕ ವಿಶ್ಲೇಷಿಸುವುದಕ್ಕೆ ಮಾತ್ರವೇ ಈ ಕೃತಿ ಸೀಮಿತವಾಗಿಲ್ಲ; ಮುಖ್ಯವಾಗಿ ಮನುಷ್ಯನ ಘನತೆಯ ಮುಂದಿರುವ ಸವಾಲುಗಳ ಶೋಧಕ್ಕೆ ತೆರೆದುಕೊಳ್ಳುತ್ತದೆ.

ಘನತೆಯನ್ನು ವ್ಯಕ್ತಿ ತನ್ನ ಕಾಯಕ ಮತ್ತು ಕ್ರಿಯಾಶಕ್ತಿಯಿಂದ ತುಂಬಿಕೊಳ್ಳಬೇಕೋ? ಅಥವಾ ಸಾಂಸ್ಕೃತಿಕ ನಾಯಕರು ಎನ್ನುವ ಸಂಕೇತಗಳಿಂದ ಪಡೆಯಬೇಕೋ? ಈ ಎರಡು ಕವಲುಗಳು ಇಲ್ಲಿದ್ದು, ಸಂಕೇತದ ಸಹಚರ್ಯದ ಹಂಬಲವೇ ಇಲ್ಲಿ ಪ್ರಧಾನವಾಗಿದೆ. ಇದು ಸಂಕಲನದ ಶೀರ್ಷಿಕೆಯಲ್ಲಿಯೂ ಸ್ಪಷ್ಟವಾಗಿದೆ.

`ಮುತ್ತು ಬಂದಿದೆ ಕೇರಿಗೆ~ ಎಂಬುದೇ ಗ್ರಹಿಕೆಯೊಂದನ್ನು ದಾಟಿಸುತ್ತಿದೆ. ದೊಡ್ಡದಾಗಿ ಬಾಳಿದವರನ್ನು ಮುತ್ತು ಎಂದು ಭಾವಿಸುವುದು ಸಹಜವೇ. ಆದರೆ ಆ ಮುತ್ತು ಎಲ್ಲಿಗೆ ಬಂತು? ಎಂದು ನಿರ್ದಿಷ್ಟಗೊಳಿಸಿರುವಲ್ಲಿಯೇ ಲೇಖಕರ ಆಯ್ಕೆ ವ್ಯಕ್ತವಾಗುತ್ತದೆ.
ಕನಕದಾಸರು ವೈದಿಕ ಸಮೂಹದ ವಿರುದ್ಧ ಹೋರಾಡಿ ಜಯಿಸಿದ್ದನ್ನು ದಾಖಲಿಸುವ ಲೇಖಕರು, ದಾಸರು ವರ್ತಮಾನದಲ್ಲಿ ಎದುರಿಸುತ್ತಿರುವ ಸಂಕೋಲೆಗಳನ್ನು ಈ ಕೆಳಕಂಡಂತೆ ಗುರುತಿಸುತ್ತಾರೆ.

1. ಉಡುಪಿಯ ಮಠದ ಅಂತರಂಗದಲ್ಲಿ ಕನಕ ಇಲ್ಲ, ಯಾಕೆ?
2. ಕೃಷ್ಣಮಠದಲ್ಲಿ ಹರಿದಾಸರ ಕೀರ್ತನೆಗಳು ಮಾತ್ರ ಯಾಕೆ ಪಠಣವಾಗುತ್ತಿವೆ?
3. ಧಾರ್ಮಿಕ ಉಪನ್ಯಾಸಕರು `ರಾಮಧಾನ್ಯಚರಿತ್ರೆ~ಯನ್ನು ಮರೆತು ಮಾತನಾಡುತ್ತಾರೆ, ಯಾಕೆ?
4. ಕನಕದಾಸರ ಕೀರ್ತನೆಗಳು ಕೆಲವು ಧಾರ್ಮಿಕ ಸ್ಥಳಗಳಿಂದ ಬಹಿಷ್ಕೃತಗೊಂಡಿರುವುದು ಯಾಕೆ?

ಈ ಪ್ರಶ್ನೆಗಳನ್ನು ಕೇಳುತ್ತಿರುವ ಲೇಖಕರೇ, ಪ್ರಾಮಾಣಿಕವಾಗಿ ಹೀಗೂ ಹೇಳುತ್ತಾರೆ- `ಕನ್ನಡ ಸಾಹಿತ್ಯವನ್ನು ಗಮನಿಸುತ್ತಾ ಬಂದರೆ ಧರ್ಮ ಗೌಣವಾಗಿ ನಾಯಕರು ಪ್ರಮುಖರಾಗಿದ್ದಾರೆ... ಎಲ್ಲಾ ಜಾತಿಗಳು ಒಬ್ಬೊಬ್ಬ ಸಾಂಸ್ಕೃತಿಕ ನಾಯಕರನ್ನು ಸೃಷ್ಟಿಸಿಕೊಳ್ಳುತ್ತಿವೆ, ಇದು ತಪ್ಪಲ್ಲ~ (ಪುಟ 22).

ಕನಕದಾಸರನ್ನು ಹೊರನೂಕಿರುವ ಸಾಂಸ್ಥಿಕ ನೆಲೆಯನ್ನು ಪ್ರಶ್ನಿಸುವ ಲೇಖಕರೇ, ಅವರನ್ನು ಇನ್ನೊಂದು ಸಾಂಸ್ಥಿಕ ನೆಲೆಯ ಗೂಟಕ್ಕೆ ಕಟ್ಟಲು ಬಯಸುತ್ತಾರೆ. ಈ ವೈರುಧ್ಯ ಸಂಶೋಧಕರದು ಮಾತ್ರವೇ? ಸಮಾಜವೇ ಇಂತಹ ವೈರುಧ್ಯಗಳ ಬೀಡಾಗಿದೆಯೆ?

ಸಾಂಸ್ಕೃತಿಕ ನಾಯಕರನ್ನು ಮೇಲಿನವರಿಂದ ಪಾರುಮಾಡಲು ಹೋಗಿ, ತನ್ನ ಅಪೇಕ್ಷಿತ ಸೆರೆಯಲ್ಲಿಡುತ್ತಿರುವ ತುರ್ತು ಏನನ್ನು ಸೂಚಿಸುತ್ತಿದೆ?- ಈ ಪ್ರಶ್ನೆಗಳು ಏಳುತ್ತವೆ. ಮೇಲಿನ ವೈರುಧ್ಯವು ಸಂಶೋಧನಾ ಕೃತಿಯ ತಳಹದಿ ಭದ್ರವಾಗಿಲ್ಲವೆಂದೇ ಹೇಳುತ್ತಲಿದೆ.

ಇದಕ್ಕೆ ಮತ್ತಷ್ಟು ಪುರಾವೆಗಳು ಕೃತಿಯ ಒಳಗೇ ಸಿಗುತ್ತವೆ. `ಸಂಸ್ಕೃತಿ~ ಕುರಿತು ಹಿರಿಯ ಲೇಖಕರ ಮಾತುಗಳನ್ನು ಉಲ್ಲೇಖಿಸುವ ಲೇಖಕರು- ಸಂಸ್ಕೃತಿ ಕುರಿತಾಗಿ ತಮ್ಮ ವ್ಯಾಖ್ಯೆ ಏನು  ಎಂಬುದನ್ನು ನಿರೂಪಿಸುವುದಿಲ್ಲ. ಪ್ರಗತಿಪರ ಎಂಬ ಪದವನ್ನು ಲೇಖಕರು ಬಿಡುಬೀಸಾಗಿ ಬಳಸುತ್ತಾರೆ. ಆದರೆ, ಇವತ್ತು ಪ್ರಗತಿಪರ ಸಂಘಟನೆಯು ಸಂಸ್ಥೆಯಾಗಿ ಒಡೆದು ಚೂರಾಗಿದೆ. ಲೇಖಕರು ಯಾವ ಚೂರನ್ನು ಹಿಡಿದು ವಿಷಯವನ್ನು ಸಮರ್ಥಿಸುತ್ತಿದ್ದಾರೆನ್ನುವುದು ಗೊತ್ತಾಗುವುದಿಲ್ಲ. ಕನಕದಾಸರು ಶೂದ್ರರಾಗಿದ್ದರೆಂದು ಹೆಜ್ಜೆಹೆಜ್ಜೆಗೆ ಹೇಳುವುದನ್ನು ಲೇಖಕರು ಸವಿಯುತ್ತಿರುವುದೇಕೆ ಎನ್ನುವುದೂ ತಿಳಿಯುವುದಿಲ್ಲ.

ಮುತ್ತು ಬಂದಿದೆ ಕೇರಿಗೆ
ಲೇ: ಡಾ. ಎನ್. ಸುರೇಶ್ ನಾಗಲಮಡಿಕೆ
ಪು: 246; ಬೆ: ರೂ. 200
ಪ್ರ: ಸಿರಿವರ ಪ್ರಕಾಶನ, ಲಕ್ಷ್ಮಿನಾರಾಯಣಪುರ, ಬೆಂಗಳೂರು-560 021

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT