ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನಡೆ ಕಾಯ್ದುಕೊಂಡ ರಾಮ್ಸೆ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಿಖರ ಪ್ರದರ್ಶನ ಮುಂದುವರಿಸಿದ ಸ್ಕಾಟ್ಲೆಂಡ್‌ನ ರಿಚೀ ರಾಮ್ಸೆ ಇಲ್ಲಿ ನಡೆಯುತ್ತಿರುವ `ಹೀರೊ ಇಂಡಿಯನ್ ಓಪನ್~ ಗಾಲ್ಫ್ ಟೂರ್ನಿಯ ಎರಡನೇ ಸುತ್ತಿನ ಬಳಿಕ ಏಕಾಂಗಿಯಾಗಿ ಮುನ್ನಡೆ ಸಾಧಿಸಿದ್ದಾರೆ.

ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ) ಕೋರ್ಸ್‌ನಲ್ಲಿ ಶುಕ್ರವಾರ ಎರಡನೇ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ರಾಮ್ಸೆ 66 ಅವಕಾಶಗಳನ್ನು ತೆಗೆದುಕೊಂಡರು. ಮೊದಲ ಸುತ್ತಿನಲ್ಲೂ ಇಷ್ಟೇ ಸ್ಟ್ರೋಕ್‌ಗಳನ್ನು ಬಳಸಿಕೊಂಡಿದ್ದ ಅವರು ಇದೀಗ ಒಟ್ಟು 132 ಸ್ಕೋರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಥಾಯ್ಲೆಂಡ್‌ನ ಪನುಫೊಲ್ ಪಿಟಾಯಾರತ್, ಚಾಪ್‌ಚಾಯ್ ನಿರಾತ್ ಮತ್ತು ಫಿನ್ಲೆಂಡ್‌ನ ಜಾಕೊ ಮಕಿಟಾಲೊ (135) ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಮೂವರು ಮೊದಲ ಸುತ್ತಿನಲ್ಲಿ 67 ಅವಕಾಶಗಳನ್ನು ಬಳಸಿಕೊಂಡಿದ್ದರೆ, ಶುಕ್ರವಾರ 68 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು.

ಟೂರ್ನಿಯಲ್ಲಿ ಭಾರತದ ಭರವಸೆ ಎನಿಸಿರುವ ಗಗನ್‌ಜೀತ್ ಭುಲ್ಲರ್ (137) ಜಂಟಿ ಆರನೇ ಸ್ಥಾನದಲ್ಲಿದ್ದಾರೆ. ಗುರುವಾರ 68 ಸ್ಟ್ರೋಕ್‌ಗಳೊಂದಿಗೆ ಸ್ಪರ್ಧೆ ಕೊನೆಗೊಳಿಸಿದ್ದ ಅವರಿಗೆ ಎರಡನೇ ಸುತ್ತಿನಲ್ಲಿ ಹೆಚ್ಚುವರಿಯಾಗಿ (69) ಒಂದು ಅವಕಾಶ ಬೇಕಾಯಿತು.

ರಾಮ್ಸೆ ಜೊತೆ ಮೊದಲ ಸುತ್ತಿನ ಬಳಿಕ ಜಂಟಿ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್‌ನ ಜೇಮ್ಸ ಮಾರಿಸನ್ (66, 71) ಎರಡನೇ ಸುತ್ತಿನಲ್ಲಿ ಪ್ರಭಾವಿ ಪ್ರದರ್ಶನ ನೀಡಲು ವಿಫಲರಾಗಿ ಜಂಟಿ ಆರನೇ ಸ್ಥಾನಕ್ಕೆ ಕುಸಿತ ಕಂಡರು. ಮೊದಲ ದಿನ ಭಾರತದ ಸ್ಪರ್ಧಿಗಳ ಪೈಕಿ ಮಿಂಚಿದ್ದ ಶಿವ ಕಪೂರ್ (67, 71) ಅವರು 138 ಸ್ಕೋರ್‌ಗಳೊಂದಿಗೆ ಜಂಟಿ 10ನೇ ಸ್ಥಾನದಲ್ಲಿದ್ದಾರೆ.

ಆದರೆ 2009ರ ಚಾಂಪಿಯನ್ ಸಿ. ಮುನಿಯಪ್ಪ ಅವರ ಪ್ರಶಸ್ತಿಯ ಕನಸು ಭಗ್ನಗೊಂಡಿದೆ. ಎರಡು ಸುತ್ತುಗಳನ್ನು ಕೊನೆಗೊಳಿಸಲು ಒಟ್ಟು 152 (78, 74) ಅವಕಾಶಗಳನ್ನು ಬಳಸಿಕೊಂಡ ಅವರು ಅರ್ಧ ಹಾದಿಯಲ್ಲೇ ಟೂರ್ನಿಯಿಂದ ಹೊರಬಿದ್ದರು.

ಸ್ಥಳೀಯ ಸ್ಪರ್ಧಿ ಅನಿರ್ಬನ್ ಲಾಹಿರಿ ಮತ್ತು ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದ ಸ್ವೀಡನ್‌ನ ಪೀಟರ್ ಹ್ಯಾನ್ಸನ್ (141) ಜಂಟಿ 30ನೇ ಸ್ಥಾನದಲ್ಲಿದ್ದಾರೆ. ಕಣದಲ್ಲಿದ್ದ 156 ಆಟಗಾರರಲ್ಲಿ 81 ಮಂದಿ ಮೂರು ಹಾಗೂ ನಾಲ್ಕನೇ ಸುತ್ತಿನಲ್ಲಿ ಆಡಲು ಅರ್ಹತೆ ಪಡೆದರು.

ಮಿಂಚಿದ ಅಮೆಚೂರ್ ಸ್ಪರ್ಧಿಗಳು: ಮೊದಲ ಎರಡು ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಐವರು ಅಮೆಚೂರ್ ಸ್ಪರ್ಧಿಗಳು ಕೊನೆಯ ಎರಡು ಸುತ್ತುಗಳಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ.

ಸ್ಥಳೀಯ ಸ್ಪರ್ಧಿ ಎಚ್. ಚಿಕ್ಕರಂಗಪ್ಪ (72, 68) ಒಟ್ಟು 140 ಸ್ಕೋರ್‌ಗಳೊಂದಿಗೆ ಅಮೆಚೂರ್ ಸ್ಪರ್ಧಿಗಳಲ್ಲಿ ಎಲ್ಲರಿಗಿಂತ ಮುನ್ನಡೆಯಲ್ಲಿದ್ದಾರೆ. ಖಾಲಿನ್ ಜೋಷಿ (72, 71), ಉದಯನ್ ಮಾನೆ (73, 69), ಅಂಗದ್ ಚೀಮಾ (72, 71) ಮತ್ತು ಹನಿ ಬೈಸೋಯಾ (69, 75) ಅವರೂ ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ.
ಕಳೆದ ವರ್ಷ ನಡೆದ ಇಂಡಿಯನ್ ಓಪನ್ ಟೂರ್ನಿಯಲ್ಲಿ ಯಾವುದೇ ಅಮೆಚೂರ್ ಸ್ಪರ್ಧಿಗಳು ಮೂರನೇ ಸುತ್ತಿಗೆ ಅರ್ಹತೆ ಪಡೆದಿರಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT