ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಡಿ: ನೀರಿಗಾಗಿ ಪರದಾಟ

Last Updated 2 ಜನವರಿ 2014, 6:58 IST
ಅಕ್ಷರ ಗಾತ್ರ

ಯಲಬುರ್ಗಾ: ಗ್ರಾಮಕ್ಕೆ ಬೇಕಾ­ಗುವಷ್ಟು ನೀರು ಲಭ್ಯವಿದ್ದರೂ ನೀರು ಪೂರೈಸುವ ಪಂಚಾಯಿತಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ­ತನ­ದಿಂದ ಕೃತಕ ಅಭಾವ ಉಂಟಾಗಿ ನೀರಿಗಾಗಿ ಜನರು ಪರದಾಡುವಂತಾ­ಗಿದೆ ಎಂದು ತಾಲ್ಲೂಕಿನ ಮುರಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ವರ್ಷದಿಂದಲೂ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿರುವ ಪಂಚಾಯಿತಿ ಅಧಿಕಾ­ರಿ­ಗಳು ಹಾಗೂ ಸಿಬ್ಬಂದಿ ಇದ್ದು ಇಲ್ಲ­ದಂತಿದ್ದಾರೆ. ಗ್ರಾಮದ ಜನಸಂಖ್ಯೆಗೆ ತಕ್ಕಂತೆ ಲಭ್ಯವಾಗುವ ರೀತಿಯಲ್ಲಿ ನಾಲ್ಕು ಕೊಳವೆಬಾವಿಗಳಿಂದ ದೊಡ್ಡ ಟ್ಯಾಂಕ್‌ಗೆ ನೀರು ಪೂರೈಸಲಾಗುತ್ತಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ಬಳಸಿ ಜನತೆಗೆ ನೀರು ಪೂರೈಸುವ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂದು ಗ್ರಾಮದ ನವಕರ್ನಾಟಕ ಯುವಶಕ್ತಿ ಜಿಲ್ಲಾ ಕಾರ್ಯದರ್ಶಿ ನಾಗರಾಜ ಹಾಲಳ್ಳಿ, ಶರಣಪ್ಪ ಕುರ್ನಾಳ ಸೇರಿದಂತೆ ಅನೇಕರು ದೂರಿದ್ದಾರೆ.
ಗ್ರಾಮದ ಎರಡು ದೊಡ್ಡ ನೀರಿನ ಟ್ಯಾಂಕ್‌ನಲ್ಲಿ ಸಂಗ್ರಹವಾಗುವ ನೀರನ್ನು ಗ್ರಾಮಸ್ಥರಿಗೆ ಸರಿಯಾಗಿ ನೀಡುತ್ತಿಲ್ಲ. ಮಾರ್ಗಮಧ್ಯದಲ್ಲಿಯೇ ಸಾಕಷ್ಟು ನೀರು ಪೋಲಾಗುತ್ತಿದೆ. ನಿರ್ವಹಣೆಯ ಕೊರತೆಯಿಂದ ಗ್ರಾಮಕ್ಕೆ ನೀರಿನ ಅಭಾವ ಉಂಟಾಗು­ತ್ತಿರುವುದರಿಂದ ಜನರು ಬವಣೆ ಅನುಭವಿಸುವಂತಾಗಿದೆ.

ಅಧಿಕಾರಿಗಳು   ಸಾರ್ವಜನಿಕರ ಬೇಡಿಕೆ­ಗಳ ಬಗ್ಗೆ ಕಿಂಚಿತ್ತು ಆಸಕ್ತಿ ತೋರುತ್ತಿಲ್ಲ.   ಇದರಿಂದ ಮುರಡಿ ಗ್ರಾಮದ ಜನತೆ ಅಗತ್ಯ ಸೌಲಭ್ಯಕ್ಕಾಗಿ ಪರಿದಾಡಬೇಕಾಗಿದೆ. ಶಾಸಕರಿಗೆ ಈ ಬಗ್ಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾ­ಗಿಲ್ಲ, ಗ್ರಾಮದಲ್ಲಿಯೇ 8ಜನ ಗ್ರಾಪಂ ಸದಸ್ಯರಿದ್ದರೂ ಗ್ರಾಮಕ್ಕೆ ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಹವ­ಳೆಪ್ಪ ತೆಗ್ಗಿಹಾಳ, ಚಿದಾನಂದ ಛಲ­ವಾದಿ, ಹನಮಂತ ಗುರಿಕಾರ  ಇತರರುಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ನಾಲ್ಕು ಕೈ ಪಂಪುಗಳಿದ್ದು ಅವುಗಳಲ್ಲಿ ಮೂರರಲ್ಲಿ ಮಾತ್ರ ಸ್ವಲ್ಪ ಸ್ವಲ್ಪ ನೀರು ಬರುತ್ತಿದೆ. ಶಾಲೆಯ ಮಕ್ಕಳಿಗೂ ನೀರಿನ ಕೊರತೆಯಿಂದಾಗಿ ಊಟ ಮಾಡಿದ ನಂತರ ನೀರು ಕುಡಿಯಲು ಮನೆಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಅಡುಗೆ ಮಾಡಲು ಕೂಡಾ ನೀರು ಪೂರೈಕೆಯಾಗದೇ ಬಿಸಿಯೂ­ಟಕ್ಕೆ ತೊಂದರೆಯಾಗುತ್ತಿದೆ. ಪಂಚಾಯಿತಿ ಪಕ್ಕದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಿದ್ದು ಅದಕ್ಕೂ ಕೂಡಾ ನೀರು ಪೂರೈಸುತ್ತಿಲ್ಲ.

ನಿರ್ಲಕ್ಷ್ಯ ವಹಿಸುವ ಪಂಚಾಯಿತಿ ಸಿಬ್ಬಂದಿ ಬಗ್ಗೆ ಮೇಲಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕಾಗಿದೆ. ಲಭ್ಯ­ವಿರುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಆಸಕ್ತಿ ತೋರಬಕು. ಮಾರ್ಗ ಮಧ್ಯ­ದಲ್ಲಿ ಸಾಕಷ್ಟು ನೀರು ಪೋಲಾಗುತ್ತಿ­ರುವುದನ್ನು ಪತ್ತೆಹಚ್ಚಿ ಹೊಸ ಪೈಪು ಅಳವಡಿಸಿ ಗ್ರಾಮಕ್ಕೆ ಸರಿಯಾಗಿ ನೀರು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳ­ಬೇಕು. ಈ ಬೇಡಿಕೆಗಳನ್ನು  ತ್ವರಿತಗತಿ­ಯಲ್ಲಿ ಈಡೇರಿಸದೇ ಹೋದರೆ ಪಂಚಾಯಿತಿಗೆ ಮುತ್ತಿಗೆ ಹಾಕಿ ಹೋರಾಟ ಮಾಡ­ಬೇಕಾಗುತ್ತದೆ ಎಂದು ನಾಗರಾಜ, ಚಿದಾನಂದ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT