ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಡೆ ನಾಡಲ್ಲಿ ರಾಜಕಾರಣಿಗಳ ಕನವರಿಕೆ

Last Updated 25 ಏಪ್ರಿಲ್ 2013, 9:11 IST
ಅಕ್ಷರ ಗಾತ್ರ

ಬಾಗಲಕೋಟೆ: ಘಟಪ್ರಭಾ, ಮಲಪ್ರಭಾ ನದಿಯಲ್ಲಿ ನೀರಿನ ಅಲೆಗಳಿಲ್ಲ. ಕೃಷ್ಣಾ ನದಿಯೂ ಬಹುತೇಕ ಬತ್ತಿದೆ. ಇದರ ನಡುವೆಯೇ ಬಿರು ಬೇಸಿಗೆಯ ಬೇಗೆಯಲ್ಲಿ ಪ್ರಚಾರ ನಿಧಾನಕ್ಕೆ ಆರಂಭವಾಗಿದೆ. ಪ್ರಮುಖ ಪಕ್ಷಗಳು ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳ ಹೆಸರು ಪ್ರಕಟಿಸಿವೆ. ಟಿಕೆಟ್ ಸಿಕ್ಕವರೆಲ್ಲ ತಿರುಗಾಟ ಆರಂಭಿಸಿದ್ದಾರೆ.

ಮುಳುಗಡೆಯ ನಾಡು ಎಂದೇ ಕರೆಸಿಕೊಳ್ಳುವ ಈ ಜಿಲ್ಲೆಯಲ್ಲಿ ಸಂತ್ರಸ್ತರ ಪುನರ್ವಸತಿ ಪ್ರಮುಖ ವಿಷಯ. ರಾಜಕೀಯ ಪುನರ್ವಸತಿಗೂ ಇಲ್ಲಿ ಸಾಕಷ್ಟು ಇತಿಹಾಸವಿದೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಮುಂತಾದವರಿಗೆ ರಾಜಕೀಯ ಪುನರ್ವಸತಿ ಕಲ್ಪಿಸಿದ ಬಾಗಲಕೋಟೆ ಈಗ ಯಡಿಯೂರಪ್ಪ ಅವರಿಗೆ ಪುನರ್ವಸತಿ ಕಲ್ಪಿಸಬಹುದೇ ಎಂಬ ಪ್ರಶ್ನೆ ಪ್ರಮುಖವಾಗಿ ಕೇಳಿಬರುತ್ತಿದೆ. ಏಕೆಂದರೆ `ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳಿರುತ್ತಾರೆ. ಆದರೆ ನಿಜವಾದ ಅಭ್ಯರ್ಥಿ ನಾನೇ' ಎಂದು ಯಡಿಯೂರಪ್ಪ ಘೋಷಣೆ ಮಾಡಿ ಹೋಗಿದ್ದಾರೆ.

ಕಾಣದ ಅಲೆ:  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ 7 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಜಯ ಗಳಿಸಿದ್ದರು. ಈ ಬಾರಿಯೂ ಅಂತಹ ಅಲೆ ಇದೆಯೇ ಎಂದು ಪ್ರಶ್ನಿಸಿದರೆ, `ಇಲ್ಲ ಇಲ್ಲ, ಖಂಡಿತ ಇಲ್ಲ. ಹೋದ ಸಲ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲೇಬೇಕು ಎನ್ನುವ ಭಾವನೆ, ಕುಮಾರಸ್ವಾಮಿ ವಿಶ್ವಾಸ ದ್ರೋಹ ಮಾಡಿದರು ಎಂಬ ಕೋಪ ಜನರಲ್ಲಿತ್ತು. ಆದರೆ ಈ ಬಾರಿ ಬಿಜೆಪಿ ಅಲೆ ಇಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಏನೆಲ್ಲಾ ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಬಿಜೆಪಿ ಈಗ ಮೂರು ಹೋಳಾಗಿದೆ. ಯಾವುದೇ ಮ್ಯಾಜಿಕ್ ಮಾಡೋದು ಈಗಂತೂ ಯಡಿಯೂರಪ್ಪಗೆ ಸಾಧ್ಯವಿಲ್ಲ' ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯಮಠ ಖಡಕ್ ಉತ್ತರ ನೀಡುತ್ತಾರೆ.

`ಜೆ.ಎಚ್.ಪಟೇಲರ ನಂತರ ಲಿಂಗಾಯಿತರಿಗೆ ಸೂಕ್ತ ನಾಯಕತ್ವ ಸಿಕ್ಕಿರಲಿಲ್ಲ. ಬಿಜೆಪಿ ಬಿಟ್ಟು ಇತರ ಪಕ್ಷಗಳಲ್ಲಿ ಪ್ರಮುಖ ಲಿಂಗಾಯಿತ ನಾಯಕರು ಮುಂಚೂಣಿಯಲ್ಲಿ ಇರಲಿಲ್ಲ. ಅದಕ್ಕೆ ಕಳೆದ ಬಾರಿ ಲಿಂಗಾಯಿತರು ಯಡಿಯೂರಪ್ಪ ಅವರಲ್ಲಿ ನಾಯಕತ್ವ ಕಂಡುಕೊಂಡರು. ಈ ಬಾರಿ ಅವರು ಬಿಜೆಪಿ ಬಿಟ್ಟಿದ್ದಾರೆ. ಆದರೆ ಈಗಲೂ ಬೇರೆ ಪಕ್ಷಗಳಲ್ಲಿ ಲಿಂಗಾಯಿತ ಮುಖಂಡರಿಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಗೊತ್ತಿದ್ದರೂ ಲಿಂಗಾಯಿತರಲ್ಲಿ ಕೆಲವರು ಅವರಲ್ಲಿಯೇ ನಾಯಕತ್ವ ಕಾಣಬಹುದು. ಅದಕ್ಕಾಗಿ ಒಂದಿಷ್ಟು ಬೆಂಬಲ ಅವರಿಗೆ ದೊರೆಯಬಹುದು' ಎನ್ನುತ್ತಾರೆ ಕಮ್ಯುನಿಸ್ಟ್ ನಾಯಕ ಡಾ. ಸಿದ್ದನಗೌಡ ಪಾಟೀಲ.

ಹುನಗುಂದದಲ್ಲಿ ಜನಪರ ಹೋರಾಟ, ಗ್ರಾನೈಟ್ ಗಣಿಗಾರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇರುವ ಸಿದ್ದನಗೌಡರಿಗೆ ರಾಜಕೀಯ ಎಂಬುದು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂಬ ಕೋಪ. ಇಂತಹ ಸಾತ್ವಿಕ ಸಿಟ್ಟು ಅಲ್ಲಿನ ಬಹುತೇಕ ಮತದಾರರಲ್ಲಿಯೂ ಕಾಣುತ್ತಿದೆ. ಲೇಖಕಿ ದಾನೇಶ್ವರಿ ಸಾರಂಗಮಠ ಕೂಡ ಇಂತಹ ಸಿಟ್ಟಿನ ಮಾತುಗಳನ್ನೇ ಆಡುತ್ತಾರೆ. `ಯಾರಿಗೂ ಜನಹಿತ ಬೇಕಿಲ್ಲ. ಎಲ್ಲರೂ ತಮ್ಮ ತಮ್ಮ ಸುಖ ನೋಡ್ತಾರ. ಅದಕ್ಕಾಗಿ ಪ್ರಯತ್ನ ಪಡ್ತಾರ' ಎನ್ನುತ್ತಾರೆ ಅವರು.

`ಅಭಿವೃದ್ಧಿ ಯಾರಿಗೂ ಬೇಕಾಗಿಲ್ಲ. ಎಲ್ಲರೂ ಹಣ ಖರ್ಚು ಮಾಡುತ್ತಾರೆ. ಜನ ಕೂಡ ಎಲ್ಲರಿಂದಲೂ ಹಣ ಪಡೆಯುತ್ತಾರೆ. ಆದರೆ ಓಟ್ ಹಾಕಲು ಮತಗಟ್ಟೆಗೆ ಹೋದಾಗ ಅವರಿಗೆ ನೆನಪಾಗುವುದು ಜಾತಿ ಮಾತ್ರ' ಎನ್ನುತ್ತಾರೆ ಲೇಖಕ ಪ್ರಕಾಶ ಖಾಡೆ.

ಕ್ಷೇತ್ರದಲ್ಲಿ ಬಹುತೇಕ ಕಡೆ ರಸ್ತೆಗಳು ನುಣುಪಾಗಿವೆ. ಹಾಗೆಯೇ ಇಳಕಲ್‌ನಲ್ಲಿ ಗ್ರಾನೈಟ್ ಲಾಬಿಗೆ ಸಿಕ್ಕು ಗುಡ್ಡಗಳೂ ನುಣುಪಾಗಿವೆ. ಗ್ರಾನೈಟ್ ಕಲ್ಲುಗಳನ್ನು ತೆಗೆದು ತೆಗೆದು ಇಡೀ ಭೂಮಿ ಬಾಯಿ ಬಿಟ್ಟಂತೆ ಕಾಣುತ್ತಿದೆ. ಆ ಗುಂಡಿಗಳ ನಡುವೆಯೇ ಬದುಕಿನ ಭವಿಷ್ಯ ಹುಡುಕುತ್ತಿರುವ ಕಂಬಳಿ ಸಿದ್ದಪ್ಪ ಮಾತ್ರ ರಾಜಕೀಯದ ಮಾತು ಕೇಳಿದರೆ ಸಿಡಿಯುತ್ತಾರೆ, ಕಿಡಿಯಾಗುತ್ತಾರೆ.

`ಯಾರಿಗ್ ಬೇಕ್ರಿ ರಾಜಕೀಯ. ನಮ್ಮೊರು ಎಲ್ಲಾ ಗೋವಾ, ಮಂಗಳೂರು ಅಂತಾ ಗುಳೇ ಹೋಗ್ಯಾರ. ಇಲ್ಲಿ ಕೂಲಿ ಇಲ್ಲ. ಅನ್ನ ಇಲ್ಲ. ಅವರು ಟ್ರಕ್‌ನಾಗ್ ಕರಕೊಂಡು ಬರ‌್ತಾರ, ವೋಟ್ ಹಾಕಿಸಿಕೊಳ್ತಾರ, ಮತ್ತೆ ನಡುನೀರಲ್ಲಿ ನಮ್ಮ ಕೈಬಿಟ್ಟು ಹೋಗ್ತಾರ. ಇದನ್ನು ನೋಡಿ ನೋಡಿ ಸಾಕಾಗ್ಯದ. ನಮಗ ಇಲೆಕ್ಸನ್ನೂ ಬ್ಯಾಡ; ರಾಜಕೀಯನೂ ಬ್ಯಾಡ. ಛಲೋ ಬದುಕು ಕೊಡ್ಲಿ ಸಾಕು' ಎಂದು  ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬಾಗಲಕೋಟೆ, ಹುನಗುಂದ, ಬಾದಾಮಿ ತಾಲ್ಲೂಕುಗಳು ಬರಪ್ರದೇಶಗಳು. ಇಲ್ಲಿನ ಜನರಿಗೆ ಬದುಕು ಸಾಗಿಸುವುದೇ ದೊಡ್ಡ ಸಮಸ್ಯೆ. ಅದರಲ್ಲಿಯೂ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಯಾರೂ ಕೇಳುತ್ತಿಲ್ಲ. ಯಾರೇ ಅಧಿಕಾರಕ್ಕೆ ಬಂದರೂ ತಮಗೆ ಅನುಕೂಲ ಇಲ್ಲ ಎನ್ನುವ ಭಾವನೆ ಅವರಲ್ಲಿ ಬಲವಾಗಿದೆ.

ಈ ಕೂಲಿ ಕಾರ್ಮಿಕರಿಗೆ ಕನಸುಗಳಿಲ್ಲ. ಗುಳೇ ಹೋದವರು ಶ್ರಮ ಮಾರುತ್ತಿದ್ದಾರೆ. ಹೊಲದಲ್ಲಿ ನಿಂತವರು ಆಗಸದತ್ತ ಮುಖ ಮಾಡಿದ್ದಾರೆ. ಮೋಡಗಳ ಚಲನೆಯನ್ನು ಅವಲೋಕಿಸುತ್ತಿದ್ದಾರೆ. `ಎಲ್ಲ ನದಿಗಳೂ ತುಂಬಿ ಹರಿಯಲಿ; ಕಪ್ಪು ಮಣ್ಣು ಹಸಿಯಾಗಲಿ' ಎಂದು ಕಾಯುತ್ತಿದ್ದಾರೆ. ಮಳೆ ಬಂದರೆ ಉತ್ತಿ ಬಿತ್ತಿ ತುತ್ತಿನ ಚೀಲ ತುಂಬಿಕೊಳ್ಳಬಹುದು ಎಂದು ಕನವರಿಸುತ್ತಿದ್ದಾರೆ.

ಅಭ್ಯರ್ಥಿಗಳ ಕಣ್ಣಲ್ಲಿ ಕನಸುಗಳು...
ಬಾಗಲಕೋಟೆ, ಬಾದಾಮಿ, ಬೀಳಗಿ, ಹುನಗುಂದ, ಮುಧೋಳ, ಜಮಖಂಡಿ, ತೇರದಾಳ ಕ್ಷೇತ್ರದಲ್ಲಿ ಚುನಾವಣೆ ನಿಂತ ಅಭ್ಯರ್ಥಿಗಳ ಕಣ್ಣಲ್ಲಿ ಮಾತ್ರ ಕನಸುಗಳಿವೆ. ಅವರ ಬೆಂಬಲಿಗರು ಹೊಸ ಹೊಸ ಪಟ್ಟುಗಳನ್ನು ಹಾಕುತ್ತಾ, ಭರವಸೆಯ ಮಾತುಗಳನ್ನು ಉದುರಿಸುತ್ತಾ ಸಾಗುತ್ತಿದ್ದಾರೆ. ರಾಜಕೀಯ ಪುನರ್ವಸತಿ, ಅಜ್ಞಾತವಾಸಕ್ಕೆ ಮುಕ್ತಿ ಹಾಡಲು ರಾಜಕಾರಣಿಗಳು ಹವಣಿಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಕೆಜೆಪಿ ಎಂದು ಪೈಪೋಟಿ ನಡೆಸಿದ್ದಾರೆ. ಆದರೆ ಅನ್ನದಾತ ಮಾತ್ರ ಮುಗಿಲು ನೋಡುತ್ತಾ ಮಳೆಗಾಗಿ ಕಾಯುತ್ತಿದ್ದಾನೆ.

ರಾಜಕೀಯ ಪುನರ್ವಸತಿ!
ರಾಜಕಾರಣಿಗಳಿಗೆ ರಾಜಕೀಯ ಪುನರ್ವಸತಿ ಕಲ್ಪಿಸುವ ವಿಷಯದಲ್ಲಿ ಬಾಗಲಕೋಟೆಗೆ ದೊಡ್ಡ ಇತಿಹಾಸವೇ ಇದೆ. 1962ರಲ್ಲಿ ಎಸ್.ನಿಜಲಿಂಗಪ್ಪ ಅವರು ತಮ್ಮ ತವರು ಜಿಲ್ಲೆಯ ಹೊಸದುರ್ಗದಲ್ಲಿ ಸೋತರು.  ಎಸ್.ಆರ್.ಕಂಠಿ ಅವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಹಂಗಾಮಿಯಾಗಿ ಕೂಡಿಸಿದರು. ತಾವು ಇಲ್ಲಿ ಬಂದು ಸ್ಪರ್ಧಿಸಿ ಗೆದ್ದು ಮತ್ತೆ ಮುಖ್ಯಮಂತ್ರಿಯಾದರು.

ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ವಿರುದ್ಧ ಸೋತ ವೀರೇಂದ್ರ ಪಾಟೀಲರು 1980ರಲ್ಲಿ ಇಲ್ಲಿಗೆ ಬಂದು ಕಾಂಗ್ರೆಸ್‌ನಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದು ಕೇಂದ್ರದಲ್ಲಿ ಸಚಿವರಾದರು. ರಾಮಕೃಷ್ಣ ಹೆಗಡೆ ಕೂಡ ಪುನರ್ವಸತಿ ಬಯಸಿ ಇಲ್ಲಿಂದ ಸ್ಪರ್ಧಿಸಿದರಾದರೂ, ಸಿದ್ದು ನ್ಯಾಮಗೌಡ ಎದುರು ಸೋಲನುಭವಿಸಿದರು. ಈಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ತಮ್ಮ ರಾಜಕೀಯ ಪುನರ್ವಸತಿಗೆ ಈ ಜಿಲ್ಲೆ ಎಷ್ಟು ಕಾಣಿಕೆ ನೀಡಬಹುದು ಎಂದು ಕಾಯುತ್ತಿದ್ದಾರೆ.

ನಿಜಲಿಂಗಪ್ಪ, ವೀರೇಂದ್ರ ಪಾಟೀಲರ ಹಾಗೆ ಅವರಿಗೆ ಬೆಂಬಲ ಸಿಗುತ್ತದೋ ಅಥವಾ ರಾಮಕೃಷ್ಣ ಹೆಗಡೆ ಅವರಂತೆ ಸೋಲಿನ ನಿರಾಸೆ ಅನುಭವಿಸುತ್ತಾರೋ ಎನ್ನುವುದು ಪ್ರಶ್ನೆಯಾಗಿದೆ.

ಇಲ್ಲಿ ಬಂದ್ ಕೂಲಿ ಮಾಡ್ತಾರೇನ್
ಹುಲಗಿನಾಳದ ಗೌರಮ್ಮ ಕರಿಯಣ್ಣನವರ ಮಾರ್ಮಿಕವಾಗಿ ಹೇಳುವ ಮಾತು ಜಿಲ್ಲೆಯ ರೈತರು, ಕೃಷಿ ಕಾರ್ಮಿಕರ ಭಾವನೆ ಪ್ರತಿಬಿಂಬಿಸುತ್ತದೆ. ಹೊಲದಲ್ಲಿ ಜೋಳ ಬಿಡಿಸುತ್ತಿದ್ದ ಅವರನ್ನು ಮಾತನಾಡಿಸಿದಾಗ, `ಯಡಿಯೂರಪ್ಪ ಬರಲಿ, ಸಿದ್ದರಾಮಯ್ಯ ಬರಲಿ, ದೊಡ್ಡನಗೌಡ ಪಾಟೀಲ ಬರಲಿ. ಅವರು ನಮ್ಮ ಹೊಲದಾಗೇನ್ ಕೂಲಿ ಮಾಡ್ತಾರೇನ್ರಿ. ನಮ್ಮ ಪಾಡ ನಮಗ. ಅವರ ಪಾಡ ಅವರಿಗ. ಚುನಾವಣ್ಯಾಗ ಅವರದು ರಗಡಾಗ್ಯದ. ನಮ್ಮ ಬದುಕು ಹೈರಾಣ್ಯಾಗದ. ಮಳಿ ಇಲ್ಲ. ಬರ ಬಂದದ. ಕೂಲಿ ಇಲ್ಲ. ಯಾರಿಗ್ ವೋಟ್ ಮಾಡಿ ಏನಾಗಬೇಕಾಗ್ಯದ' ಎಂಬ ನಿರಾಸೆಯ ನಿಟ್ಟುಸಿರು ಹೊರಬಿತ್ತು. ಬಾದಾಮಿಯ ದಾರಿಯಲ್ಲಿ ಸಿಕ್ಕ ಶಂಕರ ಗುಳೇದಗುಡ್ಡ, ಬಸಮ್ಮ ಬಾದವಾಡಗಿ, ಹನುಮವ್ವ ವಡ್ಡರ ಎಲ್ಲರಿಗೂ ಚುನಾವಣೆ ಅನ್ನೋದು ನಿರಾಸೆಯನ್ನೇ ತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT