ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿದ ಮುಂಗಾರು ಮಳೆ: ತಾಳ ತಪ್ಪಿದ ಬಿತ್ತನೆ

Last Updated 27 ಜುಲೈ 2013, 6:24 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಮುಂಗಾರು ಬಿತ್ತನೆ ತಾಳ ತಪ್ಪಿದೆ. ತಾಲ್ಲೂಕಿನ ಮಾವು ಬೆಳೆಯುವ ಪ್ರದೇಶದಲ್ಲಿ ಇನ್ನೂ ಉಳುಮೆ ಕಾರ್ಯವೇ ನಡೆದಿಲ್ಲ. ಅಲ್ಪ ಮಳೆಗೆ ಅಪರೂಪಕ್ಕೆ ರಾಗಿ ಬಿತ್ತನೆ ಮಾಡಿದ ಕಡೆ ಪೈರಿಗೆ ಗುಂಟುವೆ ಹಾಕಲಾಗುತ್ತಿದೆ. ಉತ್ತರದ ಗುಡ್ಡಗಾಡು ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಕಾರ್ಯ ಮುಗಿದಿದೆ.

ತಾಲ್ಲೂಕಿನಲ್ಲಿ ಈ ಮಧ್ಯೆ ಮೋಡ ಮುಸುಕಿದ ವಾತಾವರಣ ಹಾಗೂ ಚಳಿ- ಗಾಳಿ ಸಾಮಾನ್ಯವಾಗಿದೆ. ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಹನಿಯುವ ಮಳೆ ಬೀಸುವ ಗಾಳಿಯೊಂದಿಗೆ ಹಾರಿ ಹೋಗುತ್ತಿದೆ. ಕನಿಷ್ಠ ನೆಲವಾದರೂ ತೇವಗೊಳ್ಳುತ್ತಿಲ್ಲ. ಈ ಪರಿಸ್ಥಿತಿಯಿಂದಾಗಿ ಉಳುಮೆ ಕಾರ್ಯ ನೆನೆಗುದಿಗೆ ಬಿದ್ದಿದೆ. ಮಾವಿನ ಸುಗ್ಗಿ ಮುಗಿದ ಕೂಡಲೇ ತೋಟ ಉಳುಮೆ ಮಾಡಿ ರಾಗಿ, ಅವರೆ, ತೊಗರಿ ಬಿತ್ತುವುದು ವಾಡಿಕೆ. ಆದರೆ ಅಂತಹ ಚಟುವಟಿಕೆ ಕಂಡುಬರುತ್ತಿಲ್ಲ. ಕೆಲವು ಕಡೆ ಜಮೀನಲ್ಲಿ ಹಾಕಿದ ಕೊಟ್ಟಿಗೆ ಗೊಬ್ಬರದ ರಾಶಿ ಹಾಗೆಯೇ ಉಳಿದಿದೆ.

ಸಂತೆಗಳಿಗೆ ಬಿತ್ತನೆ ಬೀಜ ಮಾರಾಟಗಾರರು ಅವರೆ, ತೊಗರಿ, ಜೋಳ, ಹುಚ್ಚೆಳ್ಳು, ಹುರುಳಿ ಮುಂತಾದ ದವಸ- ಧಾನ್ಯ ತಂದು ಅಂಗಡಿ ಇಡುತ್ತಿದ್ದಾರೆ. ಬೀಜದ ಬೆಲೆಯೂ ದುಬಾರಿ. ಆದರೆ ಕೊಳ್ಳುವವರು ಮಾತ್ರ ಇಲ್ಲ. ಮಳೆ ಸುರಿದರೆ ಬಿತ್ತನೆ ಬೀಜಕ್ಕೆ ಬೇಡಿಕೆ ಬರುತ್ತದೆ. ಇಲ್ಲವಾದರೆ ಕೇಳುವವರು ಇರುವುದಿಲ್ಲ ಎನ್ನುತ್ತಾರೆ ಬೀಜ ವ್ಯಾಪಾರಿಗಳು.

ಮೊದಲು ಸುರಿದ ಮಳೆಗೆ ಜಾನುವಾರು ಮೇವಿನ ಸಮಸ್ಯೆ ನಿವಾರಣೆ ಆಗಲೆಂದು ಗೋವಿನ ಜೋಳ, ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ. ಮೊಳಕೆ ಬಂದು ಪೈರು ಒಂದೆರಡು ಅಡಿ ಎತ್ತರ ಬೆಳೆದಿದೆ. ಆದರೆ ಮಳೆ ಇಲ್ಲದೆ ಒಣಗುತ್ತಿದೆ. ಇದರಿಂದಾಗಿ ಜಾನುವಾರು ಹಸಿರು ಮೇವಿನ ಸಮಸ್ಯೆ ಜೀವಂತವಾಗಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಬೆಳಿಗ್ಗೆ ಎದ್ದು ಹಸಿ ಹುಲ್ಲು ಸಂಗ್ರಹಕ್ಕೆ ಹೊರಡುವುದು ಸಾಮಾನ್ಯ ದೃಶ್ಯವಾಗಿದೆ. ದೂರ ಪ್ರದೇಶಗಳಿಗೆ ಹೋಗುವ ಈ ಮಂದಿ ಮಧ್ಯಾಹ್ನದ ಹೊತ್ತಿಗೆ ಒಂದಷ್ಟು ಹುಲ್ಲನ್ನು ಸಂಗ್ರಹಿಸಿಕೊಂಡು ಬರುತ್ತಾರೆ. ಕೆಲವರು ಸೈಕಲ್ ಮೇಲೆ ಹುಲ್ಲು ಹೇರಿಕೊಂಡು ಬರುತ್ತಾರೆ. ಭೋರ್ಗರೆಯುವ ಗಾಳಿಯಲ್ಲಿ ಹುಲ್ಲು ಹೊತ್ತು ಬರುವುದು ಸಾಹಸವೇ ಸರಿ.

ಒಣ ಹುಲ್ಲಿನ ಸಂಗ್ರಹ ಮುಗಿದಿದ್ದು, ಹಸಿರು ಹುಲ್ಲು ನಿರೀಕ್ಷಿತ ಪ್ರಮಾಣದಲ್ಲಿ ಸಿಗದಿರುವುದರಿಂದ ರೈತರು ಅರಳಿ, ಬೇವು, ಗೋಣಿ, ಆಲ ಮುಂತಾದ ಮರಗಳಿಂದ ಸೊಪ್ಪನ್ನು ಕೊಯ್ದು ತಂದು ದನಗಳಿಗೆ ಹಾಕುತ್ತಿದ್ದಾರೆ. ಸೀಮೆ ಹಸುಗಳಿಗೆ ಜೋಳದ ದಂಟು ಖರೀದಿಸಿ ತಂದು ಹಾಕಲಾಗುತ್ತಿದೆ.

ಇನ್ನು ಗದ್ದೆ ಬಯಲಿನ ಬೇಸಾಯ ನಿಂತುಹೋಗಿದೆ. ಕೆರೆಗಳಲ್ಲಿ ಹೂಳು ತುಂಬಿ ನೀರು ನಿಲ್ಲುವ ಸಾಮರ್ಥ್ಯ ಕುಸಿದ ಮೇಲೆ ಭತ್ತದ ಬಿತ್ತನೆ ಮರೆತು ಹೋಗಿದೆ. ಕೆಲವು ಕಡೆ ರಾಗಿ ಬಿತ್ತಿದರೆ, ಮತ್ತೆ ಕೆಲವು ಕಡೆ ನೀಲಗಿರಿ ಮರ ಬೆಳೆಸಲಾಗಿದೆ. ಕೆಲವು ಗದ್ದೆಗಳಲ್ಲಿ ರೈತರ ನಿರ್ಲಕ್ಷ್ಯದಿಂದಾಗಿ ಮುಳ್ಳು ಪೊದೆಗಳು ಬೆಳೆದು ನಿಂತಿವೆ.

ಅಂತರ್ಜಲ ಕುಸಿತದಿಂದಾಗಿ ಕೊಳವೆ ಬಾವಿಗಳಲ್ಲಿ ನೀರು ಬತ್ತಿಹೋದ ಮೇಲೆ ರೈತರು ಹತಾಶೆಯಿಂದ ಸಾಂಪ್ರದಾಯಿಕ ಹೊಲ ಪದ್ಧತಿಗೆ ಶರಣಾಗುತ್ತಿದ್ದಾರೆ. ನಾವು ತೋಟದ ಬೆಳೆ ಇಡುತ್ತಿದ್ದೆವು. ಟೊಮೆಟೊ, ಆಲೂಗಡ್ಡೆ, ಕೋಸು ಮುಂತಾದ ತರಕಾರಿ ಬೆಳೆಯುತ್ತಿದ್ದೆವು. ರೇಷ್ಮೆ ಹುಳು ಸಾಕಾಣಿಕೆ ಮಾಡುವುದೂ ಇತ್ತು. ಆದರೆ ತೋಟಕ್ಕೆ ಆಸರೆಯಾಗಿದ್ದ ಕೊಳವೆ ಬಾವಿ ಕೈಕೊಟ್ಟಿತು. ಅನಂತರ ನೀರು ಪಡೆಯುವ ಆಸೆಯಿಂದ 8 ಕೊಳವೆ ಬಾವಿ ಕೊರೆಸಿದ್ದಾಯಿತು. ಸಾಲ ಹೆಚ್ಚಿತೇ ವಿನಾ ನೀರು ಸಿಗಲಿಲ್ಲ. ದಿಕ್ಕು ಕಾಣದೆ ಸಾಂಪ್ರದಾಯಿಕ ಪದ್ಧತಿಯಲ್ಲಿ ರಾಗಿ ಬಿತ್ತಿದ್ದೇನೆ. ಕಾಲ ಕಾಲಕ್ಕೆ ಮಳೆ ಆದರೆ ಪರವಾಗಿಲ್ಲ. ಇಲ್ಲವಾದರೆ ದೇವರೇ ಕಾಪಾಡಬೇಕು ಎಂದವರು ರೈತ ಕಿತ್ತಂಡೂರು ರಮೇಶ್.

ರಮೇಶ್ ಆಡಿದ ಮಾತು ಎಲ್ಲ ಸಾಮಾನ್ಯ ರೈತರ ಪ್ರತಿಧ್ವನಿಯಾಗಿದೆ. ಈ ಪರಿಸ್ಥಿತಿ ಶಾಶ್ವತ ನೀರಾವರಿ ಪಡೆಯಲು ಹಂಬಲಿಸುವಂತೆ ಮಾಡಿದೆ. ಶಾಶ್ವತ ನೀರಾವರಿ ಯೋಜನೆ ಜಾರಿ ದಿನ ಬೆಳಗಾಗುವುದರಲ್ಲಿ ಆಗುವುದಲ್ಲ. ಅದಕ್ಕಾಗಿ ಕಾಯಬೇಕು. ಎಷ್ಟು ದಿನ ಕಾಯಬೇಕು ಎಂಬುದು ಹೇಳಲಾಗದ ವಿಷಯ. ಆವರೆಗೆ ಈಸಬೇಕು ಈಸಿ ಜಯಿಸಬೇಕು ಎಂಬ ಮಾತಿಗೆ ಕಟ್ಟುಬಿದ್ದು ದುಡಿಯಬೇಕು. ದುಡಿತಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT