ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೆ ಸಾರು ಸವಿಯ ಬನ್ನಿ...

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಇದೇ 28ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೆಂಕೆರೆ ಸಮೀಪದ ಪುರದಮಠದ ಸುತ್ತಮುತ್ತ `ಘಮ್' ಎನ್ನುವ ಪರಿಮಳ. ಬಗೆಬಗೆಯ ತರಕಾರಿಗಳದ್ದೇ ರಾಜ್ಯ. ರಾಗಿಮುದ್ದೆಯ ಭರಪೂರ ಸಂಗ್ರಹ! ಇನ್ನೊಂದೆಡೆ ಇದನ್ನು ಸವಿಯಲು ಸಾವಿರಾರು ಭಕ್ತರ ಮಹಾಪೂರ.

ಪ್ರತಿವರ್ಷವೂ ಕಾರ್ತಿಕ ಮಾಸದ ಹುಣ್ಣಿಮೆಯಂದು ನಡೆಯುವ ಮಹಾದಾಸೋಹದಂತೆ ಈ ಶುಕ್ರವಾರವೂ ನಡೆಯಲಿರುವ ಕಾರಣ, ಮಠದ ಚಿತ್ರಣ ಅಂದು ಸಂಪೂರ್ಣ ಬದಲಾಗಲಿದೆ. ಮುದ್ದೆಸಾರು ಸವಿಯುವುದು ಮಾತ್ರವಲ್ಲದೇ ಅದನ್ನು ಮನೆಗೂ ಕೊಂಡೊಯ್ಯಲು ಇಲ್ಲಿ ಅವಕಾಶ ಇರುವ ಕಾರಣ, ಕಿಕ್ಕಿರಿದು ಜನ ತುಂಬಿರುತ್ತಾರೆ.

ಸುತ್ತಮುತ್ತಲ ಹಳ್ಳಿಗಳ ರೈತರು ತಾವು ಬೆಳೆದ ದವಸಧಾನ್ಯಗಳನ್ನು ದಾಸೋಹಕ್ಕೆ ತಂದು ಹಾಕುತ್ತಾರೆ. ತಮ್ಮಲ್ಲಿ ಬೆಳೆದ ತರಕಾರಿ, ಕುಂಬಳಕಾಯಿ, ಸೋರೆಕಾಯಿ ಸೇರಿದಂತೆ ತರಹೆವಾರಿ ಕಾಳುಗಳನ್ನು ಕ್ವಿಂಟಾಲುಗಟ್ಟಲೆ ಭಕ್ತರು ನೀಡುತ್ತಾರೆ. ಸಾಕಷ್ಟು ಕಾಳು, ತರಕಾರಿಗಳಿಂದ ತಯಾರಿಸಿದ ಸಾರಿಗೆ ಭಕ್ತರು ಮುಗಿ ಬೀಳುತ್ತಾರೆ. ಅಲ್ಲದೆ ಜಾತ್ರೆಗೆ ಬಂದ ಪ್ರತಿಯೊಬ್ಬರೂ ಮುದ್ದೆ-ಸಾರಿನ ಸವಿ ಸವಿದೇ ಹೋಗುವುದು ವಾಡಿಕೆ.

ಪುರದಮಠದ ಹಿನ್ನೆಲೆ
12ನೇ ಶತಮಾನದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಕಾಯಕ ಮತ್ತು ದಾಸೋಹದ ಅಣತಿಯಂತೆ ಬಳ್ಳಾರಿ ಜಿಲ್ಲೆ ಕೊಟ್ಟೂರಿನಿಂದ ಪಾದಯಾತ್ರೆ ಬಂದಿದ್ದ ಚನ್ನಬಸವಣ್ಣ ಪುರದಮಠದಲ್ಲಿ ಕೆಲವು ಕಾಲ ನೆಲಸಿ ಸುತ್ತಮುತ್ತಲ ಗ್ರಾಮಗಳಲ್ಲಿ ಭಿಕ್ಷಾಟನೆ ಮಾಡಿ ಬಂದ ದವಸಗಳಿಂದ ಇಲ್ಲಿ ಕಾರ್ತಿಕ ಮಾಸದ ಪೂರ್ಣಿಮೆಯಂದು ಮಹಾ ದಾಸೋಹ ಆರಂಭಿಸಿದರು ಎಂಬ ಪ್ರತೀತಿ ಇದೆ.

ವರ್ಷಾನುಗಟ್ಟಲೆ ಇಲ್ಲಿ ನೆಲೆಸಿದ್ದ ಚನ್ನಬಸಣ್ಣ ಪುರದಮಠದ ಪಕ್ಕದ ಬೆಟ್ಟದಲ್ಲಿರುವ ಗವಿಯಲ್ಲಿ ಪ್ರತಿದಿನವೂ ತಪಸ್ಸನ್ನಾಚರಿಸುತ್ತಿದ್ದು ಇದಕ್ಕೆ ಬೆಂಬಲವಾಗಿ ಮರುಳ ಸಿದ್ದೇಶ್ವರಸ್ವಾಮಿಗಳು ನಿಲ್ಲುತ್ತಿದ್ದರು. ಹಲವು ದಿನಗಳ ಕಾಲ ಗವಿಯಲ್ಲಿ ತಪಸ್ಸನ್ನಾಚರಿಸಿ ನಂತರ ಸುರಂಗ ಮಾರ್ಗದ ಮೂಲಕ ಹೊರಹೊಗಿ ಚನ್ನಬಸಣ್ಣ ಗುಬ್ಬಿಯಲ್ಲಿ, ಮರುಳಸಿದ್ದೇಶ್ವರರು  ಕುಪ್ಪೂರಿನಲ್ಲಿ ನೆಲೆ ನಿಂತರು ಎಂದು ಹೇಳಲಾಗುತ್ತದೆ.

ಈಗಲೂ ಇಲ್ಲಿರುವ ಗವಿಯಲ್ಲಿ ಸ್ವಾಮಿಗಳು ತಪಸ್ಸು ಮಾಡಿದ ಸ್ಥಳ, ಅವರು ಬಳಸುತ್ತಿದ್ದ ಮಣ್ಣಿನ ಪೂಜಾ ಸಾಮಾಗ್ರಿಗಳು, ಶರಣರು ಸೇರಿ ಚರ್ಚಿಸುತ್ತಿದ್ದ ಸಭಾ ಮಂಟಪ ಇಂದಿಗೂ ಕಾಣಬಹುದು.

ನಂತರದ ದಿನಗಳಲ್ಲಿ ಇಲ್ಲಿ ನೆಲೆಸಿದ ಶಿವಲಿಂಗಸ್ವಾಮಿಗಳು ಕಾರ್ತಿಕ ಮಾಸದ ಮಹಾ ದಾಸೋಹವನ್ನು ಪ್ರಬುದ್ಧಮಾನಗೊಳಿಸಿದರು ಎಂದು ತಿಳಿದು ಬರುತ್ತದೆ. ಇವರು ಸಹ ಮಹಾತಪಸ್ವಿಯಾಗಿದ್ದು ಗವಿಯಲ್ಲಿ ತಪಸ್ಸು ಮಾಡುತ್ತಿದ್ದರು. ದಾಸೋಹದ ಜತೆಗೆ ಜ್ಞಾನ ದಾಸೋಹವನ್ನು ಸಹ ನಡೆಸುತ್ತಿದ್ದರು.

ಪ್ರತಿ ಸೋಮವಾರ ಕೋರಣ್ಯಸೇವೆ, ಪ್ರತಿ ಹುಣ್ಣಿಮೆಯಂದು ಕಟ್ಟಳೆಸೇವೆ ಆರಂಭಿಸಿದರು. ಪೂಜೆ ಹಾಗೂ ಪ್ರಸಾದದ ನಂತರ ಬಸವಾದಿ ಶರಣರ ಬಗ್ಗೆ ಪ್ರವಚನಗಳನ್ನು ನಡೆಸುತ್ತಿದ್ದರೂ ಎಂದು ಹೇಳಲಾಗುತ್ತದೆ. ಶಿವಲಿಂಗಸ್ವಾಮಿಗಳು ಪವಾಡಪುರುಷರಾಗಿದ್ದು ಹುಲಿಯ ಮೇಲೆ ಸುತ್ತ ಮುತ್ತಲ ಹಳ್ಳಿಗಳಲ್ಲಿ ಕಾರ್ತಿಕದ ಮಹಾದಾಸೋಹಕ್ಕೆ ದವಸಧಾನ್ಯ ಕಲೆಹಾಕುತ್ತಿದ್ದರು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

ಕಳೆದ 800 ವರ್ಷಗಳಿಂದಲೂ ಇಲ್ಲಿ ರಾಗಿಮುದ್ದೆ ಮತ್ತು ಸಾರಿನ ಮಹಾ ದಾಸೋಹ ನಡೆಯುತ್ತಾ ಬಂದಿದೆ. ಹುಳಿಯಾರು-ಹಿರಿಯೂರು ರಸ್ತೆಯ ಕೆಂಕೆರೆ ಸಮೀಪದಿಂದ 2 ಕಿ.ಮೀ ದೂರದಲ್ಲಿ ಪುರದಮಠವಿದೆ. ಅಂದಹಾಗೆ ಈ ಬಾರಿ ಮಹಾದಾಸೋಹ ಮಧ್ಯಾಹ್ನ ಒಂದು ಗಂಟೆಯಿಂದ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT