ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಮ್ಮೆಟ್ಟಿ ಗುಡ್ಡದಲ್ಲಿ ಭಕ್ತಸಾಗರ

Last Updated 14 ಡಿಸೆಂಬರ್ 2012, 9:57 IST
ಅಕ್ಷರ ಗಾತ್ರ

ವಿಜಾಪುರ: ಸಾಗರೋಪಾದಿಯಲ್ಲಿ ಸೇರಿದ್ದ ಭಕ್ತ ಸಮೂಹ. ಭಕ್ತರು ತೂರುತ್ತಿದ್ದ ಭಂಡಾರ ಬಾನಲ್ಲಿ ಹರಡಿ ಇಡೀ ಪ್ರದೇಶದ ಬಣ್ಣವನ್ನೇ ಬದಲಿಸಿತ್ತು. ಭಕ್ತರ ಬಣ್ಣ-ಬಣ್ಣದ ಬಟ್ಟೆಗಳೆಲ್ಲ ಹಳದಿಮಯವಾಗಿದ್ದವು. ಡೊಳ್ಳು ನುಡಿಸುತ್ತ, ಶಕ್ತಿ- ಸಾಮರ್ಥ್ಯಕ್ಕೆ ತಕ್ಕಂತೆ ಭಂಡಾರ ತೂರುತ್ತ ಭಕ್ತರು ಭಕ್ತಿ ವೆುರೆಯುತ್ತಿದ್ದರು.

ತಾಲ್ಲೂಕಿನ ಮುಮ್ಮೆಟ್ಟಿ (ಅರಕೇರಿ) ಗುಡ್ಡದಲ್ಲಿ ಛಟ್ಟಿ ಅಮಾವಾಸ್ಯೆಯ ದಿನವಾದ ಗುರುವಾರ ನಡೆದ ಜಾತ್ರೆಯಲ್ಲಿ ಕಂಡು ಬಂದ ದೃಶ್ಯವಿದು.

ಅಮೋಘಸಿದ್ಧರ ವಂಶಾವಳಿ ದೊಡ್ಡದು. ಮಕ್ಕಳು, ಮೊಮ್ಮಕ್ಕಳ ನೂರಾರು ಪಲ್ಲಕ್ಕಿಗಳು ಹಾಗೂ ಚೌಕಿಗಳು ಅಮೋಘಸಿದ್ಧರ ಭೇಟಿಗೆ ಬಂದಿದ್ದವು. ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ವಿವಿಧ ಗ್ರಾಮಗಳಿಂದ ಈ ಪಲ್ಲಕ್ಕಿಗಳನ್ನು ತರಲಾಗಿತ್ತು.

ಈ ಪಲ್ಲಕ್ಕಿಗಳಿಗೆ ಅಮೋಘ ಸಿದ್ಧರ ಪಲ್ಲಕ್ಕಿಯನ್ನು ಭೇಟಿ ಮಾಡಿಸುವ ಕಾರ್ಯಕ್ರಮಕ್ಕೆ `ದೇವರ ಭೇಟಿ' ಎಂದು ಭಕ್ತರು ಕರೆಯುವುದು ವಾಡಿಕೆ. ಗುರುವಾರ ಮಧ್ಯಾಹ್ನ ನಡೆದ ಈ `ದೇವರ ಭೇಟಿ' ಕಾರ್ಯಕ್ರಮದಲ್ಲಿ ಭಕ್ತರು ಉಲ್ಲಸಿತರಾಗಿ ಕುಣಿದು ಕುಪ್ಪಳಿಸಿದರು. 150ಕ್ಕೂ ಹೆಚ್ಚು ಪಲ್ಲಕ್ಕಿಗಳು ಒಂದೇ ಕಡೆ ಸೇರಿದ್ದು ಹಾಗೂ ಡೊಳ್ಳು ನುಡಿಸುತ್ತ, ಭಂಡಾರ ತೂರುತ್ತಿದ್ದ ಭಕ್ತರ ಭಕ್ತಿಯ ಉನ್ಮಾದದ ದೃಶ್ಯ ಮೋಹಕವಾಗಿತ್ತು; ಭಕ್ತಿ ಭಾವವನ್ನು ಬಡಿದೆಬ್ಬಿಸುತ್ತಿತ್ತು.

ನಸುಕಿನ ನಾಲ್ಕು ಗಂಟೆಯಿಂದಲೇ ಮೂಲ ಗದ್ದುಗೆಗೆ ಮಹಾಪೂಜೆ, ಅಭಿಷೇಕ, ಭಂಡಾರ ಪೂಜೆ ನೆರವೇರಿಸಲಾಯಿತು. ಭಕ್ತರು ನಸುಕಿನಿಂದಲೇ ಅರಕೇರಿ ಗುಡ್ಡಕ್ಕೆ ಆಗಮಿಸುತ್ತಿದ್ದರು. ತಮ್ಮ ಮನೆಗಳಲ್ಲಿ ತಯಾರಿಸಿ ತಂದಿದ್ದ ಕರಿಗಡುಬಿನ ನೈವೇದ್ಯವನ್ನು ದೇವರಿಗೆ ಸಮರ್ಪಿಸುತ್ತಿದ್ದರು. ನಂತರ ಪೂಜಾರಿಗಳಿಗೆ ಕಾಣಿಕೆ ನೀಡಿ ಎಲ್ಲರೂ ಒಟ್ಟಾಗಿ ಸಹಭೋಜನ ಸವಿಯುತ್ತಿದ್ದರು.

`ದೇವರ ಭೇಟಿ' ನಂತರ ಡೊಳ್ಳಿನ ಮೇಳದವರಿಂದ ನಡೆದ ಕಾರ್ಯಕ್ರಮ ಇಡೀ ಗುಡ್ಡದ ತುಂಬೆಲ್ಲ ಸಂಗೀತದ ಅಲೆಯನ್ನು ಪಸರಿಸಿತ್ತು. ಪೈಪೋಟಿಗೆ ಬಿದ್ದವರಂತೆ ಡೊಳ್ಳಿನ ಮೇಳದವರು ಸಿದ್ಧರ ಲೀಲೆಗಳನ್ನು ಸಾರಿ ಸಾರಿ ಹೇಳುತ್ತಿದ್ದರು.

`ಜಿಲ್ಲಾ ಆಡಳಿತದಿಂದ ಜಾತ್ರೆಯ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿರುವ ಎರಡು ಕೊಳವೆ ಬಾವಿಯಿಂದ ಭಕ್ತರಿಗೆ ನೀರು ಪೂರೈಸಲಾಗುತ್ತಿದ್ದು, ಅರಕೇರಿ ಗ್ರಾಮ ಪಂಚಾಯಿತಿಯವರು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ವರ್ತಕರಿಗೆ ಮಳಿಗೆಗಳನ್ನು ಹಾಕಿಕೊಡಲಾಗಿದೆ. ಕಂದಾಯ ಇಲಾಖೆಯ 30 ಸಿಬ್ಬಂದಿಯನ್ನು ಜಾತ್ರೆಯ ವ್ಯವಸ್ಥೆಗೆ ತೊಡಗಿಸಲಾಗಿದೆ' ಎಂದು ಜಾತ್ರೆಯ ಉಸ್ತುವಾರಿ ವಹಿಸಿರುವ ಉಪ ವಿಭಾಗಾಧಿಕಾರಿ ಡಾ.ಕೆ. ಬೂದೆಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ಇದೇ 14ರಂದು ಮಧ್ಯಾಹ್ನ 2ಕ್ಕೆ ತೊರವಿಯ ಲಕ್ಕಮ್ಮ ದೇವಿಯ ಪಲ್ಲಕ್ಕಿಯನ್ನು ಅಮೋಘಸಿದ್ಧರ ಭೇಟಿಗೆ ತರಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT