ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಿದ 17 ಸೇತುವೆ ; ತುಂಗಭದ್ರಾ, ಕೃಷ್ಣಾ ಪ್ರವಾಹ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಮಳೆ ಆರ್ಭಟ ಒಟ್ಟಾರೆ ಕಡಿಮೆ ಆಗಿದೆ. ಆದರೆ ಕೃಷ್ಣಾ ಹಾಗೂ ತುಂಗಭದ್ರಾ ತೀರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.

ನೆರೆಯ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಸತತ ಎರಡನೆಯ ದಿನವೂ ಇಳಿಕೆಯಾಗಿದೆ. ಆದರೆ ಶುಕ್ರವಾರ ಸಂಜೆಯಿಂದ ಮಹಾರಾಷ್ಟ್ರದಲ್ಲಿ ಮತ್ತೆ ಮಳೆ ಪ್ರಮಾಣ ಹೆಚ್ಚಾಗಿರುವುದು ಸ್ವಲ್ಪ ಆತಂಕಕ್ಕೆ ಕಾರಣವಾಗಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ 97 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬೆಳಗಾವಿ ಜಿಲ್ಲೆಯ 13 ಸೇತುವೆಗಳು ನೀರಿನಲ್ಲಿ ಮುಳುಗಿವೆ.ಕೃಷ್ಣಾ ನೀರಿನಲ್ಲಿ ಮುಳುಗಿದ್ದ  ಕುಡಚಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದರೆ,  ಪಾಶ್ಚಾಪುರ-ಇಂಗಳಗಿ ಸೇತುವೆ ಮುಳುಗಡೆಯಾಗಿದೆ.

ಜಿಲ್ಲೆಯಲ್ಲಿಯೂ ಮಳೆಯಾಗುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.ಚಿಕ್ಕೋಡಿ ತಾಲ್ಲೂಕಿನಲ್ಲಿ ಎಂಟು, ಹುಕ್ಕೇರಿ ತಾಲ್ಲೂಕಿನ ಮೂರು, ಖಾನಾಪುರ ತಾಲ್ಲೂಕಿನ ಎರಡು ಸೇತುವೆಗಳು ಮುಳುಗಿವೆ.

ಭಾರಿ ಪ್ರಮಾಣದ ನೀರು ಹೊರಕ್ಕೆ: ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಶನಿವಾರ ಜಲಾಶಯದಿಂದ 1.56ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಹಂಪಿ ಸೇರಿದಂತೆ ಅನೇಕ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದಿಂದ ಹಂಪಿ ಪ್ರಕಾಶನಗರಕ್ಕೆ ಸಾಗುವ ಮಾರ್ಗ, ಮಾವಿನತೋಪು, ರಾಮ-ಲಕ್ಷ್ಮಣ ದೇವಾಲಯಕ್ಕೆ ಹೋಗುವ ಮಾರ್ಗ, ತಳವಾರಘಟ ಸೇತುವೆ ಮಾರ್ಗಗಳು ಕಡಿತಗೊಂಡಿವೆ. ಯಂತ್ರೋದ್ಧಾರಕ ಪ್ರಾಣದೇವರ ಮುಂದಿನ ರಾಮ-ಲಕ್ಷ್ಮಣ ದೇವಸ್ಥಾನದ ಪಾದಗಟ್ಟಿ ಸಂಪೂರ್ಣ ಜಲಾವೃತವಾಗಿದೆ. ಚಕ್ರತೀರ್ಥ ಹಾಗೂ ಇತರ ಸ್ಮಾರಕಗಳು ನೀರಲ್ಲಿ ಮುಳುಗಿ ಕಾಣದಾಗಿವೆ.  

ಕಂಪ್ಲಿ-ಗಂಗಾವತಿ ಸಂಪರ್ಕ ಕಡಿತ: ಕಂಪ್ಲಿ- ಗಂಗಾವತಿ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದು  ಸಂಚಾರ ಸಂಪೂರ್ಣ ಕಡಿತಗೊಂಡಿದೆ.

ಕೋಟೆ ಮಾಗಾಣಿಯಲ್ಲಿ ಬೆಳೆದ ಬಾಳೆ, ಕಬ್ಬು, ಬತ್ತ ಜಲಾವೃತ್ತವಾಗಿವೆ. ಅದೇ ರೀತಿ ಹೋಬಳಿ ವ್ಯಾಪ್ತಿಯ ಸಣಾಪುರ, ಇಟಗಿ ರೈತರು ನದಿ ಬಳಿ ಇರುವ ಪಂಪ್‌ಸೆಟ್ ಕೊಠಡಿಗಳು ಜಲಾವೃತವಾಗಿರುವುದರಿಂದ ರೈತರು ಆತಂಕಗೊಂಡಿದ್ದಾರೆ. ಕಂಪ್ಲಿ ಕೋಟೆ ಐತಿಹಾಸಿಕ ಹೊಳೆ ಆಂಜನೇಯ ದೇವಸ್ಥಾನವೂ ಜಲಾವೃತವಾಗಿದೆ. ನದಿ ಬಳಿಯ ಬನವಾಸಿ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಮಾಗಾಣಿ ರೈತರಿಗೆ ಅನನುಕೂಲವಾಗಿದೆ.

ಆಲಮಟ್ಟಿಯಿಂದ  2 ಲಕ್ಷ ಕ್ಯೂಸೆಕ್ ಹೊರಕ್ಕೆ?: ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರಕ್ಕೆ ಮತ್ತೆ ನೀರಿನ ಹರಿವು ಹೆಚ್ಚಾಗಿದ್ದು ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ 1.80 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಳಹರಿವು ಹೆಚ್ಚು ಇರುವ ಕಾರಣ ರಾತ್ರಿ ಹೊರ ಹರಿವು 2 ಲಕ್ಷ ಕ್ಯೂಸೆಕ್‌ಗೆ ಏರಬಹುದು ಎಂದು ಜಲಾಶಯದ ಮೂಲಗಳು ಸ್ಪಷ್ಟಪಡಿಸಿವೆ. ಮುಂಜಾಗ್ರತಾ ಕ್ರಮವಾಗಿ ಒಂದು ವಾರದಿಂದಲೂ ಭಾರಿ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ. ಶನಿವಾರ ಜಲಾಶಯಕ್ಕೆ 1.73  ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 519.6 ಮೀಟರ್ ಎತ್ತರದ ಜಲಾಶಯದಲ್ಲಿ 519.3 ಮೀಟರ್‌ವರೆಗೆ ನೀರು ಸಂಗ್ರಹವಾಗಿದೆ.

ಉತ್ತರ ಕನ್ನಡದಲ್ಲಿ ಮಳೆ ಇಳಿಕೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಶನಿವಾರ ಸ್ವಲ್ಪ ಬಿಡುವು ನೀಡಿದೆ. ಆದರೆ ನದಿಗಳಲ್ಲಿ ನೀರಿನ ಹರಿವು ಮತ್ತು ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ ಇದೆ.

ಕೋಡಿಭಾಗನ ವಿವೇಕಾನಂದ ಪ್ರೌಢಶಾಲೆಯ ಮೇಲ್ಛಾವಣಿಯ ತಗಡಿನ ಸೀಟುಗಳು ನಗರದಲ್ಲಿ ಶುಕ್ರವಾರ ರಾತ್ರಿ ಬೀಸಿದ ಗಾಳಿಗೆ ಕಿತ್ತುಹೋಗಿದೆ. ಭಟ್ಕಳದಲ್ಲಿ ನಾಲ್ಕು ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.

ಜಿಲ್ಲೆಯಾದ್ಯಂತ ಕಳೆದ 24ಗಂಟೆಗಳ ಅವಧಿಯಲ್ಲಿ 733 ಮಿ.ಮೀ ಮಳೆಯಾಗಿದೆ. ಹೊನ್ನಾವರದಲ್ಲಿ ಅತಿಹೆಚ್ಚು ಅಂದರೆ 160 ಮತ್ತು ಸಿದ್ದಾಪುರದಲ್ಲಿ 134 ಹಾಗೂ ಶಿರಸಿಯಲ್ಲಿ 92 ಮಿ.ಮೀ ಮಳೆಯಾಗಿದೆ.

ಸಂಪರ್ಕ ಕಡಿತ: ಹಾವೇರಿ ಜಿಲ್ಲೆಯ ಅಕ್ಕಿ ಆಲೂರು ಭಾಗದಲ್ಲಿ ಒಂದು ವಾರದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯ ಪರಿಣಾಮ ಅಕ್ಕಿಆಲೂರ ಬಳಿಯಿರುವ ಅರಳೇಶ್ವರ ಮತ್ತು ಕಾಡಶೆಟ್ಟಿಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ಹರಿಯುತ್ತಿದ್ದು ಸಂಪರ್ಕ ಕಡಿತಗೊಂಡಿದೆ.

ಹೇಮಾವತಿ ಜಲಾಶಯ ಭರ್ತಿ: ಹಾಸನ ಜಿಲ್ಲೆಯ ಹೇಮಾವತಿ ಜಲಾಶಯ ಶನಿವಾರ ಭರ್ತಿಯಾಗಿದೆ. ಜಲಾಶಯದ ಎಲ್ಲ ಗೇಟುಗಳನ್ನು ತೆರೆದು ನೀರನ್ನು ಬಿಡಲಾಗಿದೆ.

ಲಿಂಗನಮಕ್ಕಿ ಭರ್ತಿಗೆ 5 ಅಡಿ ಬಾಕಿ: 1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಶನಿವಾರ 1,814 ಅಡಿ ನೀರು ಭರ್ತಿಯಾಗಿದೆ.  ಸಾಮಾನ್ಯವಾಗಿ 1,816 ಅಡಿ ನೀರು ಭರ್ತಿಯಾದ ಕೂಡಲೇ ನೀರಿನ ಒಳಹರಿವನ್ನು ಪರಿಗಣಿಸಿ, ಮುಖ್ಯ ಗೇಟಿನ ಮೂಲಕ ನೀರನ್ನು ಶರಾವತಿ ನದಿಗೆ ಹರಿಸಲಾಗುತ್ತದೆ ಎಂದು ಕೆಪಿಸಿ ಎಂಜಿನಿಯರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT