ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಧೋಳ: ಸಹ ವಿದ್ಯುತ್ ಘಟಕಕ್ಕೆ ಚಾಲನೆ

Last Updated 17 ಫೆಬ್ರುವರಿ 2011, 10:25 IST
ಅಕ್ಷರ ಗಾತ್ರ

ಮುಧೋಳ: ಮುರುಗೇಶ ನಿರಾಣಿ ರಾಜಕೀಯದಲ್ಲಿ, ಉದ್ಯಮದಲ್ಲಿ ಯಶಸ್ಸು ಕಂಡ ರಾಜಕಾರಣಿ ಎಂದು ಸಣ್ಣ ನೀರಾವರಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಜವಳಿ ಖಾತೆ ಸಚಿವ ಗೋವಿಂದ ಕಾರಜೋಳ ಶ್ಲಾಘಿಸಿದರು.

ನಿರಾಣಿ ಸಕ್ಕರೆ ಕಾರ್ಖಾನೆಯಲ್ಲಿ ಸೋಮವಾರ ನೂತನ ಸಹ ವಿದ್ಯುತ್ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲದರಲ್ಲಿಯೂ ಯಶಸ್ಸು ಕಾಣುವದು ಸುಲಭದ ಮಾತಲ್ಲ, ಅದಕ್ಕೆ ಸಾಕಷ್ಟು ಪ್ರಯತ್ನದೊಂದಿಗೆ ದೈವಬಲವೂ ಬೇಕಾಗುತ್ತದೆ. ತಮ್ಮ ಸಣ್ಣ ವಯಸ್ಸಿನಲ್ಲಿ ದೊಡ್ಡದನ್ನು ಸಾಧಿಸಿದ ಯಶಸ್ವಿ ಉದ್ಯಮಿ ಅವರಾಗಿದ್ದಾರೆ. ಕೇವಲ 500 ಟನ್ ಕಬ್ಬು ನುರಿಸುವ ಸಾಮರ್ಥ್ಯದಿಂದ ಪ್ರಾರಂಭಗೊಂಡ ಅವರ ಉದ್ಯಮ ಇದೀಗ ದೇಶದಲ್ಲಿಯೇ ದೊಡ್ಡ ಉದ್ಯಮವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದರು.

ಇಂದಿನ ಪ್ರತಿಯೊಬ್ಬ ಯುವಕರು ಸ್ವಂತ ಉದ್ಯೋಗದತ್ತ ಮುಖಮಾಡಬೇಕು. ಅದಕ್ಕೆ ನಿರಾಣಿಯಂಥ ಯಶಸ್ವಿ ಉದ್ಯಮಿಗಳ ಸಲಹೆ, ಸಹಕಾರ ಪಡೆಯಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಇದೀಗ ನಿರಾಣಿ ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವುದು ತಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕೈಗಾರಿಕಾ ಸಚಿವ ಸ್ಥಾನ ನೀಡಿದ್ದು ಕೂಡ ಸೂಕ್ತವಾಗಿದೆ ಎಂದರು.

ಮುರುಗೇಶ ನಿರಾಣಿ ಮಾತನಾಡಿ, ತಮ್ಮ ಈ ಯಶಸ್ಸಿಗೆ ತಮ್ಮ ಸಹೋದರರ ಹಾಗೂ ಪಕ್ಷದ ಮುಖಂಡರ ಹಾಗೂ ಜನಸಾಮಾನ್ಯರ ಸಹಕಾರವೇ ಕಾರಣವಾಗಿದೆ.ನಿರುದ್ಯೋಗಿಗಳಿಗೆ ಉದ್ಯೋಗ, ವಿದ್ಯುತ್ ಸಮಸ್ಯೆ ನೀಗಿಸುವುದು, ಕೈಗಾರಿಕಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ತಮ್ಮ ಗುರಿಯಾಗಿದೆ. ರೋಗಗ್ರಸ್ಥ ಕಾರ್ಖಾನೆಗಳನ್ನು ಕೈಗೆ ತೆಗೆದುಕೊಂಡು ಅಭಿವೃದ್ಧಿ ಪಡಿಸುವದು. ಅಲ್ಲಿನ ಕಾರ್ಮಿಕರಿಗೆ ನೆಲೆ ಒದಗಿಸುವುದು ಕೂಡ ತಮ್ಮ ಉದ್ದೇಶವಾಗಿದೆ ಎಂದರು.

 ಯುವ ಉದ್ಯಮಿ ಸಂಗಮೇಶ ನಿರಾಣಿ ಹಾಗೂ ಜಿಪಂ ಸದಸ್ಯ ಹಣಮಂತ ನಿರಾಣಿ ಅತಿಥಿಗಳನ್ನು ಸತ್ಕರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಖಾನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವಿ.ಕರಿಯಣ್ಣವರ ಮಾತನಾಡಿ, ಸಕ್ಕರೆ ಕಾರ್ಖಾನೆಯನ್ನು ಮತ್ತು ಸಹ ವಿದ್ಯುತ್ ಘಟಕವನ್ನು ಮೂರು ಹಂತದಲ್ಲಿ ವಿಸ್ತರಿಸಲಾಗಿದ್ದು, ಈಗಾಗಲೇ ಎರಡು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಮೂರನೇ ಘಟಕದ ನಂತರ ಪ್ರತಿದಿನ ಒಟ್ಟು 15 ಸಾವಿರ ಟನ್ ಕಬ್ಬು ಅರೆಯುವ ಹಾಗೂ 62 ಮೆಗಾ ವ್ಯಾಟ್ ಸಹ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದುತ್ತದೆ. ಪ್ರತಿದಿನ 120 ಕಿಲೋ ಲೀಟರ್ ಸ್ಪಿರಿಟ್ (ಇಥೆನಾಲ್) ಉತ್ಪಾದಿಸುವ ಡಿಸ್ಟಿಲರಿ ಘಟಕ ಮಾರ್ಚ್-2011ರಿಂದ ಪ್ರಾರಂಭಗೊಳ್ಳಲಿದೆ ಎಂದರು.

ತಾಂತ್ರಿಕ ನಿರ್ದೇಶಕ ಆರ್.ವಿ.ವಟ್ನಾಳ, ಬಾಬು ಹೊಸಕೋಟಿ ಹಾಗೂ ಕಾರ್ಖಾನೆಯ ಅಧಿಕಾರಿಗಳು ಉಪಸ್ಥಿತರಿದ್ದರು.  ಸಾರ್ವಜನಿಕ ಸಂಪರ್ಕಾಧಿಕಾರಿ ಮಲ್ಲಿಕಾರ್ಜುನ ಹೆಗ್ಗಳಗಿ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಖಾಸನೀಸ ವಂದಿಸಿದರು.

‘ಗ್ರಾಮಸ್ಥರ ಸಹಭಾಗಿತ್ವ ಅಗತ್ಯ’

ಜಮಖಂಡಿ: ಸ್ವಚ್ಛತೆಯ ಮಹತ್ವ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಅವರ ಸಹಭಾಗಿತ್ವ ಮತ್ತು ಸಹಕಾರ ಪಡೆಯಲು ಅಧ್ಯಯನ ಪ್ರವಾಸ ಅಗತ್ಯ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಕೋರೆಗಾಂವ ಗ್ರಾಮದಲ್ಲಿ ಅನುಷ್ಠಾನಗೊಳಿಸಲಾಗಿರುವ ಸ್ವಚ್ಛತಾ ಗ್ರಾಮ ಯೋಜನೆಯ ಕುರಿತು ಅಧ್ಯಯನ ಕೈಕೊಳ್ಳಲು ತೆರಳಿದ ತಾಲ್ಲೂಕಿನ ಚಿಮ್ಮಡ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳನ್ನು ಬೀಳ್ಕೊಡಲು ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ತಾಲ್ಲೂಕಿನ ಚಿಮ್ಮಡ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸಲು ಸ್ವಚ್ಛ ಗ್ರಾಮ ಯೋಜನೆ ಅಡಿಯಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎಂ.ಹಟ್ಟಿ, ಜಿ.ಪಂ.ಮಾಜಿ ಅಧ್ಯಕ್ಷ ಬಾಬಾಗೌಡ ಪಾಟೀಲ, ತಾ.ಪಂ.ಸದಸ್ಯ ಪ್ರಭು ಮುಧೋಳ, ಚಿಮ್ಮಡ ಗ್ರಾ.ಪಂ.ಅಧ್ಯಕ್ಷ ಶಂಕರ ಬಟಕುರ್ಕಿ, ಎಸ್.ವೈ.ಬಿರಾದಾರ, ಶ್ರೀಕಂತ ಬಡಿಗೇರ, ಎಸ್.ಎಸ್.ಹಂಜಗಿ, ಎಂ.ಡಿ.ಬಡಿಗೇರ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಜಿ.ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT