ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಡೆ ನಗರಿಗೆ ಸಂಪರ್ಕ ಸೇತುವೆಯಾದ ರಸ್ತೆ

Last Updated 17 ಡಿಸೆಂಬರ್ 2012, 8:11 IST
ಅಕ್ಷರ ಗಾತ್ರ

ಬಾಗಲಕೋಟೆ: ಇದನ್ನು ಅತೀ ಉದ್ದನೆಯ ಸೇತುವೆ ಎನ್ನಬೇಕೋ ಅಥವಾ ಸೇತುವೆಗಳಿಂದ ಕೂಡಿದ ರಸ್ತೆ ಎನ್ನಬೇಕೋ ಅಥವಾ ಹೆದ್ದಾರಿ ಎನ್ನಬೇಕೋ ಕ್ಷಣ ಹೊತ್ತು ತಿಳಿಯದು! ಹೌದು, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿ ಅಸ್ವಿತ್ವವನ್ನೇ ಕಳೆದುಕೊಂಡಿದ್ದ ಹಳೆ ಬಾಗಲಕೋಟೆ -ವಿದ್ಯಾಗಿರಿ-ಗದ್ದನಕೇರಿ ನಡುವೆ ಹಾದು ಹೋಗುವ ಬೆಳಗಾವಿ-ರಾಯಚೂರು ಹೆದ್ದಾರಿ ಪುನರ್‌ನಿರ್ಮಾಣದಿಂದ ಮುಳುಗಡೆ ನಗರಿಯ ಸಂಪರ್ಕ ಸೇತುವೆಯಾಗಿ ಮಾರ್ಪಟ್ಟಿದೆ.

ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿ ಹರಿದು ಹಂಚಿಹೋಗಿರುವ ಬಾಗಲಕೋಟೆ ನಗರವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ನಿರ್ಮಾಣದ ಅಂತಿಮ ಹಂತ ದಲ್ಲಿರುವ ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿ ಹೊಸ ರೂಪದೊಂದಿಗೆ ಕಂಗೊಳಿಸ ತೊಡಗಿದೆ.

ಗದ್ದಿನಕೇರಿ ಕ್ರಾಸ್‌ನಿಂದ ಶಿರೂರು ಕ್ರಾಸ್ ವರೆಗಿನ ಕೇವಲ 15 ಕಿ.ಮೀ. ಉದ್ದನೆಯ ರಸ್ತೆಯನ್ನು  ಬರೊಬ್ಬರಿ ರೂ.110 ಕೋಟಿ ವೆಚ್ಚದಲ್ಲಿ ಸೇತುವೆಯಂತೆ ನಿರ್ಮಿಸಲಾಗಿದೆ. ಇದರಿಂದ ಗದ್ದನಕೇರಿ, ವಿದ್ಯಾಗಿರಿ, ಹಳೆ ಬಾಗಲಕೋಟೆ ಸಂಪರ್ಕ ಸುಲಭವಾದಂತಾಗಿದೆ.

ಡಿಎನ್‌ಕೆ ಕನ್‌ಸ್ಟ್ರಕ್ಷನ್ ಕಂಪೆನಿಯು ಸರಾಸರಿ ಎರಡು ವರ್ಷಗಳ ಅವಧಿಯಲ್ಲಿ ಸಾವಿರಾರು ಲೋಡ್ ಮಣ್ಣನ್ನು ತಂದು ರಾಶಿ ರಾಶಿಯಾಗಿ ಸುರಿದು ಕನಿಷ್ಠ 10 ರಿಂದ ಗರಿಷ್ಠ 25 ಅಡಿ ಎತ್ತರದ ಗಟ್ಟಿಮುಟ್ಟಾದ ಸರ್ವಋತು ರಸ್ತೆಯನ್ನು ನಿರ್ಮಿಸುತ್ತಿದೆ.

ಮಹಾರುದ್ರಪ್ಪನ ಹಳ್ಳ ಸೇತುವೆ, ಕಾರಿಹಳ್ಳ ಸೇತುವೆ, ಸಿಮೆಂಟ್ ಕ್ವಾರಿ ಸೇತುವೆ ಮತ್ತು ಬಿಟಿಡಿಎ ಬಳಿ ನಾಲ್ಕು ಬೃಹತ್ ಸೇತುವೆ ಹಾಗೂ ಗದ್ದನಕೇರಿ ಸಮೀಪದ ಮುಳಿಯಪ್ಪಯ್ಯ ಮಠ ಮತ್ತು ಸ್ಪಿನ್ನಿಂಗ್ ಮಿಲ್ ಬಳಿ ಎರಡು ಮಧ್ಯಮ ಪ್ರಮಾಣದ ಸೇತುವೆಯನ್ನು ನಿರ್ಮಿಸುವ ಮೂಲಕ ಆಲಮಟ್ಟಿ ಅಣೆಕಟ್ಟೆಯನ್ನು 527ಮಿಟರ್‌ಗೆ ಎತ್ತರಿಸಿದರೂ ರಸ್ತೆಗೆ ಯಾವುದೇ ತೊಡಕಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ರಸ್ತೆ ಮೇಲೆ ಪ್ರಯಾಣಿಸುವವರಿಗೆ ಒಂದೆಡೆ ಆಲಮಟ್ಟಿ ಜಲಾಶಯದ ಹಿನ್ನೀರ ವಿಹಂಗಮ ನೋಟ, ಹಸಿರನ್ನು ಹೊದ್ದುಕೊಂಡು ನಿಂತ ಹೊಲ, ಇನ್ನೊಂದೆಡೆ ವಿದ್ಯಾಗಿರಿ, ನವನಗರ, ಹಳೆ ಬಾಗಲಕೋಟೆ ನಗರದ ಸಾಲು ಸಾಲು ದೃಶ್ಯ ಕಣ್ಮನ ಸೆಳೆಯುತ್ತದೆ.

ಗದ್ದನಕೇರಿಯಿಂದ ಹಳೆ ಬಾಗಲಕೋಟೆಯನ್ನು ಕೇವಲ 15 ನಿಮಿಷದ ಒಳಗೆ ಯಾವುದೇ ಅಡೆತಡೆ ಇಲ್ಲದೇ ವೇಗವಾಗಿ ಸಂಪರ್ಕಿಸಲು ಸುಲಭಸಾಧ್ಯವಾಗಿದೆ. ಅದರಲ್ಲೂ ಅಸ್ವಿತ್ವವನ್ನೇ ಕಳೆದುಕೊಂಡಿದ್ದ ಹಳೆ ಬಾಗಲಕೋಟೆಯನ್ನು ಪುರುಜ್ಜೀವನ ಗೊಳಿಸಿದಂತಾಗಿದ್ದು, ವ್ಯಾಪಾರ ವಹಿವಾಟಿಗೆ ಅನುಕೂಲವಾಗಿದೆ. ಜೊತೆಗೆ ಹೆದ್ದಾರಿ ಪುನರ್‌ನಿರ್ಮಾಣದಿಂದ ರಸ್ತೆಯ ಆಸುಪಾಸು ಭೂಮಿಗೆ ಬೇಡಿಕೆ ಹೆಚ್ಚಿದೆ. ಬಾಗಲಕೋಟೆ ತಾಲ್ಲೂಕಿನ ಹತ್ತಾರು ಹಳ್ಳಿಗಳ ಸಾವಿರಾರು ಜನರು ತಮ್ಮ ಹೊಲ-ಮನೆಗಳಿಗೆ ಸುಲಭ ಸಂಪರ್ಕ ಸಾಧಿಸುವಂತಾಗಿದೆ.

ಹೆದ್ದಾರಿ ನಿರ್ಮಾಣದಿಂದ 53 ಕುಟುಂಬಗಳು ಮತ್ತು 53 ಬಾಡಿಗೆದಾರರು ತಮ್ಮ  ಮನೆ-ಅಂಗಡಿಯನ್ನು ಕಳೆದು ಕೊಂಡು ಸಂತ್ರಸ್ಥರಾಗಿದ್ದು, ಅವರಿಗೆ ನವನಗರದ ಯುನಿಟ್ ಒಂದರಲ್ಲಿ ನಿವೇಶನ ಮತ್ತು ಪರಿಹಾರಧನವನ್ನೂ ಸಹ ಬಿಟಿಡಿಎ ವತಿಯಿಂದ ಇತ್ತೀಚೆಗೆ ವಿತರಿಸಲಾಗಿದೆ.

ಮುಳುಗಡೆ ನಗರಿಯನ್ನು ಒಂದುಗೂಡಿಸುವ ಈ ಸೇತುವೆ ನಿರ್ಮಾಣದ ಹಿಂದೆ ಶಾಸಕ ವೀರಣ್ಣ ಚರಂತಿಮಠ ಅವರ ಪರಿಶ್ರಮ ದೊಡ್ಡದ್ದು, ಅವರು ಸೇತುವೆ ನಿರ್ಮಾಣದ ಕನಸು ಕಾಣದಿದ್ದರೇ, ದೊಡ್ಡ ಮೊತ್ತದ ಹಣವನ್ನು ಸರ್ಕಾರದಿಂದ ತಾರದಿದ್ದರೇ ರಸ್ತೆ ನಿರ್ಮಾಣ ಮರೀಚಿಕೆಯಾಗಿಯೇ ಉಳಿಯುತ್ತಿತ್ತು.

ಇದೆಲ್ಲದರ ನಡುವೆ ಈ ಮಾರ್ಗ ನಿರ್ಮಾಣದಿಂದ ನವನಗರದ ವ್ಯಾಪಾರ, ವಹಿವಾಟು ಮತ್ತು ಸಂಪರ್ಕಕ್ಕೆ ಕೊಂಚ ಹಿನ್ನಡೆ ಉಂಟಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT