ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಲ್ಲಪೆರಿಯಾರ್ ಅಣೆಕಟ್ಟೆ ವಿವಾದ: ಪುಸ್ತಕ ಮೇಳಕ್ಕೂ ತಟ್ಟಿದ ಬಿಸಿ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಚೆನ್ನೈ: ಬಹಳ ವರ್ಷಗಳಿಂದ ಮದ್ರಾಸ್ ಪುಸ್ತಕ ಮೇಳ ಎಂದೇ ಖ್ಯಾತಿ ಪಡೆದು ಈಗ ಚೆನ್ನೈ ಪುಸ್ತಕ ಮೇಳ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಬಹುಭಾಷಾ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಪುಸ್ತಕ ಮೇಳಕ್ಕೆ ಇದೇ ಮೊದಲ ಬಾರಿಗೆ ಅಡ್ಡಿ ಆತಂಕಗಳು ಎದುರಾಗಿವೆ.

ಮುಲ್ಲಪೆರಿಯಾರ್ ಅಣೆಕಟ್ಟೆ ವಿವಾದದ ಬಿಸಿ ಈ ಪುಸ್ತಕ ಮೇಳಕ್ಕೂ ತಟ್ಟಿದೆ. ಎಲ್‌ಟಿಟಿಇ ಪರ ತಮಿಳು ಸಂಘಟನೆಯು ಪುಸ್ತಕ ಮೇಳದಿಂದ ಮಲೆಯಾಳಂ ಮನೋರಮಾ ಪ್ರಕಟಣೆಗಳನ್ನು ಹೊರಗಿಡಬೇಕು ಎಂದು ಒತ್ತಾಯಿಸತೊಡಗಿದೆ.

ದಕ್ಷಿಣ ಭಾರತದ ಪುಸ್ತಕ ಮಾರಾಟಗಾರರು ಮತ್ತು ಪುಸ್ತಕ ಪ್ರಕಟಣೆ ಸಂಘವು (ಬಿಎಪಿಎಸ್‌ಐ) ಕಳೆದ 35 ವರ್ಷಗಳಿಂದ ಈ ಪುಸ್ತಕ ಮೇಳವನ್ನು ನಡೆಸುತ್ತಾ ಬಂದಿದೆ. ಇದೇ ಮೊದಲ ಬಾರಿಗೆ ಪ್ರಕಟಣಾ ಸಂಸ್ಥೆಯೊಂದನ್ನು ಮೇಳದಿಂದ ಹೊರಗಟ್ಟಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.

ವೆಲುಪಿಳ್ಳೈ ಪ್ರಭಾಕರನ್ ಹತ್ಯೆ ಮಾಡುವುದರೊಂದಿಗೆ 2009ರ ಮೇ 17ರಂದು ಶ್ರೀಲಂಕಾ ಸೇನೆಯು ಎಲ್‌ಟಿಟಿಇ ಜತೆಗಿನ ದೀರ್ಘ ಕದನಕ್ಕೆ ಪೂರ್ಣವಿರಾಮ ಹಾಕಿದ್ದರ ಹಿನ್ನಲೆಯಲ್ಲಿ `ಮೇ 17ರ ಹೋರಾಟಗಾರರು~ ಎಂಬ ಸಂಘಟನೆ ಸ್ಥಾಪಿಸಿಕೊಂಡಿರುವವರು ಪುಸ್ತಕ ಮೇಳದಲ್ಲಿ ಮಲೆಯಾಳಂ ಮನೋರಮಾ ಪ್ರಕಟಣೆಗಳು ಬೇಡವೇ ಬೇಡ ಎಂದು ಆಗ್ರಹಿಸತೊಡಗಿದ್ದಾರೆ.

`ಭಾನುವಾರ ರಾತ್ರಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪುಸ್ತಕ ಮೇಳವನ್ನು ಉದ್ಘಾಟಿಸಲು ಆಗಮಿಸಿದಾಗ ಸುಮಾರು 50 ಮಂದಿ ಯುವಕರು ಮಳೆಯಾಳಂ ಮನೋರಮಾ ಪ್ರಕಟಣೆಯ ವಿರುದ್ಧ ಪ್ರತಿಭಟನೆ ನಡೆಸಿದ್ದು ನಮಗೆ ಆಶ್ಚರ್ಯ ಮತ್ತು ಆಘಾತವನ್ನು ಉಂಟು ಮಾಡಿತು~ ಎಂದು ಬಿಎಪಿಎಸ್‌ಐ ಅಧ್ಯಕ್ಷ ಆರ್. ಎಸ್. ಷಣ್ಮುಗಂ `ಪ್ರಜಾವಾಣಿ~ಗೆ ತಿಳಿಸಿದರು.

ಈ ಪ್ರತಿಭಟನಾಕಾರರು ಮಲೆಯಾಳಂ ಪ್ರಕಟಣೆಯ ಅಂಗಡಿ ಎದುರು ಘೋಷಣೆಗಳನ್ನು ಕೂಗಿದರು. ನಂತರ ಅವರನ್ನು ಹೊರಹಾಕಲಾಯಿತು. ಈಗ ಎಲ್ಲಾ ಭಾಷೆಯ ಪ್ರಕಾಶಕರೂ ಮಳಿಗೆಗಳನ್ನು ತೆರೆದಿದ್ದಾರೆ ಮತ್ತು ಪ್ರತಿದಿನ ಸರಾಸರಿ ಒಂದು ಲಕ್ಷ ಜನರು ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಸಂಶಯ ಬರಬಾರದು ಎಂದು ಪ್ರತಿಭಟನಾಕಾರರು ಒಟ್ಟಿಗೆ 50 ಪ್ರವೇಶ ಟಿಕೆಟ್ ಪಡೆಯಲಿಲ್ಲ. ಬದಲಿಗೆ ಎರಡು ಅಥವಾ ಮೂರು ಟಿಕೆಟ್ ಪಡೆದು ನಂತರ ಎಲ್ಲರೂ ಮಲೆಯಾಳಂ ಮನೋರಮಾ ಮಳಿಗೆ ಎದುರು ಜಮಾಯಿಸಿ ಘೋಷಣೆ ಕೂಗಿದರು ಎಂದು ಷಣ್ಮುಗಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT