ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರತ್ನ ಬಂಧನ, ಬಿಡುಗಡೆ

ಕಾಂಗ್ರೆಸ್ ಅಭ್ಯರ್ಥಿಯಿಂದ ಚುನಾವಣಾಧಿಕಾರಿಗೆ ಬೆದರಿಕೆ ಪ್ರಕರಣ
Last Updated 18 ಏಪ್ರಿಲ್ 2013, 19:31 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾಧಿಕಾರಿ ಜ್ಯೋತಿ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ರಾಜರಾಜೇಶ್ವರಿನಗರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರನ್ನು ಪೊಲೀಸರು ಗುರುವಾರ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

`ಬುಧವಾರ ರಾಜರಾಜೇಶ್ವರಿನಗರ ಬಿಬಿಎಂಪಿ ಕಚೇರಿಗೆ ಬಂದಿದ್ದ ಮುನಿರತ್ನ ಅವರು ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರ ಪರಿಶೀಲಿಸುತ್ತಿದ್ದ ವೇಳೆ ಮುನಿರತ್ನ ಅವರು ನಾಮಪತ್ರ ತಿರಸ್ಕಾರಗೊಂಡರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು' ಎಂದು ಜ್ಯೋತಿ ಅವರು ಬುಧವಾರ ರಾತ್ರಿ ಠಾಣೆಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಗುರುವಾರ ಮುನಿರತ್ನ ಅವರನ್ನು ಬಂಧಿಸಿದ ರಾಜರಾಜೇಶ್ವರಿನಗರ ಪೊಲೀಸರು ಮೂರನೇ ಎಸಿಎಂಎಂ ನ್ಯಾಯಾಧೀಶರ ಎದುರು ಹಾಜರು ಪಡಿಸಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಮುನಿರತ್ನ ಅವರಿಗೆ ಜಾಮೀನು ನೀಡಿದ್ದಾರೆ.

ಕೆಜೆಪಿ ಅಭ್ಯರ್ಥಿ ಬಂಧನ: ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ವೆಂಕಟೇಶಗೌಡ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬುಧವಾರ ರಾಜರಾಜೇಶ್ವರಿನಗರ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಸಿಬ್ಬಂದಿ ಮೇಲೆ ವೆಂಕಟೇಶಗೌಡ ಹಲ್ಲೆ ನಡೆಸಿದ್ದರು ಎಂದು ಚುನಾವಣಾಧಿಕಾರಿಗಳು ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಯಿತು. ಸಿಟಿ ಸಿವಿಲ್ ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ರಾಜರಾಜೇಶ್ವರಿನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ವರದಿ ನೀಡಲು ಸೂಚನೆ
ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಚುನಾವಣಾಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣವನ್ನು ಎಐಸಿಸಿ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಪೂರ್ಣ ವರದಿ ನೀಡುವಂತೆ ಕೆಪಿಸಿಸಿಗೆ ಸೂಚಿಸಿದೆ.

ಬುಧವಾರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮುನಿರತ್ನ ಅವರು ಚುನಾವಣಾಧಿಕಾರಿಗೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಿದ್ದು, ಗುರುವಾರ ಅವರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಗಿದೆ. ಇಡೀ ಪ್ರಕರಣದ ಬಗ್ಗೆ ವಿವರ ನೀಡುವಂತೆ ಕೆಪಿಸಿಸಿಗೆ ಎಐಸಿಸಿ ಸೂಚಿಸಿದೆ. ಒಂದೆರಡು ದಿನದಲ್ಲಿ ಎಐಸಿಸಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT