ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಪ್ಪು ಮುಂದೂಡಬಹುದು

Last Updated 18 ಮೇ 2012, 19:30 IST
ಅಕ್ಷರ ಗಾತ್ರ

 ದೇಹ ಮುಪ್ಪಾಗುವುದು ಸಹಜ ಕ್ರಿಯೆ. ಆದರೆ ಆರೋಗ್ಯಕರ ಆಹಾರ ಹಾಗೂ ಜೀವನ ಶೈಲಿಯ ಮೂಲಕ ಮುಪ್ಪನ್ನು ಮುಂದೂಡುವುದೂ ಸಾಧ್ಯ.
 
ವರುಷಗಳು ಉರುಳಿದಂತೆ, ಮಾನವನ ದೇಹಕ್ಕೆ ವಯಸ್ಸಾಗುವುದು, ಮನಸ್ಸು ಪಕ್ವವಾಗುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಜೀವನದ ಸಿಹಿ ಕಹಿ ಅನುಭವಗಳು ಮನಸ್ಸನ್ನು ಪಕ್ವಗೊಳಿಸಿ, ವಯಸ್ಸಿಗೆ ಸಹಜವಾದ ಗಂಭೀರತೆ ಹಾಗೂ ತಾಳ್ಮೆಯನ್ನು ತಂದುಕೊಡುತ್ತದೆ.

ಆದರೆ  ಶರೀರವು  ವಯಸ್ಸಾದಂತೆ ಬದಲಾಗುವುದೇಕೆ?  ಎಂದು ಎಂದಾದರೂ ಯೋಚಿಸಿದ್ದೀರೇನು? ವೈದ್ಯಕೀಯ ವಿಜ್ಞಾನದ ಪ್ರಕಾರ ದೇಹ ಮುಪ್ಪಾಗುವುದು ಸಹಜ ಕ್ರಿಯೆಯಾದರೂ, ಅದು ಅನೇಕ  ಇತರ ಅಂಶಗಳ ಮೇಲೂ ಅವಲಂಬಿತವಾಗಿರುತ್ತದೆ.
 
ಅವೆಂದರೆ,
* ಅನುವಂಶಿಕ ಧಾತುಗಳು
* ಆಹಾರ ಶೈಲಿ
* ಜೀವನ ಶೈಲಿ
* ಸಮಾಜ ಜೀವನ
* ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳು, ಮುಂತಾದುವು.

ಈ ಮೇಲಿನ ಅಂಶಗಳನ್ನು ಗಮನಿಸಿದಾಗ ದೇಹ ಮುಪ್ಪಾಗುವ ಕ್ರಿಯೆ ಸ್ವಲ್ಪಮಟ್ಟಿಗೆ ನಮ್ಮ ನಿಯಂತ್ರಣದಲ್ಲಿಯೂ ಇದೆ ಎಂಬುದು ಸ್ಪಷ್ಟವಾಗುತ್ತದೆಯಲ್ಲವೆ?ಶರೀರ ವಯಸ್ಸಾದಂತೆ ಬದಲಾಗುವುದೇಕೆ?

 ಜೀವಕೋಶಗಳು ಪ್ರತಿ ಬಾರಿ ಉಸಿರಾಡಿದಾಗಲೂ ಆಮ್ಲಜನಕವು ಉಪಯೋಗಿಸಲ್ಪಟ್ಟು ಅಲ್ಲಿ, ಆಕ್ಸಿಡೆಂಟ್‌ಗಳು ಉತ್ಪತ್ತಿಯಾಗುತ್ತವೆ. ಈ ರೀತಿ ಉತ್ಪಾದನೆಯಾದ ಆಕ್ಸಿಡೆಂಟ್‌ಗಳು ಜೀವಕೋಶಗಳಿಗೆ ಹಾನಿಕಾರಕ ಮತ್ತು ವಿಷಮಯ.

ಜೀವಕೋಶಗಳಿಗೆ ಪದೇ ಪದೇ ಪೆಟ್ಟಾದಾಗ ಮತ್ತು ವಿಷಪೂರಿತ ಆಕ್ಸಿಡೆಂಟ್‌ಗಳು ಅಲ್ಲಿ ಶೇಖರವಾದಾಗ, ಅವುಗಳ ಕ್ರಿಯಾ ಸಾಮರ್ಥ್ಯ ಇಳಿಮುಖವಾಗುತ್ತವೆ. ಜೀವಕೋಶಗಳ ಕಾರ್ಯದಕ್ಷತೆ ಕ್ಷೀಣಿಸುತ್ತಿದ್ದಂತೆ, ದೇಹದ ವಿವಿಧ ಅಂಗಾಂಗಗಳ ಕಾರ್ಯವೂ ಸಹ ಸ್ಥಗಿತಗೊಳ್ಳಲಾರಂಭಿಸುತ್ತದೆ.

ಶರೀರದ ರೋಗ ನಿರೋಧಕ ವ್ಯವಸ್ಥೆಯೂ ಶಕ್ತಿಗುಂದುವುದರಿಂದ, ಒಂದೊಂದೇ ಕಾಯಿಲೆಗಳು ದೇಹದಲ್ಲಿ ಮನೆ ಮಾಡುತ್ತವೆ ಹಾಗೂ ವ್ಯಕ್ತಿಯ ದೇಹ ಮುಪ್ಪಿನತ್ತ ಹೆಜ್ಜೆ ಹಾಕುತ್ತದೆ. ದೇಹದಲ್ಲಿ ಈ ಆಕ್ಸಿಡೆಂಟ್‌ಗಳ ವಿರುದ್ಧ ಹೋರಾಡುವ ಆಂತರಿಕ `ಆ್ಯಂಟಿಆಕ್ಸಿಡೆಂಟ್~ ವ್ಯವಸ್ಥೆ ಇದ್ದರೂ, ಆಹಾರದಲ್ಲಿನ ಆ್ಯಂಟಿಆಕ್ಸಿಡೆಂಟ್‌ಗಳು ಈ ದಿಕ್ಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪರಿಸರದಲ್ಲಿನ ಕೆಲವು ರಾಸಾಯನಿಕ ವಸ್ತುಗಳೂ ಸಹ ಆಕ್ಸಿಡೆಂಟ್‌ಗಳಂತೆ ವರ್ತಿಸುತ್ತಾ ಜೀವಕೋಶಗಳ ಸಾವಿಗೆ ಕಾರಣವಾಗಬಹುದು.

ಮುಪ್ಪಾಗಲು ಕಾರಣವಾಗುವ ಅಂಶಗಳು
ಅನುವಂಶಿಕ ಧಾತುಗಳು: ಜೀವಕೋಶಗಳು ವೃದ್ಧಿಗೊಳ್ಳುವ ಹಾಗೂ ಪತನಗೊಳ್ಳುವ ಕ್ರಿಯೆಯನ್ನು ಅನುವಂಶಿಕಧಾತುಗಳು ಮುಖ್ಯವಾಗಿ ನಿರ್ಧರಿಸುತ್ತವೆ. ಅನುವಂಶಿಕಧಾತುಗಳು ನಮ್ಮ ತಂದೆ ತಾಯಿ ಹಾಗೂ ಹಿರಿಯರಿಂದ ಬಂದ ಬಳುವಳಿ.
 
ಅವುಗಳ ಬದಲಾವಣೆ ಅಥವಾ ನಿಯಂತ್ರಣ ಅಸಾಧ್ಯದ ಸಂಗತಿ. ಸರಿಯಷ್ಟೆ? ಆದರೆ ದೇಹಕ್ಕೆ ವಯಸ್ಸಾಗುವ ಕ್ರಿಯೆಯು, ವ್ಯಕ್ತಿಯ ಆಹಾರ ಶೈಲಿ, ಜೀವನ ಶೈಲಿ, ಸಮಾಜ ಜೀವನದ ಮೇಲೂ  ಅವಲಂಬಿತವಾಗಿದೆ ಎಂದ ಮೇಲೆ, ನಾವು ಮನಸ್ಸು ಮಾಡಿದರೆ ಮುಪ್ಪನ್ನು ಸ್ವಲ್ಪಮಟ್ಟಿಗೆ ಮುಂದೂಡಬಹುದಲ್ಲವೆ?

ಆಹಾರ ಶೈಲಿ: ವೈದ್ಯಕೀಯ ಸಂಶೋಧನೆಯೊಂದು ಕನಿಷ್ಠ ಆಹಾರ ಸೇವಿಸುವವರು ಧೀರ್ಘಾಯುಗಳಾಗಿರುತ್ತಾರೆ ಎಂದು ವರದಿ ಮಾಡಿದೆ. ಹೌದು, ನಾವು ಸೇವಿಸುವ ಆಹಾರವು ಹಿತಮಿತವಾಗಿರಬೇಕು.

ಮಿತಿ ಮೀರಿದಾಗ ಜೀವಕೋಶಗಳಿಗೆ ವಿಷವಾಗಿ ಪರಿಣಮಿಸಬಲ್ಲ ಆಹಾರದಲ್ಲಿನ ಸಕ್ಕರೆ, ಉಪ್ಪು ಹಾಗೂ ಕೊಬ್ಬಿನ ಅಂಶದ ಬಗ್ಗೆ ಪ್ರತಿಯೊಬ್ಬರಿಗೂ ಸದಾ ನಿಗವಿರಬೇಕು. ದೇಹಕ್ಕೆ ಹೆಚ್ಚಾದ ಕೊಬ್ಬು ಜೀವಕೋಶಗಳಿಗೆ ಮಾರಣಾಂತಿಕವಾಗಬಲ್ಲದು. ಮುಖ್ಯವಾಗಿ ರಕ್ತನಾಳಗಳ ಒಳಪದರಗಳಲ್ಲಿ ಶೇಖರವಾಗುವ ಕೊಬ್ಬು, ಅಲ್ಲಿನ ಜೀವಕೋಶಗಳಿಗೆ ಹಾನಿ ಮಾಡಿ, ಅಂಗಾಂಗಗಳ ರಕ್ತಪರಿಚಲನೆಗೆ ಅಡ್ಡಿ ಉಂಟುಮಾಡುತ್ತದೆ.

ಹೃದಯಾಘಾತ, ಪ್ಯಾರಾಲಿಸಿಸ್ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ಕೊಡುತ್ತದೆ. ಆಹಾರದಲ್ಲಿ ಹೆಚ್ಚಾದ ಸಕ್ಕರೆ ಅಂಶವೂ ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಶೇಖರವಾಗಿ ಕಾಯಿಲೆಗಳಿಗೆ ಕರೆ ನೀಡುತ್ತದೆ. 

ಆಹಾರದಲ್ಲಿನ ಹೆಚ್ಚಾದ ಉಪ್ಪಿನ ಅಂಶ ಸಹ ಜೀವಕೋಶಗಳಿಗೆ ಹಾನಿಮಾಡುತ್ತಾ, ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ರಕ್ತದೊತ್ತಡವು ದೇಹದ ಮುಖ್ಯ ಅಂಗಾಂಗಗಳಾದ ಹೃದಯ, ಕಿಡ್ನಿ, ಕಣ್ಣು ಹಾಗೂ ಮೆದುಳಿನ ಮೇಲೆ ಸಂಭವನೀಯ ಪರಿಣಾಮಗಳನ್ನು ಬೀರುತ್ತಾ ದೇಹವನ್ನು ಬಹು ಬೇಗನೇ ಮುಪ್ಪಿನತ್ತ  ತಳ್ಳುತ್ತದೆ.

ಹಾಗಾದರೆ ಆಹಾರ ಹೇಗಿರಬೇಕು?
ನಾವು ಸದಾ ಕ್ರಿಯಾಶೀಲರಾಗಿರಲು, ಸಮತೋಲನವಾದ ಆಹಾರ ಸೇವನೆ ಅತಿ ಮುಖ್ಯ. ಪ್ರೊಟೀನ್, ಜೀವಸತ್ವಗಳು, ಖನಿಜಾಂಶಗಳು ಸಮಪ್ರಮಾಣದಲ್ಲಿರುವ ಆಹಾರ ನಮ್ಮದಾಗಿರಬೇಕು.
 
ವೈದ್ಯಸಂಶೋಧನೆಗಳು ಹೇಳುವಂತೆ, ಆಹಾರದಲ್ಲಿನ  ಆ್ಯಂಟಿಆಕ್ಸಿಡೆಂಟ್‌ಗಳು ಜೀವಕೋಶಗಳಲ್ಲಿ ಶೇಖರವಾಗುವ ವಿಷಪೂರಿತ ವಸ್ತುಗಳಾದ ಆಕ್ಸಿಡೆಂಟ್‌ಗಳ ವಿರುದ್ಧ ಕೆಲಸ ಮಾಡುತ್ತಾ, ಜೀವಕೋಶಗಳು ಪತನಗೊಳ್ಳದಂತೆ  ರಕ್ಷಣೆ ಒದಗಿಸಿ, ಅವು ಸದಾ ಕಾರ್ಯೋನ್ಮುಖವಾಗಿರುವಂತೆ ಕಾಳಜಿ ವಹಿಸುತ್ತವೆ.

ಎಲ್ಲಿಯವರೆಗೆ ಜೀವಕೋಶಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತವೆಯೋ ಅಲ್ಲಿಯವರೆಗೆ ನಮ್ಮ ದೇಹ ತಾರುಣ್ಯವನ್ನು ಕಾಪಾಡಿಕೊಳ್ಳುತ್ತದೆ. ಆದ್ದರಿಂದ, ದೇಹವು ದಣಿಯದೆ ಯಾವಾಗಲೂ ಚಟುವಟಿಕೆಯಿಂದಿರಬೇಕಾದರೆ,  ಮನಸ್ಸು ಸದಾ ಉಲ್ಲಸಿತವಾಗಿರಬೇಕಾದರೆ, ಚರ್ಮವು ಸುಕ್ಕಾಗದೆ ಸುಂದರವಾಗಿ ಕಾಂತಿಯುತವಾಗಿರಬೇಕಾದರೆ,  ರೋಗನಿರೋಧಕ ಶಕ್ತಿಯು ಗರಿಷ್ಠ ಮಟ್ಟದ್ದಾಗಿ ಸೋಂಕು ಹಾಗೂ ಇತರ ಕಾಯಿಲೆಗಳ ವಿರುದ್ಧ ಯಶಸ್ವಿಯಾಗಿ ಹೋರಾಡಬೇಕಾದರೆ ಮತ್ತು ಶರೀರವು ತಾರುಣ್ಯವನ್ನು ಕಾಪಾಡಿಕೊಳ್ಳಬೇಕಾದರೆ ನಾವು ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿರುವ ಆಹಾರ ಸೇವನೆಗೆ ಹೆಚ್ಚು ಮಹತ್ವ ಕೊಡಬೇಕು. ಜೀವಸತ್ವಗಳಾದ ಸಿ, ಇ, ಎ, ಸೂಕ್ಷ್ಮ ಪೌಷ್ಟಿಕಾಂಶಗಳಾದ ಸೆಲೆನಿಯಂ, ಝಿಂಕ್ ಮುಂತಾದುವುಗಳು ಆ್ಯಂಟಿ ಆಕ್ಸಿಡೆಂಟ್‌ಗಳ ಗುಣಗಳನ್ನು ಹೊಂದಿವೆ.

ಆ್ಯಂಟಿ ಆಕ್ಸಿಡೆಂಟ್‌ಗಳಿರುವ ಆಹಾರಗಳು
ನಿಮ್ಮದು ಆರೋಗ್ಯಕರ ಜೀವನವಾಗಬೇಕೆ ? ಹಾಗಾದರೆ ಈ ಕೆಳಗಿನ ಆ್ಯಂಟಿ ಆಕ್ಸಿಡೆಂಟ್‌ಗಳು ನಿಮ್ಮ ಆಹಾರದಲ್ಲಿವೆಯೇ ಎಂದು ಒಮ್ಮೆ ಖಚಿತ ಪಡಿಸಿಕೊಳ್ಳಿ.

*  ಹಸಿರು ಚಹ
*   ತಾಜಾ ತರಕಾರಿಗಳಾದ ಎಲೆಕೋಸು, ಕ್ಯಾರೆಟ್, ಪಾಲಕ್ ಸೊಪ್ಪು, ಟೊಮ್ಯೋಟೊ, ಬೆಳ್ಳುಳ್ಳಿ,   ಮುಂತಾದುವು.
*  ತಾಜಾ ಹಣ್ಣುಗಳಾದ ದ್ರಾಕ್ಷಿ,  ದಾಳಿಂಬೆ,  ಕಲ್ಲಂಗಡಿ, ಅನಾನಸ್, ಕಿತ್ತಳೆ, ಸೇಬು ಮುಂತಾದುವು
*  ಸೋಯಾಬೀನ್, ಶೇಂಗಾ ಬೀಜ ಹಾಗೂ ಮೊಳಕೆ ಬರಿಸಿದ ಕಾಳುಗಳು.
*  ಖರ್ಜೂರ, ಪ್ರೂನ್ಸ್, ಆಪ್ರಿಕಾಟ್, ವಾಲ್‌ನಟ್ ಮುಂತಾದ ಒಣ ಹಣ್ಣುಗಳು.
*  ಲವಂಗ, ದಾಲ್ಚಿನ್ನಿ, ಏಲಕ್ಕಿ, ಸಾಸಿವೆ, ಅರಿಶಿನ ಮುಂತಾದ ಮಸಾಲೆ ಪದಾರ್ಥಗಳು.
*  ಜೋಳ, ಗೋಧಿ ಮುಂತಾದ ಧಾನ್ಯಗಳು.

ಆ್ಯಂಟಿಆಕ್ಸಿಡೆಂಟ್‌ಗಳು ನಿಮ್ಮ ದಿನನಿತ್ಯದ ಆಹಾರದಲ್ಲಿ ಕಡ್ಡಾಯವಾಗಿ ಇರಲಿ, ಏಕೆಂದರೆ ಅವು ರೋಗನಿರೋಧಕ ವ್ಯವಸ್ಥೆಯನ್ನು ಶಕ್ತಿಯುತಗೊಳಿಸುವುದಲ್ಲದೆ, ಕ್ಯಾನ್ಸರ್ ವಿರುದ್ಧವೂ ಹೋರಾಡಬಲ್ಲ ವಿಶೇಷ ಗುಣವನ್ನು ಹೊಂದಿವೆ.

ಜೀವನ ಶೈಲಿ: ದಿನನಿತ್ಯ ಜೀವನದಲ್ಲಿ ವ್ಯಾಯಾಮಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಇದರಿಂದ ದೇಹದಲ್ಲಿನ ಅನಗತ್ಯ ಕೊಬ್ಬು ಕಡಿಮೆಯಾಗುವುದಲ್ಲದೆ, ದೇಹದ ಎಲ್ಲಾ ಭಾಗಗಳಿಗೂ ಸಮರ್ಪಕವಾದ ರಕ್ತಪರಿಚಲನೆಯಾಗುತ್ತದೆ. ಸರಿಯಾದ ರಕ್ತ ಸಂಚಾರದಿಂದ ಜೀವಕೋಶಗಳಲ್ಲಿ ಶೇಖರವಾಗುವ ವಿಷಪೂರಿತ ವಸ್ತುಗಳು ದೇಹದಿಂದ ಹೊರಹಾಕಲ್ಪಡುತ್ತವೆ ಹಾಗೂ ಜೀವಕೋಶಗಳು ತಿಳಿಯಾಗಿ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ.

ಜೀವಕೋಶಗಳು ಎಲ್ಲಿಯವರೆಗೆ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತವೆಯೋ ಅಲ್ಲಿಯವರೆಗೆ ನಮ್ಮ ದೇಹ ಲವಲವಿಕೆಯಿಂದಿರುತ್ತದೆ, ತಾರುಣ್ಯತೆಯನ್ನು ಕಾಪಾಡಿಕೊಳ್ಳುತ್ತದೆ. ಅಂತೆಯೇ ದೈನಂದಿನ ದಿನಚರಿಯಲ್ಲಿ ದೇಹ ಹಾಗೂ ಮನಸ್ಸಿಗಾಗುವ ಒತ್ತಡವೂ ಜೀವಕೋಶಗಳಿಗೆ ಅಪಾಯ. ಹಾಗಾಗಿ ದೇಹಾಂತರಂಗಕ್ಕೆ ನಿಯಮಿತವಾದ ವಿಶ್ರಾಂತಿಯೂ ಅತ್ಯವಶ್ಯಕ.

ಸಮಾಜ ಜೀವನ: ಸಮಾಜದಲ್ಲಿನ ಇತರ ವ್ಯಕ್ತಿಗಳೊಂದಿಗೆ ನಮ್ಮ ಸಂಬಂಧ ಹಿತವಾಗಿರಬೇಕು, ಮಾತು ಸೊಗಸಾಗಿರಬೇಕು. ಏಕೆಂದರೆ ಕೋಪ, ಜಗಳ, ಮನಸ್ತಾಪ, ಬೇಸರ, ಆತಂಕ, ಅಸೂಯೆ ಮುಂತಾದ ಮನೋಭಾವನೆಗಳು ಜೀವಕೋಶಗಳ ಮೇಲೆ ಒತ್ತಡವನ್ನು ಹೇರುತ್ತವೆ, ಆ ಮೂಲಕ ಅವುಗಳ ನಾಶಕ್ಕೆ ಕಾರಣವಾಗಿ ಅವುಗಳ ಕಾರ್ಯದಕ್ಷತೆಯನ್ನು ಕ್ಷೀಣಿಸುತ್ತವೆ.

ಜೀವಕೋಶಗಳ ಕಾರ್ ಸ್ಥಗಿತಗೊಂಡಂತೆ ದೇಹ ಮುಪ್ಪಿನತ್ತ ಸಾಗುತ್ತದೆ. ಆದುದರಿಂದಲೇ, ಉದ್ವೇಗಗಳಿಲ್ಲದ ಸಮಾಧಾನ ಚಿತ್ತ, ಸಂತೋಷ ಹಾಗೂ ಉಲ್ಲಾಸಮಯ ಜೀವನವೂ ಮುಪ್ಪನ್ನು ಮುಂದೂಡಲು ಸಹಾಯಕಾರಿ.

ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳು: ವಯಸ್ಸಾದಂತೆ ದೇಹಕ್ಕೆ ಅನೇಕ ಕಾಯಿಲೆಗಳು ಜೊತೆಯಾಗುವುದು ಸಹಜ. ನಿಯಮಿತವಾದ ಆರೋಗ್ಯ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆಗಳ ಸಹಾಯದಿಂದ, ಅಂತಹ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವುದು ಪ್ರತಿಯೊಬ್ಬರ ಜವಾಬ್ದಾರಿ. ಕಾಯಿಲೆಯು ಹತೋಟಿಯಲ್ಲಿರುವ ತನಕವೂ ಅಂಗಾಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದರಿಂದ ದೇಹ ಹಾಗೂ ಮನಸ್ಸು ಲವಲವಿಕೆಯಿಂದಿರುತ್ತದೆ.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ ದೇಹ  ಮುಪ್ಪಾಗುವ ಕ್ರಿಯೆ ಖಂಡಿತಾ ನಮ್ಮ ಕೈಯಲ್ಲಿಯೂ ಇದೆ ಎಂಬುದು ಸ್ಪಷ್ಟವಾಗುತ್ತದೆಯಲ್ಲವೇ? ಹಾಗಾದರೆ ತಡವೇಕೆ ? ಇಂದಿನಿಂದಲೇ ಈ ಬಗ್ಗೆ ಗಮನ ಹರಿಸೋಣ, ಮುಪ್ಪನ್ನು ಮುಂದೂಡೋಣ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT