ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಧೋಳ, ಬಾದಾಮಿ: ಡೆಂಗೆ ಭೀತಿ, ನಾಲ್ಕು ಸಾವು?

Last Updated 30 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಮುಧೋಳ ಮತ್ತು ಬಾದಾಮಿ ತಾಲ್ಲೂಕಿನಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದ್ದು, ಶಂಕಿತ ಡೆಂಗೆ ಜ್ವಕ್ಕೆ  ನಾಲ್ವರು ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮುಧೋಳ ತಾಲ್ಲೂಕಿನ ಮುದ್ದಾಪುರ, ಜಾಜಿಕಟ್ಟಿ, ಮಳಲಿ, ಹೆಬ್ಬಾಳ, ಕಸಬಾ ಜಂಬಗಿ, ದಾದನಹಟ್ಟಿ, ಲಕ್ಷನಹಟ್ಟಿ ಹಾಗೂ ಬಾದಾಮಿ ತಾಲ್ಲೂಕಿನ ಕೆರೂರು, ಮಾಲಗಿ, ಮೋಹನಪುರ, ಕಲಬಂದಕೇರಿ, ಜಲಗೇರಿ, ನೀರಬೂದಿಹಾಳ, ಯಂಡಿಗೇರಿ, ಅನವಾಲ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಗೆ, ಮಲೇರಿಯಾ ಮತ್ತು ಚಿಕೂನ್‌ಗುನ್ಯದಿಂದ ನೂರಾರು ಜನರು ಬಳಲುತ್ತಿದ್ದಾರೆ.

ಮುಧೋಳ ತಾಲ್ಲೂಕಿನ ಮುದ್ದಾಪುರ ಗ್ರಾಮವೊಂದರಲ್ಲೇ ಮೂರು ಜನ ಶಂಕಿತ ಡೆಂಗೆಗೆ ಬಲಿಯಾಗಿದ್ದು, ಗ್ರಾಮದ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಇದೇ ಗ್ರಾಮದಲ್ಲಿ ಹತ್ತಾರು ಮಂದಿ ತೀವ್ರ ಜ್ವರ, ಮೈಕೈ ನೋವಿನಿಂದ ಊಟೋಪಚಾರ ತ್ಯಜಿಸಿ ಹಾಸಿಗೆ ಹಿಡಿದಿದ್ದು, ಮುಧೋಳ, ಬಾಗಲಕೋಟೆ ಮತ್ತು ಬೆಳಗಾವಿಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುದ್ದಾಪುರದ ಭಾಗ್ಯ ಮುತ್ತಪ ಭಜಂತ್ರಿ(12) ಆಗಸ್ಟ್ 2ರಂದು ಡೆಂಗೆ ಜ್ವರದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ತೀವ್ರ ಜ್ವರಿಂದ ಬಳಲುತ್ತಿದ್ದ ಆಕೆಯನ್ನು ಪೋಷಕರು ಬೆಳಗಾವಿಯ ಕೆಎಲ್‌ಇ  ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಇದೇ ಗ್ರಾಮದ  ರೂಪಾ (14) ಮತ್ತು ಬೇಬಿ ಜಾನ (28) ಸಹ ತೀವ್ರ ಜ್ವರದಿಂದ ಬಳಲಿ ಒಂದು ತಿಂಗಳೊಳಗೆ ಮೃತಪಟ್ಟಿದ್ದು, ಇಡೀ ಗ್ರಾಮದಲ್ಲಿ ಭೀತಿ ಆವರಿಸಿದೆ. ಗ್ರಾಮದಲ್ಲಿ ಹಬ್ಬದ ಸಂಭ್ರಮ ಮರೆಯಾಗಿದೆ.

ಈ ಸಂಬಂಧ `ಪ್ರಜಾವಾಣಿ~    ಯೊಂದಿಗೆ ಮಾತನಾಡಿದ ಮುದ್ದಾಪುರ ಗ್ರಾಮದ ಗಂಗಾಧರ ಆರ್. ಭಜಂತ್ರಿ, ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಕಾಯಿಲೆ ವಾಸಿಯಾಗುತ್ತಿಲ್ಲ, ಆರೋಗ್ಯ ಇಲಾಖೆ ಸಿಬ್ಬಂದಿ ಇತ್ತ ಒಮ್ಮೆಯೂ ಭೇಟಿ ನೀಡಿ ವಿಚಾರಿಸಿಲ್ಲ, ಗ್ರಾಮದಲ್ಲಿ ಸೊಳ್ಳೆ ಹಾವಳಿ ಅಧಿಕವಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಗ್ರಾಮ ಪಂಚಾಯ್ತಿಯು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದರು.

ಬಾದಾಮಿ ತಾಲ್ಲೂಕಿನ ಕೆರೂರು ಸಮೀಪದ ನೀರಬೂದಿಹಾಳದಲ್ಲಿ ಇತ್ತೀಚೆಗೆ ಮೋತಿ (48) ಎಂಬುವವರು ಸಹ ಡೆಂಗೆ ಜ್ವರದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎ.ಬಿ. ಚೌಧರಿ  ಅವರನ್ನು `ಪ್ರಜಾವಾಣಿ~ ಮಾತನಾಡಿಸಿದಾಗ,  `ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ ಅಧಿಕೃತವಾಗಿ 17 ಡೆಂಗೆ  ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ಡೆಂಗೆ ಜ್ವರದಿಂದಾಗಿ ಯಾರೂ ಮೃತಪಟ್ಟಿರುವ ವರದಿಯಾಗಿಲ್ಲ. ರೋಗ ಬಾಧಿತರ ರಕ್ತವನ್ನು ಸಂಗ್ರಹಿಸಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಲಾಗಿದೆ~ ಎಂದು ಹೇಳಿದರು.

ಮುದ್ದಾಪುರಕ್ಕೆ ಮಂಗಳವಾರ ಆರೋಗ್ಯಾಧಿಕಾರಿಗಳ ತಂಡ ಈ ಸಂಬಂಧ ಭೇಟಿ ನೀಡಿದೆ.  ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದೆ. ಇರುವ ವೈದ್ಯರ ಸಹಕಾರ ಪಡೆದು ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಆಯಾ ಗ್ರಾಮ ಪಂಚಾಯಿತಿಗಳು ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ಕ್ರಮಕೈಗೊಳ್ಳಬೇಕು ಎಂದ ಅವರು  ಜನರು ಮನೆಯ ಸುತ್ತಮುತ್ತ ಕೊಳಚೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT