ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರಾಬಾದ್: ವಿದ್ಯಾರ್ಥಿಗಳ ಬಿಸಿಯೂಟ ಬಂದ್

Last Updated 19 ಜುಲೈ 2012, 9:15 IST
ಅಕ್ಷರ ಗಾತ್ರ

ಮುನಿರಾಬಾದ್: ಸ್ಥಳೀಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ ಮಧ್ಯಾಹ್ನ ನೀಡಲಾಗುತ್ತಿದ್ದ ಬಿಸಿಯೂಟವನ್ನು ಪಡಿತರ ಕೊರತೆ ಕಾರಣ ಮಂಗಳವಾರದಿಂದ ಸ್ಥಗಿತಗೊಳಿಸಿರುವುದಾಗಿ ಎಂದು ತಿಳಿದುಬಂದಿದೆ.

ಈ ಬಗ್ಗೆ ಶನಿವಾರ ಮತ್ತು ಸೋಮವಾರವೇ ಎಲ್ಲಾ ವಿದ್ಯಾರ್ಥಿಗಳಿಗೆ `ಮಧ್ಯಾಹ್ನದ ಊಟಕ್ಕೆ ನಿಮ್ಮ ವ್ಯವಸ್ಥೆ ಮಾಡಿಕೊಳ್ಳಿ~ ಎಂದು ಶಾಲೆಯಲ್ಲಿ ಸೂಚನೆ ನೀಡಿರುವುದಾಗಿ ವರದಿಯಾಗಿದೆ. ಎಣ್ಣೆ, ಬೇಳೆ, ಅಕ್ಕಿ ಮುಂತಾದ ದಿನಸಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಶಾಲೆಯಲ್ಲಿನ ಅಡುಗೆ ಮನೆ ಬಂದ್ ಆಗಿದೆ. ವಿದ್ಯಾರ್ಥಿಗಳಲ್ಲಿ ಕೆಲವರು ಮನೆಯಿಂದ ಊಟದ ಬಾಕ್ಸ್ ತಂದರೆ, ಉಳಿದವರು ತಮ್ಮ ತಮ್ಮ ಮನೆಗೆ ತೆರಳಿ ಊಟ ಮಾಡಿದ ಬಗ್ಗೆ ತಿಳಿದು ಬಂದಿದೆ.

ಟೆಂಡರ್ ಆಗಿಲ್ಲ:
ಬಿಸಿಯೂಟ ಸ್ಥಗಿತಗೊಂಡ ಬಗ್ಗೆ ವಿಚಾರಿಸಲಾಗಿ, ಸಮಸ್ಯೆ ಇಡೀ ಜಿಲ್ಲಾದ್ಯಂತ ಇದೆ. ಜಿಲ್ಲೆಯ ವ್ಯಾಪ್ತಿಯ ಶಾಲೆಗಳಿಗೆ ಪಡಿತರ ಪೂರೈಸುವ ಸಾರಿಗೆ ಗುತ್ತಿಗೆಗೆ ಟೆಂಡರ್ ಕರೆಯಲಾಗಿತ್ತು. ಆದರೆ ಟೆಂಡರ್ ಪ್ರಕ್ರಿಯೆ ಮುಗಿಯದ ಕಾರಣ ಸಮಸ್ಯೆ ಉದ್ಭವಿಸಿದೆ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನೊಂದು ಮಗ್ಗಲು, ಈಚೆಗೆ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾದ ತಾಲ್ಲೂಕು ಅಕ್ಷರ ದಾಸೋಹ ನೋಡಲ್ ಅಧಿಕಾರಿಯ ಸ್ಥಾನಕ್ಕೆ ಇನ್ನೂ ಯಾರನ್ನೂ ನಿಯೋಜಿಸದಿರುವುದು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಯೂ ವರ್ಗಾವಣೆ ಹೊಂದಿದ್ದು ಅವರ ಸ್ಥಾನ ಕೂಡ ಖಾಲಿಯಾಗಿರುವುದು ಸಮಸ್ಯೆಗೆ ಕಾರಣ ಎಂದೂ ವಿಶ್ಲೇಷಿಸಲಾಗುತ್ತಿದೆ.

ದಾಸ್ತಾನು ಇರುವವರೆಗೆ: ಮುನಿರಾಬಾದ್ ವ್ಯಾಪ್ತಿಯ ಅಗಳಕೇರಾ, ಹಿಟ್ನಾಳ, ಹೊಸಳ್ಳಿಯ ಕೆಲವು ಶಾಲೆಗಳಲ್ಲಿ ಇನ್ನೂ ಸ್ವಲ್ಪ ದಿನಸಿ ದಾಸ್ತಾನು ಉಳಿದಿದ್ದು ಎರಡು ಮೂರು ದಿನದಲ್ಲಿ ಅದೂ ತೀರುವ ಹಂತದಲ್ಲಿದೆ ಎಂದು ವಲಯ ಸಂಪನ್ಮೂಲ ವ್ಯಕ್ತಿಗಳ ಅನಿಸಿಕೆ.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT