ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಕು ಗುಡಿಸಲಿನಲ್ಲಿಯೇ `ಬದುಕು'

Last Updated 17 ಜುಲೈ 2013, 6:27 IST
ಅಕ್ಷರ ಗಾತ್ರ

ರಾಮನಾಥಪುರ: ಕೊಣನೂರು ಹೋಬಳಿಯ ಕೆಸವತ್ತೂರು ಬಳಿ ನೆಲೆಸಿರುವ 15 ದಲಿತ ಕುಟುಂಬಗಳು ಮೂಲಸೌಲಭ್ಯಗಳೂ ಇಲ್ಲದೆ ಹಲವು ವರ್ಷಗಳಿಂದ ಯಾತನೆಯ ಬದುಕು ಸಾಗಿಸುತ್ತಿವೆ.

ಹಿಂದೆ ಗ್ರಾಮದ ದಲಿತ ಕಾಲೊನಿಯಲ್ಲಿ ವಾಸವಾಗಿದ್ದ ಸುಮಾರು 45 ಕುಟುಂಬಗಳು 2 ದಶಕಗಳ ಹಿಂದೆ ಅಲ್ಲಿನ ಇಕ್ಕಾಟ್ಟಾದ ಮುರುಕಲು ಮನೆಗಳಲ್ಲಿ ವಾಸಿಸಲು ಸಾಧ್ಯವಾಗದೇ ಊರಾಚೆ ಖಾಲಿಯಿದ್ದ ಗೋಮಾಳದ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಹೊಸ ಜೀವನ ಆರಂಭಿಸಿದ್ದರು.

ಕೆಲವು ವರ್ಷಗಳ ಬಳಿಕ ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ಈ ಜಾಗ ತನಗೆ ಸೇರಿದ್ದೆಂದು ತಕರಾರು ತೆಗೆದರು. ಪ್ರಕರಣ ಠಾಣೆಯ ಮೆಟ್ಟಿಲೇರಿತ್ತು. ಇದಾದ ಕೆಲ ವರ್ಷಗಳ ನಂತರ ವಿವಾದಿತ ಜಾಗದಲ್ಲಿ ನೆಲೆಸಿದ್ದ 30 ಕುಟುಂಬಗಳು ಬೇಸತ್ತು ಊರಿಗೆ ವಾಪಾಸ್ಸಾದರು. ಉಳಿದ 15 ಕುಟುಂಬಗಳು ಇನ್ನೂ ಅಲ್ಲಿಯೇ ಬದುಕುತ್ತಿವೆ.

ಸೋಗೆ ಜೋಪಡಿ ಹಾಕಿಕೊಂಡು ಗುಡಿಸಲಿನಲ್ಲಿ ವಾಸವಾಗಿರುವ ದಲಿತ ಕುಟುಂಬಗಳು ಇಂದಿಗೂ ಸೂರು ಕಾಣದೇ ಸರ್ಕಾರದ ಎಲ್ಲ ಸೌಲಭ್ಯಗಳಿಂದ ವಂಚಿತವಾಗಿವೆ.

`ಏಳೆಂಟು ತಿಂಗಳ ಹಿಂದೆಯಷ್ಟೇ ಸಮೀಪದಲ್ಲಿ ಕೊರೆಯಿಸಿದ ಕೊಳವೆಬಾವಿಯಲ್ಲಿ ಒಂದು ಬಿಂದಿಗೆ ನೀರಿಗಾಗಿ ಗಂಟೆಗಟ್ಟಲೇ ಒತ್ತಬೇಕು, ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ' ಎಂದು ನಿವಾಸಿಗಳು ನೊಂದು ನುಡಿಯುತ್ತಾರೆ.

`ಮಳೆ ಬಂದರೆ ಗುಡಿಸಲುಗಳಲ್ಲಿ ನೀರು ನಿಂತು ನಿದ್ರೆಯಿಲ್ಲದೇ ರಾತ್ರಿಯಿಡಿ ಜಾಗರಾಣೆ ಮಾಡಬೇಕು. ಕೆಲವು ಮನೆಗಳ ಗೋಡೆಗಳು ಮುರಿದು ಬಿದ್ದು ಅಸ್ತಿಪಂಜರದಂತೆ ಕಾಣಿಸುತ್ತಿವೆ. ಹಂದಿಗೂಡಿನಂತಹ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿರುವ ನಮ್ಮ ಕೂಗು ಸರ್ಕಾರಕ್ಕೆ ಮುಟ್ಟುತ್ತಿಲ್ಲ' ಎಂದು ದಲಿತ ಮಹಿಳೆಯರು ಕಣ್ಣೀರಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT