ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಡೆಯ ಭೀತಿಯಲ್ಲಿ ಹೆನ್ನಿ ಗ್ರಾಮ

Last Updated 18 ಸೆಪ್ಟೆಂಬರ್ 2011, 12:00 IST
ಅಕ್ಷರ ಗಾತ್ರ

ವಿದ್ಯುತ್ ಯೋಜನೆಗಳ ಹೆಸರುಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹೆಸರೆಂದರೆ ಶರಾವತಿ ಜಲವಿದ್ಯುತ್ ಯೋಜನೆ. ಸರ್.ಎಂ. ವಿಶ್ವೇಶ್ವರಯ್ಯ ಅವರ ಸಾರಥ್ಯದಲ್ಲಿ ನಿರ್ಮಾಣಗೊಂಡ ಯೋಜನೆ ಎಂಬ ಹೆಗ್ಗಳಿಕೆ ಇದಕ್ಕಿದೆ. ಆದರೆ, ಈ ಯೋಜನೆಗೆ ತಮ್ಮ ಮನೆ- ಮಠಗಳನ್ನು ತ್ಯಾಗ ಮಾಡಿ ನಾಡಿಗೆ ಬೆಳಕು ನೀಡಲು ನೆರವಾದ ಕುಟುಂಬಗಳು ಇಂದು ಕತ್ತಲಿನಲ್ಲಿ ಬದುಕುತ್ತಿವೆ.

ಸರ್ಕಾರ ಘೋಷಣೆ ಮಾಡಿದ್ದ ಪುನರ್ವಸತಿ ಯೋಜನೆಗಳು, ಪರಿಹಾರ ಯೋಜನೆಗಳು ಮಧ್ಯವರ್ತಿಗಳ ಪಾಲಾಗಿ ಯಾವುದೇ ನೆರವುಗಳನ್ನು ಪಡೆಯದೇ ಮಲೆನಾಡಿನ ಕುಗ್ರಾಮಗಳನ್ನು ಆಯ್ದುಕೊಂಡು ನೆಮ್ಮದಿಯಾಗಿ ದುಡಿದು ಬದುಕನ್ನು ಸಾಗಿಸುತ್ತಿದ್ದಾರೆ.
 
ಆದರೆ, ಗಾಯದ ಮೇಲೆ ಬರೆ ಎಳೆದಂತೆ ಮತ್ತೆ ಹೊಸ ಹೊಸ ವಿದ್ಯುತ್ ಯೋಜನೆಗಳು ಇವರ ಬದುಕಿನ ನೆಮ್ಮದಿಯನ್ನು ಕೆಡಿಸಿ ಆತಂಕದಿಂದ ದಿನದೂಡುವಂತಹ ವಾತವರಣ ನಿರ್ಮಾಣವಾಗುತ್ತಿದೆ. ಇವುಗಳ ಸಾಲಿನಲ್ಲಿ ಇಂದು ಸಾಗರ ತಾಲ್ಲೂಕಿನ ಜೋಗ್- ಕಾರ್ಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ತಳಕಳಲೆ ಗ್ರಾಮದ ಹೆನ್ನಿ ಮಜಿರೆ ಸೇರಿಕೊಂಡಿದೆ. 

ಜೋಗದ ಎಸ್‌ವಿಪಿ ಕಾಲೊನಿಯ ಪ್ರಮುಖ ಭದ್ರತಾ ಗೇಟನ್ನು ದಾಟಿ ಪಶ್ಚಿಮ ಘಟ್ಟಗಳ ಏರನ್ನು ಹತ್ತಿ ಇಳಿದರೆ ಸಿಗುವ ಊರು ಹೆನ್ನಿ. ಇಲ್ಲಿನ ಜನ ಲಿಂಗನಮಕ್ಕಿ ಆಣೆಕಟ್ಟೆಯ ಹೆಸರಿನಲ್ಲಿ ಒಂದು ಬಾರಿ ಮುಳುಗಡೆಯ ಯಾತನೆಯನ್ನು ಅನುಭವಿಸಿ, ಎರಡನೇ ಹಂತದಲ್ಲಿ ತಳಕಳಲೆ ಜಲಾಶಯದ ಹಣೆಪಟ್ಟಿಯಲ್ಲಿ ತಮ್ಮ ಬದುಕನ್ನು ಕಳೆದುಕೊಂಡು ಹೈರಾಣಾಗಿ ಕೊನೆಗೆ ತಲೆತಲಾಂತರಗಳಿಂದ ಹೆನ್ನಿಯಲ್ಲಿ ನೆಲೆಸಿಕೊಂಡು ಬಂದಿದ್ದಾರೆ.

ಇಲ್ಲಿರುವ ಈಡಿಗ, ಜೈನ, ಕುಣಬಿಮರಾಠಿ, ಜನಾಂಗದವರು ಪ್ರಮುಖವಾಗಿ ಇಲ್ಲಿ ಹರಿಯುವ ಹಂಜಕ್ಕಿ ಹಳ್ಳದ ನೀರನ್ನು ಅವಲಂಬಿಸಿ ಕೃಷಿ ಚಟುವಟಿಕೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಇವರ ಬದುಕಿನ ಜೀವನಾಡಿಯಾಗಿದ್ದ ಹಂಜಕ್ಕಿ ಹಳ್ಳದ ನೀರು ಅವರ ಬದುಕಿಗೆ ಕುತ್ತಾಗಿದೆಯೇನೋ ಎನ್ನುವಂತಹ ಸ್ಥಿತಿ ಈಗ ನಿರ್ಮಾಣವಾಗಿದೆ.  
 
ಹರಿಯುವ ನೀರಿಗೆ ಹೆನ್ನಿ ಮಜಿರೆಯ ಹಂಜಕ್ಕಿ ಹಳ್ಳದಲ್ಲಿ ಅಡ್ಡಲಾಗಿ ಕರ್ನಾಟಕ ವಿದ್ಯುತ್ ನಿಗಮದವರು ಅಣೆಕಟ್ಟೆ ಕಟ್ಟಿ ನೀರು ಸಂಗ್ರಹಿಸಿ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ವೇ ಕಾರ್ಯ ಮುಗಿದಿದ್ದು, ಹಳ್ಳದ ಹರಿಯುವ ನೀರಿಗೆ ವಾಟರ್‌ಗೇಜ್ ಪಟ್ಟಿಯನ್ನು ಅಳವಡಿಸಿ ನೀರಿನ ಪ್ರಮಾಣ ಅಳೆಯುತ್ತಿದ್ದಾರೆ.
 
ಈ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಲಭ್ಯವಾಗುತ್ತಿದ್ದು, `ಶರಾವತಿ ಪಂಪ್ಡ್ ಸ್ಟೋರೇಜ್ ಸ್ಕೀಂ~ ಎಂದು ಹೆಸರಿಸಲಾಗಿದೆ. 225 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ನಾಲ್ಕು ಯೂನಿಟ್‌ಗಳನ್ನು ಅಳವಡಿಸಲು ಯೋಜನೆ ರೂಪಿಸಿದ್ದಾರೆ. ಈ ಬಗ್ಗೆ ಕೆಪಿಸಿಯ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಹನುಮಂತಪ್ಪ, ಹಂಜಕ್ಕಿ ಹಳ್ಳದ ಈ ಯೋಜನೆ ಕೆಪಿಸಿಗೆ ಅಷ್ಟೊಂದು ಲಾಭದಾಯಕವಾದುದಲ್ಲ.

`ರಿವರ್ಸಿಬಲ್ ಟರ್ಬೈನ್~ನ ಮುಖಾಂತರ ಇಂತಹ ಯೋಜನೆಗಳು ಕಾರ್ಯಗತವಾಗಬೇಕಿದೆ. ಈ ಯೋಜನೆಗೆ ಥರ್ಮಲ್ ವಿದ್ಯುತ್ ಸ್ಥಾವರಗಳಲ್ಲಿ ಹೇರಳವಾಗಿ ವಿದ್ಯುತ್ ಉತ್ಪಾದನೆ ಆದಲ್ಲಿ ಮಾತ್ರ ಸಾಧ್ಯವಿರುತ್ತದೆ. ಆದರೆ, ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅಂತಹ ವಾತಾವರಣವಿಲ್ಲ. ಭವಿಷ್ಯದಲ್ಲಿ ಇಂತಹ ಯೋಜನೆಗಳು ಕಾರ್ಯಗತವಾಗಬಹುದು ಎನ್ನುತ್ತಾರೆ.

ಆದರೆ, ಗ್ರಾಮಸ್ಥರು ಮಾತ್ರ ಮುಳುಗಡೆಯ ಭೀತಿಯಲ್ಲಿದ್ದಾರೆ. ಯಾವುದೇ ಗಿಡ ನೆಟ್ಟರೂ ಅದು ತಮಗೆ ಪ್ರಯೋಜನಕ್ಕೆ ಬರುವುದಿಲ್ಲ ಎಂದು ವ್ಯಥೆ ಪಡುತ್ತಿದ್ದಾರೆ.ಪ್ರಾಥಮಿಕ ಹಂತದಲ್ಲಿ 56 ಮನೆಗಳು ಮುಳುಗಡೆಯಾಗುವುದು ಖಚಿತ ಎಂಬ ಮಾಹಿತಿ ತಮಗೆ ಲಭಿಸಿದ್ದು, ಈ ಬಗ್ಗೆ ಮುಂದಿನ ಹೋರಾಟದ ಯೋಜನೆ ರೂಪಿಸುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯ ಯುವಕ ಸಂಘದ ಅಧ್ಯಕ್ಷ ರವಿಕುಮಾರ್ ಜೈನ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT