ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗೇ ಇರುವ ಅಜ್ಜರಣಿ ಸೇತುವೆ

ಕೊಚ್ಚಿಹೋದ ಕಾಲುವೆ* ಎಮ್ಮೆ ಸಾವು* ಜಲಾಶಯಕ್ಕೆ ಹೇರಳ ನೀರು
Last Updated 31 ಜುಲೈ 2013, 9:23 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಾದ್ಯಂತ ಮಂಗಳವಾರ ಮಳೆ ಕಡಿಮೆಯಾಗಿದ್ದು, ಸಿದ್ದಾಪುರ ಹಾಗೂ ಮುಂಡಗೋಡದಲ್ಲಿ ಮಧ್ಯಾಹ್ನದ ಮೇಲೆ ಮಳೆ ಬಿರುಸುಗೊಂಡಿತ್ತು.

ಕರಾವಳಿ ಪ್ರದೇಶಗಳಾದ ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರದ ಕೆಲವೆಡೆ ತುಂತುರು ಮಳೆಯಾಗಿದೆ.
ಹಳಿಯಾಳ, ದಾಂಡೇಲಿ ಹಾಗೂ ಮಲೆನಾಡು ಪ್ರದೇಶಗಳಾದ ಯಲ್ಲಾಪುರ, ಶಿರಸಿ ಕಡಿಮೆಯಾಗಿತ್ತು. ಸಿದ್ದಾಪುರದಲ್ಲಿ ಬಿಳಿಗ್ಗೆಯಿಂದ ಕೊಂಚ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದ ನಂತರ ಜೋರಾಗಿತ್ತು.

ಮುನ್ನೆಚ್ಚರಿಕೆ: ಬೊಮ್ಮನಳ್ಳಿ ಮತ್ತು ಸೂಪಾ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದಲ್ಲಿ ಬೊಮ್ಮನಳ್ಳಿ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು.

ಬೊಮ್ಮನಳ್ಳಿ ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಇಕ್ಕೆಲಗಳಲ್ಲಿ ವಾಸಿಸುತ್ತಿರುವವರು ತಮ್ಮ ಜನ, ಜಾನುವಾರುಗಳೊದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಎಂದು ಅಂಬಿಕಾನಗರದ ಅಣೆಕಟ್ಟು ಮತ್ತು ವಿದ್ಯುದಾಗಾರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.

ಕೊಚ್ಚಿಹೋದ ಕಾಲುವೆ
ಅಂಕೋಲಾ: ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆಗೆ ಹೊನ್ನೆಬೈಲ್ ಗ್ರಾಮದ ಗದ್ದೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕಾಲುವೆ ಕೊಚ್ಚಿ ಹೋಗಿದೆ. ಇದರಿಂದಾಗಿ ಸರಾಗವಾಗಿ ಹರಿಯದ ನೀರು ಅಕ್ಕ-ಪಕ್ಕದ ಗದ್ದೆಗಳಿಗೆ ನುಗ್ಗಿ ಹಾನಿ ಉಂಟಾಗಿದೆ. ತೇಲಾ ಬುದ್ದು ಗೌಡ ಎಂಬ ರೈತನ ತುಂಡು ಜಮೀನಿನಲ್ಲಿ ಕಾಲುವೆ ಒಡೆದು ಭತ್ತದ ಬೆಳೆಗೆ ತೊಂದರೆಯಾಗಿದೆ.ಹಾನಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂಬುದು ತೊಂದರೆಗೊಳಗಾದವರ ಅಳಲಾಗಿದೆ.

ಕೊಚ್ಚಿ ಹೋದ ಎಮ್ಮೆ ಸಾವು
ಯಲ್ಲಾಪುರ:
ಭಾರಿ ಮಳೆಗೆ ಹಳ್ಳದಲ್ಲಿ ಎಮ್ಮೆಯೊಂದು ಕೊಚ್ಚಿಹೋಗಿ ಮೃತಪಟ್ಟ ಘಟನೆ ತಾಲ್ಲೂಕಿನ ಶೀಗೇಪಾಲ ಎಂಬಲ್ಲಿ ನಡೆದಿದೆ.
ಎಮ್ಮೆ ನಾರಾಯಣ ಕೃಷ್ಣ ಭಟ್ಟ ಎಂಬುವವರಿಗೆ ಸೇರ್ದ್ದಿದು, ಸುಮಾರು 20 ಸಾವಿರ ರೂಪಾಯಿ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ. ಕಂದಾಯ ಇಲಾಖೆಯ ಎಂ.ಜಿ.ಪತ್ತಾರ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ವಿವರ ಪಡೆದರು.

ಬೆಳೆಗಳಿಗೆ ಹಾನಿ
ಹಳಿಯಾಳ:
ತಾಲ್ಲೂಕಿನಾದ್ಯಂತ ಬಿಳುತ್ತಿರುವ ನಿರಂತರ ಮಳೆಯಿಂದ ಕೃಷಿ ಕಾರ್ಯಕ್ಕೆ ಅಡೆತಡೆಯಾಗಿ ಭತ್ತ, ಗೋವಿನಜೋಳ, ಇನ್ನಿತರ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.

ಭತ್ತದ ಬೆಳೆಗೆ ನಿರಂತರ ಮಳೆಯಿಂದ ಭತ್ತದ ಪೈರಿನೊಂದಿಗೆ ಹುಲ್ಲು ಬೆಳೆದು ಕಳೆ ತೆಗೆಲು ಸಹ ಮಳೆ ಬಿಡುವು ಬೀಡಲಾರದೇ ಬಿಳುತ್ತಿರುವುದರಿಂದ ರೈತರು ಆತಂಕದಲ್ಲಿದ್ದಾರೆ.

ಮಳೆಯಿಂದ ಹಳಿಯಾಳ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ದಿನಕರ ಯಶ್ವಂತ ಪ್ರಭು ಅವರ ಮನೆಯ ಗೋಡೆ ಕುಸಿದು ಬಿದ್ದು ಹಾನಿಯಾಗಿದೆ.

ತಾಲ್ಲೂಕಿನಾದ್ಯಂತ ಕೆರೆ, ಬಾಂದಾರು, ಸೇತುವೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ನೀರು ಶೇಖರಣೆಯಾಗಿದೆ.

ಪಟ್ಟಣದ ಮೋತಿಕೆರೆ, ಡವಗೇರಿ, ಹುಲ್ಲಟ್ಟಿ, ಕುಂಬಾರ ಕೆರೆ, ಗುಡ್ನಾಪುರ ಕೆರೆ ಮತ್ತಿತರ ಹೊಂಡಗಳು ಸಹ ನಿರಂತರ ಮಳೆಯಿಂದ ತುಂಬಿರುತ್ತದೆ. ತಾಲ್ಲೂಕಿನಲ್ಲಿ ಈವರೆಗೂ 733.02 ಮೀ.ಮೀ ಮಳೆಯಾಗಿದೆ.

ಮನೆಯ ಗೋಡೆ ಕುಸಿತ
ಭಟ್ಕಳ:
ಸಣ್ಣದಾಗಿ ಸುರಿಯುತ್ತಿದ್ದ ಜಿಟಿಜಿಟಿ ಮಳೆಗೆ ಪಟ್ಟಣದ ಖಲೀಫಾ ಸ್ಟ್ರೀಟ್‌ನಲ್ಲಿ ಮನೆಯ ಗೋಡೆಯೊಂದು ಕುಸಿದು ಬಿದ್ದು ಹಾನಿಯಾಗಿದೆ.

ಕುಮ್ಮಿ ತೌಫಿಖ್ ಅಲಿಬಾವಾ ಎಂಬವರಿಗೆ ಸೇರಿದ ಸುಮಾರು 80 ವರ್ಷಕ್ಕೂ ಹಳೆಯದಾದ ಮನೆಯ ಗೋಡೆ ಕುಸಿದು ಸಾವಿರಾರು ರೂಪಾಯಿ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹಾನಿಯ ಅಂದಾಜು ಮಾಡಿದ್ದಾರೆ.ಒಂದು ವಾರದಿಂದ ಎಡಬಿಡದೇ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಬಿಡುವು ನೀಡಿದ್ದು, ಎರಡು ದಿನಗಳಿಂದ ಸಣ್ಣದಾಗಿ ಬಿಸಿಲಿನೊಂದಿಗೆ ಮಳೆ ಸುರಿಯುತ್ತಿದೆ.

ವರದೆ ಪ್ರವಾಹ ಇಳಿಮುಖ
ಶಿರಸಿ:
ತಾಲ್ಲೂಕಿನಲ್ಲಿ ಮಂಗಳವಾರ ಮಧ್ಯಾಹ್ನದ ವರೆಗೂ ಬಿಡುವು ನೀಡಿದ್ದ ಮಳೆ ಸಂಜೆಯಿಂದ ಮತ್ತೆ ಚುರುಕುಗೊಂಡಿದೆ.
ಬನವಾಸಿ ಸಮೀಪದ ವರದಾ ನದಿಯ ಪ್ರವಾಹದಲ್ಲಿ ಇಳಿಮುಖವಾಗಿದ್ದು, ಬನವಾಸಿ ಮತ್ತು ಮೊಗಳ್ಳಿ ನಡುವಿನ ಸಂಪರ್ಕ ರಸ್ತೆಯಲ್ಲಿ ಅರ್ಧ ಅಡಿಯಷ್ಟು ಮಾತ್ರ ನೀರು ಹರಿಯುತ್ತಿದ್ದು, ಮಂಗಳವಾರ ಬೆಳಿಗ್ಗೆಯಿಂದ ಬೈಕ್‌ಗಳು ಸಂಚರಿಸುತ್ತಿವೆ. ಆದರೆ ಅಜ್ಜರಣಿ ಗ್ರಾಮಕ್ಕೆ ತೆರಳುವ ಸೇತುವೆ ಇನ್ನೂ ನೀರಿನಲ್ಲಿ ಮುಳುಗಿದೆ. ಸೇತುವೆಯ ಕಂಬದ ತುದಿ ಭಾಗ ಮಾತ್ರ ಗೋಚರಿಸುತ್ತಿದೆ ಎಂದು ಉಪತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ತಿಳಿಸಿದ್ದಾರೆ.

ಮನೆಗೆ ಹಾನಿ
ಸಿದ್ದಾಪುರ:
ತಾಲ್ಲೂಕಿನಲ್ಲಿ ಮಂಗಳವಾರ ಮಧ್ಯಾಹ್ನದವರೆಗೆ ಸಾಕಷ್ಟು ಬಿಡುವು ನೀಡಿದ್ದ ಮಳೆ, ಮಧ್ಯಾಹ್ನದ ನಂತರ ಆಗಾಗ ರಭಸದಿಂದ ಸುರಿಯಿತು.

  ಮಳೆಯಿಂದ ತಾಲ್ಲೂಕಿನ ಕಾನಸೂರಿನ ಲಕ್ಷ್ಮಿನಾರಾಯಣ ಶೇಟ್ ಎಂಬವರ ಕಚ್ಚಾಮನೆ ಹಾನಿಗೀಡಾಗಿದ್ದು,  6 ಸಾವಿರ ರೂಪಾಯಿ ನಷ್ಟದ ಅಂದಾಜು ಮಾಡಲಾಗಿದೆ.

ಮಂಗಳವಾರ ಬೆಳಿಗ್ಗೆ 8ಕ್ಕೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಪಟ್ಟಣದ ಮಳೆ ಮಾಪನ ಕೇಂದ್ರದಲ್ಲಿ 17.8 ಮಿ.ಮೀ. ಮಳೆ ದಾಖಲಾಗಿದ್ದು, ಇದುವರೆಗೆ ಒಟ್ಟು 2413.4 ಮಿ.ಮೀ. ಸುರಿದಿದೆ. ಕಳೆದ ವರ್ಷ ಇದೇ ಅವಧಿಯವರೆಗೆ ಒಟ್ಟು 1105.6 ಮಿ.ಮೀ. ಮಳೆ ಬಿದ್ದಿತ್ತು ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT